ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಕಾಟ ನಿವಾರಣೆಗೆ ಹಂದಿಮನೆ

Last Updated 1 ಫೆಬ್ರುವರಿ 2011, 6:50 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿನ ಹಂದಿಗಳ ಹಾವಳಿ ನಿರ್ಮೂಲನೆಗೆ ಮಹಾನಗರ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದ್ದು, ನಗರದ ಹೊರವಲಯದಲ್ಲಿ ಹಂದಿ ಮನೆ ನಿರ್ಮಿಸಲು ಐದು ಎಕರೆ ಜಮೀನು ನೀಡಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಪಾಲಿಕೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಮೇಯರ್ ಎಂ.ಜಿ. ಬಕ್ಕೇಶ್, ಹಂದಿಗಳ ಹಾವಳಿ ನಿಯಂತ್ರಿಸಲು ವಿಷ ಹಾಕುವ ಕ್ರಮ ಸರಿಯಲ್ಲ. ಹಾಗಾಗಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಐದು ಎಕರೆ ಪ್ರದೇಶದಲ್ಲಿ ಹಂದಿಗಳ ಸಾಕಾಣಿಕೆಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲಿ ಅವಕಾಶ ಕಲ್ಪಿಸಿದ ನಂತರ ನಗರದ ಒಳಗೆ ಹಂದಿಗಳ ಪ್ರವೇಶ ನಿರ್ಬಂಧಿಸಲಾಗುವುದು ಎಂದರು.

ಇದಕ್ಕೂ ಮೊದಲು ನಗರದಲ್ಲಿನ ಹಂದಿಗಳ ಹಾವಳಿ ಕುರಿತು ಪಾಲಿಕೆ ವಿರೋಧ ಪಕ್ಷದ ನಾಯಕ ದಿನೇಶ್ ಶೆಟ್ಟಿ, ಸದಸ್ಯ ಕೆ.ಜಿ. ಶಿವಕುಮಾರ್ ಮತ್ತಿತರರು ಆಕ್ಷೇಪ ಎತ್ತಿದರು.

ಕಸ ವಿಲೇವಾರಿ ಸಮಸ್ಯೆ ಕುರಿತು ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸೀಮೆಎಣ್ಣೆ ಮಲ್ಲೇಶ್, ಶಫೀಕ್ ಪಂಡಿತ್, ಇಸ್ಮಾಯಿಲ್, ವಿಠಲ್ ಶಿವನಳ್ಳಿ ರಮೇಶ್ ಮತ್ತಿತರರು ಕಸ ವಿಲೇವಾರಿ ಸಮಸ್ಯೆ ನಿವಾರಣೆ ಮಾಡದಿರುವ ಬಗ್ಗೆ ಹಾಗೂ ಕಂಟೈನರ್ ಸರಿಯಾಗಿ ಬಳಕೆ ಮಾಡದಿರುವ ಬಗ್ಗೆ ಆರೋಗ್ಯ ವಿಭಾಗ, ಪರಿಸರ ವಿಭಾಗದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಆಯಕ್ತ ಪ್ರಸನ್ನಕುಮಾರ್ ಮಾತನಾಡಿ, ಪಾಲಿಕೆ ಆದ ನಂತರ ಹೆಚ್ಚಿನ ಸಿಬ್ಬಂದಿ ದೊರೆತಿಲ್ಲ. ಇರುವ ಸಿಬ್ಬಂದಿ ಸಾಲುತ್ತಿಲ್ಲ. ಶೀಘ್ರದಲ್ಲೇ ಹೊಸ ಸಿಬ್ಬಂದಿ ನೇಮಕದ ನಂತರ ಸಮಸ್ಯೆ ಬಗೆಹರಿಯುತ್ತದೆ ಎಂದು ಉತ್ತರಿಸಿದರು. 

ಬಾ.ಮ. ಬಸವರಾಜಯ್ಯ ಮಾತನಾಡಿ, ಸೊಳ್ಳೆಕಾಟ ವಿಪರೀತವಾಗಿದೆ. ಫಾಗಿಂಗ್ ಮಾಡಿದರೆ ಎಲ್ಲ ಸೊಳ್ಳೆ ಮನೆ ಒಳಗೆ ಬರುತ್ತವೆ. ಅದರ ಬದಲು ದ್ರವ ರೂಪದ ಸಿಂಪಡಣೆ ಮಾಡಿ ಎಂದು ಸಲಹೆ ನೀಡಿದರು. ಯುಐಡಿಎಸ್‌ಎಸ್‌ಎಂಟಿ ಯೋಜನೆ ಅಡಿ ಕೈಗೊಂಡ ಕಾಮಗಾರಿ ಕಳಪೆಯಾಗಿವೆ. ರಸ್ತೆ ಕಿತ್ತು ಬರುತ್ತಿದೆ. ಸರಿಯಾದ ನಿರ್ವಹಣೆ ಇಲ್ಲ ಎಂದು ದೂರಿದರು.

ಡಿ.ಎನ್. ಜಗದೀಶ್ ಮಾತನಾಡಿ, ಅತಿವೃಷ್ಟಿಯಿಂದ ನಗರದಲ್ಲಿ ಬಿದ್ದ ಮನೆಗಳಿಗೆ ಇದುವರೆಗೆ ಪರಿಹಾರ ನೀಡಿಲ್ಲ. ಪ್ರಕೃತಿ ವಿಕೋಪದ ಹಣ ಎಲ್ಲಿ ಹೋಯಿತು? ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಸಭೆಯ ನಡುವೆ ಕೆಲ ಸಮಯ ಸೀಮೆಎಣ್ಣೆ ಮಲ್ಲೇಶ್ ಆರ್ಭಟಿಸಿದರು. ಕಸವಿಲೇವಾರಿ ಸಮಸ್ಯೆ, ಅಕ್ರಮ ಡೋರ್‌ನಂಬರ್‌ಗೆ ಕಾರಣರಾದವರ ವಿರುದ್ಧ ಕೂಗಾಡಿದರು. ಸಭೆಯನ್ನು ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ಸದಸ್ಯ ಕಿಣಿ ವಿರುದ್ಧ ಹರಿಹಾಯ್ದರು.

ಸದಸ್ಯ ಶಫೀಕ್ ಪಂಡಿತ್, ಪಾಲಿಕೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, 2008ರಲ್ಲೇ ದೂರು ನೀಡಿದರೂ ಈ ಬಗ್ಗೆ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ್ಙ 17 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಒಳ ಚರಂಡಿ ಮತ್ತು ಕೊಳೆಚೆ ನೀರು ಶುದ್ಧೀಕರಣ ಘಟಕಕ್ಕೆ ಬೂದಿಹಾಳ್ ಬಳಿ ಸ್ಥಳ ನೀಡಲು ನಿರ್ಧರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT