ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗಾಮಿ ಅಧ್ಯಕ್ಷರಾಗಿ ದಾಲ್ಮಿಯ

ತಾತ್ಕಾಲಿಕವಾಗಿ ಅಧ್ಯಕ್ಷ ಸ್ಥಾನ `ತ್ಯಜಿಸಿದ' ಶ್ರೀನಿವಾಸನ್
Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ/ಐಎಎನ್‌ಎಸ್): ಭಾರತ ಕ್ರಿಕೆಟ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನಿಂದ ಪಾರಾಗಲು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಮತ್ತೊಂದು ಯೋಜನೆ ಹೆಣೆದಿದ್ದು, ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿದ್ದಾರೆ. ಅಧ್ಯಕ್ಷ ಸ್ಥಾನದಿಂದ `ತಾತ್ಕಾಲಿಕ'ವಾಗಿ ದೂರ ಸರಿಯುವ ಮೂಲಕ ರಾಜೀನಾಮೆ `ಕುಣಿಕೆ'ಯಿಂದ ಪಾರಾಗಿದ್ದಾರೆ. ಅಳಿಯ ಗುರುನಾಥ್ ಮೇಯಪ್ಪನ್ ವಿರುದ್ಧದ ತನಿಖೆ ಪೂರ್ಣಗೊಳ್ಳುವವರೆಗೆ ಮಾತ್ರ ಅಧ್ಯಕ್ಷ ಸ್ಥಾನದ ಕೆಲಸಗಳನ್ನು ಬಿಟ್ಟು ಹೊರಗಿರಲು ತೀರ್ಮಾನಿಸಿದ್ದಾರೆ.

ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಪ್ರಸಕ್ತ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷರಾಗಿರುವ ಜಗಮೋಹನ್ ದಾಲ್ಮಿಯ `ಹಂಗಾಮಿ ಅಧ್ಯಕ್ಷರಾಗಿ' ಬಿಸಿಸಿಐನ ದೈನಂದಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ.

ಭಾನುವಾರ ಚೆನ್ನೈನಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ತುರ್ತುಸಭೆಯಲ್ಲಿ ಈ ಎರಡು ಮಹತ್ವದ ತೀರ್ಮಾನಗಳು ಹೊರಬಿದ್ದಿವೆ. ಶ್ರೀನಿವಾಸನ್ `ಭವಿಷ್ಯ' ನಿರ್ಧರಿಸುವ ನಿಟ್ಟಿನಲ್ಲಿ ಸಭೆ ಹೆಚ್ಚಿನ ಮಹತ್ವ ಪಡೆದಿತ್ತು. ಆದರೆ ಸಭೆಯಲ್ಲಿ ಅಧ್ಯಕ್ಷರ ರಾಜೀನಾಮೆಗೆ ಯಾರೂ ಒತ್ತಡ ಹೇರದ್ದು ಅಚ್ಚರಿಗೆ ಕಾರಣವಾಗಿದೆ. ಬದಲಾಗಿ ತೇಪೆ ಹಚ್ಚುವ ಕೆಲಸಗಳು ನಡೆದಿವೆ.

ಈ ಸಭೆ `ಕಣ್ಣೊರೆಸುವ ತಂತ್ರ' ಎಂದು ಐ.ಎಸ್. ಬಿಂದ್ರಾ ಒಳಗೊಂಡಂತೆ ಸಮಿತಿಯ ಕೆಲವು ಸದಸ್ಯರು ಟೀಕಿಸಿದ್ದಾರೆ. ಕಾರ್ಯಕಾರಿ ಸಮಿತಿಯು ಅಧ್ಯಕ್ಷರ ವಿರುದ್ಧ ಕಠಿಣ ನಿಲುವು ಕೈಗೊಳ್ಳುವುದಾಗಿ ಭಾವಿಸಲಾಗಿತ್ತು. ಆದರೆ ಅಂತಹ ಯಾವುದೇ  ತೀರ್ಮಾನಗಳು ಹೊರಬೀಳಲಿಲ್ಲ.

ಐಪಿಎಲ್ ಬೆಟ್ಟಿಂಗ್ ಹಗರಣದಲ್ಲಿ ಮೇಯಪ್ಪನ್ ಪೊಲೀಸರ ಬಂಧನಕ್ಕೆ ಒಳಗಾದ ದಿನದಿಂದಲೂ ಬಿಸಿಸಿಐ ಅಧ್ಯಕ್ಷರ ರಾಜೀನಾಮೆಗೆ ಒತ್ತಡ ಬರತೊಡಗಿತ್ತು.

ಮಂಡಳಿಯ ಕಾರ್ಯದರ್ಶಿ ಸಂಜಯ್ ಜಗದಾಳೆ ಮತ್ತು ಖಜಾಂಚಿ ಅಜಯ್ ಶಿರ್ಕೆ ಅವರಲ್ಲಿ ರಾಜೀನಾಮೆ ವಾಪಸ್ ಪಡೆಯುವಂತೆ ಕಾರ್ಯಕಾರಿ ಸಮಿತಿಯು ಕೋರಿದೆ. ಆದರೆ `ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ' ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ.

ದಾಲ್ಮಿಯ ಹೆಸರು ಪ್ರಸ್ತಾಪಿಸಿದ ಜೇಟ್ಲಿ: ಶ್ರೀನಿವಾಸನ್ ತಮ್ಮ ಮೂರು ಷರತ್ತುಗಳನ್ನು ಸಭೆಯ ಮುಂದಿಟ್ಟರು ಎಂದು ಮೂಲಗಳು ತಿಳಿಸಿವೆ. ಐಪಿಎಲ್ ಪ್ರಕರಣದ ತನಿಖೆ ಕೊನೆಗೊಂಡ ಬಳಿಕ `ದೋಷಮುಕ್ತ' ಎಂದು ಸಾಬೀತಾದರೆ ಮತ್ತೆ ಅಧ್ಯಕ್ಷನಾಗುವುದು, ಐಸಿಸಿಯಲ್ಲಿ ಭಾರತವನ್ನು ಪ್ರತಿನಿಧಿಸುವುದು ಮತ್ತು ಜಗದಾಳೆ ಹಾಗೂ ಶಿರ್ಕೆ ಅವರಿಗೆ ಮಂಡಳಿಯಲ್ಲಿ ಸ್ಥಾನ ನೀಡಬಾರದು ಎಂಬುದು ಷರತ್ತುಗಳು ಆಗಿದ್ದವು.

ಸಮಿತಿ ಸದಸ್ಯರು ಕೆಲವು ಷರತ್ತುಗಳನ್ನು ತಿರಸ್ಕರಿಸಿದರು. `ಮೇಯಪ್ಪನ್ ವಿರುದ್ಧದ ತನಿಖೆ ಕೊನೆಗೊಳ್ಳುವವರೆಗೆ ಅಧ್ಯಕ್ಷನ ಕೆಲಸದಿಂದ ದೂರ ನಿಲ್ಲುವೆ' ಎಂದು ಶ್ರೀನಿವಾಸನ್ ಸಭೆಗೆ ತಿಳಿಸಿದ್ದಾರೆ. ಈ ಮೂಲಕ ರಾಜೀನಾಮೆಗೆ ಸಿದ್ಧನಿಲ್ಲ ಎಂಬುದನ್ನು ಸಾರಿ ಹೇಳಿದರು.

ಈ ವೇಳೆ ಕೆಲ ಸದಸ್ಯರು `ಹಂಗಾಮಿ' ಅಧ್ಯಕ್ಷರಾಗುವಂತೆ ಅರುಣ್ ಜೇಟ್ಲಿ ಅವರಲ್ಲಿ ಕೇಳಿಕೊಂಡಿದ್ದಾರೆ. ಆದರೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಕಾರಣ ಈ ಜವಾಬ್ದಾರಿ ನಿರ್ವಹಿಸಲು ಸಾಧ್ಯವಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಸಭೆಗೆ ತಿಳಿಸಿದ್ದಾರೆ. ಮಾತ್ರವಲ್ಲ, ಶಶಾಂಕ್ ಮನೋಹರ್ ಮತ್ತು ದಾಲ್ಮಿಯ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಆದರೆ ಶಶಾಂಕ್ ಅವರಿಗೆ ಹೆಚ್ಚಿನ ಬೆಂಬಲ ದೊರೆಯಲಿಲ್ಲ. ಈ ವೇಳೆ ಜೇಟ್ಲಿ ಹಾಗೂ ಬಿಸಿಸಿಐ ಜಂಟಿ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ದಾಲ್ಮಿಯ ಹೆಸರನ್ನು ಸೂಚಿಸಿದರು. ಶ್ರೀನಿವಾಸನ್ ಒಳಗೊಂಡಂತೆ ಎಲ್ಲರೂ ಅದಕ್ಕೆ ಒಪ್ಪಿಗೆ ಸೂಚಿಸಿದರು. ಶಶಾಂಕ್ ಅವರನ್ನು `ಹಂಗಾಮಿ' ಅಧ್ಯಕ್ಷರನ್ನಾಗಿ ನೇಮಿಸುವ ಶರದ್ ಪವಾರ್ ಬಣದ ಪ್ರಯತ್ನ ವಿಫಲವಾಯಿತು.

ತರ್ತು ಸಭೆಯ ಬಳಿಕ ಮಂಡಳಿಯ ಪರ ಅಧಿಕೃತವಾಗಿ ಯಾರೂ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿಲ್ಲ. ಜಂಟಿ ಕಾರ್ಯದರ್ಶಿ ಅನುರಾಗ್ ಠಾಕೂರ್ ಸಂಕ್ಷಿಪ್ತ ಪ್ರಕಟಣೆಯನ್ನು ಮಾತ್ರ ಹೊರಡಿಸಿದರು.

ಬಿಸಿಸಿಐ ತುರ್ತು ಸಭೆಯಲ್ಲಿ ನಡೆದದ್ದು..
ಚೆನ್ನೈ (ಪಿಟಿಐ):
ಬಿಸಿಸಿಐ ಅಧ್ಯಕ್ಷರ `ಭವಿಷ್ಯ' ನಿರ್ಧರಿಸುವ ನಿಟ್ಟಿನಲ್ಲಿ ಮಹತ್ವ ಪಡೆದಿದ್ದ ಕಾರ್ಯಕಾರಿ ಸಮಿತಿ ತುರ್ತುಸಭೆಯಲ್ಲಿ ಎನ್. ಶ್ರೀನಿವಾಸನ್ ರಾಜೀನಾಮೆಗೆ ಅತಿಯಾದ ಒತ್ತಡ ಬರಬಹುದು ಎಂದು ಭಾವಿಸಲಾಗಿತ್ತು. ಆದರೆ ಅದು ನಡೆಯದೇ ಇದ್ದುದು ಸಭೆಯ `ಹೈಲೈಟ್' ಎನಿಸಿಕೊಂಡಿತು.

ಭಾನುವಾರ ಮಧ್ಯಾಹ್ನ ನಡೆದ ಸಭೆಯ ಬೆಳವಣಿಗೆಗಳು ಹೀಗಿವೆ:
* ಎನ್. ಶ್ರೀನಿವಾಸನ್ ಆರಂಭದಲ್ಲಿ ದೇಸಿ ಕ್ರಿಕೆಟ್ ಹಾಗೂ ಐಸಿಸಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಮುಂದಿಟ್ಟರು. ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಮೂವರು ಆಟಗಾರರು ಬಂಧನಕ್ಕೆ ಒಳಗಾದದ್ದು ಮತ್ತು ಗುರುನಾಥನ್ ಮೇಯಪ್ಪನ್ ಬಂಧನ ವಿಷಯವನ್ನು ಸಭೆಗೆ ತಿಳಿಸಿದರು.

* ಸಂಜಯ್ ಜಗದಾಳೆ ಮತ್ತು ಅಜಯ್ ಶಿರ್ಕೆ ಈ ಸಭೆಗೆ `ವಿಶೇಷ ಆಹ್ವಾನಿತರು' ಎಂದು ಅವರು ಪ್ರಕಟಿಸಿದರು.

* ಇಬ್ಬರ ರಾಜೀನಾಮೆ `ಅಂಗೀಕಾರಾರ್ಹವಲ್ಲ' ಎಂದು ಪ್ರಕಟಿಸಿದ ಶ್ರೀನಿವಾಸನ್.

* ಮೂವರು ಆಟಗಾರರು ಹಾಗೂ ಮೇಯಪ್ಪನ್ ಪ್ರಕರಣದಿಂದ ಮಂಡಳಿಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ ಎಂದು ಅರುಣ್ ಜೇಟ್ಲಿ ಸಭೆಗೆ ತಿಳಿಸಿದರು.

* ತನಿಖೆ ಪೂರ್ಣಗೊಳ್ಳುವವರೆಗೆ ಅಧ್ಯಕ್ಷ ಸ್ಥಾನದಿಂದ ದೂರ ಸರಿಯಿರಿ. ಹಾಗಾದಲ್ಲಿ ನಿಷ್ಪಕ್ಷಪಾತ ತನಿಖೆ ಸಾಧ್ಯ' ಎಂದು ಶ್ರೀನಿವಾಸನ್‌ಗೆ ಜೇಟ್ಲಿ ಸಲಹೆ.

* ಜೇಟ್ಲಿ ಸಲಹೆಯಂತೆ ಅಧ್ಯಕ್ಷ ಸ್ಥಾನ `ತ್ಯಜಿಸಲು' ಶ್ರೀನಿವಾಸನ್ ನಿರ್ಧಾರ.

* ತನಿಖೆ ಕೊನೆಗೊಳ್ಳುವವರೆಗೆ ಅಧ್ಯಕ್ಷ ಸ್ಥಾನದಿಂದ ದೂರ ಸರಿಯಬೇಕೆಂಬ ಸಲಹೆಯನ್ನು ಒಂದು ವಾರದ ಹಿಂದೆಯೇ ಶ್ರೀನಿವಾಸನ್ ಮುಂದಿಟ್ಟಿದ್ದೆ ಎಂದು ಸಭೆಗೆ ತಿಳಿಸಿದ ಜೇಟ್ಲಿ.

* ರಾಜೀನಾಮೆ ವಾಪಸ್ ಪಡೆಯುವಂತೆ ಸಮಿತಿಯ ಸದಸ್ಯರಿಂದ ಜಗದಾಳೆ ಹಾಗೂ ಶಿರ್ಕೆ ಅವರಲ್ಲಿ ಒಕ್ಕೊರಲಿನ ಕೋರಿಕೆ. ನಿರ್ಧಾರ ಬದಲಿಸಲು ಇಬ್ಬರಿಗೂ 24 ಗಂಟೆಗಳ ಅವಕಾಶ.

* ಆದರೆ ರಾಜೀನಾಮೆ ವಾಪಸ್ ಪಡೆಯಲು ನಿರಾಕರಣೆ.

* ಜಗಮೋಹನ್ ದಾಲ್ಮಿಯ (ಸಿಎಬಿ), ರವಿ ಸಾವಂತ್ (ಎಂಸಿಎ), ಅನಿಲ್ ಕುಂಬ್ಳೆ (ಕೆಎಸ್‌ಸಿಎ), ಗಂಗ ರಾಜು (ಆಂಧ್ರ ಸಿಎ), ನಿರಂಜನ್ ಶಾ, ಸುಧೀರ್ ದಬಿರ್ (ಉಪಾಧ್ಯಕ್ಷರು).. ಹೀಗೆ ಒಬ್ಬೊಬ್ಬರಿಂದ ಅಭಿಪ್ರಾಯ ಮಂಡನೆ.

* ತುರ್ತುಸಭೆಯ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದ ಐ.ಎಸ್. ಬಿಂದ್ರಾ (ಒಂದೇ ದಿನದ ಅವಧಿಯಲ್ಲಿ ಸಭೆ ಕರೆದದ್ದನ್ನು ಪ್ರಶ್ನಿಸಿದ್ದಾರೆ). ಅದಕ್ಕೆ ಪ್ರತ್ಯುತ್ತರ ನೀಡಿದ ರಾಜೀವ್ ಶುಕ್ಲಾ.

* ಹಂಗಾಮಿ ಅಧ್ಯಕ್ಷರಾಗಬೇಕೆಂದು ಜೇಟ್ಲಿ ಅವರನ್ನು ಕೋರಿದ ಸದಸ್ಯರು; ಆದರೆ ನಿರಾಕರಣೆ.

* ಶಶಾಂಕ್ ಮನೋಹರ್ ಮತ್ತು ಜಗಮೋಹನ್ ದಾಲ್ಮಿಯ ಹೆಸರು ಪ್ರಸ್ತಾಪಿಸಿದ ಜೇಟ್ಲಿ.

* ತನಿಖೆಯ ಬಳಿಕ `ದೋಷಮುಕ್ತ' ಎಂದು ಕಂಡುಬಂದರೆ ಮತ್ತೆ ಅಧ್ಯಕ್ಷನಾಗುವೆನು ಎಂದು ಶ್ರೀನಿವಾಸನ್ ಹೇಳಿಕೆ.

* ಶಶಾಂಕ್‌ಗೆ ದೊರೆಯದ ಬೆಂಬಲ. ದಾಲ್ಮಿಯ ಹೆಸರು ಮುಂದಿಟ್ಟ ಜೇಟ್ಲಿ ಮತ್ತು ಅನುರಾಗ್ ಠಾಕೂರ್. ಇದಕ್ಕೆ ಒಪ್ಪಿಗೆ ಸೂಚಿಸಿದ ಶ್ರೀನಿವಾಸನ್

* ಶ್ರೀನಿವಾಸನ್ ಅಧ್ಯಕ್ಷ ಸ್ಥಾನದಿಂದ `ತಾತ್ಕಾಲಿಕವಾಗಿ' ಕೆಳಗಿಳಿದಿದ್ದು, `ರಾಜೀನಾಮೆ' ನೀಡಿಲ್ಲ ಎಂಬ ಪ್ರಕಟಣೆ. ಎಲ್ಲ 23 ಸದಸ್ಯರ ಒಪ್ಪಿಗೆ

* ಹಂಗಾಮಿ ಅಧ್ಯಕ್ಷನಾಗಲು ಒಪ್ಪಿಗೆ ಸೂಚಿಸಿದ ದಾಲ್ಮಿಯ

ಸಭೆಯಲ್ಲಿ ಯಾರೂ ನನ್ನಲ್ಲಿ ರಾಜೀನಾಮೆ ನೀಡುವಂತೆ ಕೋರಲಿಲ್ಲ. ಸುದೀರ್ಘ ಚರ್ಚೆ ನಡೆಯಿತು. ಬೆಟ್ಟಿಂಗ್ ಪ್ರಕರಣದ ತನಿಖೆ ಕೊನೆಗೊಳ್ಳುವವರೆಗೆ ಅಧ್ಯಕ್ಷನ ಯಾವುದೇ ಕೆಲಸ ನಿರ್ವಹಿಸುವುದಿಲ್ಲ ಎಂದು ಸಭೆಯ ಮುಂದೆ ಪ್ರಕಟಿಸಿದೆ.
- ಎನ್. ಶ್ರೀನಿವಾಸನ್

ಶ್ರೀನಿವಾಸನ್ ರಾಜೀನಾಮೆಗೆ ಆಗ್ರಹಿಸುವುದು ಅವಸರದ ನಿರ್ಧಾರ ಎಂಬುದು ಕಾರ್ಯಕಾರಿ ಸಮಿತಿ ಸದಸ್ಯರ ಭಾವನೆ. ಈ ಸಭೆಯನ್ನು `ಕಣ್ಣೊರೆಸುವ ತಂತ್ರ ಎಂದು ಕರೆಯುವುದು ಸರಿಯಲ್ಲ.
- ಜಗಮೋಹನ್ ದಾಲ್ಮಿಯ

ಶ್ರೀನಿವಾಸನ್ ರಾಜೀನಾಮೆ ನೀಡಬೇಕೆಂದು ನಾನು ಸೂಚ್ಯವಾಗಿ ತಿಳಿಸಿದೆ. ಆದರೆ ಇತರ ಯಾರೂ ಈ ಬಗ್ಗೆ ಮಾತನಾಡುವ ಧೈರ್ಯವನ್ನೇ ತೋರಲಿಲ್ಲ. ಪಿಸುಗುಟ್ಟುವ ತಾಕತ್ತು ಮಾತ್ರ ಅವರಲ್ಲಿತ್ತು. ಬಿಸಿಸಿಐ ಸಂವಿಧಾನದಲ್ಲಿ ಹಂಗಾಮಿ ಅಧ್ಯಕ್ಷರೆಂಬುದೇ ಇಲ್ಲ. ಶ್ರೀನಿವಾಸನ್ ಅವರೇ ತೆರೆಮರೆಯಲ್ಲಿ ಅಧ್ಯಕ್ಷನ ಜವಾಬ್ದಾರಿ ನಿರ್ವಹಿಸುವರು.
-ಐ.ಎಸ್. ಬಿಂದ್ರಾ

ನೆರವಾದ ಶ್ರೀನಿವಾಸನ್ `ಪರಮಾಧಿಕಾರ'
ಎನ್.ಶ್ರೀನಿವಾಸನ್ ಬಿಸಿಸಿಐನಲ್ಲಿ ಪರಮಾಧಿಕಾರ ಹೊಂದಿದ್ದಾರೆಯೇ? ಒಂದು ವರ್ಷದ ಹಿಂದೆಯೇ ಬಿಸಿಸಿಐ ಸಂವಿಧಾನಕ್ಕೆ ಹಲವು ತಿದ್ದುಪಡಿ ತರುವು ಮೂಲಕ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು ಯತ್ನಿಸಿದ್ದು ಸುಳ್ಳಲ್ಲ. ಎಲ್ಲರ ಬೆಂಬಲ ಹೊಂದಿದ್ದ ಅವರಿಗೆ ಇದು ತುಂಬಾ ಸುಲಭವಾಗಿತ್ತು. ಅದೀಗ ಶ್ರೀನಿವಾಸನ್ ಅವರ ನೆರವಿಗೆ ಬರುತ್ತಿದೆ.

ಹಾಗಾಗಿ ಅವರನ್ನು ಪದಚ್ಯುತಿಗೊಳಿಸಲು ಕಷ್ಟವಾಗುತ್ತಿದೆ. ವಾರ್ಷಿಕ ವಿಶೇಷ ಸಭೆ (ಎಜಿಎಂ) ಕರೆಯುವ ಸಂಪೂರ್ಣ ಅಧಿಕಾರ ಶ್ರೀನಿವಾಸನ್ ಬಳಿ ಇದೆ. ಬಿಸಿಸಿಐ ಅಧ್ಯಕ್ಷರ ಒಪ್ಪಿಗೆ ಇಲ್ಲದೆ ಎಜಿಎಂ ನಡೆಸುವಂತಿಲ್ಲ. ಎಜಿಎಂ ನಡೆಯದೇ ಅವರನ್ನು ಉಚ್ಚಟಿಸುವಂತಿಲ್ಲ. ಮಂಡಳಿಯ ನಿಯಮಾವಳಿಗಳ ಪ್ರಕಾರ ಈ ಸಭೆಯನ್ನು ಮುಂದೂಡುವ ಅಧಿಕಾರವೂ ಅಧ್ಯಕ್ಷರಿಗಿದೆ. ಯಾವುದಾದರೂ ಹಣಕಾಸು ವ್ಯವಹಾರ ಸಂಬಂಧ ಚರ್ಚಿಸಲು ಎಜಿಎಂ ನಡೆಸಬೇಕಾದರೆ 10ಕ್ಕಿಂತ ಕಡಿಮೆ ಸದಸ್ಯರು ಇರುವಂತಿಲ್ಲ.

ಮಂಡಳಿಯ ನಿಯಮಾವಳಿ 17ರ ಪರಿಚ್ಚೇದ (111) ಪ್ರಕಾರ ಅಧ್ಯಕ್ಷರು ಎಜಿಎಂ, ಕಾರ್ಯಕಾರಿ ಸಮಿತಿ ಸಭೆ, ಸ್ಥಾಯಿ ಸಮಿತಿ ಹಾಗೂ ಯಾವುದೇ ಸಮಿತಿಯ ಸಭೆಗಳನ್ನು ಮುಂದೂಡಬಹುದು ಅಥವಾ ರದ್ದುಗೊಳಿಸಬಹುದು.

ಬಿಸಿಸಿಐ ಅಧ್ಯಕ್ಷರ ಮೂರು ವರ್ಷದ ಅವಧಿ ಮುಗಿದ ಬಳಿಕ ಮತ್ತೊಂದು ವರ್ಷ ವಿಸ್ತರಿಸಲು ಮಂಡಳಿಯ ಸಂವಿಧಾನದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಅಷ್ಟು ಮಾತ್ರವಲ್ಲದೇ, `ಮಧ್ಯಂತರ ಅಧ್ಯಕ್ಷ' ಎಂಬುದಕ್ಕೆ ಇದರಲ್ಲಿ ಅವಕಾಶವಿಲ್ಲ.

ಹಿತಾಸಕ್ತಿ ಸಂಘರ್ಷದಲ್ಲಿ ಬಿಸಿಸಿಐ `ಅಧ್ಯಕ್ಷ'
ಹಿತಾಸಕ್ತಿ ಸಂಘರ್ಷದ ಕಾರಣ ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷರ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಕೂಗು ಈ ಹಿಂದೆಯೇ ಕೇಳಿಬಂದಿತ್ತು. ಬಿಸಿಸಿಐ ಅಧ್ಯಕ್ಷರಾಗಿದ್ದುಕೊಂಡು ಐಪಿಎಲ್‌ನಲ್ಲಿ ಫ್ರಾಂಚೈಸ್ ಹೊಂದಿರುವುದೇ ಇದಕ್ಕೆ ಕಾರಣ.
ಏಕೆಂದರೆ ಶ್ರೀನಿವಾಸನ್ ಅವರ ಇಂಡಿಯ ಸಿಮೆಂಟ್ಸ್ ಒಡೆತನದಲ್ಲಿ  ಸೂಪರ್ ಕಿಂಗ್ಸ್ ಫ್ರಾಂಚೈಸ್ ಇದೆ. ಆದರೆ ಪರೋಕ್ಷವಾಗಿ ತಂಡ ಹೊಂದುವುದಕ್ಕೆ ಅವಕಾಶ ಮಾಡಿಕೊಡುವ ರೀತಿಯಲ್ಲಿ 2008ರಲ್ಲಿ ಬಿಸಿಸಿಐ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿತ್ತು.

ಇದಕ್ಕೆ ಹಿಂದಿನ ಅಧ್ಯಕ್ಷ ಶರದ್ ಪವಾರ್ ಅನುವು ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಿತಾಸಕ್ತಿ ಸಂಘರ್ಷದ ಕಾರಣ ಶ್ರೀನಿವಾಸನ್ ರಾಜೀನಾಮೆ ನೀಡಬೇಕು ಎಂದು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಎ.ಸಿ.ಮುತ್ತಯ್ಯ ಕೂಡ ಆಗ್ರಹಿಸಿದ್ದರು.

ಶ್ರೀನಿವಾಸನ್ ತಮಿಳುನಾಡು ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಕೂಡ. ತಮಿಳುನಾಡು ಗಾಲ್ಫ್ ಫೆಡರೇಷನ್ ಹಾಗೂ ಅಖಿಲ ಭಾರತ ಚೆಸ್ ಫೆಡರೇಷನ್ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

`ನಾಚಿಕೆಗೇಡಿನ' ಸಭೆ: ಕೀರ್ತಿ ಆಜಾದ್
ನವದೆಹಲಿ (ಪಿಟಿಐ
): ಚೆನ್ನೈನಲ್ಲಿ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಕಾರ್ಯಕಾರಿ ಸಮಿತಿಯ ತುರ್ತುಸಭೆಯನ್ನು `ನಾಚಿಕೆಗೇಡು' ಎಂದು ಮಾಜಿ ಕ್ರಿಕೆಟಿಗ ಹಾಗೂ ಸಂಸದ ಕೀರ್ತಿ ಆಜಾದ್ ಟೀಕಿಸಿದ್ದಾರೆ.

`ಅಧ್ಯಕ್ಷರು ರಾಜೀನಾಮೆ ನೀಡುತ್ತಿಲ್ಲವಾದರೇ, ಈ ಸಭೆ ನಾಚಿಕೆಗೇಡು. ಮಂಡಳಿಯ ಸದಸ್ಯರು ಅವರ ರಾಜೀನಾಮೆಯನ್ನು ಕೇಳಲು ಪ್ರಯತ್ನಿಸಿರಲಿಲ್ಲ ಎಂದೇ ನಾನು ಹೇಳಬೇಕಾತ್ತದೆ' ಎಂದು ಆಜಾದ್ ಪ್ರತಿಕ್ರಿಯಿಸಿದ್ದಾರೆ.

ದಾಲ್ಮಿಯ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿದ ಕಾರ್ಯಕಾರಿ ಸಮಿತಿಯ ಕ್ರಮವನ್ನು ಪ್ರಶ್ನಿಸಿರುವ ಆಜಾದ್, `ದಾಲ್ಮಿಯ ಅವರು ಅಧ್ಯಕ್ಷರಾಗುವವರಿದ್ದರೇ, ಅಧ್ಯಕ್ಷರು ರಾಜೀನಾಮೆ ನೀಡುವ ತನಕವೂ ಮಧ್ಯಂತರ ಅಧ್ಯಕ್ಷರ ನೇಮಕ ಹೇಗೆ ಸಾಧ್ಯ. ಸಂಧಾನಕ್ಕಾಗಿ ಅವರು ಶಕ್ತ್ಯಾನುಸಾರ  ಪ್ರಯತ್ನಿಸಿದ್ದಾರೆ. ಆದರೆ ಸಫಲರಾಗಿಲ್ಲ. ಹೊಸಬರನ್ನು ನೇಮಿಸಲು ವಿಫಲರಾಗಿದ್ದಾರೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮ್ಯಾಚ್ ಫಿಕ್ಸಿಂಗ್‌ಗೂ ಸಭೆಗೂ ವ್ಯತ್ಯಾಸವಿಲ್ಲ: ಲೇಲೆ
ಮುಂಬೈ (ಪಿಟಿಐ)
: ಚೆನ್ನೈನಲ್ಲಿ ನಡೆದ ಬಿಸಿಸಿಐನ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ನಡೆದ ಬೆಳವಣಿಗೆಗಳನ್ನು ಮ್ಯಾಚ್ ಫಿಕ್ಸಿಂಗ್‌ಗೆ ಹೋಲಿಸಿರುವ ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯವಂತ ಲೇಲೆ, ಇದು ಸಹ ಮ್ಯಾಚ್ ಫಿಕ್ಸಿಂಗ್ ಎಂದು ಅಭಿಪ್ರಾಯ ಪಟ್ಟಿದ್ದಾರೆ. `ಮಧ್ಯಂತರ ಅಧ್ಯಕ್ಷ'ರನ್ನಾಗಿ ಜಗಮೋಹನ್ ದಾಲ್ಮಿಯ ಅವರನ್ನು ನೇಮಿಸಿದ ಪ್ರಕ್ರಿಯೆಯನ್ನು `ಅಸಂವಿಧಾನಿಕ' ಎಂದು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

`ಭಾನುವಾರ ನಡೆದ ಬೆಳವಣಿಗೆಗಳಿಂದ ತುಂಬಾನೆ  ನಿರಾಶೆಯಾಗಿದೆ. ಇದಕ್ಕೂ ಮ್ಯಾಚ್‌ಫಿಕ್ಸಿಂಗ್‌ಗೂ ಏನು ವ್ಯತ್ಯಾಸ? ಕಾರ್ಯಕಾರಿ ಸಮಿತಿ ಯಾರೊಬ್ಬರನ್ನೂ ನೇಮಿಸಲು ಸಾಧ್ಯವಿಲ್ಲದಿರುವಾಗ ಇದೆಲ್ಲವೂ  ಅಸಂವಿಧಾನಿಕ' ಎಂದು ವಡೋದರಾದಲ್ಲಿರುವ ಲೇಲೆ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

`ಸಭೆಯಲ್ಲಿ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ಅಸಂವಿಧಾನಿಕವಾಗಿತ್ತು. ಶ್ರೀನಿವಾಸನ್ ಅವರು ರಾಜೀನಾಮೆ ನೀಡಿಲ್ಲ. ಆದ್ದರಿಂದ ದಾಲ್ಮಿಯ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸುವ ಪ್ರಶ್ನೆ ಎಲ್ಲಿ ಉದ್ಭವಿಸುತ್ತೆ' ಎಂದು ಲೇಲೆ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT