ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಥ್ಯ ಸೌಖ್ಯ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೆಸರು ಬೇಡ, 25 ವರ್ಷ
ನಾನು 25 ವರ್ಷದ ಯುವಕ. ನನಗೆ ತಲೆಯಲ್ಲಿ ಕೂದಲು ಉದುರುವ ಮುನ್ಸೂಚನೆಗಳು ಕಾಣುತ್ತಿವೆ. ತಲೆ ಬೋಳು ಆಗಬಹುದೆಂಬ ಸಂದೇಹದಲ್ಲಿದ್ದೇನೆ ಹಾಗೂ ಇದು ಅನುವಂಶಿಕವಾಗಿರಬಹುದು ಎಂಬ ಸಂಶಯವಿದೆ. ಆದ್ದರಿಂದ ಇದಕ್ಕೆ ಸೂಕ್ತ ಪರಿಹಾರವನ್ನು ಮುಂಚಿತವಾಗಿ ಕಂಡುಕೊಳ್ಳುವ ಬಗ್ಗೆ ತಿಳಿಸಿ.

-ಸಂಶಯ ಬಿಟ್ಟರೆ ಎಲ್ಲವೂ ಸರಿಯಾಗುವುದು. ತಲೆ ಕೂದಲಿಗೆ ಯಾವ ತರಹದ ರಸಾಯನ ಪದಾರ್ಥಗಳನ್ನು ಉಪಯೋಗಿಸಬೇಡಿ. ಶುದ್ಧವಾದ ತೆಂಗಿನ ಎಣ್ಣೆಯನ್ನು ಉಪಯೋಗಿಸಿ. ಕೂದಲಿಗೆ ಈಗಿನ ಸಾಬೂನುಗಳನ್ನು ಉಪಯೋಗಿಸಬೇಡಿ. ಶಾಂಪೂ ಖಂಡಿತ ಬೇಡ. ಮುಖ್ಯವಾಗಿ ನಿಮ್ಮ ಹೆದರಿಕೆಯನ್ನು ಬಿಟ್ಟರೆ ನೀವು ಹುಷಾರಾಗುತ್ತೀರಿ. ಹಣ್ಣು ಹಂಪಲು ಸೇವಿಸಿ.

ಸುನೀತಾ ಬಾಯಿ, ಶಿರಸಿ.
ಮೂರು ತಿಂಗಳ ಹಿಂದೆ ಆಕಸ್ಮಿಕವಾಗಿ ನನ್ನ ಪತ್ನಿ ಸುನೀತಾಬಾಯಿಗೆ 200/100 ಬಿ. ಪಿ. ಏರಿ ತುಂಬಾ ಕಷ್ಟವಾಯಿತು. ಕೂಡಲೇ ವೈದ್ಯರು ಒಂದು ಇಂಜೆಕ್ಷನ್ ನೀಡಿ ಆಸ್ಪತ್ರೆಗೆ ಅಡ್ಮಿಟ್ ಮಾಡಲು ತಿಳಿಸಿದರು.  10 ದಿನ ಬಿಟ್ಟರೂ ಗುಣ ಕಾಣಲಿಲ್ಲ. ಹುಬ್ಬಳ್ಳಿಯ ನರತಜ್ಞರಲ್ಲಿ ಪರೀಕ್ಷಿಸಲಾಯಿತು. ಅವರು 2 ದಿನ ಐ.ಸಿ.ಯು. ದಲ್ಲಿ ಇಟ್ಟು ಚಿಕಿತ್ಸೆ ಮಾಡಿದರು. ಒಟ್ಟು 10 ದಿನ ಆಸ್ಪತ್ರೆಯಲ್ಲಿಯೇ ಇದ್ದು ಎಲ್ಲಾ ರೀತಿಯ ಚಿಕಿತ್ಸೆ ಮಾಡಿಸಿದೆವು. ಈಗ ಗುಣವಾಗಿದೆ. ಎಡಗೈಗೆ ಸ್ವಲ್ಪ ಶಕ್ತಿ ಕಡಿಮೆ ಆಗಿದೆ.  ಮೊದಲಿನಂತೆ ಶಕ್ತಿ ಬರಲು ಏನು ಮಾಡಬೇಕು? ಮತ್ತು ಪುನಃ ರೋಗ ಬರಬಹುದೋ ಹೇಗೆ? ಬರದಂತೆ ಏನು ಮಾಡಬೇಕು ದಯಮಾಡಿ ತಿಳಿಸಿರಿ.

ಶರೀರದ ಯಾವ ಭಾಗಕ್ಕೂ ಯಾವ ತೊಂದರೆ ಕಾಣುವುದಿಲ್ಲ. ಆದರೆ ಎಡಗೈ 4 ಬೆರಳುಗಳು ಜುಮ್, ಜುಮ್ ಆಗುತ್ತದೆ. ಮಾತನಾಡುವಾಗ ನಾಲಿಗೆ ದಪ್ಪ ಆದಂತೆ ಆಗುತ್ತದೆ. 3 ತಿಂಗಳು ಔಷಧೋಪಚಾರ ಇರಬೇಕೆಂದು ವೈದ್ಯರು  ಹೇಳಿದ್ದಾರೆ. ತಿಂಗಳಿಗೊಮ್ಮೆ ಆಸ್ಪತ್ರೆಗೆ ಹೋಗಿ ಬರುತ್ತೇವೆ. ನಾವು ಯಾವ ಮುಂಜಾಗ್ರತೆ ವಹಿಸಬೇಕು. ತಿಳಿಸಿ.
ನಿಮ್ಮ ಹೆಂಡತಿಗೆ ಮಧುಮೇಹ ಮತ್ತು ರಕ್ತದೊತ್ತಡ ಮೀರಿರುವುದರಿಂದ ಇಂತಹ ಲಕ್ವ ಹೊಡೆಯುವುದರಲ್ಲಿ ಆಶ್ಚರ್ಯವಿಲ್ಲ, ಎಡಗೈಯ ಬೆರಳುಗಳು ಸರಿಯಾಗಲು ಸಮಯ ಬೇಕು. ಅವಸರ ಮಾಡಬೇಡಿ. ಇನ್ನು ಬರುವುದೋ ಇಲ್ಲವೋ ಎಂಬುದು ದೇವರಿಗೆ ಮಾತ್ರ ಗೊತ್ತು. ಆದರೆ ಅವರ ಮನಸ್ಸಿಗೆ ಧೈರ್ಯವಿದ್ದರೆ ಏನೂ ತೊಂದರೆಯಾಗಲಿಕ್ಕಿಲ್ಲ. ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸಿ.

ಸುರೇಶ, ವಯಸ್ಸು 45, ಕೊಟ್ಟೂರು
ನನಗೆ ನಾಲ್ಕು ತಿಂಗಳ ಹಿಂದೆ ಬಿ.ಪಿ. 170/100 ಎಂದು ಬಂದಿತ್ತು. ಇದಕ್ಕೆ ಟೇಲ್ಮಾ 40 ಎಂಬ ಗುಳಿಗೆಯನ್ನು ದಿನಕ್ಕೆ 1 ರಂತೆ ತೆಗೆದುಕೊಳ್ಳಲು ತಿಳಿಸಿದರು. ನಾನು ಎರಡು ತಿಂಗಳು ಸೇವಿಸಿ ಬಿಟ್ಟಿದ್ದೇನೆ. ಈ ಬಿಟ್ಟ ಎರಡು ತಿಂಗಳ ನಂತರ ಬಿ. ಪಿ. ತಪಾಸಣೆ ಮಾಡಿಸಿದಾಗ ನಾರ್ಮಲ್ 80/120 ಇರುತ್ತದೆ. ಈಗ ನನಗೆ ಭಾರ ಎತ್ತಿದಾಗ ಎದೆ ನೋವು ಬರುತ್ತದೆ. ಚಿಕ್ಕ ಮಗುವನ್ನು ಎತ್ತಿಕೊಂಡಾಗಲೂ ಇದೇ ತೆರನಾದ ನೋವು ಇರುತ್ತದೆ. ಕಾರಣ ತಿಳಿಸಿರಿ. ಇದಕ್ಕೆ ನಾನು ಏನು ಮಾಡಬೇಕು ತಿಳಿಸಿರಿ.

-ನಿಮಗೆ ರಕ್ತದೊತ್ತಡ ಕಾಯಿಲೆ ಇತ್ತೆಂದು ಖಂಡಿತ ಹೇಳುವುದು ಕಷ್ಟ. ನಿಮ್ಮ ಎದೆಯಲ್ಲಿ ಬರುವ ನೋವಿಗೆ ಏನು ಕಾರಣ ಎಂದು ಹೇಳಬೇಕಾದರೆ ನಿಮ್ಮನ್ನು ಪರೀಕ್ಷಿಸಬೇಕು. ಬರೇ ಕಾಗದದ ಪ್ರಶ್ನೆಗೆ ಉತ್ತರ ಹೇಳುವುದು ಬಹಳ ಕಷ್ಟ. ಆದರೆ ನಿಮ್ಮ ಪತ್ರದ ಧಾಟಿ ನೋಡಿದರೆ ಅಂತಹ ವಿಪರೀತ ಕಾಯಿಲೆ ಇದ್ದ ಹಾಗೆ ತೋರುವುದಿಲ್ಲ. ಉತ್ತಮ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಿ, ಹೆದರಬೇಡಿ.

ಈರಯ್ಯ ಎಸ್., ವಯಸ್ಸು 60, ಮಾಲೂರ
ನನಗೆ 2 ವರ್ಷಗಳ ಹಿಂದೆ ಬೈಪಾಸ್ ಸರ್ಜರಿ ಆಗಿದೆ. . ಆರೋಗ್ಯವಾಗಿದ್ದೇನೆ. ಒಂದು ವರ್ಷ ಆದ ಮೇಲೆ ನಾನು ಮರು ಪರೀಕ್ಷೆ ಮಾಡಿಸಿರುತ್ತೇನೆ. ಕೊಲೆಸ್ಟ್ರಾಲ್, ಶುಗರ್ ಹಾಗೂ ಬಿ.ಪಿ. ನಾರ್ಮಲ್ ಇರುತ್ತದೆ. ನನಗೆ ಆಪರೇಷನ್ ಮಾಡಿದ ಸರ್ಜನ್ ಎಲ್ಲಾ ಸರಿ ಇದೆ, ಆತಂಕ ಬೇಡ. ನೀವು ಆರಾಮಾಗಿರಿ ಎಂದಿದ್ದಾರೆ. ಆದರೆ ನನಗೆ ಒಂದೊಂದು ಸಲ ಎಡಕೈ, ಬೆರಳು ಹಾಗೂ ಎದೆ ಮೇಲೆ ನೋವು ಕಾಣಿಸಿಕೊಳ್ಳುತ್ತದೆ. ತಾವು ತಮ್ಮ ಅಭಿಪ್ರಾಯ, ಸಲಹೆ, ಮಾರ್ಗದರ್ಶನ ತಿಳಿಸಬೇಕೆಂದು ಪ್ರಾರ್ಥಿಸಿಕೊಳ್ಳುತ್ತೇನೆ.

ಹೃದಯದ ಬೈಪಾಸ್ ಸರ್ಜರಿ ಒಂದು ವ್ಯಾಪಾರ. ಟಿಎಂಟಿ ಪರೀಕ್ಷೆಗೆ ಯಾವ ವೈಜ್ಞಾನಿಕ ತಳಹದಿಯೂ ಇಲ್ಲ. ನೀವು ಹೀಗೆಯೇ ವೈದ್ಯರನ್ನು ಕಾಣುತ್ತಾ ಇದ್ದರೆ ಮಗದೊಮ್ಮೆ ಬೈಪಾಸ್ ಮಾಡುವ ಸಲಹೆ ಬರಬಹುದು. ನಿಮ್ಮ ಜೀವನ ಶೈಲಿ ಬದಲಾಯಿಸಿ, ಮುಖ್ಯವಾಗಿ ಮನಸ್ಸಿನಲ್ಲಿ ಯಾವ ತರಹದ ನಕಾರಾತ್ಮಕ ಚಿಂತನೆಗಳನ್ನು ಇರಿಸಿಕೊಳ್ಳಬೇಡಿ. ನಿಮ್ಮ ಸಕಾರಾತ್ಮಕ ಚಿಂತನೆಯಿಂದ ನಿಮ್ಮ ಹೃದಯ ನಿಮ್ಮನ್ನು ಪ್ರೀತಿಸುತ್ತದೆ. ನಿಮಗೊಬ್ಬ ಉತ್ತಮ ಮನೆ ವೈದ್ಯರ ಅಗತ್ಯವಿದೆ. ಅವರಿಂದ ಸಲಹೆ ಪಡಕೊಳ್ಳಿ. ಆಪರೇಷನ್ ಮಾಡಿಸಿದ ಮನಸ್ಸಿನ ಆಘಾತವನ್ನು ಮರೆತುಬಿಡಿ. ಔಷಧಿಗಳ ವಿಚಾರವನ್ನು ನಿಮ್ಮ ಮನೆ ವೈದ್ಯರಿಂದ ತಿಳಿದುಕೊಳ್ಳಿ, ಹೆದರಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT