ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಡೆವಜೀರರು ವೀರಶೈವರೆಂಬುದು ಸತ್ಯಸಂಗತಿ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹಂಡೆವಜೀರರ ಕುರಿತ ಚರ್ಚೆಗೆ (ಪ್ರಜಾವಾಣಿ `ಸಂಗತ  ವಿಭಾಗ, ಸೆ.27, ಅ 04 ಮತ್ತು 09) ನನ್ನ ಒಂದು ಅಭಿಪ್ರಾಯ: ಡಾ. ಲಿಂಗದಹಳ್ಳಿ ಹಾಲಪ್ಪನವರು, “ಹಂಡೆವಜೀರರು ವೀರಶೈವರೆಂದು ಹೇಳುತ್ತಿರುವುದು ಸುಳ್ಳು; ಅವರು ಹಂಡೆಕುರುಬರು ಮಾತ್ರ ಎಂದೂ, ಒಂದು ಕಡೆ ತಾವು ವೀರಶೈವರೆಂದು ಹೇಳಿಕೊಳ್ಳುತ್ತ ಮಠಮಾನ್ಯಗಳಿಂದ ಆಶೀರ್ವಾದ-ಅನುಕೂಲಗಳನ್ನೂ ಇನ್ನೊಂದು ಕಡೆ ತಾವು ಕುರುಬರೆಂದು ಜಾತಿಪತ್ರ ಮಾಡಿಸುತ್ತ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವರೆಂದೂ” ತೀಕ್ಷ್ಣವಾಗಿ ಟೀಕಿಸಿದ್ದಾರೆ. ಡಾ. ಎಫ್. ಟಿ. ಹಳ್ಳಿಕೇರಿ ಅವರ ಹೇಳಿಕೆಯನ್ನು ಅನುಮೋದಿಸಿದ್ದಾರೆ.

ಅದಕ್ಕೆ ಉತ್ತರವಾಗಿ ಬಿ. ಎಸ್. ಪಾಟೀಲರು ಹಂಡೆವಜೀರರು ವೀರಶೈವರೆಂದು ತಾವು ಹೇಳಿದ್ದು ಸುಳ್ಳು ಮಾಹಿತಿ ಅಲ್ಲ; ಅವರು ವೀರಶೈವರಾಗಿದ್ದರೆಂಬುದಕ್ಕೆ ಬುಕ್ಕರಾಯ ಚರಿತೆ ಮೊದಲಾದ ಅನೇಕ ಕತೆಗಳು ಮತ್ತು ಕೆಲವು ವೀರಶೈವ ಮಠಗಳಿಗೆ ಅವರು ಕಾಣಿಕೆ ನೀಡಿದ ದಾನಪತ್ರಗಳು, ಇಷ್ಟೇ ಅಲ್ಲದೆ ವೀರಶೈವ ಜಗದ್ಗುರುಗಳ ಸಮಾಧಿಗಳ ಜೊತೆಯಲ್ಲಿ ಹಂಡೆವಜೀರ ರಾಜರ ಸಮಾಧಿಗಳನ್ನು ಮಾಡಿರುವುದು ಕೂಡಾ ಸಾಕ್ಷಿ ಎಂದು ಬರೆದಿದ್ದಾರೆ.

ಡಾ. ಎಫ್.ಟಿ. ಹಳ್ಳಿಕೇರಿ ಅವರು ಹಂಡೆಕುರುಬ(ವಜೀರ) ಜನಾಂಗ ಇತಿಹಾಸದುದ್ದಕ್ಕೂ ಕುರುಬ ಸಮುದಾಯದಿಂದ ಬೇರ್ಪಡಿಸಲಾಗದ ಪಂಗಡವಾಗಿ ಉಳಿದುಬಂದಿದೆ; ಅದಕ್ಕೆ ಕ್ರಿ.ಶ. 1194ರ ಹೊಯ್ಸಳ ದೊರೆಯ ಒಂದು ನಿರೂಪ, (ನಾನು ಶೋಧಿಸಿ ಪ್ರಕಟಿಸಿರುವ) ಕ್ರಿ.ಶ. ಸುಮಾರು 1558ರ ಮೂರು ತಾಮ್ರಶಾಸನಗಳು ಆಧಾರವಾಗಿವೆ ಎಂದು ಹೇಳಲು ಪ್ರಯತ್ನಿಸಿದ್ದಾರೆ.

ಜೊತೆಗೆ `ವೀರಶೈವ ಹಂಡೆವಜೀರ~ ಎಂಬುದು ಹೊಸ ಜಾತಿಯನ್ನು ಸೃಷ್ಟಿಸುವ ಪ್ರಯತ್ನ ಎಂದೂ ಕುರುಬವನ್ನು ತ್ಯಜಿಸಿ ಅವರು ಹೊಸಜಾತಿಗೆ ಮತಾಂತರವಾಗುತ್ತಿರುವುದು ವಿಷಾದದ ಸಂಗತಿ ಎಂದೂ ಹೇಳಿದ್ದಾರೆ.

ಈ ಮೇಲಿನ ಹೇಳಿಕೆಗಳ ಕೆಲವು ಅಂಶಗಳನ್ನು ಇಲ್ಲಿ ಪರಿಶೀಲಿಸಬೇಕಾಗಿದೆ. ಮೊದಲನೆಯದಾಗಿ, ಹಂಡೆವಜೀರರು ಮಧ್ಯಂತರದ ಯಾವುದೋ ಒಂದು ಘಟ್ಟದಲ್ಲಿ ವೀರಶೈವರಾಗಿರುವುದು ಸತ್ಯಸಂಗತಿ. ಡಾ. ಎಂ. ಎಂ. ಕಲಬುರ್ಗಿ ಅವರು ``ಮಧ್ಯಕಾಲೀನ ಪಾಳೆಯಗಾರರಲ್ಲಿ ತಮ್ಮ ಜಾತಿಯನ್ನು ಉದಾತ್ತೀಕರಿಸಿಕೊಳ್ಳುವುದಕ್ಕಾಗಿ ಸಾಮಾನ್ಯವಾಗಿ ವೀರಶೈವ ಧರ್ಮ ಸ್ವೀಕರಿಸಿದ್ದಾರೆ.

ಅಂದಿನ ಸಂದರ್ಭದಲ್ಲಿ ಪ್ರತಿಷ್ಠಿತ ಧರ್ಮಗಳಾದ ಬ್ರಾಹ್ಮಣ, ಜೈನಗಳಲ್ಲಿ ಈ ಅವಕಾಶವಿರಲಿಲ್ಲ. ಜಾತಿಯನ್ನು ಉದಾತ್ತೀಕರಿಸಿಕೊಳ್ಳುವವರಿಗೆ ಏಕೈಕ ಮುಕ್ತದ್ವಾರ ವೀರಶೈವವೇ ಆಗಿದ್ದಿತು” ಎಂದಿದ್ದಾರೆ.

ಮತ್ತೋಡು ಹಾಗಲವಾಡಿ, ಹರಪನಹಳ್ಳಿ ಮುಂತಾದ ಪಾಳೆಯಗಾರರು ವೀರಶೈವರಾದದ್ದು ಅಂಥ ಹಿನ್ನೆಲೆಯಲ್ಲಿ ಎಂಬುದನ್ನು ನೆನಪಿಸಿಕೊಳ್ಳಬಹುದು. ಆದರೆ ಹಂಡೆವಜೀರ ವಂಶದವರು ಪಾಳೆಯಗಾರರಾಗುವ ಪೂರ್ವದಲ್ಲೇ ವೀರಶೈವರಾಗಿದ್ದರು ಎಂದು ಶ್ರೀಮತಿ ಪಿ. ಯಶೋದಾ ಅವರು ಬರೆದಿರುವುದು ಸಮಂಜಸವಾಗಿದೆ (ವಿಜಯನಗರ ಅಧ್ಯಯನ, ಸಂ.13).

ಆದ್ದರಿಂದ ಹಂಡೆವಜೀರರು ಈಗ ವೀರಶೈವರಾಗಿ ಮತಾಂತರಗೊಳ್ಳುತ್ತಿದ್ದಾರೆ ಎಂದರೆ ಅದು ಎಷ್ಟು ಅಸಂಗತ ಎಂಬುದನ್ನು ಹೇಳಬೇಕಾಗಿಲ್ಲ. ಹಾಗೆ ಹೇಳುವುದರಿಂದ ಆ ಸಮುದಾಯದವರ ಭಾವನೆಗಳನ್ನು ವೃಥಾ ನೋಯಿಸಿದಂತಾಗುತ್ತದೆ ಮತ್ತು ಸಾಮಾಜಿಕ ನೆಮ್ಮದಿಯನ್ನು ಕೆಡಿಸಿದಂತಾಗುತ್ತದೆ ಎಂಬುದನ್ನು ಪರ್ಯಾಲೋಚಿಸುವುದು ಸೂಕ್ತ.

ಹಾಗಾಗಿ ಹಂಡೆವಜೀರರು ಸುಮಾರು 500 ವರ್ಷಗಳಿಗೂ ಹಿಂದೆಯೇ ವೀರಶೈವರಾಗಿ ಬೇರ್ಪಟ್ಟ ಸಮುದಾಯದವರೆ ವಿನಾ, ವೀರಶೈವವೆಂದು ಈಗ ಹೊಸ ಜಾತಿ ಸೃಷ್ಟಿಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ.

ಒಂದು ಸಾರಿ ಲಿಂಗಧಾರಣೆಯಾಗಿ ತಮ್ಮ ಪೂರ್ವದ ಜೀವನ ಪದ್ಧತಿಯನ್ನು ಬಿಟ್ಟ ಅವರು ವೀರಶೈವರಲ್ಲಿ ಒಂದು ಪಂಗಡ ಎನ್ನಬಹುದೇ ಹೊರತು ಇನ್ನೊಂದು ಜಾತಿಯ ಪಂಗಡ ಎಂದು ಈಗ ಹೇಳಲು ಬರುವುದಿಲ್ಲ. ಪ್ರಸ್ತುತ ಸಾವಿರಗಟ್ಟಲೆ ಕುಟುಂಬ ಸಂಖ್ಯೆಯನ್ನೂ ಲಕ್ಷಾಂತರ ಜನಸಂಖ್ಯೆಯನ್ನೂ ಹೊಂದಿರುವ ಹಂಡೆವಜೀರರು ಬೇರೊಂದು ಜಾತಿಯ ಪಂಗಡವೆಂದು ಗುರುತಿಸಿಕೊಳ್ಳುವುದಿಲ್ಲ.

ಇತರ ಸಮುದಾಯಗಳವರು ಕೂಡ ಅವರನ್ನು ಬೇರೊಂದು ಜಾತಿಯವರೆಂದು ಗುರುತಿಸುವುದಿಲ್ಲ. ಒಂದು ಕಾಲಕ್ಕೆ ಲಿಂಗಾಯತರಾದ ಮತ್ತೋಡು ಪಾಳೆಯಗಾರರ ವಂಶಸ್ಥರು ಸಂಬಂಧ ಬೆಳೆಸಿರುವುದು ಲಿಂಗಾಯತರಲ್ಲೇ ಹೊರತು ಬೇರೊಂದು ಸಮುದಾಯದಲ್ಲಿ ಅಲ್ಲ. ಅದೇ ರೀತಿಯಲ್ಲಿ ಹಂಡೆವಜೀರ ಸಮುದಾಯವೂ ಸಹ ನಡೆದು ಬಂದಿದೆ.

`ವಜೀರ~ ಎಂಬ ಗೌರವದ ಬಿರುದು ಹಂಡೆ ವಂಶದವರಿಗೆ ಬಂದಿದ್ದು ಬಿಜಾಪುರದ ಆದಿಲ್‌ಷಾಹಿ ಸುಲ್ತಾನರ ಕಾಲದಲ್ಲಿ(16ನೆಯ ಶತಮಾನ). (ವಜೀರ ಎಂಬ ಶಬ್ದ ಬಂದಿರುವ) ಮೇಲೆ ಹೇಳಿದ ಹೊಯ್ಸಳ ದೊರೆಯ ನಿರೂಪ ಸಂದೇಹಾಸ್ಪದ ಶಾಸನವೆಂದು ಹಿಂದೆಯೇ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅಂಥದ್ದನ್ನು ಒಂದು ಅಧಿಕೃತ ಆಧಾರವೆಂಬಂತೆ ಡಾ. ಹಳ್ಳಿಕೇರಿ ಅವರು ಉಲ್ಲೆೀಖಿಸಿರುವುದು ಸಮಂಜಸವಲ್ಲ.

ಆದಿಲ್‌ಷಾಹಿ ಸುಲ್ತಾನರ ಕಾಲಾನಂತರದಲ್ಲಿ ಮುಂದೆ ಶಾಖೋಪಶಾಖೆಯಾಗಿ ಬೆಳೆದ ಆ ವಂಶದವರು `ವಜೀರ~  ಎಂಬುದು ತಮ್ಮ ಪೂರ್ವಜರ ಗೌರವದ ಬಿರುದು ಎಂಬಂತೆ ತಮ್ಮ ಸಮುದಾಯದ ಹೆಸರಿನ ಜೊತೆಗೆ ಬಳಸುತ್ತಾ ಬಂದಿರುವುದು ಸ್ಪಷ್ಟವಾಗಿದೆ.
 
ಆ ಬಿರುದು ಅವರಿಗೆ ದೊರೆತು ಅವರು ಪ್ರಾಂತಪ್ರಭುಗಳಾಗುವ ಹೊತ್ತಿಗಾಗಲೇ ವೀರಶೈವರಾಗಿದ್ದಿರಬೇಕೆಂಬುದಕ್ಕೆ ಅವರು ಶ್ರದ್ಧಾಭಕ್ತಿಗಳಿಂದ ನಡೆದುಕೊಂಡು ಕಾಣಿಕೆ ಅರ್ಪಿಸಿದ ವಿವಿಧ ವೀರಶೈವ ಮಠಗಳ ಸನ್ನದುಗಳು ಸಾಕ್ಷಿಯಾಗಿವೆ.

ಹಾಗೆಯೇ ವೀರಶೈವ ಜಗದ್ಗುರುಗಳ ಸಮಾಧಿಗಳ ಜೊತೆಗೆ ಈ ವಂಶದ ದೊರೆಗಳವೂ ಸಮಾಧಿಗಳಾಗಿರುವುದು ಅವರು ವೀರಶೈವರಾಗಿದ್ದ ಕಾರಣದಿಂದಲೇ ಎಂಬುದನ್ನು ಎತ್ತಿತೋರಿಸುತ್ತದೆ. ಇದೇ ರೀತಿ ಇತರ ವೀರಶೈವ ಅರಸರ ಸಮಾಧಿಗಳು ವೀರಶೈವ ಮಠಗಳ ಆವರಣಗಳಲ್ಲಿರುವ ಉದಾಹರಣೆಗಳಿವೆ.

ಮೇಲೆ ಹೇಳಿದ, ನಾನು ಪ್ರಕಟಿಸಿರುವ ಮೂರು ತಾಮ್ರಶಾಸನಗಳಲ್ಲಿ (ಇವುಗಳ ಕುರಿತೂ ತೊಡಕುಗಳಿವೆ) ಸಾಹಸ ತೋರಿದ ತಿಮ್ಮರಾವುತನನ್ನು ಹಂಡೆದನುಗರವನೆಂದು ಹೇಳಿದೆಯೇ ಹೊರತು ಅವನು ಡಾ. ಹಳ್ಳಿಕೇರಿಯವರು ಬರೆದಿರುವಂತೆ `ಬಾಲದ ಹನುಮಪ್ಪನಾಯಕನ ವಂಶಜ~ಎಂದು ಎಲ್ಲೂ ಹೇಳಿಲ್ಲ; ನಾನೂ ಹಾಗೆ ಬರೆದಿಲ್ಲ.

ತಿಮ್ಮರಾವುತ ವಿಜಯನಗರ ಸೈನ್ಯದಲ್ಲಿದ್ದ ಒಬ್ಬ ರಾವುತನೇ ಹೊರತು ಅವನು ಯಾವೊಬ್ಬ ಪ್ರಭುವಿನ ವಂಶದವನೂ ಅಲ್ಲ. ಅಷ್ಟೇ ಅಲ್ಲ, ಅವನ ತಂದೆತಾಯಿಗಳ ಹೆಸರುಗಳನ್ನೂ ಅಲ್ಲಿ ಹೇಳಿಲ್ಲ. ಈ ಶಾಸನಗಳಲ್ಲಿರದ ಮತ್ತು ನಾನೂ ಹೇಳಿರದ ಆ ಸಂಗತಿ ಶಾಸನಗಳಲ್ಲಿರುವಂತೆ ಡಾ. ಹಳ್ಳಿಕೇರಿಯವರು ಹಾಗೇಕೆ ಬರೆದರೋ ಎಂದು ಆಶ್ಚರ್ಯವಾಗುತ್ತದೆ.

ಕಡೆಯದಾಗಿ ಹೇಳುವ ಮಾತೆಂದರೆ ಯಾರೂ ಇತಿಹಾಸವನ್ನು ತಿರುಚಿಲ್ಲ; ಸತ್ಯವಲ್ಲದ ಹೇಳಿಕೆಯನ್ನು ನೀಡಿ ಗೊಂದಲಕ್ಕೆ ದಾರಿ ಮಾಡಿಕೊಡುವುದು ಆಘಾತಕಾರಿ ಎಂಬುದನ್ನು ಯಾರೂ ಮರೆಯಬಾರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT