ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಥ್ಯ ವಿಮೆ: ಮುಂಚೂಣಿಯಲ್ಲಿ ಮಂಡ್ಯ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಸಂಘಟಿತ ವಲಯದ ಕುಟುಂಬಗಳಿಗೆ ಆರೋಗ್ಯ ಭದ್ರತೆ ಒದಗಿಸುವ ಮಹತ್ವಾಕಾಂಕ್ಷೆಯ `ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆ~ಯ ಅನುಷ್ಠಾನದಲ್ಲಿ ಮಂಡ್ಯ ಜಿಲ್ಲೆ (ಶೇ 62) ಮುಂಚೂಣಿಯಲ್ಲಿದ್ದರೆ, ಗುಲ್ಬರ್ಗ (ಶೇ 22) ಜಿಲ್ಲೆಯಲ್ಲಿ ಕಳಪೆ ಸಾಧನೆ ದಾಖಲಾಗಿದೆ.

ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನಾ (ಆರ್‌ಎಸ್‌ಬಿವೈ) ಸೊಸೈಟಿಯ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಆರ್‌ಎಸ್‌ಬಿವೈ ಅನುಷ್ಠಾನದ ಪ್ರಗತಿ ಪರಿಶೀಲನಾ ಕಾರ್ಯಾಗಾರದಲ್ಲಿ ಜಿಲ್ಲೆಗಳ ಕಳಪೆ ಸಾಧನೆ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು.

ಶಿವಮೊಗ್ಗ (ಶೇ 61), ಬಾಗಲಕೋಟೆ (ಶೇ 57), ಉತ್ತರ ಕನ್ನಡ (ಶೇ 56), ದಾವಣಗೆರೆ (ಶೇ 54) ಜಿಲ್ಲೆಗಳು ಉತ್ತಮ ಸಾಧನೆ ಮಾಡಿದ್ದರೆ, ಬೆಂಗಳೂರು ನಗರ ಹಾಗೂ ಬೆಳಗಾವಿ (ಶೇ 28), ಮೈಸೂರು (ಶೇ 29), ರಾಯಚೂರು (ಶೇ 36), ಬಳ್ಳಾರಿ (ಶೇ 39) ಜಿಲ್ಲೆಗಳ ಸಾಧನೆ ತೃಪ್ತಿಕರವಾಗಿಲ್ಲ.

 

`ರಾಜ್ಯದಲ್ಲಿ 40,76,640 ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗಿದ್ದು, ಒಂದೂವರೆ ವರ್ಷಗಳಲ್ಲಿ 17,53,224 ಕುಟುಂಬಗಳನ್ನು ದಾಖಲಾತಿ ಮಾಡಿಕೊಂಡು ಶೇ 46ರಷ್ಟು ಸಾಧನೆ ಮಾಡಲಾಗಿದೆ.

ಮಾರ್ಚ್ ಅಂತ್ಯದೊಳಗೆ 30 ಲಕ್ಷ ಕುಟುಂಬಗಳನ್ನು ಫಲಾನುಭವಿಗಳನ್ನಾಗಿ ಮಾಡಿಕೊಳ್ಳಬೇಕು ಎಂಬುದಾಗಿ ಸಂಕಲ್ಪ ಮಾಡಲಾಗಿದೆ~ ಎಂದು ಕಾರ್ಮಿಕ ಇಲಾಖೆ ಆಯುಕ್ತ ಉಮಾಶಂಕರ್ ಮಾಹಿತಿ ನೀಡಿದರು.

`ಕಾರ್ಮಿಕರ ವಲಸೆ ಪ್ರವೃತ್ತಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನದಲ್ಲಿ ಹಿನ್ನಡೆಯಾಗಿದೆ. ಬೆಳಗಾವಿ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ತಾಂತ್ರಿಕ ಸಮಸ್ಯೆಗಳಿಂದಾಗಿ ಫಲಾನುಭವಿಗಳನ್ನು ಗುರುತಿಸುವಲ್ಲಿ ಸಮಸ್ಯೆಯಾಗಿತ್ತು.

ಈಗ ಸಮಸ್ಯೆ ನಿವಾರಣೆ ಆಗಿದೆ. ರಾಜ್ಯದಲ್ಲಿ ಯೋಜನೆಯ ಆರಂಭದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಸಮರ್ಪಕ ಮಾಹಿತಿ ಇರಲಿಲ್ಲ. ಬಿಪಿಎಲ್ ಕಾರ್ಡ್ ಹೊಂದಿರುವ ಅರ್ಹ ಕುಟುಂಬಗಳ ಮಾಹಿತಿ ದೊರಕಿದೆ. ಯೋಜನೆಗೆ ಇನ್ನಷ್ಟು ವೇಗ ನೀಡುತ್ತೇವೆ~ ಎಂದರು.

ಏನಿದು ಸ್ವಾಸ್ಥ್ಯ ವಿಮಾ: `ಕೇಂದ್ರ ಸರ್ಕಾರ 2008ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳನ್ನು ಗುರುತಿಸುವಲ್ಲಿ ಗೊಂದಲ ಹಾಗೂ ಮಾಹಿತಿ ಕೊರತೆಯ ಕಾರಣದಿಂದ ಮೊದಲ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ. 2010-11ರಲ್ಲಿ ಕಾರ್ಮಿಕ ಇಲಾಖೆ ಪ್ರಾಯೋಗಿಕವಾಗಿ ರಾಜ್ಯದ ಐದು ಜಿಲ್ಲೆಗಳಲ್ಲಿ ಯೋಜನೆಯನ್ನು ಜಾರಿಗೆ ತಂದಿತ್ತು.

ಪೂರಕ ಸ್ಪಂದನ ಸಿಕ್ಕಿದ ಬಳಿಕ ಎಲ್ಲಾ ಜಿಲ್ಲೆಗಳಿಗೆ ಯೋಜನೆಯನ್ನು ವಿಸ್ತರಿಸಲಾಗಿತ್ತು. ಬಿಪಿಎಲ್ ಕಾರ್ಡ್ ಹೊಂದಿರುವವರು, ಕೊಳೆಗೇರಿ, ಉದ್ಯೋಗ ಖಾತರಿ ಯೋಜನೆಯ ಕೂಲಿ ಕಾರ್ಮಿಕರು, ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು, ಕಟ್ಟಡ, ಬೀಡಿ ಕಾರ್ಮಿಕರು ಯೋಜನೆಯ ಫಲಾನುಭವಿಗಳಾಗಲು ಅರ್ಹರು~ ಎಂದು ಸಭೆಗೆ ತಿಳಿಸಲಾಯಿತು.

`ಯೋಜನೆಯ ಫಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ 32 ಕೆ.ಬಿ. ಸಾಮರ್ಥ್ಯದ ಸ್ಮಾರ್ಟ್‌ಕಾರ್ಡ್ ಬದಲು 64 ಕೆ.ಬಿ.ಯ ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಛತ್ತೀಸ್‌ಗಡದಲ್ಲಿ ಈ ವ್ಯವಸ್ಥೆ ಈಗಾಗಲೇ ಜಾರಿಗೆ ಬಂದಿದೆ~ ಎಂದು ಕೇಂದ್ರ ಕಾರ್ಮಿಕ ಕಲ್ಯಾಣ ಇಲಾಖೆಯ ಮಹಾನಿರ್ದೇಶಕ ಅನಿಲ್ ಸ್ವರೂಪ್ ತಿಳಿಸಿದರು.

13,261 ಕುಟುಂಬಕ್ಕೆ ಚಿಕಿತ್ಸೆ!

`ರಾಜ್ಯದಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಗೆ 17,53,224 ಕುಟುಂಬಗಳು ಸೇರ್ಪಡೆಯಾಗಿದ್ದರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಕುಟುಂಬಗಳು ಕೇವಲ 13,261 ಮಾತ್ರ. ಚಿಕಿತ್ಸಾ ವೆಚ್ಚವಾಗಿ ರೂ 5.08 ಕೋಟಿ ರೂಪಾಯಿ ಪಾವತಿಸಲಾಗಿದೆ. ಅರ್ಹ ಕುಟುಂಬಗಳನ್ನು ಗುರುತಿಸಿ ಯೋಜನೆಯ ವ್ಯಾಪ್ತಿಯೊಳಗೆ ತರುವಲ್ಲಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ~ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT