ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂತಿಯ ಹಾಡು

ಕಥಾ ಸ್ಪರ್ಧೆ : ಮೆಚ್ಚುಗೆ ಪಡೆದ ಕಥೆ
Last Updated 15 ಡಿಸೆಂಬರ್ 2012, 19:54 IST
ಅಕ್ಷರ ಗಾತ್ರ

ಎಳೆಬಿಸಿಲ ಕೋಲುಗಳು ಕಿಟಕಿಯ ಸರಳುಗಳನ್ನು ದಾಟಿ ಕೋಣೆಯನ್ನು ಬೆಳಗಿದವು. ಶಿವನಗೌಡಾ  ಶರಣಬಸಪ್ಪಾ ಪಾಟೀಲರಿಗೆ ಎಚ್ಚರವಾಯಿತು. `ಮನೀ ಕಟ್ಟಿಸ್ಯಾನ ಖರೆ! ಆದ್ರ, ಕಿಡಕೀಗೆ ಬಾಗ್ಲಾ ಮಾಡಿಸ್ಲಿಕ್ಕಾಗ್‌ವಲ್ದು;  ಖಬರಗೇಡೀನ್ನ ತಂದು' ಎಂದು ಮಗನನ್ನು ಬೈದುಕೊಂಡರು. ಹೊರಗೆ ಹುಣಿಸೇ ಮರದ ಮೇಲೆ ಹಕ್ಕಿಗಳು ಬಯಲ ಮೌನದಲ್ಲಿ ತರತರದ ರಾಗಾಲಾಪಗಳ ಅಲೆಗಳನ್ನು ಹುಟ್ಟು ಹಾಕುತ್ತಿದ್ದವು. ಮೈ ತುಂಬ ಚಾದರನ್ನು ಹೊದ್ದುಕೊಂಡು ಪಾಟೀಲರು ದೂರದ ಯಾವುದೋ ಮೂಲೆಯಿಂದ ಒಮ್ಮಿಂದೊಮ್ಮೆಲೆ ತೇಲಿಬಂದ ಹಾಡಿನ ಸೊಲ್ಲನ್ನು ಆಲಿಸುತ್ತ ಹಾಡಿನ ದೈವೀ ಶಕ್ತಿ ಹುಟ್ಟು ಹಾಕಿದ ಬೆರಗಿನಲ್ಲಿ ಗರ್ಕಾಗಿ ಹಾಸಿಗೆಯ ಮೇಲೆ ಕುಳಿತುಬಿಟ್ಟರು:

ಹಂತೀಯ ಹೊಡಿಬೇಕ ಸಂತಸ ಪಡಬೇಕ
ಹುಲಿಗೆಂಬ ಸೆಬುದಾ ನುಡಿಬೇಕ  ನಮ್ಬಸವನ
ಪಾದಕ್ಕ ಸೆರಣು ಮಾಡ್ಬೇಕ
ಹಂತೀಯ ಕಟ್ಟತಲೆ ಎಂತವನ ನೆನದೇನ
ಕಂತುಪಿತನಾದಾ ಬಲಭೀಮ  ನೆನೆದಾರೆ
ಚಿಂತಿಲ್ಲದಂತೇ ಹೊಡೆದೇವೋ

`ಹೊರಗ ಕೊಟ್ಟಿಗ್ಯಾಗ ಎರಡೂ ಬಸವಣ್ಣಗೋಳು ಒದರಾಹತ್ತಾವ' ಎಂದು ಹಲುಬುತ್ತ ಥಟ್ಟನೆ ಎದ್ದು ನಿಂತ ಪಾಟೀಲರು `ಹಣಮ್ಯಾ! ಏ ಸಿದ್ರಾಮಾ! ಏ ತಮ್ಮ್ಯಾ! ಎಲ್ಲದೀರೋ? ಬೆಳಗಾಗೇತಿ; ಎತ್ತಗೋಳಿಗೆ ಹಿಂಡೀ ನೀಡಬೇಕ. ಹೊಲಕ್ಕ ಹೋಗಬೇಕ ಹಂತೀ ಹೊಡಿಲಾಕ. ಎದ್ದೇಳ್ರ್ಯೋ ಲಗೂನ !' ಅಂತ ಕೂಗಿದರು.

ಹೊರಗೆ ಇತ್ತೀಚೆಗೆ ಖರೀದಿಸಿದ ಹೊಚ್ಚ ಹೊಸ ಮೋಟರ್‌ಬೈಕನ್ನು ಮಿರಿಮಿರಿ ಮಿಂಚುವ ಹಾಗೆ ಒರೆಸುವದರಲ್ಲಿ ಮುಳುಗಿದ  ಹನುಮಪ್ಪ ಅಪ್ಪನ ಕೂಗಾಟ ಕೇಳಿ ತನ್ನ ಕೆಲಸ ಮುಂದುವರೆಸುತ್ತ `ಸುಮ್ಮ ಕುಂದ್ರೋ ಯಪ್ಪಾ! ಎಲ್ಲೆ ಹಂತಿ? ಎಲ್ಲೆ ಹೊಲಾ? ಎಲ್ಲವ ಎತ್ತು? ಹುಚ್ಚ-ಗಿಚ್ಚು ಹಿಡದೈತೋ ಹ್ಯಂಗ? ಕನಸ ಬಿದ್ದಾವೇನ ಎಲ್ಲ್ಯರ? ಇನ್ನಾ ಭ್ರಮಾ  ಹೋಗಿಲ್ಲಾ ಅನಿಸ್ತದ. ಮೂಲ್ಯಾಗ ಕುಂದ್ರಬಾರ್ದ ಸುಮ್‌ಕ?' ಎಂದು ಒದರಿದ. `ಅಂದ್ರ? ನಾ ಹಾಡ ಕೇಳಿದ್ದ ಸುಳ್ಳೇನ? ಎತ್ತು ಕೂಗಾಹತ್ತಿದ್ದ ನನ್ನ ಭ್ರಮಾನ?' ಎಂದು ಅಚ್ಚರಿ ಪಡುತ್ತ ಪಾಟೀಲರು ಅದೇ ಅಚ್ಚರಿಯಲ್ಲಿ  ಬಚ್ಚಲಿಗೆ ಕಾಲ್ಮರಿಗೆಂದು ಹೋಗಿ ಕೆಲಸ ಮುಗಿಸಿ ಮತ್ತೆ ತಮ್ಮ ಎಂದಿನ ಜಾಗಕ್ಕೆ ಬಂದು ಕಿಟಕಿಯ ಬಳಿಗೆ ನಿಂತು ಹೊರಗೆ ದೃಷ್ಟಿ ನೆಟ್ಟರು. ನೋಟ ಬೀರಿದಲ್ಲೆಲ್ಲಾ ತಾರಸಿ ಮನೆಗಳು.

ಕಳೆದ ನಾಲ್ಕಾರು ವರ್ಷಗಳಲ್ಲಿ ತಲೆಯೆತ್ತಿದ ಹೊಚ್ಚ ಹೊಸ ಕಾಲನಿ ಬೆಳಗಾದರೂ ಮೌನದಲ್ಲಿ ತಲೆಮರೆಸಿಕೊಂಡಂತಿತ್ತು. ಆಕಾಶದಲ್ಲಿ ಸ್ಥಿರವಾಗಿ ನಿಂತ ತುಂಡು ಮೋಡಗಳು. `ನಿನ್ನಿ ಮಳಿ ಬಂದ ಹೋತಲ್ಲ; ಎಲ್ಲಾ ಕಡೆ ಹೊಲದ ಕೆಲಸಾ ಸುರುವಾಗಿರ‌್ತತಿ' ಎಂದುಕೊಂಡರು ಪಾಟೀಲ. ಹಂಗಾದ್ರ ಹಾಡ ಹೇಳ್ದಾಂವ ಯಾಂವಾ? ಪಾಟೀಲ ನೆನಪಿಸಿಕೊಂಡರು. ಹಾಡ ಕೇಳಿದ್ದು ಸುಳ್ಳನು? ಹಂತೀಯ ಹೊಡಿಬೇಕ ಸಂತಸ ಪಡಬೇಕ. ಪಡಸಾಲೆ ದಾಟಿ ಅಡಿಗೆಮನೆಯತ್ತ ಹೋಗುತ್ತಿದ್ದ ಮೊಮ್ಮಗಳನ್ನು ವಿಚಾರಿಸಿದರು.

`ಗಂಗವ್ವಾ! ಯಾರೋ ಹಂತೀ ಹಾಡು ಹಾಡ್ತಿದ್ರಲ್ಲವ್ವ. ಕೇಳಿಲ್ಲನು? 
`ಎಲ್ಲೆ ಹಾಡೋ, ಯಜ್ಜಾ! ಕನ್ಸು ಬಿದ್ದಿರಬೇಕು ನಿನಗ. ಇನ್ನಾ ಎಚ್ಚರ ಆಗೈತೋ ಇಲ್ಲೋ?' ಗಂಗಾ ನಗುತ್ತ ಒಳನಡೆದಳು.
`ಅಂದ್ರ! ಹಾಡ್ದಾಂವ ನಾನ ಏನ್ ಮತ್ತ? ಹಾಡು ನನ್ನೆದೀ ಗೂಡಿನ್ಯಾಗ ಮೂಡೇತಿ ಅಂತಾತು'. ಪಾಟೀಲ ಮತ್ತೆ ಗುನುಗತೊಡಗಿದರು: `ನಂಬಸವನ ಪಾದಕ್ಕ ಸೆರಣು ಮಾಡ್ಬೇಕ... ಎಲ್ಯದಾವೋ ಏನೋ ನನ್ನ ಬಸವಣ್ಣಗೋಳು!' ಎಂದು ಮನಸ್ಸು ಕನವರಿಸಿತು.

ಪರದೆಯ ಮೇಲೆ ತಮ್ಮ ಪ್ರೀತಿಯ ಎತ್ತಿನ ಜೋಡಿಯ ಚಿತ್ರ ಮೂಡಿದಂತಾಗಿ ಪಾಟೀಲರ ಕಣ್ಣಾಲಿಗಳು ಒದ್ದೆಯಾದವು. ಎತ್ತರದ ನಿಲುವಿನ ಬಿಳಿ ಬಣ್ಣದ ಜೋಡಿ ಎತ್ತುಗಳು. ತಿಳಿಗೆಂಪು ಬಣ್ಣ ಬಳಿದು ಸಿಂಗಾರಗೊಂಡ ಕೋಡುಗಳು. ನೆಗೆದು ನಿಂತ ಸುಪುಷ್ಟ ಡುಬ್ಬ. ಉದ್ದನೆಯ ಕಾಲ್ಗಳು. ಚುರುಕಾದ ಕಂಗಳು. ಕುತ್ತಿಗೆಯಲ್ಲಿ ನಿನಾದಿಸುವ ಗಂಟೆಯ ಪಟ್ಟಿ. ತಲೆಯೆತ್ತಿ ನಡೆವ ಬೆಡಗು ನೋಡುಗರ ಕಣ್ಣಿಗೆ ಹಬ್ಬ. ಪಾಟೀಲರು ಮತ್ತೆ ಹಾಡತೊಡಗಿದರು:

ಬೆಳ್ಳನ ಎರಡೆತ್ತ ಬೆಳ್ಳೀಯ ಬಾರ್ಕೋಲು
ಬಂಗಾರದ ಕಡ್ಡೀ ಬಲಗೈಯಾಗ  ಹಿಡಕೊಂಡ
ಹೊನ್ನ ಬಿತ್ತಾನೇ ಹೊಳಿಸಾಲ

ಒಮ್ಮಿಂದೊಮ್ಮೆಲೆ ಎದ್ದು ಪಡಸಾಲೆಗೆ ಬಂದ ಪಾಟೀಲರು `ಏ ಹಣಮ್ಯಾ! ನನ್ನ ಬಸವಣ್ಣಗೋಳ್ನ ಎಲ್ಲಿ ತರಬೀರಿ ಹೇಳ್ರ್ಯೋ! ನಾ ನೋಡಬೇಕ ಅವನ್ನ. ನನ್ನ ಕರೀಲಿಕ್ ಹತ್ತ್ಯಾವ. ಎಲ್ಲಿ ಕಳಿಸೀರಿ ಅವನ್ನ?' ಎಂದು ಒದರಿದರು. ಮೋಟರ್ ಬೈಕ್ ಬಿಟ್ಟು ಅಪ್ಪನ ಬಳಿಗೆ ಬಂದ ಹನುಮಪ್ಪ ಅಪ್ಪನ ತೋಳು ಹಿಡಿದು `ಒಳಗ ನಡಿ ಸುಮ್ಮ! ಎತ್ತುಗೋಳ್ನ ಕಳಿಶಿ ಒಂದು ವರ್ಷ ಕಳದೈತಿ. ಇನ್ನೆಲ್ಲೆ ಎತ್ತು? ಇನ್ನಾ ನಿನ್ ಹುಚ್ ಬಿಟ್ಟಿಲೇನ? ಒಳಗ ನಡಿಯೋ ಯಪ್ಪಾ!' ಎನ್ನುತ್ತ ಅಪ್ಪನನ್ನು ಮನೆಯೊಳಗೆ ಜಗ್ಗತೊಡಗಿದ. ಉಕ್ಕಿದ ಕೋಪದಲ್ಲಿ ಪಾಟೀಲರು `ನನ್ ಮೈಮ್ಯಾಗ್ ಕೈ ಹಾಕ್ತಿಯೇನಲೇ ಭಾಡ್ಕೋ! ಎಲ್ಲಾ ತಿಂದು ಮುಗಿಸೀರಿ. ಇನ್ನ ನನ್ನ ಬಸವಣ್ಣಗೋಳ್ನ ಬಿಟ್ಟೀರ‌್ಯ ನೀವು? ಭಂಡ ನನ ಮಕ್ಳ!' ಎಂದು ಮಗನನ್ನು ಒದ್ದರು. ಸಿಟ್ಟಿಗೆದ್ದ ಮಗ ಅಪ್ಪನನ್ನು ಹೆಡೆಮುರಿಗಟ್ಟಿ ಕೋಣೆಗೆ ಎಳೆದೊಯ್ದು ಹೊರಗಿನಿಂದ ಬಾಗಿಲೆಳೆದು ಚಿಲುಕ ಹಾಕಿದ. ಬಹಳ ಹೊತ್ತಿನವರೆಗೆ ಪಾಟೀಲರ ಕೂಗಾಟ ನಡೆದೇ ಇತ್ತು.
   -2-
ಕಣ್ಣ ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರಿನ ಜೋಳದ ಪೈರು. ಹಗುರವಾಗಿ ಬೀಸುವ ಗಾಳಿಗೆ ತೊನೆಯುವ ಗಿಡಗಳ ಬಳುಕನ್ನು ಪಾಟೀಲರು ಪ್ರಸನ್ನಚಿತ್ತರಾಗಿ ನೋಡಿದರು. ದಿನದಿಂದ ದಿನಕ್ಕೆ ಹೊಡೆ ಹೊಡಕರಿಸುವ ಪರಿ ಖುಷಿ ಕೊಡುವಂತಹದು. ಬೀಜದಿಂದ ಹೊರಹೊಮ್ಮುವ ಚಿಗುರಿನ ತವಕ, ಚಿಗುರು ವರ್ಧಿಸಿ, ಗಿಡವಾಗಿ ಹೊಸ ಹುಟ್ಟಿಗೆ ತೆರೆದುಕೊಳ್ಳುವ ವಿದ್ಯಮಾನ ಸೃಷ್ಟಿಯ ಅನುಪಮ ಲೀಲೆಗಳಲ್ಲಿ ಒಂದು. ಜೀವಕ್ಕೆ ಉಸಿರನ್ನು ನೀಡಿದ ಶಿವ ಉಸಿರಿನೊಂದಿಗೆ ಹಸಿವನ್ನು ನೀಡಿದುದರ ಅರ್ಥ ಹೊಳೆದಂತಾಗಿ ಪಾಟೀಲರು `ಎಲ್ಲಾ ನಿನ್ ಮಹಿಮಾ! ಶಿವನ! ಕೊಡಾವ್ನೆ ನೀನ; ತಗೊಳಾವ್ನೆ ನೀನ' ಎಂದರು. ಅವರ ಹೃದಯ ಕತಜ್ಞತಾಭಾವದಿಂದ ತುಂಬಿ ಹೋಯಿತು. `ಈ ವರ್ಷ ಮಳೀ-ಬೆಳೀ ಎಲ್ಲಾ ಚಲೋತ್ನಾಗಿ ನೀಡಿ ಕಾಪಾಡೀಯೋ ನಮ್ಮಪ್ಪಾ!' ಎನ್ನುತ್ತಾ ಆಕಾಶದತ್ತ ನೋಡಿ ಕೈ ಮುಗಿದರು.

ಕಾವಲು ಕೆಲಸ ಮಾಡುತ್ತಿದ್ದ ಬಸ್ಯ ಧಣಿಯನ್ನು ನೋಡಿ ಓಡೋಡಿ ಬಂದು ನಮಸ್ಕರಿಸಿ `ಧಣೇರ! ಶರಣ್ರೀ' ಎಂದ. `ಏನಪಾ, ತಮ್ಮ್ಯಾ! ಎಲ್ಲಾ ಬರೋಬ್ಬರೈತಿ, ಹೌದಿಲ್ಲೊ?' ಧಣೇರ ಎದುರು ಕೈ ಕಟ್ಟಿ ನಿಂತು ಬಸ್ಯ `ಹೂನ್ರಿ, ಧಣೇರ!' ಎಂದ. `ಈ ಸಾರಿ ಬೆಳೀ ಛಂದ ಆಗೇತ್ರೀ' ಎಂದು ಸೇರಿಸಿದ.

`ಛಂದಾಗದ ಇನ್ನ ಹ್ಯಂಗಾದೀತೋ ತಮ್ಮೋ? ನಮ್ ನೆಲದ ಮಹಿಮಾ ಹಂಗೈತಿ. ಹಿಂತಾ ಭೂಮಿ ಈ ಜಿಲ್ಲಾದಾಗ ಎಲ್ಲೂ ಇಲ್ಲೋ, ಬಸ್ಯಾ!

`ಹೌಂದ್ರಿ. ಆದ್ರ, ಭೂಮಿ ಇದ್ರಾತೇನ್ರಿ? ನಿಮ್ಮಂಥಾ ಧಣೇರಿದ್ರಂದ್ರ ಹೆಂತಾ ನೆಲಾ ಇದ್ರೂ ಮಾತಾಡ್ತೈತಿ'.         
`ಹಂಗನ್ಬ್ಯಾಡೋ. ಎಲ್ಲಾದಕ್ಕೂ ಮದಲ ಆ ಶಿವನ ಕೃಪಾ ಇರಬೇಕಪಾ. ಕಮತದಾಗ ವಿಶ್ವಾಸ ಇರಬೇಕು. ದಗದಾ ಮಾಡಾಕ ನಿಮ್ಮಂಥಾ ವಿಶ್ವಾಸದ ಜನಾ ಬೇಕು. ಇರ್ಲೇಳ. ಮತ್ತ? ಕೆಲಸಾ ಛಲೋತ್ನಾಗಿ ನಡದೈತಿ, ಹೌದಿಲ್ಲೋ. ತುಡುಗ ದನಾ ಬರದ ಹಂಗ ನೋಡ್ಕೋಬೇಕ ನೋಡ ಮತ್ತ'.

`ಹೂನ್ರಿ, ಧಣೇರ ! ಸುತ್ತಾಮುತ್ತಾ ಊರಾವ್ರದ್ದ ಹೊಲಾ. ದನಾ ಯಾಕ ಬಿಟ್ಟಾರು? ಹಕ್ಕಿ-ಪಕ್ಕಿ ಬಂದ ಧಾಂಧಲೆ ಮಾಡ್ತಾವು. ಅದನಷ್ಟ್ ನೋಡಿದ್ರಾತು'.

`ಹೋಗಲೇಳ. ಹಕ್ಕಿಗೋಳು ಎಷ್ಟಂತ ತಿಂದಾವು...? ಇನ್ನೊಬ್ಬ ಎಲ್ಲಿ ಹೋಗ್ಯಾನ?'
`ಯಾರು? ಚನ್ನಪ್ರ್ಯ? ಹತ್ತೀ ಹೊಲಕ್ ಹೋಗ್ಯಾನ'.

`ಮತ್ತ? ನಮ್ ಹಣಮಪ್ಪ, ಸಿದ್ರಾಮಾ-ಯಾರರ ಬಂದಿದ್ರೇನು ಇತ್ತಾಗ?'
`ಇಲ್ರೀ ಧಣೇರ!'

ಮುಂಜಾನೆ `ಪೈರು ಬೆಳೆದು ನಿಂತತಿ. ದಿನಾ ಒಮ್ಮಿ ಹೊಲದ ಕಡೇ ಹೋಗಿ ನೋಡಿ ಬಾ ಅಂದಿದ್ನಿ. ಈಗಿನ ಕಾಲದ ಹುಡುಗೂರು. ನಾ ವಂದ್ ಹೇಳಿದ್ರ ಇವು ಮಾಡೋ ಕೆಲ್ಸಾ ಬ್ಯಾರೇನ' ಎಂದು ನಿಟ್ಟುಸಿರಿಟ್ಟರು.

`ಆತೇಳ. ನಾ ಬರ‌್ತೀನಿನ್ನ' ಎನ್ನುತ್ತ ಪಾಟೀಲರು ಮನೆಯತ್ತ ಹೆಜ್ಜೆ ಇಟ್ಟಾಗ ಮನದ ಬಾಂದಳದಲ್ಲಿ ಹಾಡು ಮೊಳಗುತ್ತಿತ್ತು:
ಹತ್ತೀಯ ಹೊಲ ನೋಡು ಜ್ವಾಳದ ಬೆಳಿ ನೋಡು
ಹಾದು ಹೋಗಾವನ ನಗಿ ನೋಡು  ಆ ಗಂಧ ನೋಡು
ಅಡಿವ್ಯಾಗ ನಮ್ಮ ಬಸವಣ್ಣಿ

ಅಂಗಳದಲ್ಲಿ ಕಾಲಿಡುತ್ತಿದ್ದಂತೆ ಕೊಟ್ಟಿಗೆಯಿಂದ ಹೊರಟ ಕರೆಗೆ ಕರಗಿ ಅತ್ತ ಹೆಜ್ಜೆ ಇಟ್ಟರು. ಕೊಟ್ಟಿಗೆಯ ತುಂಬ ವಿವಿಧ ತಳಿಯ ದನಗಳು. ಗೋದಲಿಯಲ್ಲಿ ತುಂಬಿಟ್ಟ ಜೋಳದ ದಂಟನ್ನು ಮೆಲ್ಲುತ್ತಿವೆ. ಎತ್ತುಗಳಿಗೆ ಪ್ರತ್ಯೇಕ ಕೊಟ್ಟಿಗೆ. ತಮ್ಮ ಪ್ರೀತಿಪಾತ್ರ ಎತ್ತಿನ ಜೋಡಿಯ ಬಳಿಗೆ ಹೋಗಿ ಮೈದಡವಿದರು. ಒಂದೇ ಮಾಟದ, ಎತ್ತರದ ನಿಲುವಿನ ಬಿಳಿಯ ಬಣ್ಣದ ಜೋಡಿ. ತಮ್ಮಡೆಯನ ವಾಸನೆ ಹಿಡಿದ ಎತ್ತುಗಳು ಸ್ಪರ್ಶಸುಖಕ್ಕೆ ತಮ್ಮನ್ನೊಡ್ಡಿಕೊಂಡು ನಿಂತವು. `ಯಾಕೋ ಬಸವಣ್ಣಿ! ಹೊಟ್ಟಿ ತುಂಬಿತನು?' ಎಂದು ಕೇಳಿದರು ಪ್ರೀತಿಯಿಂದ ನೇವರಿಸುತ್ತ. `ನಾಳೆ ಬರ‌್ತೀನಿ. ಆರಾಮ್ ಮಾಡ್ರಿನ್ನ' ಎನ್ನುತ್ತ ಮನೆಯತ್ತ ತೆರಳಿದರು.

ಮನೆಯ ಸದಸ್ಯರೆಲ್ಲ ಟೀವಿ ಧಾರಾವಾಹಿಯಲ್ಲಿ ಮುಳುಗಿ ಹೋಗಿದ್ದರು. ಹನುಮಪ್ಪನನ್ನು ನೋಡಿ `ಯಾಕೋ, ಹನಮಾ! ಹೊಲಕ್ಕ ಹೋಗಿಲ್ಲಂತ ಇವತ್ತ!' ಎಂದರು. `ಅಪ್ಪಾ! ಏನಾತಂದ್ರ..., ಧಾರವಾಡದಿಂದ ನನ್ ಹಳೇ ಗೆಣೆಯ ಬಂದಿದ್ನ್ಯ. ಭಾಳ ದಿಂವ್ಸಾಗಿತ್ತ ಅವನ್ನ ನೋಡಿ. ಹಂಗ ಅವ್ನ ಮನೀಗೂ ಹೋಗಿದ್ನಿ. ತಡಾ ಆತು' ಅಂದ. `ನೋಡಪಾ, ಹಣಮ್ಯಾ! ನೀನು ಮನೀಗೆ ನೀನು ಹಿರೇ ಮಗಾ ; ಮುಂದ ಯಜಮಾನಾ ಆಗಾಂವಾ. ಗೆಣೇಕಾರರನ್ನ ಭೆಟ್ಟಿಯಾಗು. ನಾ ಬ್ಯಾಡಾ ಅನ್ನಾಂಗಿಲ್ಲ. ಆದ್ರ, ಮನೀ ಕೆಲ್ಸಾ ಮದಲ.

ಭೂಮಿತಾಯಿ ಅಂದ್ರ ಏನಂತ ತಿಳಿದೀದಿ? ಅನ್ನಾ ಕೊಡಾಕಿ ಅಕೀ, ತಿಳ್ಕೋ... ಹೇಳ್ಲಿಲ್ಲಾ ಅನಬ್ಯಾಡಾ. ಮುಂದಿನ ಎಳ್ಳಮಾಸಿ ಜವಾಬ್ದಾರಿ ನಿಂದ. ನೆಂಟರನ್ನ ಕರದು ಬನ್ನೀ ಪೂಜಾ, ಪಾಂಡವರ ಪೂಜಾ, ಚರಗಾ ಚೆಲ್ಲೂದು ಎಲ್ಲಾ ವ್ಯವಸ್ಥಾ ನೀನ ಮಾಡ್ಬೇಕ ಮತ್ತ' ಎಂದು ಎಚ್ಚರಿಸಿದರು. `ಸಿದ್ರಾಮಾ! ಅಂಗಡೀಗೆ ಹೋಗಿ ನಾ ಹೇಳಿದ ಸಾಮಾನು ತಂದೀ?' ಅಂದದ್ದಕ್ಕೆ ಸಿದ್ರಾಮ `ಇಲ್ಲಪಾ! ನಾಳೆ ಕೊಡ್ತೀನಂತ ಹೇಳ್ಯಾನ' ಅಂದ.

ಶರಟು ಕಳಚಿ ಗೂಟಕ್ಕೆ  ಸಿಕ್ಕಿಸಿ ಒಳನಡೆದು ಬಚ್ಚಲ ಕಡೆಗೆ ಹೆಜ್ಜೆ ಹಾಕುವಾಗಲೂ ಪಾಟೀಲರು ಯೋಚನೆಯಲ್ಲಿ ಮುಳುಗಿದ್ದರು. ಮುಖ ಒರೆಸುತ್ತ ಹೊರಬಂದು `ಈ ವರ್ಷ ಫಸ್ಲು ಛಲೋ ಆಗೈತಿ. ಫಾಲ್ಗುಣ ಮಾಸದಾಗ  ನಿನ್ನ ತಂಗೀ ಲಗ್ಣಾ ಮಾಡಬೇಕು ಅಂತ ಮಾಡೇನಿ' ಅಂತ ಸಾರಿದರು.
ಸಿದ್ರಾಮ ಊರ ಸುದ್ದಿಯನ್ನು ಬಿತ್ತರಿಸಿದ: `ಅಪ್ಪಾ ! ಕೆಳಗಿನಮನೀ ಭರಮಣ್ಣ ಸಿಕ್ಕಿದ್ದಾ. ಅಣ್ಣ-ತಮ್ಮ ಮತ್ತ ಹೊಡದಾಡಿಕೊಂಡ್ರಂತ'.

ಪಾಟೀಲರಿಗೆ ಸಿಟ್ಟು ಬಂತು. `ಸಿದ್ರಾಮಾ! ನಿನ್ಗ ಯಾ ಹೊತ್ನ್ಯಾಗ ಏನ್ ಮಾತಾಡ್‌ಬೇಕಂತ ಗೊತ್ತಾಗಾಂಗಿಲ್ಲ. ನಾ ಲಗ್ಣದ ಮಾತು ಹೇಳ್ತದೀನಿ. ನೀ ಹೊಡೆದಾಟದ ಸುದ್ದಿ  ಹೇಳಾಹತ್ತೀದಿ, ಅವ್ರ ಬುದ್ಧಿಗೇಡಿ ನನ ಮಕ್ಳು. ಪಾಲಾಗೋದು ಅಂದ್ರ ಹುಡುಗಾಟಿಕೀ ಅಂತ ತಿಳಕೊಂಡಾರ. ಬಾಳು ಹಾಳ ಮಾಡ್ಕೋತೀವಿ ಅನ್ನಾವ್ರಿಗೆ ಏಸಂತ ಹೇಳ್ತೀಯೋ ಮಗನ' ಅಂತ ವ್ಯಗ್ರರಾಗಿ ನುಡಿದರು.
-3-
`ಅಲಾಲಾ ! ಏನು; ಗ್ರಾಮ ಪಂಚಾಯ್ತಿನ ನಮ್ಮ ಮನೀಗ್ ಬಂದ್ಹಂಗ ಕಾಣತೈತಿ. ಬಾ, ಸಂಗಣ್ಣಾ! ಬಾ!' ಎನ್ನುತ್ತ ಪಾಟೀಲರು ಅಭ್ಯಾಗತರನ್ನು ಸ್ವಾಗತಿಸಿದರು. `ಎಲ್ಲಾ ಕೂಡಿ ಬಂದೀರಿ ಅಂದಬೆಳಕ ಏನೋ ವಿಶೇಷ ಐತಿ ಅಂದ್ಹಂಗಾತು' ಅಂತ ಷರಾ ಒಗೆದರು. `ಹೂಂ ಗೌಡ್ರ ! ಒಂದು ಮಹತ್ವದ ಕೆಲ್ಸದ. ನಿಮ್ಮ ಹತ್ರ ಮಾತಾಡ್‌ಬೇಕಾಗೇದ' ಅಂದ್ರು ಪಂಚಾಯತ ಚೇರ್‌ಮನ್ ಸಂಗಪ್ಪ. `ಕುಡಿಲಾಕ ಏನ್ ತಗೋತೀರಿ?' ಅಂತ ಪಾಟೀಲ್ರು ಕೇಳಿದ್ದಕ್ಕೆ `ಈಗೇನೂ ಬ್ಯಾಡಾ ಗೌಡ್ರ!' ಉತ್ತರ ಬಂತು. `ನಿಮ್ಮ ಮಗಳ ಲಗ್ನ ಭಾಳ ಛಲೋತ್ನಾಗಾತು ಗೌಡ್ರ! ನಮಗೆಲ್ಲಾ ಸಂತೋಷಾಗೇದ. ಲಗ್ನಕ್ಕ ಭಾಳ ಜನಾ ಸೇರಿದ್ರ ಹಾಂ ಮತ್ತ!' ಅಂತ ಸಂಗಪ್ಪ ಅಂದದ್ದಕ್ಕೆ ಎಲ್ಲರೂ `ಹೌಂದ್ರೀ ಗೌಡ್ರ ; ಹೌದೌದು' ಅಂತ ಗೋಣು ಹಾಕಿದರು. ಪಾಟೀಲ್ರು `ನಮದೇನೈತ್ರೀ? ಎಲ್ಲಾ ಆ ಶಿವ್ನ ಇಚ್ಛಾ' ಅಂದರು ತೃಪ್ತಿಯಿಂದ.

`ಆತು; ವಿಷ್ಯಕ್ಕ ಬರ‌್ರೀ ಸಂಗಣ್ಣವ್ರ!
ಒಮ್ಮಿಂದೊಮ್ಮೆಲೆ ವಾತಾವರಣ ಗಂಭೀರವಾಯಿತು. ಎರಡು ನಿಮಿಷಗಳ ಗಾಢ ಮೌನದ ನಂತರ ಸಂಗಪ್ಪ ಬಾಯಿ ಬಿಟ್ಟರು.`ಪರಿಸ್ಥಿತಿ ಗಂಭೀರ ಅದ ಗೌಡ್ರ! ನಮ್ಮ ಹೊಲಾ, ಮನೀ ಎಲ್ಲಾ ಕೈ ಬಿಡೂ ಲಕ್ಷಣಾ ಕಾಣಸ್ತದ'.
`ಹೀಂಗಂದ್ರ ನನಗ ಹ್ಯಾಂಗ ಅರ್ಥಾಗಬೇಕ್ರೀ ಸಂಗಣ್ಣಾ! ಸೊಲ್ಪ ಬಿಡಿಶಿ ಹೇಳ್ರಲಾ'!
`ಅಂದ್ರ ನೀವು ನಿನ್ನಿ ಟೀವಿ ಸುದ್ದಿ ನೋಡಿಲ್ಲ ಅಂದ್ಹಂಗಾತು'
``ಇಲ್ಲಾ. ನಿನ್ನಿ ನಾ ಲಗೂನ ಮಲಕೊಂಬಿಟ್ಟೆ'.

`ನಿನ್ನಿ ಸುದ್ದೀ ಪ್ರಕಾರ, ನಮ್ಮ ಈ ಬಯಲೈತಲಾ; ಅದನ್ನ ಮಿನಿ ಏರೋಡ್ರೋಮ್ ಮಾಡಲಿಕ್ ಹೊಂಟದ ಸರಕಾರಾ. ಅಂದ್ರ, ವಿಮಾನ ನಿಲ್ದಾಣಾ ಮಾಡಾವ್ರಂತ'.
`ಏನಂದಿ, ಸಂಗಣ್ಣ!' ಎನ್ನುತ್ತ ಪಾಟೀಲರು ವಿದ್ಯುತ್ ಶಾಕ್ ತಗಲಿದವರಂತೆ ಬಾಯ್ತೆರೆದು ಕುಳಿತುಬಿಟ್ಟರು. ತುಸು ಹೊತ್ತಿನ ಮೇಲೆ ಚೇತರಿಸಿಕೊಂಡು `ನಮ್ಮ ಎಮ್ಮೆಲ್ಲೆ ಏನ್ ಮಾಡ್ತಾನ ಅಲ್ಲಿ ಕುಂತು?' ಅಂತ ಕೇಳಿದರು.
ಸಂಗಪ್ಪ ನಿಟ್ಟುಸಿರು ಬಿಡುತ್ತ `ಯಾಂವ್ಗ ಗೊತ್ತು? ಅವರ ಹೇಳ್‌ಬೇಕ'.

`ನಾವು ಸುಮ್ಮಕ ಕುಂತ್ರ ಮಣ್ಣ ತಿನ್ನಬೇಕಾಗ್ತೈತಿ. ನಡ್ರಿ. ಎಲ್ಲಾ ಕೂಡಿ ಎಮ್ಮೆಲ್ಲೆ ಹತ್ರ ಹೋಗೂಣು' ಅಂದ್ರು ಪಾಟೀಲರು.
`ಗೌಡ್ರ! ಇದು ಇಲ್ಲ ಕುಂತಾವ್ರಿಗಷ್ಟ ಸಂಬಂಧಿಸಿದ ವಿಚಾರಾ ಅಲ್ಲ. ಮದಲ ಊರಾವ್ರಿಗೂ ವಿಷಯ ತಿಳಿಸೂಣು. ಈ ಶನಿವಾರ ಸಂಜೆ ನಾವು ಗ್ರಾಮಸಭಾ ಕರೆಯೂಣಂತ. ಊರವ್ರ ಅಭಿಪ್ರಾಯಾ ಏನದ ಅಂತ ತಿಳ್ದು ಮುಂದಿನ ಮಾತು'.  ಚೇರಮನ್ನರ ಮಾತಿಗೆ ಎಲ್ಲರೂ `ಬರೋಬ್ಬರದ ; ಹಂಗೇ ಮಾಡೋಣು' ಅಂತ ಗೋಣು ಹಾಕಿದರು.

ಪಂಚಾಯತದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಗೆ ಅಂದಾಜು ನೂರೈವತ್ತು ಜನ ಹಾಜರಿದ್ದರು. ಅಧ್ಯಕ್ಷರ ಪಕ್ಕದಲ್ಲಿ ಪಂಚಾಯತದ ಇತರ ಸದಸ್ಯರೊಂದಿಗೆ ಹಿರಿಯರಾದ ಶಿವನಗೌಡಾ ಪಾಟೀಲರೂ ಆಸೀನರಾಗಿದ್ದರು. ಸಂಗಪ್ಪ ಪರಿಸ್ಥಿತಿಯ ಗಂಭೀರತೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ರುದ್ರೇಶ ಎದ್ದು ನಿಂತು `ಅಲ್ರೀ ಚೇರ್‌ಮನ್ರ!  ಳದ ಐದು ವರ್ಸದಿಂದ ರಕ್ತಾ ಸುರಿಸಿ ಬೆಳಸಿದ ಬೆಳೀ ಮ್ಯಾಲೆ ಗಣಿಗಾರಿಕೀ ಕೆಮ್ಮಣ್ಣ ಬಿದ್ದು ಬೆಳೀ ಸರ್ವನಾಶಾಗಾಕ್ ಹತ್ತೈತಿ. ಭೂಮಿ ಸತ್ವ ಕಳಕೊಂಡೈತಿ. ಈಗ ಹೊಲಾ ಕಿತ್ಕೊಂಡ್ರ ನಾವೇನ್ ಮಣ್ಣು, ಕಬ್ಬಿಣಾ ತಿನಬೇಕಂತ?' ಅನ್ನುತ್ತಿದ್ದಂತೆ ಇನ್ನೋರ್ವ ತೀವ್ರಗಾಮಿ `ನಮ್ಮ ಹೊಲಾ ಕಿತ್ಕೊಂಡು ಭೋಸುಡಿ ಮಕ್ಳು ವಿಮಾನಾ ಹಾರ್‌ಸ್ತಾರಂತ? ನನ್ ಹೊಲ್ದಾಗ ಕಾಲಿಟ್ರ ಕುಡಗೋಲ್ ತಗೋತೀನಿ' ಅಂತ ಒದರಾಡಿದ. ಇನ್ನೋರ್ವ ಎದ್ದು ನಿಂತು `ಎಮ್ಮೆಲ್ಲೆ ಸಾಹೇಬ್ರ ಹತ್ರ ಹೋಗ್‌ಬೇಕಂತೀರಿ. ಪಾಟೀಲ್ರ! ಇಲೆಕ್ಷನ್ ಟೈಮ್‌ನ್ಯಾಗ ಅವರ ಕೂಡ ಓಡಾಡಿ ಓಟ್ ಹಾಕಿಸ್ದಾವ್ರ ನೀವು. ಈಗ ನೀವ ಪರಿಹಾರ ಕೊಡಿಸ್‌ಬೇಕ, ಏನ್ರಪಾ!' ಅಂತ ಒದರಿದ. ಸಂಗಪ್ಪ `ಏ ತಮ್ಮೋ ! ಕುಂದ್ರೋ ಸುಮ್ಮ! ಇದು ಒಬ್ರು ಮಾಡೋ ಕೆಲಸಲ್ಲ. ಅದಕ್ಕಂತನ ಈ ಮೀಟಿಂಗ್ ಕರದೇವಿ. ಮದಲ ಎಮ್ಮೆಲ್ಲೆ  ಏನ್ ಹೇಳ್ತಾನೋ ಕೇಳೋಣು. ಅವರನ್ನ ಒಂದು ಮಾತು ಕೇಳಿ ಮುಂದಿನ ಹೆಜ್ಜಿ ಇಡೂನಂತ. ಅವರಿಗೆ ಭೆಟ್ಟಿಯಾಗ್ಲಿಕ್ಕಂತ ನಾವು ಪಂಚರಲ್ಲದ ಪಾಟೀಲ್ರೂ ನಮ್ಮ ಕೂಡ ಇರ‌್ತಾರ. ನಿಮ್ಮಲ್ಲಿ ಒಬ್ಬಬ್ರು ಯಾರು ಬರತೀರಿ ಹೇಳ್ರಿ  ಎಂದು ಗಟ್ಟಿಯಾಗಿ ಹೇಳಿದರು. ಸಭೆಯಲ್ಲಿ ಒಂದಷ್ಟು ಕಾಲ ಗದ್ದಲ ಮುಂದುವರೆಯಿತು. ಕೆಲ ಹೊತ್ತಿನ ನಂತರ ಸಂಗಪ್ಪ `ಇನ್ನ ಸಾಕು; ಗದ್ದಲಾ ಕಡಿಮೆ ಮಾಡ್ರಿ. ನಾನ ಹೇಳ್ತೀನಿ ಕೇಳ್ರಿಲ್ಲೆ. ಮಲ್ಲಪ್ಪ ಮತ್ತ ರುದ್ರೇಶ. ನೀವಿಬ್ರ ; ನಾವಾರ್ ಮಂದಿ-ಸಾಕು. ನಾವ್ ಹೋಗ್ ಬರ‌್ತೀವಿ. ಸಭಾ ಇಷ್ಟಕ್ಕ ಮುಗಸೂಣಂತ. ಎಲ್ಲಾ ಮನೀ ಕಡೆ ಹೊಂಡ್ರಿನ್ನ' ಎನ್ನುತ್ತ ಸಾಗಹಾಕಿದರು.

ಎಮ್ಮೆಲ್ಲೆ ಸಾಹೇಬ್ರು ತಮ್ಮ ದೀವಾನ್‌ಖಾನೆಯಲ್ಲಿ ಚಹ ಸವಿಯುತ್ತ ಕುಳಿತಿದ್ದರು. `ಏನ್ರಪಾ! ನರೇಬೈಲ ಊರಿಗೆ ಊರ ಕಿತ್ತೆದ್ದು ಬಂದ್ಹಂಗ ಕಾಣಿಸ್ತದ. ಏನರ ವಿಶೇಷದ ಏನು ಮತ್ತ?' ಅಂದರು. ಎಮ್ಮೆಲೆ ಸಾಹೇಬರು ಯಾವುದೋ ಉದ್ಘಾಟನಾ ಸಮಾರಂಭವನ್ನು ನೆನೆಸಿಕೊಂಡರೋ ಏನೋ. ಚೇರ್‌ಮನ್ನರು ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ, `ನನಗ್ಗೊತ್ತದ ಸಂಗಪ್ರೋರ! ನೀವದನ್ನ ಸೀರಿಯಸ್ಸಾಗಿ ತಗೋ ಬ್ಯಾಡ್ರಿ. ವಿಧಾನಸಭಾದಾಗ ಇಂತವು ರಗಡ ಚರ್ಚೆಯಾಗ್ತಾವು. ಒಂದಾನುವ್ಯಾಳ್ಯಾ ಸ್ಕೀಮ್ ಬಂತಂತಂದ್ರೂ ಜಾರಿಗೆ ಬರ‌್ಲಿಕ್ಕೆ ಹತ್ತ ವರ್ಸ ಬೇಕು. ನೀವೇನ್ ಚಿಂತೀ ಮಾಡಬ್ಯಾಡ್ರಿ. ಅದನ್ನ ನನಗ ಬಿಡ್ರಿ. ನಾನಿದೀನಲ್ಲ' ಅಂದರು.

ಪೈರು ಕಟಾವಾಗಿ ಮನೆ ಸೇರಿ ಒಂದು ತಿಂಗಳಾಗಿತ್ತು. ರೈತರೆಲ್ಲ ತಮ್ಮ ತಮ್ಮ ಮನೆಗಳಲ್ಲಿ ಹಬ್ಬ-ಹುಣ್ಣಿಮೆಗಳನ್ನು ಆಚರಿಸುತ್ತ, ಬಂಧುಬಾಂಧವರೊಡಗೂಡಿ ಸಂಭ್ರಮ ಆಚರಿಸುತ್ತಿದ್ದರು. ಇತ್ತ ಕಟಾವಾದ ಹೊಲಗಳ ಸಮುಚ್ಚಯ ಬಟಾಬಯಲಾಗಿ ವಿಸ್ತಾರವಾಗಿ ಮೈ ಚೆಲ್ಲಿ ಬಿದ್ದುಕೊಂಡಿತ್ತು. ಅದೊಂದು ದಿನ ಎರಡು ಜೀಪ್ ವಾಹನಗಳು ನರೇಬೈಲಿನಲ್ಲಿ  ಬಂದು ನಿಂತವು. ಒಂದು ಜೀಪಿನಿಂದ ವಿಧವಿಧದ ಸರಂಜಾಮು ಹೊತ್ತ ನಾಲ್ಕೈದು ಜನ ಇಳಿದರು. ಇನ್ನೊಂದು ಜೀಪಿನಲ್ಲಿ ನಾಲ್ಕಾರು ಪೋಲೀಸರಿದ್ದರು. ಮೊದಲು ಇಳಿದ ತಂಡ ವಿವಿಧ  ಸಲಕರಣೆಗಳನ್ನು ಬಯಲಿನ ಒಂದು ಮೂಲೆಯಲ್ಲಿ ಹೂಡಿ ಏನನ್ನೋ ಮಾಡುತ್ತಿರುವುದನ್ನು ಬಯಲ ಅಂಚಿನಲ್ಲಿ ಓಡಾಡುತ್ತಿದ್ದ ಒಬ್ಬಿಬ್ಬರು ಕುತೂಹಲದಿಂದ ವೀಕ್ಷಿಸಿದರು. ಹತ್ತಿರ ಬಂದು `ಸಾಹೇಬ್ರ! ಇದೇನ್ ಮಾಡಾಹತ್ತೀರಿ?' ಎಂದು ವಿಚಾರಿದರು. ತಂಡದ ಒಬ್ಬ ಸದಸ್ಯ `ನಿಮ್ಮೂರಾಗ ವಿಮಾನಾ ಬರ‌್ತದ, ಏನಪಾ! ವಿಮಾನಾ ನಿಂದರಲಿಕ್ಕ ಜಗಾ ಬ್ಯಾಡೇನು? ಅದಕ್ಕ ನೋಡಾಹತ್ತೀವಿ' ಅಂದ.

ಸೂರ್ಯ ನಡುನೆತ್ತಿಗೆ ಬರುವಷ್ಟರಲ್ಲಿ ಸುದ್ದಿ ಊರ ತುಂಬ ಹರಡಿತು. ಬಯಲು ಊರಾಯಿತು. ಪಾಟೀಲರು `ಏನ್ರಪಾ! ಏನ್ ನಡಸೀರಿಲ್ಲಿ?' ಎಂದು ಪ್ರಶ್ನಿಸಿದರು ಸಿಟ್ಟಿನಿಂದ. `ಸರ್ವೇ ಮಾಡಾಹತ್ತೀವಿ' ಅಂದ ತಂಡದ ಮುಖ್ಯಸ್ಥ.

`ಯಾರ‌್ನ ಕೇಳಿ ಮಾಡಾಹತ್ತೀರಿ?
`ಸರಕಾರದ ಆರ್ಡರ್ ಅದರೀ ನಮ್ಮ ಹತ್ರ .
`ನಮ್ಮನ್ನ ಕೇಳ್‌ದನ  ಅದ್ ಹೆಂಗ ಸರ್ವೇ ಮಾಡ್ತೀರಿ?
`ಅದನ್ನ ನೀವು ಸರಕಾರಕ್ಕ ಕೇಳಬೇಕ್ರಿ .

`ಅದ್ ಹೆಂಗ್ ನೀವು ಸರ್ವೇ ಮಾಡ್ತೀರೋ ನಾವ್ ನೋಡೇ ಬಿಡ್ತೀವಿ, ಏ ತಮ್ಮಗೋಳ್ರ್ಯಾ!  ಹಿಡದು ತದಕ್ರಿ ಇವ್ರನ್ನ!' ಎಂದು ಪಾಟೀಲರು ಕೂಗಿ ಹೇಳಿದರು.. ಜೀಪಿನಲ್ಲಿ ಕುಳಿತಿದ್ದ ಪೋಲೀಸರ ತಂಡ ಕೆಳಗಿಳಿಯಿತು. ಕೈಯಲ್ಲಿ ಸ್ಟಿಕ್ ಹಿಡಿದ ಪೋಲೀಸ್ ಅಧಿಕಾರಿ ಮುಂದೆ ಬಂದು `ಯಾರಾದರೂ ಒಂದೇ ಒಂದು ಹೆಜ್ಜೆ ಮುಂದೆ ಹಾಕಿದ್ರೆ ಪರಿಣಾಮ ನೆಟ್ಟಗಾಗೋದಿಲ್ಲ. ಎಲ್ರೂ ಹಿಂದಕ್ಕೆ ಸರೀರಿ. ಯಜಮಾನ್ರೇ! ನೀವು ಈಚೆ ಬನ್ನಿ. ನೀವು ಹುಡುಗರಿಗೆ ಚಿತಾವಣೆ ಮಾಡಿ ಸರಕಾರದ ಕೆಲಸಕ್ಕೆ ಅಡ್ಡಿ ಮಾಡಿದೀರಿ. ನಿಮ್ಮನ್ನ ನಾನು ಅರೆಸ್ಟ್ ಮಾಡ್ತಿದೀನಿ' ಎಂದು ಸರ್ವೇ ತಂಡದೆಡೆಗೆ ತಿರುಗಿ `ನಿಮ್ಮ ಕೆಲಸ ನೀವು ಮುಂದುವರೆಸಿ. ಇವ್ರನ್ನ ನಾವು ನೋಡಿಕೋತೀವಿ' ಅಂದರು. ಜೊತೆಯಲ್ಲಿದ್ದ ಕಾನ್ಸ್‌ಟೇಬಲ್‌ಗಳು ಪಾಟೀಲರನ್ನು ಸುತ್ತುವರೆದರು. ಸೇರಿದ ಜನ ಮಂಕಾಗಿ ನೋಡುತ್ತ ನಿಂತರು.

ಎಮ್ಮೆಲ್ಲೆ ಸಾಹೇಬ್ರು ಮನೆಯಲ್ಲೇ ಇದ್ದರು. ಚೇರ್‌ಮನ್ ಸಂಗಪ್ಪ ಅಸಹನೆಯಿಂದ ನುಡಿದರು: `ಇದೇನ್ ನಡದದ ಸಾಹೇಬ್ರ! ಹೇಳಂಗಿಲ್ಲ, ಕೇಳಂಗಿಲ್ಲ. ಒಮ್ಮಿಗಿ ಸರ್ವೇ ಶುರೂ ಮಾಡ್ತಾರಂದ್ರ ಏನರ್ಥ? ನಾವೇನು ಕುರಿಗೋಳು ಅಂತ ತಿಳದಾರೇನಿವ್ರ?' 

ಎಮ್ಮೆಲ್ಲೆಯವರ ಮುಖದಲ್ಲಿ ಸಂತಾಪದ ಸೆಳಕು ಮೂಡಿತು. `ನನಗೂ ತಿಳೀಲಿಲ್ಲ ಸಂಗಪ್ರೋರ! ವಿಮಾನ ಇಲಾಖೆ ಕೇಂದ್ರಕ್ಕ ಸಂಬಂಧಿಸಿದ್ದದ ಏನ್ರಪಾ. ಈ ಪ್ರಪೋಸಲ್ ಬಂದಾಗ ಇಷ್ಟು ಜಲ್ದಿ ಇಂಪ್ಲಿಮೆಂಟ್ ಮಾಡ್ತಾರಂತ ನನಗೂ ಗೊತ್ತಾಗ್ಲಿಲ್ಲ ನೋಡ್ರಿ! ಯಾವ್ ಮೂಲಿಯಿಂದ ಎಂಥೆಂಥಾ ಒತ್ತಡ ಇರ‌್ತಾವೋ ಆ ಶಿವನೇ ಬಲ್ಲ' ಅಂತ ಲೊಚಗುಟ್ಟಿದರು. `ನೀವ ಹೀಂಗದ್ರ ನಾವೆಲ್ಲಿ ಹೋಗ್‌ಬೇಕ್ರೀ?' ಅಂತ ಜೊತೆಯಲ್ಲಿದ್ದ ರುದ್ರೇಶ ಭುಸುಗುಟ್ಟಿದ.

`ಪರಿಸ್ಥಿತಿ ಹಂಗದನೋ ತಮ್ಮೋ! ನಮ್ಮ ಜಿಲ್ಲಾದಾಗ ಗಣಿಗಾರಿಕೀ ಶುರು ಆಗಿ ಐದು ವರ್ಷ ಆತು. ದೇಶಕ್ಕ ಆದಾಯ ಕೊಡೂ ಗಣೀನ ಯಾ ಸರಕಾರಾ ಬಿಟ್ಟೀತು ಹೇಳು. ನಮ್ಮ ಜಿಲ್ಲಾ ಕೈಗಾರಿಕಾ ಕೇಂದ್ರ ಆಗ್‌ಬೇಕು ಅಂತ ಹೊಂಟದ ಸರಕಾರ. ವಿದೇಶದಿಂದ ಮಿನಿಸ್ಟರ‌್ಸು, ಇಂಡಸ್ಟ್ರಿ ಮಾಲಕರು ಅಂತ ದೊಡ್ಡ ದೊಡ್ಡ ಜನಾ ಬರ‌್ತಿರ‌್ತಾರ. ಅವ್‌ರು ಕಾರ್ ಮ್ಯಾಗ್ ಬರ್‌ಬೇಕಂತೀ? ನಮ್ಮ ಜಿಲ್ಲಾಕ್ಕ ಇನ್ನಾ ವಂದ ಎರೋಡ್ರೋಮ್ ಇಲ್ಲ. ನರೇಬೈಲ ಎಲ್ಲಾದಕ್ಕೂ ಸೆಂಟರ್ ಜಗಾ ಅದ. ದೇಶ ಸುಧಾರಣೆ ಆಗ್‌ಬೇಕಂತೀರಿ. ಸುಧಾರಣೆ ಬೇಕಂತದ್ರ ಜನಾ ತ್ಯಾಗಾ ಮಾಡ್ಬೇಕೇನಪಾ'.

`ಅಂದ್ರ ನಾವು ಸಾಯ್‌ಬೇಕಂತೀರೇನ?'
`ನಾ ಎಲ್ಲಿ ಹಂಗಂದ್ನ್ಯೋ ಮಾರಾಯಾ? ಸರ್ಕಾರ ನಿಮ್ಮನ್ನ ಹಂಗ ಕೈ ಬಿಡಾಂಗಿಲ್ಲ. ನಿಮ್ಮ ಹೊಲಕ್ಕ ಸರಿಯಾಗಿ ಪರಿಹಾರ ಕೊಟ್ಟೇ ಕೊಡ್ತದ. ಹೊಲ ಮಾಡಾಂವ್ಗ ಹೊಲಾ, ರೊಕ್ಕಾ ಬೇಕಂದ್ರ ರೊಕ್ಕಾ. ನಿಮ್ಗೇನ್ ಬೇಕೂಂತ ಹೇಳ್ರಿ, ನಾಕೊಡಸ್ತೀನಿ, ಆತ? ಮನೀ ಕಟ್ಟಸ್ಲಿಕ್ಕೆ ಜಗಾನೂ ಕೊಡ್ತಾರ. ಇನ್ನೇನ್ ಬೇಕು ನಿಮಗ?'

ಸಭೆಯಲ್ಲಿ ಮೌನ ಕವಿಯಿತು. ತುಸು ಹೊತ್ತಿನ ಮೇಲೆ ಪಾಟೀಲರು ಮೌನ ಮುರಿದು ಸಲಹೆ ನೀಡಿದರು:
`ವಂದ ಕೆಲ್ಸಾ ಮಾಡೂಣು. ನಾವು ಮಂತ್ರೀನ ಭೆಟ್ಟ್ಯಾಗಿ ನಮ್ ಪರಿಸ್ಥಿತೀನ ಹೇಳೂಣಂತ. ಅದಕ್ಕ, ಶಂಕ್ರಪ್ಪ, ನೀವ್ ಸಹಾಯಾ ಮಾಡ್ಬೇಕು'.
ಎಮ್ಮೆಲ್ಲೆ ಸಾಹೇಬರು ನಕ್ಕರು.` ಪಾಟೀಲ್ರ ! ನಿಮ್ಗ ಖರೇ ಹೇಳಬೇಕಂತಂದ್ರ ಎಲ್ಲಾ ಮುಗದದ. ಇನ್ನ, ಕಾಮಗಾರಿ ಶುರೂ ಆಗೂದಷ್ಟ ಉಳದದ. ಭೆಟ್ಟಿಯಾಗ್ಲೇಬೇಕಂತಂದ್ರ ನಂದೇನಭ್ಯಂತ್ರ ಇಲ್ಲಾ. ನೀವು ದೆಲ್ಲೆಗೆ ಹೋಗ್ಲಿಕ್ಕ ತಯಾರಿದ್ರ ನಾ ಕರ‌್ಕೊಂಡು ಹೋಗ್ಲಿಕ್ಕ ರೆಡಿ'.
ಪಾಟೀಲರ ಮೊಗದಲ್ಲಿ ವಿಷಾದದ ನಗೆ ಮೂಡಿತು. `ಶಂಕ್ರಪ್ಪಾ! ಎಲ್ಲಾ ಗೊತ್ತಾತು ಬಿಡ್ರಿ. ನೀವೂ ಆ ಕಡೇ ನಿಂತು ಮಾತಾಡಹತ್ತೀರಿ ಅಂದ್ಹಂಗಾತು. ಆತು ಬಿಡ್ರಿ. ಶಿವನ ಇಚ್ಛಾ' ಎನ್ನುತ್ತ ಸಂಗಡಿಗರೊಂದಿಗೆ ಹೊರಟು ಬಿಟ್ಟರು.

-4-

ಮೂರು ತಿಂಗಳ ಅವಧಿಯಲ್ಲಿ ಊರನ್ನು ಖಾಲಿ ಮಾಡಬೇಕಿತ್ತು. ಪರಿಹಾರಧನ ಅದಾಗಲೇ ಸಂದಾಯವಾಗಿ ಹೋಗಿತ್ತು. ಅವಧಿಯ ಮುನ್ನವೇ ಮನೆಗಳನ್ನು ಖಾಲಿ ಮಾಡುವ ನಿಟ್ಟಿನಲ್ಲಿ ಮುಚ್ಚಳಿಕೆಗಳನ್ನು ಬರೆಸಿಕೊಳ್ಳಲಾಗಿತ್ತು. ಒಂದು ದಿನ ಪಾಟೀಲರು ತಮ್ಮ ಮೂರೂ ಮಕ್ಕಳನ್ನು ಕೂರಿಸಿಕೊಂಡು ತಮ್ಮ ನಿಲುವನ್ನು ಸಾರಿದರು. `ನೋಡ್ರಪಾ! ಕೂರಿಗೆಗೆ ನಾಲ್ಕು ಲಕ್ಷದ ಹಾಂಗ ಮೂವತ್ತು ಕೂರಿಗೆಗೆ ವಂದು ಕೋಟಿ ಇಪ್ಪತ್ತು ಲಕ್ಷ ಪರಿಹಾರ ಬಂದೈತಿ. ಮನೀ ಲೆಕ್ಕದಾಗ ಇಪ್ಪತ್ತೈದು ಲಕ್ಷ ಕೊಟ್ಟಾರ. ನಾ ಹೇಳೂದೇನಂದ್ರ ಭೂಮೀ ರೊಕ್ಕ ಭೂಮಿಗೇ ಹಾಕೂಣಂತ. ಬೇಕಂದ್ರ ಈ ಜಿಲ್ಲಾ ಬಿಟ್ಟು ಧಾರವಾಡ, ಬೆಳಗಾವಿ ಅಂತ ಬ್ಯಾರೇ ಜಿಲ್ಲಾಕ್ಕ ಹೋಗಿ ಹೊಸಾ ಭೂಮಿ ಖರೀದಿ ಮಾಡೂಣಂತ. ಏನಂತೀರಿ?' ಅಂದರು. ಅರ್ಧದಲ್ಲಿ ಕಾಲೇಜು ಬಿಟ್ಟುಬಂದ ಮೂರನೆಯ ಸುಪುತ್ರ ಉಮೇಶ ಅಡ್ಡ ಮಾತೊಂದನ್ನು ಎದುರಿಗಿಟ್ಟ. `ಅಪ್ಪಾ! ನನಗ ಬೇಸಾಯದ ಗಂಧಗಾಳಿ ಇಲ್ಲ.

ನನಗಂತೂ ಭೂಮಿ ಬ್ಯಾಡಾ. ನನ್ನ ಪಾಲಿನ ರೊಕ್ಕಾ ನನಗ ಒಗದಬಿಡ್ರಿ. ಎರಡು ಲಾರಿ ಖರೀದಿ ಮಾಡಿ ನಾನು ಟ್ರಾನ್ಸ್‌ಪೋರ್ಟ್‌ ಬಿಸಿನೆಸ್ ಮಾಡಾಂವಾ' ಅಂದ. ಹನುಮಪ್ಪ `ನಮಗೂ ಬೇಸಾಯದ ಬದುಕು ಸಾಕಾಗಿ ಹೋಗೇತಿ. ಹೆಂಗೂ ಹೊಸಾಮನೀಗೆ ಹೊಕ್ಕೀವಿ. ಆ ಮ್ಯಾಲ್ ನೋಡಿದ್ರಾತು. ಬಂದ ರೊಕ್ಕಾ ಪಾಲು ಮಾಡಿಕೊಂಡ್ರ ಎಲ್ಲಾರ್ಗೂ ಮೂವತ್ತರಿಂದ ಮೂವತ್ತೈದು ಲಕ್ಷ ಸಿಗ್ತದ. ಎಲ್ಲಾ ರೊಕ್ಕಾ ಬ್ಯಾಂಕ್‌ನಾಗಿಟ್ರ ಬಡ್ಡೀ ಮ್ಯಾಲ ಜೀವನ ಸಾಗ್ತದ, ಮತ್ತ್ಯಾಕ ಭೂಮಿ?' ಅಂದ. ಸಿದ್ರಾಮ ಅಣ್ಣನ ಮಾತು ಕೇಳಿ `ಹೂಂ ಮತ್ತ!' ಅಂತ ಗೋಣು ಹಾಕಿದ. ಪಾಟೀಲರಿಗೆ ಸಿಟ್ಟು ಬಂತು. `ಏ ಬಡ್ಡೀ ಮಕ್ಳ ! ಖಬರಗೇಡಿ ಅದೀರಿ ನೀವು ! ಕುಂತುಂಡ್ರ ಕುಡಿಕೀ ಹೊನ್ನು ಸಾಲಾಂಗಿಲ್ಲೋ, ಹುಚ್ ನನ ಮಕ್ಳ! ಭೂಮಿತಾಯೀನ ಅಲಕ್ಷ್ಯ ಮಾಡಿದರ ಉದ್ಧರಾಗಾಂಗಿಲ್ಲ ನೀವು' ಅಂತ ಬೈದರು.

ನರೇಬೈಲಿನ ಸಮಾಧಿಯ ಮೇಲೆ ವಿಮಾನ ನಿಲ್ದಾಣ ತಲೆಯೆತ್ತತೊಡಗಿತು. ಅದೇ ಕಾಲಕ್ಕೆ ನರೇಬೈಲು ಮತ್ತು ಸುತ್ತಣ ಎರಡು ಹಳ್ಳಿಗಳ ನಿವಾಸಿಗಳು ಮೂವತ್ತು ಕಿಲೋಮೀಟರ್ ಆಚೆ ಇದ್ದ ಗುಡ್ಡದ ಅಂಚಿನಲ್ಲಿ ನಿರ್ಮಿಸಲಾದ `ಸಮತಾ ನಗರ' ಎಂಬ ಹೊಸ ಹೆಸರಿನ ಹೊಸ ಕಾಲನಿಗೆ ಸ್ಥಳಾಂತರಗೊಂಡರು. ನಿಲ್ದಾಣದ ಕಾಮಗಾರಿ ಆರು ವರ್ಷಗಳ ಕಾಲ ಸಾಗಿತು. ಕಾಮಗಾರಿ ನಡೆದಷ್ಟು ಕಾಲ ಪಾಟೀಲರು ಮಣ್ಣ ಕಂಪಿಗೆ ಸೆಳೆಯಲ್ಪಟ್ಟು ಸಮತಾನಗರದಿಂದ ಹಳೆಯ ನರೇಬೈಲಿಗೆ-ಅಂದರೆ ಇಂದಿನ ವಿಮಾನ ನಿಲ್ದಾಣದ ತಾಣಕ್ಕೆ-ದಿನ ಬಿಟ್ಟು ದಿನ ಹೋಗಿ ಒಂದಷ್ಟು ಕಾಲ ಕಳೆದು ಬರುತ್ತಿದ್ದರು. ಹಳೆಯ ನೆನಪುಗಳೊಂದಿಗೆ ಅವರ ನಿಟ್ಟುಸಿರುಗಳು ತಾಳ ಹಾಕುತ್ತಿದ್ದವು.

ಈ ಮಧ್ಯೆ ಸಿದ್ರಾಮ ಮದುವೆಯಾಗಿ ಮನೆ ಬಿಟ್ಟು ಪ್ರತ್ಯೇಕ ಸಂಸಾರ ಹೂಡಿದ. ಸಮತಾ ನಗರದ ನಿವಾಸಿಗಳ ಬದುಕಿನ ರೀತಿಗೆ ಸಂವಾದಿಯಾಗಿ ದ್ವಿಚಕ್ರವಾಹನ ಹಾಗೂ ಕಾರುಗಳ ಏಜನ್ಸಿಗಳು ತಲೆಯೆತ್ತಿದವು. ಹನುಮಪ್ಪ ಮೋಟರ್ ಬೈಕ್ ಖರೀದಿಸಿದರೆ ಸಿದ್ರಾಮ ಕಾರಿನ ಒಡೆಯನಾದ. ಇಬ್ಬರಿಗೂ ಕೆಲಸವಿರಲಿಲ್ಲ. ಒಬ್ಬ ಕಾಂಗ್ರೆಸ್ ಪಕ್ಷ ಸೇರಿದರೆ ಇನ್ನೊಬ್ಬ ಜನತಾ ಪಕ್ಷದ ಸದಸ್ಯನಾದ. ಸಮತಾ ನಗರದ ಪಂಚಾಯತ ಚುನಾವಣೆಯಲ್ಲಿ ಅಣ್ಣ-ತಮ್ಮ ಅಭ್ಯರ್ಥಿಗಳಾಗಿ ಕಾದಾಟ ಪ್ರಾರಂಭಿಸಿದರು. ಈ ನಡುವೆ ಹನುಮಪ್ಪನ ಮಗಳು ಗಂಗಾ ಏಜನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯಾವನೊಂದಿಗೋ ಓಡಿಹೋಗಿದ್ದು ಯಾರಿಗೂ ಚುನಾವಣೆಯ ಎದುರಿಗೆ ದೊಡ್ಡ ಘಟನೆಯೆಂದು ಅನಿಸಲಿಲ್ಲ

-6-
ನಡು ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿದ್ದವು. ಮನೆಯಲ್ಲಿ ಪಾಟೀಲರು ಒಬ್ಬರೇ. ಹನುಮಪ್ಪ ಹೆಂಡತಿ-ಮಕ್ಕಳೊಂದಿಗೆ `ಶ್ರೀ ಕೃಷ್ಣ ಪಾರಿಜಾತ' ದೊಡ್ಡಾಟ ನೋಡಲು ಹೋಗಿದ್ದ. ನೆಲದ ಹಾಸಿಗೆಯ ಮೇಲೆ ಮಲಗಿದ್ದ ಪಾಟೀಲರು ತೆರೆದ ಕಿಟಕಿಯ ಮೂಲಕ ಹೊರಗೆ ಅರೆತೆರೆದ ಕಂಗಳನ್ನು ನೆಟ್ಟರು. ಬಳಲಿದ ಅವರ ಕಂಗಳಿಗೆ  ಮಿನುಗುವ ನಕ್ಷತ್ರಗಳು ಆಕಾಶವೆಂಬೋ ಹೊಲದಲ್ಲಿ ತೊನೆದಾಡುವ ಜೋಳದ ತೆನೆಗಳಂತೆ ಗೋಚರಿಸಿದವು. ಪಾಟೀಲರ ಬಾಯಿಯಿಂದ ಹಂತಿಯ ಹಾಡು ತಾನೇ ತಾನಾಗಿ ಹೊರಹೊಮ್ಮಿತು:

ಕುಟ್ಟೀಕುಟ್ಟೀ ನನ್ನ ರಟ್ಟೀಯ ನೋಯ್ದೊವ
ಕಟ್ಟೀ ಮ್ಯಾಲಿನ ಕಲ್ಲ ನಡಗ್ಯಾವ  ನನ ಮನಿಯ
ಕೊಟಗ್ಯಾನ ಎತ್ತೂ ಬೆದರ‌್ಯಾವ 
ಪಾಟೀಲರ ಹಾಡು ಅದೇ ತಾನೇ ಹಾರಿಹೋಗುತ್ತಿದ್ದ ವಿಮಾನಿನ ಸದ್ದಿನಲ್ಲಿ ಅಡಗಿಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT