ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗಳ ಆವಾಸದಲ್ಲೇ ಹುಣಸೆ ವ್ಯಾಪಾರ!

Last Updated 26 ಫೆಬ್ರುವರಿ 2012, 6:40 IST
ಅಕ್ಷರ ಗಾತ್ರ

ಕುಷ್ಟಗಿ: ಬರಪೀಡಿತ ಪ್ರದೇಶವಾದರೂ ಈ ಭಾಗದಲ್ಲಿ ಹುಣಸೆಹಣ್ಣಿನ ವ್ಯಾಪಾರ ಬಲು ಜೋರು, ವ್ಯಾಪಾರಿಗಳೇ ಹೇಳುವಂತೆ ಕೊಪ್ಪಳ ಜಿಲ್ಲೆಯಲ್ಲಿಯೇ ಇಲ್ಲಿನ ಹುಣಸೆಹಣ್ಣಿನ ಮಾರುಕಟ್ಟೆ ದೊಡ್ಡ ಪ್ರಮಾಣದ್ದಾಗಿದೆ.

ಆದರೆ ವ್ಯವಸ್ಥಿತ ಮಾರುಕಟ್ಟೆ ಇಲ್ಲದೇ ಅನಾರೋಗ್ಯಕರ ವಾತಾವರಣದಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿರುವುದರಿಂದ ಕೊಳ್ಳುವವರಿಗೆ ವಾಕರಿಕೆ ಬರಿಸುವಂತಿದೆ.

ರೈತರ ಹೊಲಗದ್ದೆಗಳಲ್ಲಿನ ಹುಣಸೆ ತೋಪುಗಳನ್ನು ಗುತ್ತಿಗೆ ಹಿಡಿಯುವ ಗ್ರಾಮಾಂತರ ಪ್ರದೇಶದ ಹುಣಸೆ ವ್ಯಾಪಾರಿಗಳು ಕೊಪ್ಪಳ, ಗಜೇಂದ್ರಗಡ, ಇಳಕಲ್, ಸಿಂಧನೂರು, ಗಂಗಾವತಿ ಮೊದಲಾದ ಕಡೆಗಳಿಂದ ಮಾರಾಟ ಮತ್ತು ಖರೀದಿಗಾಗಿ ಇಲ್ಲಿಗೆ ಆಗಮಿಸುವುದು ವಿಶೇಷ.

ಡಿಸೆಂಬರ್‌ನಿಂದ ಮೂರ‌್ನಾಲ್ಕು ತಿಂಗಳುಗಳು ಭಾನುವಾರ ವಾರದ ಸಂತೆಯ ದಿನ ನಡೆಯುವ ಹುಣಸೆ ವಹಿವಾಟು ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಸುಮಾರು ಎರಡು ಮೂರು ಲಾರಿಯಷ್ಟು ಪ್ರಮಾಣದಲ್ಲಿ ಹುಣಸೆಹಣ್ಣು ಆವಕವಾಗುತ್ತಿದೆ. ಹುಣಸೆ ಹಣ್ಣು ಹಳ್ಳಿ ಪಟ್ಟಣಗಳಲ್ಲಿ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳು, ದೂರದ ನಗರ ಪ್ರದೇಶಗಳಿಗೂ ಸಾಗಣೆ ಮಾಡುವ ದೊಡ್ಡಪ್ರಮಾಣದ ವರ್ತಕರಿಗೂ ಪರ್ಯಾಯ ಉದ್ಯೋಗವಾಗಿ ಪರಿಣಮಿಸಿದೆ.

ಎಲ್ಲವೂ ಸರಿ ಆದರೆ ಪಟ್ಟಣದಲ್ಲಿ ಹುಣಸೆಹಣ್ಣಿನ ವ್ಯಾಪಾರ ನಡೆಯುವ ಸ್ಥಳ ಮಾತ್ರ ಹೊಲಸಿನ ಆಗರವಾಗಿರುವುದು ಕಂಡುಬಂದಿದೆ.

ಪ್ರತ್ಯೇಕ ಸ್ಥಳವಿಲ್ಲ, ಕರ ವಸೂಲಿ ಮಾಡುವ ಪುರಸಭೆಯವರು ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಸೂಕ್ತ ಸ್ಥಳಾವಕಾಶ ಕಲ್ಪಿಸಿಲ್ಲ. ಇದ್ದುದನ್ನಾದರೂ ಸ್ವಚ್ಛವಾಗಿರಿಸಿಲ್ಲ.

ಹಾಗಾಗಿ ರಾತ್ರಿವೇಳೆ ಜನರು ಮಲಮೂತ್ರ ವಿಸರ್ಜಿಸುವ, ಹಂದಿ, ನಾಯಿಗಳ ಆವಾಸ್‌ದ ಪ್ರಶಸ್ತ ಸ್ಥಳ ಹಾಗೂ ಸುತ್ತಲಿನ ಹತ್ತಾರು ಮಾಂಸದ ಅಂಗಡಿಯವರು ತಾಜ್ಯ ಎಸೆಯುತ್ತಿರುವಲ್ಲೇ ಹುಣಸೆಹಣ್ಣಿನ ಮೂಟೆಗಳನ್ನು ಮನಬಂದಂತೆ ಎಸೆಯುವುದು, ತೂಕ ಮಾಡುವುದು ಅಸಹ್ಯ ಹುಟ್ಟಿಸುತ್ತದೆ. ಇದು ಪ್ರತಿವಾರದ ಸಾಮಾನ್ಯ ಸಂಗತಿಯಾಗಿದ್ದು ವಾಕರಿಕೆ ಬರುತ್ತದೆ ಹಾಗಾಗಿ ಕಣ್ಣು ಮುಚ್ಚಿ ಖರೀದಿಸಬೇಕು.

ಇಂಥ ಹಣ್ಣು ಬಳಸುವ ಜನ ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಅಲ್ಲದೇ ಗ್ರಾಹಕರ ಆರೋಗ್ಯದ ಬಗ್ಗೆ ವ್ಯಾಪಾರಿಗಳಿಗೆ ಚಿಂತೆಯೇ ಇರುವುದಿಲ್ಲ ಎಂದು ಗ್ರಾಹರಾದ ಸುರೇಶ ಪಾಟೀಲ, ಸಲೀಮ್‌ಸಾಬ್ ಕುಷ್ಟಗಿ, ಹನಮಪ್ಪ ಬಿಜಕಲ್ ಇತರರು ಅಸಮಾಧಾನ ತೋಡಿಕೊಂಡರು.

ಈ ಕುರಿತು ವಿವರಿಸಿದ ಹುಣಸೆಹಣ್ಣಿನ ವ್ಯಾಪಾರಿ ಹನುಮಪ್ಪ, ಪಟ್ಟಣದಲ್ಲಿ ವ್ಯಾಪಾರಕ್ಕಾಗಿ ಸ್ಥಳದ ಅಭಾವವಿದೆ, ಪ್ರವಾಸಿ ಮಂದಿರದ ಬಳಿ ರಸ್ತೆ ಪಕ್ಕದಲ್ಲೇ ಅನಿವಾರ್ಯವಾಗಿ ವಹಿವಾಟು ನಡೆಯುತ್ತದೆ.
ಈ ಬಗ್ಗೆ ಯಾರನ್ನು ಕೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದರು. ಆದರೆ ಮಂದಿನ ದಿನಗಳಲ್ಲಿ ಸ್ವಚ್ಛತೆಗೆ ಗಮನಹರಿಸುವುದಾಗಿ ಹೇಳಿದರು.

ಹುಣಸೆ ದರದಲ್ಲಿಯೂ ಈ ಬಾರಿ ಸಾಕಷ್ಟು ವ್ಯತ್ಯಾಸವಾಗಿದೆ. ಪಕ್ಕದ ಆಂಧ್ರ ಪ್ರದೇಶದಲ್ಲಿ ಹೆಚ್ಚಿನ ಇಳುವರಿ ಬಂದಿರುವುದರಿಂದ ದೂರದ ಖರೀದಿದಾರರು ಇಲ್ಲಿಗೆ ಬರುತ್ತಿಲ್ಲ, ಕಳೆದ ವರ್ಷಕ್ಕಿಂತ ಈ ಬಾರಿ ಇಲ್ಲಿಯೂ ಆವಕ ಹೆಚ್ಚಿದೆ. ಹಿಂದಿನ ವರ್ಷ ಕ್ವಿಂಟಲ್‌ಗೆ ರೂ 6-7 ಸಾವಿರ ಇದ್ದರೆ ಈ ಬಾರಿ  ಮೂರೂವರೆ ಸಾವಿರ ರೂ ದಾಟಿಲ್ಲ ಎಂಬುದು ವರ್ತಕರ ಅಳಲು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT