ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಆಹಾರ ವಿವಾದ; ಘರ್ಷಣೆ

Last Updated 23 ಜುಲೈ 2012, 6:20 IST
ಅಕ್ಷರ ಗಾತ್ರ

ದಾವಣಗೆರೆ: ಹಂದಿಗಳಿಗೆ ಮುಸುರೆ ಹಾಕುವ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿ ಪರಸ್ಪರ ಹಲ್ಲೆ, ಮನೆಗಳಿಗೆ ದಾಳಿ, ಮೂರು ವಾಹನ ಜಖಂಗೊಂಡು ದೂರು- ಪ್ರತಿ ದೂರು ದಾಖಲಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ನಗರದ ಬೇತೂರು ರಸ್ತೆಯ ದೇವರಾಜ್ ಕ್ವಾಟರ್ಸ್‌ನ ಸಾರ್ವಜನಿಕ ಉದ್ಯಾನದಲ್ಲಿ ಒಂದು ಸಮುದಾಯದವರು ಹಂದಿಗಳಿಗೆ ಹೋಟೆಲ್ ತ್ಯಾಜ್ಯ( ಉಳಿಕೆ ಆಹಾರ ಪದಾರ್ಥ) ಹಾಕುತ್ತಿದ್ದರು. ಅದಕ್ಕೆ ಉದ್ಯಾನದ ಸಮೀಪವಿದ್ದ ಅನ್ಯಕೋಮಿನ ಮನೆಯವರು ಆಕ್ಷೇಪಿಸಿದರು. ಇಲ್ಲಿ ತ್ಯಾಜ್ಯ ಸುರಿಯಬಾರದು. ತಮಗೆ ತೊಂದರೆಯಾಗುತ್ತದೆ.

ಅಲ್ಲದೇ ಪರಿಸರವೂ ಹಾಳಾಗುತ್ತದೆ ಎಂದು ಹೇಳಿದರು. ಆಗ ಆಹಾರ ಹಾಕುತ್ತಿದ್ದವರು ಮತ್ತು ಆಕ್ಷೇಪಿಸಿದವರ ಮಧ್ಯೆ ಮಾತಿನ ಚಕಮಕಿ ನಡೆದು ಹಲ್ಲೆ ಮಾಡುವವರೆಗೂ ಮುಂದುವರಿಯಿತು.

ಹಲ್ಲೆ ನಡೆದ ಬಳಿಕ ಒಂದು ಗುಂಪು ಕೊರಚರ ಹಟ್ಟಿಗೆ ಹೋಗಿ ದಾಂಧಲೆ ನಡೆಸಿತು. ಪಾಲಿಕೆ ಸದಸ್ಯ ಪರಶುರಾಮ್ ಅವರಿಗೆ ಸೇರಿದ ಕಾರಿನ ಗಾಜು ಒಡೆದಿದೆ. ಎರಡು ದ್ವಿಚಕ್ರ ವಾಹನ ಜಖಂಗೊಂಡವು. ಇತ್ತ ಇನ್ನೊಂದು ಗುಂಪು ಅನ್ಯ ಕೋಮಿನವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿತು. ಬಾಗಿಲು ಮುರಿದು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಉಭಯ ಬಣಗಳು ಆಜಾದ್‌ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿವೆ.

ಘಟನೆಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ದುಗ್ಗ, ಕಾಶಿ, ಕುಮಾರ, ಮಂಜು, ವೀರೇಶ್, ನವೀದ್, ಹೈದರಾಲಿ, ತೀರ್ಥಹಳ್ಳಿ ಹನೀಫ್, ಜುಲ್ಫೀಕರ್, ಸಾದಿಕ್, ಸೈಯದ್ ಬಂಧಿತರು. ಪರಸ್ಪರ ಆರೋಪದಲ್ಲಿ ಜಾತಿ ನಿಂದನೆ, ಮನೆಗೆ ನುಗ್ಗಿ ದಾಂಧಲೆ, ದೊಂಬಿ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ, ಹೆಚ್ಚುವರಿ ಎಸ್.ಪಿ. ಬಿ.ಟಿ. ಚವಾಣ್, ಸಿಪಿಐ ಎಚ್.ಕೆ. ರೇವಣ್ಣ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT