ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದನಕೆರೆ ಪಿಯು ಕಾಲೇಜಿಗೆ ಕಲಾ ವಿಭಾಗ ಬೇಕು

Last Updated 10 ಜನವರಿ 2014, 8:25 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಗ್ರಾಮ­ದಲ್ಲಿರುವ ಜಿವಿಪಿ ಪದವಿ ಪೂರ್ವ ಕಾಲೇಜಿಗೆ ಕಲಾ ವಿಭಾಗ ಮಂಜೂರು ಮಾಡಬೇಕು ಎಂಬ ಗ್ರಾಮಸ್ಥರ ಬೇಡಿಕೆ ಕಳೆದ 25 ವರ್ಷದಿಂದ ಈಡೇರಿಲ್ಲ.

ಹೋಬಳಿ ಕೇಂದ್ರವೂ ಆಗಿರುವ ಹಂದನಕೆರೆಗೆ ಸುತ್ತಮುತ್ತಲ ಸುಮಾರು 30 ಗ್ರಾಮಗಳಿಂದ ವಿದ್ಯಾರ್ಥಿ­ಗಳು ಬರುತ್ತಾರೆ. ಗ್ರಾಮದಲ್ಲಿ ಒಟ್ಟು 3 ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಪಕ್ಕದ ಅರೇನಹಳ್ಳಿ ಹಾಗೂ ದೊಡ್ಡೆಣ್ಣೆಗೆರೆ ಗ್ರಾಮಗಳಲ್ಲಿಯೂ ಪ್ರೌಢಶಾಲೆಗಳಿವೆ.

ಹೋಬಳಿಯ 5 ಪ್ರೌಢಶಾಲೆಗಳಿಂದ ಪ್ರತಿವರ್ಷ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿ ಉತ್ತೀರ್ಣರಾಗುತ್ತಾರೆ. ಹಂದನಕೆರೆಯಲ್ಲಿ ಉತ್ತಮ ಗುಣಮಟ್ಟದ ಪದವಿ ಪೂರ್ವ ಕಾಲೇಜು ಇದ್ದರೆ ಇವರೆಲ್ಲರಿಗೂ ಅನುಕೂಲವಾಗುತ್ತದೆ.

ಸಾಧಾರಣವಾಗಿ ಸರ್ಕಾರ ಮೊದಲು ಕಲಾ ವಿಭಾಗ­ವನ್ನು ಮುಂಜೂರು ಮಾಡುತ್ತದೆ. ಅವಶ್ಯ­ಕತೆಗೆ ಅನುಗುಣವಾಗಿ ವಿಜ್ಞಾನ– ವಾಣಿಜ್ಯ ವಿಭಾಗ­ವನ್ನು ತೆರೆಯಲಾಗುತ್ತದೆ. ಆದರೆ ಹಂದನಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿವಿಪಿ ಪದವಿ ಪೂರ್ವ ಅನುದಾನಿತ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಮಾತ್ರ ಇದೆ. ಕಲಾ ವಿಭಾಗ ತೆರೆಯಲು ಆಡಳಿತ ಮಂಡಳಿ ಉತ್ಸಾಹ ತೋರುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಓದಲಾಗದ  ವಿದ್ಯಾರ್ಥಿಗಳು, ಮುಖ್ಯವಾಗಿ ಹೆಣ್ಣು ಮಕ್ಕಳು ಕಲಾ ವಿಭಾಗ ಇಲ್ಲವೆನ್ನುವ ಕಾರಣದಿಂದ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸುತ್ತಿದ್ದಾರೆ ಎಂದು ಗ್ರಾಮಸ್ಥರಾದ ಸಿದ್ದಣ್ಣ ಅಳಲು ತೋಡಿಕೊಳ್ಳುತ್ತಾರೆ.

ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಲಾ ವಿಭಾಗ ಕೊಡಿ ಎಂದು ಗ್ರಾಮಸ್ಥರು 1987ರಿಂದ ಇಲ್ಲಿಯವರೆಗೆ ಸರ್ಕಾರಕ್ಕೆ ನೂರಾರು ಮನವಿ ಸಲ್ಲಿಸಿದ್ದಾರೆ. ಆದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೇವಲ ಆಶ್ವಾಸನೆ ನೀಡುತ್ತಿದ್ದಾರೆ ಎಂಬುದು ಅವರ ಅಳಲು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು 2007ರಲ್ಲಿ ಹಂದನಕೆರೆಗೆ ಪದವಿ ಪೂರ್ವ ಕಲಾ ವಿಭಾಗದ ಅಗತ್ಯ ಇದ್ದು ಮುಂಜೂರು ಮಾಡಬಹುದು ಎಂದು ಸರ್ಕಾರಕ್ಕೆ ಪ್ರಸ್ತಾವನೆ­ಯನ್ನೂ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಮತ್ತು ರಾಜ್ಯ­ಪಾಲರ ಜನತಾ ದರ್ಶನದಲ್ಲೂ ಗ್ರಾಮಸ್ಥರು ಭಾಗವಹಿಸಿ ಮನವಿ ಮಾಡಿಕೊಂಡಿದ್ದಾರೆ. ಪತ್ರ ಚಳವಳಿ ನಡೆಸಿ ಸಮಸ್ಯೆಯ ತೀವ್ರತೆಯನ್ನು ರಾಷ್ಟ್ರಪತಿಗಳ ಗಮನಕ್ಕೂ ತರಲಾಗಿದೆ. ಆದರೂ ಕಲಾ ವಿಭಾಗ ಮಂಜೂರಾಗಿಲ್ಲ ಎಂದು ಸಮಾಜ ಸೇವಕ ಬಿ.ಮೊಹಮದ್ ಅಲಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT