ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಸ್ ಬ್ಯಾಂಕ್: ಕಪ್ಪು ಹಣ ಎಷ್ಟು ಸುರಕ್ಷಿತ?

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದಲ್ಲಿನ ಆಡಳಿತ ಪಕ್ಷಕ್ಕೆ ವಿದೇಶ ಬ್ಯಾಂಕ್‌ಗಳಲ್ಲಿ ಭಾರತೀಯರು ಠೇವಣಿ ಇಟ್ಟಿರುವ ಕಪ್ಪು ಹಣ ಇನ್ನಿಲ್ಲದಂತೆ ಕಾಡುತ್ತಿದೆ.

ವಿದೇಶಿ ಬ್ಯಾಂಕ್‌ಗಳ ಕಪ್ಪು ಹಣ ಇರಿಸಿರುವ ಭಾರತೀಯರ ಹೆಸರು ಬಹಿರಂಗಪಡಿಸಬೇಕೆಂದು ಪ್ರತಿಪಕ್ಷಗಳು, ನಾಗರಿಕ ಸಮಾಜ ಒತ್ತಡ ಹೇರುತ್ತಿವೆ. ತಾಂತ್ರಿಕ ಅಡಚಣೆಯ ನೆಪವೊಡ್ಡಿ ಆಡಳಿತ ಪಕ್ಷ ನುಣುಚಿಕೊಳ್ಳುತ್ತಿದೆ.

ತಮ್ಮ ಬಳಿ ಇರುವ ಹಣದ ಲೆಕ್ಕವನ್ನು ಸರ್ಕಾರಕ್ಕೆ ತೋರಿಸಿ ತೆರಿಗೆ ಕಟ್ಟದೆ ವಂಚಿಸಿ ವಿದೇಶಿ ಬ್ಯಾಂಕ್‌ನಲ್ಲಿ ಇಟ್ಟಿರುವುದೇ `ಕಪ್ಪು ಹಣ~. ಮೊದಲೆಲ್ಲಾ ಕಪ್ಪು ಹಣ ಅಂದರೆ   ಸ್ವಿಟ್ಜರ್‌ಲೆಂಡ್ ಬ್ಯಾಂಕ್‌ಗಳು ಮಾತ್ರ. ಆದರೆ, ಈಗ ಪ್ರಪಂಚದ 40 ದೇಶಗಳಲ್ಲೂ ಸಹ ಬಚ್ಚಿಡಬಹುದು.

ವಿದೇಶದಲ್ಲಿರುವ   ಕಪ್ಪುಹಣವನ್ನು ಭಾರತಕ್ಕೆ ತಂದರೆ, ವಿದೇಶದಿಂದ ಪಡೆದಿರುವ ಸಾಲವೆಲ್ಲವನ್ನು ತೀರಿಸಿ ಅಮೆರಿಕಕ್ಕೆ ನಾವು ಸಾಲವನ್ನು ಕೊಡಬಹುದಂತೆ,
ವಿದೇಶದಲ್ಲಿರುವ ಕಪ್ಪುಹಣದ ಪ್ರಮಾಣವನ್ನು ಶ್ರೀಸಾಮಾನ್ಯ ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ಹೇಳಬೇಕೆಂದರೆ ಸಾವಿರ ರೂಪಾಯಿಗಳ ಕಂತೆಯನ್ನು ಕಟ್ಟಿ ಜೋಡಿಸಿದರೆ ನಮ್ಮ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ತುಂಬಿ ತುಳುಕಾಡುತ್ತದಂತೆ, ದುರ್ಬಲ ಹೃದಯದವರಾದರೆ ಇದನ್ನು ಓದಿ ನಿಧಾನವಾಗಿ ಸುಧಾರಿಸಿಕೊಳ್ಳಿ.

ಸ್ವಿಸ್‌ಬ್ಯಾಂಕ್‌ನವರು ಏನೆಂದುಕೊಂಡಿದ್ದಾರೆಂದರೆ ಭಾರತ ತುಂಬಾ ಸಂಪತ್ಭರಿತವಾಗಿದೆ, ಅದಕ್ಕೆ ಅಲ್ಲಿನ ಜನಗಳು ಇಲ್ಲಿ ಹಣವನ್ನು ಹೂಡಿಟ್ಟಿದ್ದಾರೆಂದು. ನಮ್ಮ ದೇಶ ಭ್ರಷ್ಟತೆಯಲ್ಲಿ ಮುಂದಿದೆ, ಕೆಲವೇ ದಿನಗಳಲ್ಲಿ ಜನಸಂಖ್ಯೆಯಲ್ಲಿಯೂ ಸಹ ಮುಂದಾಗುತ್ತದೆ. ವಿದೇಶದಲ್ಲಿರುವ ಕಪ್ಪುಹಣದಲ್ಲಿಯೂ ಸಹ ಎಲ್ಲಾ ದೇಶವನ್ನು ಹಿಂದಿಕ್ಕಿ ಪ್ರಥಮ ಸ್ಥಾನದಲ್ಲಿ ರಾರಾಜಿಸುತ್ತಿದೆ.

ತಂತ್ರಜ್ಞಾನದಲ್ಲಿ ಎಲ್ಲಾ ದೇಶವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿರುವ ನಮ್ಮ ನೆರೆ ದೇಶ ಚೀನಾಕ್ಕಿಂತ 15 ಪಟ್ಟಷ್ಟು ನಮ್ಮ ದೇಶದ ಕಪ್ಪುಹಣ ಸ್ವಿಸ್‌ಬ್ಯಾಂಕ್‌ನಲ್ಲಿದೆ.

ಸ್ವಿಟ್ಜರ್ಲೆಂಡ್‌ನಲ್ಲಿ ಬೀದಿ ಬೀದಿಗೊಂದರಂತೆ ಬ್ಯಾಂಕ್‌ಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು ಮೂರೇ ಮೂರು 1) ಕ್ರೆಡಿಟ್ ಸ್ಯೂಸ್ಸೆ 2) ಯೂನಿಯನ್ ಬ್ಯಾಂಕ್ ಆಫ್ ಸ್ವಿಜರ್ಲಂಡ್ (ಯೂ.ಬಿ.ಎಸ್) 3) ಸ್ವಿಸ್ ಬ್ಯಾಂಕ್ ಕಾರ್ಪೊರೇಷನ್ ( ಎಸ್.ಬಿ.ಸಿ).

ಸ್ವಿಟ್ಜರ್ಲೆಂಡ್‌ನ ಬ್ಯಾಂಕ್ ಖಾತೆಗಳು ನಮ್ಮಲಿರುವ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಯ ರೀತಿಯಲ್ಲಿಯೇ  ಇವೆ. ವಿವಾದಾತ್ಮಕ ಖಾತೆಯಾರುವ  `ಸ್ವಿಸ್ ನಂಬರ್ ಬ್ಯಾಂಕ್ ಖಾತೆ~ ಮಾತ್ರ ಹೆಚ್ಚು ಚರ್ಚಾಸ್ಪದವಾಗಿದೆ.

ಸ್ವಿಸ್ ನಂಬರ್ ಬ್ಯಾಂಕ್ ಖಾತೆ
ಈ ಖಾತೆಯಲ್ಲಿ ಗರಿಷ್ಠ ಹೂಡಿಕಾ ಸೇವೆಯಿದೆ. ಇಲ್ಲಿ ಹೂಡಿಕೆಮಾಡಿ, ಬೆಳವಣಿಗೆಯನ್ನು ವೈಯ್ಯಕ್ತಿಕವಾಗಿ ನೋಡಬಹುದು, ಸ್ವಿಸ್ ಲೇವಾದೇವಿಗಾರನ ಹತ್ತಿರ ಸುದೀರ್ಘ ಸಂಬಂಧವನ್ನು ಬೆಳೆಸುತ್ತದೆ. ಸ್ವಿಜರ್ಲಂಡ್‌ನಾದ್ಯಾಂತ ಶಾಖೆಗಳನ್ನು ಹೊಂದಿದೆ. ಖಾತೆ ತೆರೆಯಲು ವ್ಯಕ್ತಿ  ಖುದ್ದು ಕಚೇರಿಗೆ ಹಾಜರಾಗಬೇಕಾಗುತ್ತದೆ. 

 ಈ ಖಾತೆ  ಹೊಂದಿರುವಂತಹವರು ಅಂತರ್‌ಜಾಲ ಬ್ಯಾಂಕಿಂಗ್ ಮುಖಾಂತರ ವ್ಯವಹಾರ  ನಡೆಸಬಹುದು.  ಗರಿಷ್ಠ ಸುರಕ್ಷತೆಯ ಸುಲಭ ಆನ್‌ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಈ ಖಾತೆಗಿದೆ.  ಈ ವ್ಯವಸ್ಥೆಯಲ್ಲಿ  ಖಾತೆಯ ಸ್ಟೇಟ್‌ಮೆಂಟ್ ನೋಡಬಹುದು ಮತ್ತು ಹೂಡಿಕೆಯನ್ನು ಪ್ರಪಂಚದ ಯಾವ ಮೂಲೆಯಿಂದ ಬೇಕಾದರೂ ಇಂಗ್ಲಿಷ್, ಫ್ರೆಂಚ್, ಇಟಾಲಿಯನ್ ಮತ್ತು ಜರ್ಮನಿ ಭಾಷೆಯಲ್ಲಿ ನೋಡಬಹುದು.

ಪಾಕೆಟ್ ಕ್ಯಾಲ್ಕುಲೇಟರ್ ಅಳತೆಯ ಎನ್‌ಕ್ರಿಪ್ಸನ್ ಉಪಕರಣ ಕೊಟ್ಟಿರುತ್ತಾರೆ. ಇದು  ಖಾತೆಯ ವಿವರ ಪಡೆಯಲು ಪ್ರವೇಶಾಧಿಕಾರದ ಗೂಢಸಂಕೇತ  ಹೊಂದಿರುತ್ತದೆ. ಈ ಸಂಖ್ಯೆ ನಿಮ್ಮ ಖಾತೆಗೆ ಮಾತ್ರ ವಿಶಿಷ್ಟ ಆಗಿರುತ್ತದೆ.  ಪ್ರತಿ ಬಾರಿ ಅಂತರ್‌ಜಾಲದಲ್ಲಿ ವಹಿವಾಟು ನಡೆಸಿದಾಗೊಮ್ಮೆ  ಬದಲಾಗುತ್ತಿರುತ್ತದೆ.

ಈ ಸಂಕೇತ,  ವೈಯ್ಯಕ್ತಿಕ ಗೂಢಸಂಕೇತ (ಪಾಸ್‌ವರ್ಡ್) ಮತ್ತು ಖಾತೆ ಸಂಖ್ಯೆಗಳಿಂದ   ದಿನದ 24 ಗಂಟೆಗಳು ಪ್ರಪಂಚದ ಯಾವ ಮೂಲೆಯಲ್ಲಿರುವ ವೆಬ್ ಬ್ರೌಸರ್‌ನಿಂದ ಬೇಕಾದರೂ  ಬ್ಯಾಂಕ್ ಖಾತೆಯೊಳಗೆ ಪ್ರವೇಶಿಸಿ ಸ್ವಿಸ್‌ಬ್ಯಾಂಕರ್‌ಗೆ ಎನ್‌ಕ್ರಿಪ್ಟೆಡ್ ಸಂದೇಶ  ಕಳಿಸಬಹುದು ಮತ್ತು ಪಡೆಯಬಹುದು.

ಈ ಖಾತೆಯನ್ನು ತೆರೆಯಲು ಸೇವಾಶುಲ್ಕವಾಗಿ 1299 ಸ್ವಿಸ್‌ಫ್ರಾಂಕ್‌ಗಳನ್ನು ಪಾವತಿಸಬೇಕಾಗುತ್ತದೆ. ಒಂದು ವೇಳೆ ಅರ್ಜಿ ವಜಾವಾದರೆ ಹಣ ಮರುಪಾವತಿಸಲಾಗುತ್ತದೆ.  ಈ ಖಾತೆ ತೆರೆದ ದಿನವೇ ಕನಿಷ್ಠ ಠೇವಣಿ  250,000 ಸ್ವಿಸ್‌ಫ್ರಾಂಕ್‌ಗಳನ್ನು ಪಾವತಿಸುವುದು ಕಡ್ಡಾಯವಿಲ್ಲ.

ಆದರೆ, ಈ ಹಣವನ್ನು ಕೆಲವು ತಿಂಗಳೊಳಗೆ ಪಾವತಿಸಬೇಕೆಂಬ ನಿಯಮವಿದೆ.   ವರ್ಷಕ್ಕೆ 200 ಸ್ವಿಸ್‌ಫ್ರಾಂಕ್‌ನವರೆಗೆ ವ್ಯವಹರಿಸಲು ಅವಕಾಶವಿದೆ. ಮೇಸ್ಟ್ರೊ  ಯೂಯೊ ಅಥವಾ ಸ್ವಿಸ್‌ಫ್ರಾಂಕ್ ಡೆಬಿಟ್ ಕಾರ್ಡ್ ಅನ್ನು ಖಾತೆದಾರರಿಗೆ ಕೊಡಲಾಗುತ್ತದೆ.

ಇದರಲ್ಲಿ   ಯೂರೋಪಿನಾದ್ಯಾಂತ ಯಾವುದೇ `ಎಟಿಎಮ್~ ಮೂಲಕ ಕನಿಷ್ಠ ಠೇವಣಿ ಹೊರತುಪಡಿಸಿ, ಗರಿಷ್ಠ 10,000 ಸ್ವಿಸ್‌ಫ್ರಾಂಕ್‌ವರೆಗೆ ಹಣ  ತೆಗೆಯಬಹುದು.   ಈ ಕಾರ್ಡಿಗೆ  ಭದ್ರತಾ ಠೇವಣಿಯ ಅವಶ್ಯಕತೆಯಿರುವುದಿಲ್ಲ.

ವೀಸಾ ಮತ್ತು ಮಾಸ್ಟರ್ ಕ್ರೆಡಿಟ್ ಕಾರ್ಡ್ (ಸ್ವೀಸ್‌ಫ್ರಾಂಕ್‌ನ ಎರಡು ನಮೂನೆಯ ಕಾರ್ಡ್‌ಗಳು) ಗಳನ್ನು  ಅಂಗಡಿ, ಹೋಟೆಲ್, ರೆಸ್ಟೋರೆಂಟ್ ಮತ್ತು ಆನ್‌ಲೈನ್ ಶಾಪ್‌ಗಳಲ್ಲಿ ಬಳಸಬಹುದು. ಆದರೆ, ಬ್ಯಾಂಕ್ ಭದ್ರತಾ ಠೇವಣಿಯಾಗಿ  ತಿಂಗಳ ಕ್ರೆಡಿಟ್ ಲಿಮಿಟ್‌ನ ಗರಿಷ್ಠ ಎರಡರಷ್ಟನ್ನು ಮತ್ತು ಕನಿಷ್ಠ  ಭದ್ರತಾ ಠೇವಣಿಯಾಗಿ 3,000ಸ್ವಿಸ್‌ಫ್ರಾಂಕ್‌ನ್ನು ಕಟ್ಟಬೇಕಾಗುತ್ತದೆ.

ಈ ಖಾತೆಯಿಂದ ನೇರವಾಗಿ ಹೂಡಿಕೆ ಮಾಡಬಹುದು ಇಲ್ಲವೆಂದರೆ ಪರಿಣತರ ಸಹಾಯ ಪಡೆಯಬಹುದು. ಈ ಖಾತೆ  ಉಳಿಸಿಕೊಳ್ಳಲು ವರ್ಷಕ್ಕೆ 500ಸ್ವಿಸ್‌ಫ್ರಾಂಕ್‌ಗಳನ್ನು ಪಾವತಿಸಬೇಕಾಗುತ್ತದೆ. 

ಈ ಖಾತೆಯನ್ನು ಯಾವ ಕರೆನ್ಸಿಯಲ್ಲಾದರೂ ತೆರೆಯಬಹುದು. ಗೋಪ್ಯ ಹಣಕಾಸು ವ್ಯವಹಾರಗಳಿಗಾಗಿಯೇ ಈ ಖಾತೆ ಇರುವುದರಿಂದ  ಹಣವನ್ನು ಖುದ್ದಾಗಿ ಸ್ವಿಜ್ಟರ್ಲೆಂಡ್‌ಗೆ ಹೋಗಿ ಕಟ್ಟಿಬರಬೇಕಾಗುತ್ತದೆ.

ಕಪ್ಪುಹಣ ಬಚ್ಚಿಟ್ಟಿರುವ ಮೊದಲ ಐದು ದೇಶಗಳು
* ಭಾರತ(1456ಶತಕೋಟಿಡಾಲರ್)  ರೂ. 65,52,000 ಕೋಟಿ
* ರಷ್ಯಾ(470 ಶತಕೋಟಿ ಡಾಲರ್)  ರೂ. 21.15,000
* ಇಂಗ್ಲೆಂಡ್ (390 ಶತಕೋಟಿ ಡಾಲರ್) ರೂ. 17,55,000
* ಉಕ್ರೇನ್ (100 ಶತಕೋಟಿ ಡಾಲರ್) ರೂ. 4,50,000
* ಚೀನಾ (96 ಶತಕೋಟಿ ಡಾಲರ್)  ರೂ. 4,32,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT