ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ ಸ್ಥಗಿತ-ಹೈಕೋರ್ಟ್ ಎಚ್ಚರಿಕೆ

Last Updated 15 ಫೆಬ್ರುವರಿ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ಮೂಲ ಸೌಕರ್ಯಗಳು ಇಲ್ಲದೇ ಬಳಲುತ್ತಿರುವ ನ್ಯಾಯಾಂಗ ಇಲಾಖೆಗೆ ಸೌಲಭ್ಯ ಕಲ್ಪಿಸದೇ ಹೋದರೆ ‘ಹಂಪಿ ಉತ್ಸವ’ವನ್ನು ಸ್ಥಗಿತಗೊಳಿಸುವಂತೆ ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮಂಗಳವಾರ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿನ ಅನೇಕ ಕೋರ್ಟ್‌ಗಳು ಬಾಡಿಗೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುರಿತು, ಇನ್ನು ಹಲವು ಕೋರ್ಟ್‌ಗಳಲ್ಲಿ ಸಿಬ್ಬಂದಿ ಕೊರತೆ ಇತ್ಯಾದಿಗಳ ಬಗ್ಗೆ ಹಲವಾರು ಬಾರಿ ಆದೇಶ ಹೊರಡಿಸಿದರೂ ಅದನ್ನು ಕಿವಿಮೇಲೆ ಹಾಕಿಕೊಳ್ಳದ ಸರ್ಕಾರದ ಕ್ರಮಕ್ಕೆ ಈ ರೀತಿಯಾಗಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಎಚ್ಚರಿಕೆ ನೀಡಿದೆ.

ಪಾರಂಪರಿಕ ತಾಣ ಹಂಪಿ ದೇವಾಲಯಗಳ ಸಮೀಪದಲ್ಲಿನ ಅಕ್ರಮ ಕಟ್ಟಡಗಳ ತೆರವಿಗೆ ಕೋರಿ ಕೊಟ್ಟೂರು ಸ್ವಾಮಿ ಕಲ್ಯಾಣ ಖೇಡ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳು ಈ ಎಚ್ಚರಿಕೆ ನೀಡಿದ್ದಾರೆ. ವಿಚಾರಣೆ ವೇಳೆ, ಪ್ರತಿ ವರ್ಷ ನಡೆಯುವ ಹಂಪಿ ಉತ್ಸವದತ್ತ ಮಾತು ಹೊರಳಿತು. ಈ ಉತ್ಸವಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿಗಳು ರಾಜ್ಯ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದರು.
ಹಂಪಿ ಉತ್ಸವಕ್ಕೆ ಕಳೆದ ಬಾರಿ 10 ಕೋಟಿ ಹಾಗೂ ಕೃಷ್ಣದೇವರಾಯನ 500ನೇ ಪಟ್ಟಾಭಿಷೇಕ ಮಹೋತ್ಸವಕ್ಕೆ 27 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ವಕೀಲರು ತಿಳಿಸಿದರು.

 ಇದನ್ನು ಕೇಳಿದ ನ್ಯಾಯಮೂರ್ತಿಗಳು ‘ಏನು? ಒಂದು ಉತ್ಸವಕ್ಕೆ ಖರ್ಚು ಮಾಡಲು ನಿಮ್ಮಲ್ಲಿ (ಸರ್ಕಾರದಲ್ಲಿ) ಇಷ್ಟೊಂದು ಹಣ ಇದೆಯೇ? ನ್ಯಾಯಾಂಗದ ವಿಷಯ ಬಂದಾಗ ಮಾತ್ರ ಒಂದು ಪೈಸೆಯನ್ನೂ ನೀವು ಬಿಚ್ಚುವುದಿಲ್ಲ ಅಲ್ಲವೆ, ಇನ್ನು ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ’ ಎಂದರು.

ರಾಜ್ಯ ಸರ್ಕಾರದ ಅಸಹಕಾರ:

ದೇವಾಲಯಗಳ ಸುತ್ತಲೂ ಅಕ್ರಮವಾಗಿ ವಾಸ ಆಗಿರುವವರನ್ನು ತೆರವುಗೊಳಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ವಿಚಾರಣೆ ವೇಳೆ ತಿಳಿಸಿತು.

ತೆರವು ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯದ ಜೊತೆ ಪತ್ರ ವ್ಯವಹಾರ ಮಾಡಿ ಸಾಕಾಗಿ ಹೋಗಿದೆ. ಆದರೆ ಸರ್ಕಾರ ಮೌನ ತಾಳಿದೆ. ಈ ಭಾಗದಲ್ಲಿನ ಕೆಲವು ಸ್ಥಳಗಳು ತಮ್ಮ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಅದು ರಾಜ್ಯ ಸರ್ಕಾರಕ್ಕೆ ಸೇರಿದೆ. ಆದರೆ ಅದರ ನಿರ್ಲಕ್ಷ್ಯದಿಂದ ತೆರವು ಕೆಲಸ ಮುಂದುವರಿಯುತ್ತಿಲ್ಲ ಎಂದು ಇಲಾಖೆ ಪರ ವಕೀಲರು ತಿಳಿಸಿದರು.

ಅವರು ಮೌಖಿಕವಾಗಿ ಈ ಮಾಹಿತಿ ನೀಡಿದ ಕಾರಣ, ಇದನ್ನು ಲಿಖಿತ ರೂಪದಲ್ಲಿ ನೀಡುವಂತೆ ನ್ಯಾಯಮೂರ್ತಿಗಳು ಸೂಚಿಸಿದರು.

ಸಭೆ ಸೇರಿ ಚರ್ಚೆ
ಅದರಂತೆ ಸಂಬಂಧಿತ ಅಧಿಕಾರಿಗಳು ಸಭೆ ನಡೆಸಿ ತೆರವು ಕಾರ್ಯವನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಚರ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ. ಇದಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ‘ಇಲ್ಲಿ ವಾಸಿಸುತ್ತಿರುವವರನ್ನು ಏಕಾಏಕಿ ಒಕ್ಕಲೆಬ್ಬಿಸುವುದು ಕಷ್ಟ. ಆದರೆ ಈ ಸ್ಥಳ ಖಾಲಿ ಮಾಡುವುದು ಅನಿವಾರ್ಯ ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ’ ಎಂದು ಪೀಠ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT