ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಚಿ ಉಣ್ಣಬೇಕಾದ ಅಧಿಕಾರ!

Last Updated 2 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತುಮಕೂರು ಜಿಲ್ಲೆಯ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸಂಭವಿಸಿದ್ದು ಒಂದೇ ಒಂದು ಅವಿಶ್ವಾಸ ನಿರ್ಣಯ ಪ್ರಕರಣ! ಹಾಗೆಂದು ಇಲ್ಲಿನ ಎಲ್ಲಾ 325 ಗ್ರಾಮ ಪಂಚಾಯ್ತಿಗಳು, ಹತ್ತು ತಾಲೂಕು ಪಂಚಾಯ್ತಿಗಳು ಮತ್ತು ಒಂದು ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರ ಹಂಚಿಕೆಯ ಸಮಸ್ಯೆಯೇ ಇಲ್ಲವೇ ಎಂಬ ಪ್ರಶ್ನೆ ಕೇಳಿದರೆ ಸಿಗುವ ಉತ್ತರವೇ ಬೇರೆ. ಎಲ್ಲೆಡೆ ಇರುವ ಸಮಸ್ಯೆ ಇಲ್ಲಿಯೂ ಇದೆ. ಆದರೆ ಇದರ ನಿವಾರಣೆಗೆ ಕಂಡುಕೊಂಡಿರುವ ಮಾರ್ಗವೆಂದರೆ ‘ಸಮಾನ ಹಂಚಿಕೆ’ ಸೂತ್ರ. ಈ ಸೂತ್ರವನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗಳೆಂಬ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಒಪ್ಪಿಕೊಂಡು ಬಿಟ್ಟಿವೆ.

2005ರಲ್ಲಿ ಕಾಂಗ್ರೆಸ್‌ನ ಜಿ.ಪಂ. ಅಧ್ಯಕ್ಷೆ ಎಸ್‌.ಆರ್‌.ಶಾಂತಲಾ ಅವರನ್ನು ಅವಿಶ್ವಾಸದ ಮೂಲಕ ಕೆಳಗಿಳಿಸಲಾಯಿತು. 1995ರಿಂದ 2014ರ ವರೆಗಿನ ಅವಧಿಯಲ್ಲಿ ಅವಿಶ್ವಾಸದಲ್ಲಿ ಅಧಿಕಾರ ಕಳೆದುಕೊಂಡ ಮಹಿಳೆ ಇವರೊಬ್ಬರೇ. ಈ ಅವಿಶ್ವಾಸ ನಿರ್ಣಯ ಕೂಡಾ ‘ಅಧಿಕಾರ ಹಂಚಿಕೆ ಸೂತ್ರಕ್ಕೆ’ ಅನುಗುಣವಾಗಿಯೇ ನಡೆಯಿತು.

ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ ಅವರ 20:20 ಒಪ್ಪಂದದ ಸರ್ಕಾರ ರಚನೆಗೂ ಈ ಅಧಿಕಾರ ಹಂಚಿಕೆ ಸೂತ್ರಕ್ಕೂ ಒಂದು ದೂರದ ಸಂಬಂಧವಿದೆ. ತುಮಕೂರು ಜಿಲ್ಲೆಯ ‘ಸಮಾನ ಹಂಚಿಕೆ’ ತತ್ವ ಒಂದು ರಾಜಕೀಯ ಸೂತ್ರವಾಗಿ ಬಳಕೆಗೆ ಬಂದದ್ದು ಬಿಜೆಪಿ–ಜೆಡಿಎಸ್‌ನ 20:20 ಪ್ರಯತ್ನದ ನಂತರವೇ.

2006ರಿಂದ ಆರಂಭಗೊಂಡಿರುವ ಒಪ್ಪಂದದ  ಅಧಿಕಾರ ಪರ್ವ  ಪ್ರಸ್ತುತ ಅಲಿಖಿತ ಕಾನೂನೇ ಆಗಿ ಹೋಗಿದೆ. 2006ರ ಮೊದಲ ಅವಧಿಯಲ್ಲೇ ಜಿ.ಪಂ.ಗೆ ಮೂವರು ಅಧ್ಯಕ್ಷರಾದರು. ಮೂರನೇ ಅವಧಿಯಲ್ಲಿ ಇಬ್ಬರು ಅಧ್ಯಕ್ಷರಾದರು. ಕಳೆದ 8 ವರ್ಷಗಳಲ್ಲಿ ತುಮಕೂರು ಜಿಲ್ಲಾ ಪಂಚಾಯ್ತಿ9 ಅಧ್ಯಕ್ಷರನ್ನು ಕಂಡಿದೆ.

ತಲಾ ಹತ್ತು ತಿಂಗಳಂತೆ ಅಧಿಕಾರ ಹಂಚಿಕೆ ರಾಜೀ ಸೂತ್ರ ನಡೆದಿದ್ದರೂ ಒಪ್ಪಂದದಂತೆ ಅಧಿಕಾರ ಬಿಡದೆ 13–14 ತಿಂಗಳು ಅಧಿಕಾರ ನಡೆಸಿದವರು ಇದ್ದಾರೆ. 2012ರಲ್ಲಿ ಆನಂದ ರವಿ 8 ತಿಂಗಳಿಗೆ ಮಾತ್ರ ಅಧ್ಯಕ್ಷರಾಗಿದ್ದರು. ಈ ಚಾಳಿ ಮುಂದುವರೆದಿದ್ದು, ಪ್ರತಿ 10 ತಿಂಗಳಿಗೊಬ್ಬರಂತೆ ಎಂಬ ಸೂತ್ರದ ಮೇಲೆಯೇ ಈಗಲೂ ಅಧಿಕಾರ ನಡೆದಿದೆ. ರಾಜೀನಾಮೆ ನೀಡುವುದಕ್ಕೆ ಕೆಲವರು ಹಿಂದೆಗೆಯುವುದರಿಂದ ಅಧಿಕಾರಾವಧಿ 10 ತಿಂಗಳಿಗಿಂತ ಕಡಿಮೆಯಾಗುವುದೂ ಇದೆ.

‘ಒಪ್ಪಂದ ಅಧಿಕಾರ’ದ ಹಿಂದೆ ಶಾಸಕರ ‘ರಾಜಕೀಯ ತಂತ್ರಗಾರಿಕೆ’ ಕಾಣುತ್ತಿದೆ. ಇದೊಂದು ಬಗೆಯಲ್ಲಿ ಅವರು ತಮ್ಮ ನಾಯಕತ್ವವನ್ನು ಪಂಚಾಯತ್‌ ರಾಜ್‌ ಸಂಸ್ಥೆಗಳ ಮೇಲೆ ಹೇರುವ ಪ್ರಕ್ರಿಯೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಶಾಸಕರು ಅವರವರ ಕ್ಷೇತ್ರದವರನ್ನೇ ತರಲು ಇಚ್ಛಿಸುತ್ತಾರೆ.
ಮೀಸಲಾತಿ ಇದ್ದರೂ ಒಂದೇ ವರ್ಗಕ್ಕೆ ಸೇರಿದ ಮೂವರು–ನಾಲ್ವರು ಸದಸ್ಯರು ಆಯ್ಕೆಯಾಗುವುದರಿಂದ ‘ಹಂಚಿಕೆ’ಯಾಗುವ ಅಧಿಕಾರಕ್ಕೆ ಒತ್ತಡವೂ ಹೆಚ್ಚುತ್ತಿದೆ.

ಜಿ.ಪಂ. ಅಧಿಕಾರ ಹಂಚಿಕೆಯಲ್ಲಿ ಜೆಡಿಎಸ್‌ನ ಮೊದಲ ಮನೆಯ ಕೈವಾಡ ಸ್ಪಷ್ಟವಾಗಿದೆ. ಅಲ್ಲಿಂದ ಬಂದ ಸೂಚನೆಯ ಮೇರೆಗೆ ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯುತ್ತದೆ.

ಜಿಲ್ಲಾ ಪಂಚಾಯ್ತಿಯಲ್ಲಿ ಸಂಭವಿಸಿರುವ ‘ಹಂಚಿಕೆ’ ಪ್ರಭಾವ ತಾಲ್ಲೂಕು ಪಂಚಾಯ್ತಿಗೂ ತಲುಪಿದೆ.  ಇಲ್ಲೂ ಶಾಸಕರದೇ ಆಟ. ಎಲ್ಲ ಬೆಂಬಲಿಗರನ್ನು ತೃಪ್ತಿಪಡಿಸುವ ಹಾಗೂ ಭೌಗೋಳಿಕ ಪ್ರದೇಶದ ಮೇಲೆ ಹಿಡಿತಕ್ಕಾಗಿ ಅಧ್ಯಕ್ಷರು, ಉಪಾಧ್ಯಕ್ಷರ ಬದಲಾವಣೆಗೆ ಶಾಸಕರು ಮಣೆ ಹಾಕುತ್ತಿದ್ದಾರೆ. ಹೀಗೆ ಮಾಡುತ್ತಲೇ ಇಲ್ಲೂ ಪರೋಕ್ಷ ಅಧಿಕಾರದ ಸವಿ ಉಣ್ಣುತ್ತಿದ್ದಾರೆ.

ಜಿಲ್ಲೆಯಲ್ಲಿ 10 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಈ ಅವಧಿಯಲ್ಲಿ ಶಿರಾ ತಾಲ್ಲೂಕು ಪಂಚಾಯಿತಿ ಹೊರತು ಪಡಿಸಿ ಉಳಿದೆಲ್ಲ ಕಡೆಯೂ ಅಧಿಕಾರ ಹಂಚಿಕೆ ಮೇಲೆಯೇ ಅಧ್ಯಕ್ಷರು, ಉಪಾಧ್ಯಕ್ಷರ ಬದಲಾವಣೆ ನಡೆಯುತ್ತಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 2000ದಿಂದ ಗಿರಿಜಮ್ಮ, ಕೆ.ಟಿ.ಗೋವಿಂದಪ್ಪ, ಶಾರದಮ್ಮ , ಜಿ.ಆರ್‌.ಸೀತರಾಮಯ್ಯ ಈ ನಾಲ್ಕು ಮಂದಿ ಮಾತ್ರ ಪೂರ್ಣ ಅಧಿಕಾರ ನಡೆಸಿದ್ದಾರೆ. ಉಳಿದವರು 10 ತಿಂಗಳು, 5 ತಿಂಗಳಂತೆ ಅಧಿಕಾರ ನಡೆಸಿದ್ದಾರೆ. ಎಚ್‌.ಡಿ.ರಮಾದೇವಿ ಎಂಬುವರು ಕೇವಲ 27 ದಿನ (2004) ಅಧಿಕಾರದಲ್ಲಿದ್ದರು. ಆರ್‌.ಶಿವಕುಮಾರ್‌ ಮೂರು ತಿಂಗಳಿಗಷ್ಟೇ (2009) ಅಧಿಕಾರದಲ್ಲಿದ್ದರು.

ಜೆಡಿಎಸ್‌ ಅಧಿಕಾರದಲ್ಲಿರುವ ತುರುವೇಕೆರೆಯಲ್ಲಿ 2006ರ ನಂತರ ಪ್ರತಿ ಅವಧಿಯಲ್ಲೂ ಇಬ್ಬಿಬ್ಬರು ಅಧ್ಯಕ್ಷರು, ಉಪಾಧ್ಯಕ್ಷರಾಗಿದ್ದಾರೆ. 2006-11ನೇ ಸಾಲಿನಲ್ಲಿ 5 ವರ್ಷದಲ್ಲಿ 8 ಮಂದಿ ಉಪಾಧ್ಯಕ್ಷರಾದರು! ಪರಿಶಿಷ್ಟ ಜಾತಿಗೆ ಸೇರಿದ ಒಬ್ಬರೇ ಮಹಿಳೆ ಇದ್ದ ಕಾರಣ ಅವರು ಮಾತ್ರ ಪೂರ್ಣಾವಧಿ ಅಧಿಕಾರ ನಡೆಸಿದರು. ಆಗ ಕಾಂಗ್ರೆಸ್‌ ಬೆಂಬಲದಲ್ಲಿ ಜೆಡಿಎಸ್‌ ಅಧಿಕಾರ ನಡೆಸಿತು. ಗೆಲುವು ಸಾಧಿಸಿದ ಜೆಡಿಎಸ್‌ನ 9 ಸದಸ್ಯರಲ್ಲಿ ಒಬ್ಬರು ಅಧ್ಯಕ್ಷರಾದರೆ, ಉಳಿದ 8 ಮಂದಿ ಅಧಿಕಾರ ರಾಜೀ ಸೂತ್ರದ ಮೇಲೆ ಉಪಾಧ್ಯಕ್ಷರಾಗಿದ್ದರು!

ಪಾವಗಡ ತಾಲ್ಲೂಕು ಪಂಚಾಯಿತಿಯಲ್ಲೂ 2004ರಿಂದ ಇದೇ ಪ್ರವೃತ್ತಿ ಕಾಣುತ್ತಿದೆ. 2004–2013ರ ವರೆಗೆ ಇಬ್ಬರು ಅಧ್ಯಕ್ಷರು, ಮೂವರು ಉಪಾಧ್ಯಕ್ಷರು ಮಾತ್ರ 20 ತಿಂಗಳ ಅಧಿಕಾರ ಪೂರೈಸಿದ್ದಾರೆ. ಉಳಿದವರು ಅಧಿಕಾರ ಹಂಚಿಕೆ ಸೂತ್ರದಡಿ ಪದಚ್ಯುತಗೊಂಡಿದ್ದಾರೆ. ಇವರಲ್ಲಿ ಚನ್ನಮಲ್ಲಪ್ಪ 15 ದಿನ, ಡಿ.ರಂಗಣ್ಣ ಒಂದೂವರೆ ತಿಂಗಳಿಗಷ್ಟೇ ಅಧ್ಯಕ್ಷರಾಗಿದ್ದರು.

ಪ್ರಸ್ತುತ ಅವಧಿಯಲ್ಲಿ ಕುಣಿಗಲ್‌, ಗುಬ್ಬಿ, ತುಮಕೂರು, ಮಧುಗಿರಿ, ಕೊರಟಗೆರೆ ತಾಲ್ಲೂಕು ಪಂಚಾಯಿತಿಯಲ್ಲಿ ಯಾವೊಬ್ಬ ಅಧ್ಯಕ್ಷ, ಉಪಾಧ್ಯಕ್ಷರು ಪೂರ್ಣಾವಧಿ ಅಧಿಕಾರ ನಡೆಸಿಲ್ಲ. ಯಾರು ಎಷ್ಟು ತಿಂಗಳು ಅಧಿಕಾರದಲ್ಲಿ ಇರಬೇಕೆಂಬುದನ್ನು ಆಯಾಯ ಶಾಸಕರೇ ನಿರ್ಧರಿಸಿದ್ದಾರೆ. ಪಂಚಾಯತ್ ರಾಜ್‌ ವ್ಯವಸ್ಥೆಯ ತಳಪಾಯ ಗ್ರಾಮ ಪಂಚಾಯಿತಿಗಳಿಗೂ ಅಧಿಕಾರ ಹಂಚಿಕೆ ಕಾಲಿಸಿರಿದೆ.

ಕಳೆದ ಹತ್ತು ಅಥವಾ ಐದು ವರ್ಷಗಳಲ್ಲಿ ಎಷ್ಟು ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕೆ ಅವಿಶ್ವಾಸ ಅಥವಾ ರಾಜೀನಾಮೆ ಕಾರಣದಿಂದ ಚುನಾವಣೆ ನಡೆದಿದೆ  ಎಂಬ ಕ್ರೋಢೀಕರಿಸಿದ ಮಾಹಿತಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇಲ್ಲ! ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಬಳಿಯೂ ಇಲ್ಲವಾಗಿದೆ. ಇಂಥದೊಂದು ಮಾಹಿತಿ ಸಂಗ್ರಹ ಮಾಡಿಡಬೇಕೆಂಬ ಅರಿವು ಕಂಡುಬರಲಿಲ್ಲ. ‘ಪ್ರಜಾವಾಣಿ’ ಮಾಹಿತಿ ಕೇಳಿದಾಗ ತಬ್ಬಿಬ್ಬಾದ ಅಧಿಕಾರಿಗಳು ಇದೂವರೆಗೂ ಸರ್ಕಾರವೂ ಈ ಮಾಹಿತಿ ಕೇಳಿಲ್ಲ ಎಂದರು. ಉಪ ವಿಭಾಗಾಧಿಕಾರಿಗಳ ಬಳಿಯೂ ಈ ಮಾಹಿತಿ ಇರಲಿಲ್ಲ.

ಕೊರಟಗೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಈ ಅವಧಿಯಲ್ಲಿ ತಲಾ ಹತ್ತು ತಿಂಗಳಿನಂತೆ ಅಧಿಕಾರ ಹಂಚಿಕೊಳ್ಳಲಾಗಿದೆ. ಶಿರಾ ತಾಲ್ಲೂಕಿನಲ್ಲಿ ಈ ಅವಧಿಯ ಮೊದಲ ಅವಧಿಯಲ್ಲಿ 22 ಪಂಚಾಯಿತಿಗಳಲ್ಲಿ 15 ತಿಂಗಳಿಗೊಬ್ಬರಂತೆ ಅಧ್ಯಕ್ಷರು ಬದಲಾಗಿದ್ದಾರೆ. 5 ಪಂಚಾಯಿತಿಗಳಲ್ಲಿ 10 ತಿಂಗಳಿಗೆ ಒಬ್ಬರಂತೆ ಅಧ್ಯಕ್ಷರ ಬದಲಾವಣೆಯಾಗಿದೆ.

ಈ ಹೊಸ ಬೆಳವಣಿಗೆಯನ್ನು ಇದುವರೆಗೂ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಗಮನಿಸಿದಂತಿಲ್ಲ. ಕುತೂಹಲಕ್ಕಾದರೂ ಹೊಸ ಬೆಳವಣಿಗೆಯ ಅಂಕಿ ಅಂಶ ಸಂಗ್ರಹಿಸಿ ತಾಳೆ ನೋಡಿಲ್ಲ. ಪರಿಣಾಮವಾಗಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಬಳಿ ಸ್ಪಷ್ಟ ಅಂಕಿ ಅಂಶವೇ ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT