ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಒತ್ತುವರಿ ತೆರವು; ಬೀದಿಗೆ ಬಿದ್ದ ವ್ಯಾಪಾರಿಗಳು

Last Updated 11 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ದೇಶ- ವಿದೇಶಿ ಪ್ರವಾಸಿಗರಿಂದ ಸದಾ ಗಿಜಿಗುಡುತ್ತಿದ್ದ ಈ `ಜೀವಂತ ಪರಂಪರೆ~ ಎದುರಿನ ರಥಬೀದಿ ಇದೀಗ ಬಿಕೋ ಎನ್ನುತ್ತಿದ್ದು, ಅಲ್ಲೆಲ್ಲ ನೀರವ ಮೌನ ಆವರಿಸಿದೆ.

ಅಲ್ಲಿನ ಅಂಗಡಿ- ಮುಂಗಟ್ಟುಗಳನ್ನು ಒತ್ತುವರಿ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಲಾಗಿದೆ. ಶತ್ರುಪಡೆ ದಾಳಿಯಿಂದ  ನಾಶವಾಗಿರುವ ಕೋಟೆಯಂತೆ ಕಾಣುತ್ತಿರುವ ಆ ಬೀದಿ, ಜೀವಂತಿಕೆ ಕಳೆದುಕೊಂಡಿದೆ. ಇತಿಹಾಸ ಪ್ರಸಿದ್ಧ ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವಸ್ಥಾನದ ಎದುರು, ಐತಿಹಾಸಿಕ ಮಾರುಕಟ್ಟೆಯಿರುವ ಬೀದಿಗೆ ಒದಗಿಬಂದ ಸ್ಥಿತಿ ಇದು.

ವಿಜಯನಗರ ಸಾಮ್ರಾಜ್ಯದಲ್ಲಿ `ಮುತ್ತು- ರತ್ನಗಳನ್ನು ಸೇರು (ಬಳ್ಳ)ಗಳಲ್ಲಿ ಅಳೆದು ಮಾರುತ್ತಿದ್ದ ಮಾರುಕಟ್ಟೆ~ ಎಂಬ ಖ್ಯಾತಿಗೆ ಒಳಗಾಗಿದ್ದ ಈ ಬೀದಿ, `ತನ್ನತನ~ದಿಂದ ದೂರವಾಗಿದ್ದು, ಜನದಟ್ಟಣೆಯೇ ಇಲ್ಲದೆ, `ಜೀವಂತ ಪರಂಪರೆ~ ಎಂಬ ಖ್ಯಾತಿಯಿಂದ ದೂರ ಹೋಗುತ್ತಿರುವಂತೆ ಭಾಸವಾಗುತ್ತಿದೆ.

ತಲೆತಲಾಂತರದಿಂದ ಈ ಬೀದಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದ 250ಕ್ಕೂ ಹೆಚ್ಚು ಕುಟುಂಬಗಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಅಸ್ತಿತ್ವ ಕಳೆದುಕೊಂಡು ಚಿಂತೆಗೀಡಾಗಿವೆ. ಹಣ್ಣು, ಹೂವು, ಕಾಯಿ, ಕರ್ಪೂರ, ಕುಂಕುಮ, ವಿಭೂತಿ, ಬೆಂಡು-ಬತ್ತಾಸ್,  ಬಳೆ,  ದೇವರಫೋಟೊ, ಬಟ್ಟೆಬರೆ, ಅಲಂಕಾರಿಕ ವಸ್ತುಗಳ ಅಂಗಡಿ, ಹೋಟೆಲ್‌ಗಳ ನೂರಾರು ವ್ಯಾಪಾರಿಗಳ ಆರ್ತನಾದ ವಿರೂಪಾಕ್ಷನ ಸನ್ನಿಧಿ ಎದುರೇ ಮುಗಿಲು ಮುಟ್ಟಿದೆ.

ಹಂಪಿ ಹಾಗೂ ಸುತ್ತಮುತ್ತಲಿನ ಸ್ಮಾರಕಗಳನ್ನು ಒಳಗೊಂಡ ಒಟ್ಟು 41 ಚ.ಕಿ.ಮೀ ಪ್ರದೇಶವನ್ನು `ವಿಶ್ವಪರಂಪರೆ~ ಪಟ್ಟಿಗೆ ಸೇರಿಸಿದ್ದ ಯುನೆಸ್ಕೊ, ಇಲ್ಲಿನ ಸ್ಮಾರಕಗಳ ಅತಿಕ್ರಮಣ ಹಾಗೂ ಅಕ್ರಮ ಕಟ್ಟಡಗಳ ನಿರ್ಮಾಣದ ವಿರುದ್ಧ ದನಿ ಎತ್ತಿ, ಅದಕ್ಕೆ ನೀಡಿರುವ ಸ್ಥಾನಮಾನವನ್ನು ಹಿಂದಕ್ಕೆ ಪಡೆಯುವುದಾಗಿ 12 ವರ್ಷಗಳ ಹಿಂದೆಯೇ ಬೆದರಿಕೆ ಒಡ್ಡಿದ್ದರಿಂದ ಹಾಗೂ ಹೈಕೋರ್ಟ್ ಆದೇಶ ನೀಡಿದ್ದರಿಂದ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸುತ್ತದೆ.

ರಾಜ್ಯ ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಯಲ್ಲಿದ್ದ ವಿರೂಪಾಕ್ಷೇಶ್ವರ ದೇಗುಲ, ಎದುರಿನ ಸಾಲುಮಂಟಪ ಹಾಗೂ ರಥಬೀದಿ, ಎದುರುಬಸವಣ್ಣ ದೇಗುಲ  ಒಳಗೊಂಡ ಒಟ್ಟು 15.9 ಚ. ಕಿ.ಮೀ ಪ್ರದೇಶವನ್ನು ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆಗೆ 2003ರಲ್ಲಿಯೇ ಪ್ರಸ್ತಾವ ಸಲ್ಲಿಸಲಾಗಿದ್ದು, ಜಾರಿಗೆ ತರುವ ಮೊದಲ ಹಂತವಾಗಿ ಮಾರುಕಟ್ಟೆ ಕೆಡವಲಾಗಿದೆ.

ಮುಂಚೆ ತಿಳಿಸಲಿಲ್ಲ:`ಎಂಟು ದಿನಗಳ ಹಿಂದೆ ರಾತ್ರಿ ಮಳೆ ಸುರಿಯುತ್ತಿದ್ದಾಗ ಬಂದ ಅಧಿಕಾರಿಗಳು, ಅಂಗಡಿ ತೆರವುಗೊಳಿಸುವುದಾಗಿ ಹೇಳಿಹೋದರು. ವಿಚಾರ ಮಾಡಲೂ ಅವಕಾಶ ನೀಡದೆ ಬೆಳಿಗ್ಗೆ 9ಕ್ಕೆ ಜೆಸಿಬಿಗಳೊಂದಿಗೆ ಆಗಮಿಸಿ, ಅಂಗಡಿಗಳನ್ನು ಕೆಡವಿ ಬಿಸಾಕಿದರು. ನಾವು ಈಗ ಜೀವನೋಪಾಯಕ್ಕೆ ಏನು ಮಾಡುವುದು ಎಂಬುದೇ ಗೊತ್ತಾಗದೆ ಅದೇ ಜಾಗದಲ್ಲಿ ಜೀವಿಸುತ್ತಿದ್ದೇವೆ~ ಎಂದು ಹೋಟೆಲ್ ಹೊಂದಿದ್ದ ಕೇಶವರಾಮ್, ಬಟ್ಟೆ ಮಾರುತ್ತಿದ್ದ ಮಂಗಲ್ ಗುಜರಾತಿ ಅವರು `ಪ್ರಜಾವಾಣಿ~ ಪ್ರತಿನಿಧಿ ಎದುರು ಕಣ್ಣೀರು ಸುರಿಸಿದರು.

`ನಮ್ಮ ವ್ಯಾಪಾರ ಇರೋದೇ ಶ್ರಾವಣದ ಒಂದು ತಿಂಗಳು ಹಾಗೂ ಡಿಸೆಂಬರ್‌ನಿಂದ ಮಾರ್ಚ್‌ವರೆಗೆ. ಶ್ರಾವಣ ಮಾಸದ ಆರಂಭಕ್ಕೇ ನಮ್ಮನ್ನು ಒಕ್ಕಲೆಬ್ಬಿಸಿ, ದಿಕ್ಕು ತೋಚದಂತೆ ಮಾಡಿದ್ದಾರೆ. ವಿದೇಶಿ ಪ್ರವಾಸಿಗರನ್ನು ಸುಲಿದು ಹಣ ಸಂಪಾದಿಸಿದ್ದೇವೆ ಎಂಬ ಆರೋಪವೂ ನಮ್ಮ ಮೇಲಿದೆ. ಆದರೆ, ಅದು ವಾಸ್ತವಕ್ಕೆ ದೂರ. ವಿದೇಶಿ ಪ್ರವಾಸಿಗರು ಚೌಕಾಶಿ ಮಾಡುವುದರಲ್ಲಿ ನಿಸ್ಸೀಮರಾಗಿದ್ದು, ಇಲ್ಲಿನ ಪ್ರವಾಸಗರೇ ನಮಗೆ ಜೀವಾಳ~ ಎಂದು ಸ್ಟೇಷನರಿ, ಬಳೆ, ಬಟ್ಟೆ ಅಂಗಡಿ, ಚಹದಂಗಡಿ ಇಟ್ಟುಕೊಂಡಿರುವ ತಿಪ್ಪಮ್ಮ, ಸುಜಾತಾ, ಶಶಿಕಲಾ, ಸಕ್ಕೂಬಾಯಿ, ಈರಮ್ಮ, ವಹೀದಾ ಬೇಗಂ ಮತ್ತಿತರರು ಹೇಳುತ್ತಾರೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಅದು ಯಾವಾಗ ಎಂಬುದನ್ನು ಹೇಳಿಲ್ಲ.

ಸ್ಮಾರಕಕ್ಕೆ ಧಕ್ಕೆ: ಒತ್ತುವರಿ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಕೆಲವು ಸಾಲು ಮಂಟಪ ಹಾಗೂ ಸ್ಮಾರಕಗಳಿಗೆ ಭಾಗಶಃ ಧಕ್ಕೆ ಆಗಿದೆ. ಅನೇಕ ವ್ಯಾಪಾರಿಗಳು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂಬ ಆತಂಕವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ್ ಒಳಗೊಂಡಂತೆ ಅನೇಕರು ವ್ಯಕ್ತಪಡಿಸಿದ್ದು, ಯಂತ್ರಗಳನ್ನು ಬಳಸಿ ತೆರವು ಮಾಡಿದ್ದೇ ಇದಕ್ಕೆ ಕಾರಣ ಎಂದಿದ್ದಾರೆ.

ಹಣ್ಣುಕಾಯಿಗೆ ಅವಕಾಶ: ಸಾಲು ಮಂಟಪಗಳಿಗೆ, ವಿರೂಪಾಕ್ಷೇಶ್ವರ ದೇಗುಲದ ಎದುರಿನ ರಸ್ತೆಗೆ ಮೂಲ ಸ್ವರೂಪ ನೀಡುವ ಉದ್ದೇಶದಿಂದ ಉತ್ಖನನ ನಡೆಸಲಾಗುವುದು. ಅಲ್ಲದೆ, ಮಂಟಪಗಳಲ್ಲಿ ಹೂವು, ಹಣ್ಣು, ಕಾಯಿ, ಕರ್ಪೂರ, ಕುಂಕುಮ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವಲಯದ ಮುಖ್ಯಸ್ಥ ನರಸಿಂಹನ್ ತಿಳಿಸುತ್ತಾರೆ.

ಕೆಲವೇ ದಿನಗಳಲ್ಲಿ ಹಂಪಿಯ ಸೌಂದರ್ಯ ಇನ್ನಷ್ಟು ವೃದ್ಧಿಸಲಿದೆ. ಇದೀಗ ಒತ್ತುವರಿ ತೆರವು ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಪುನರ್ವಸತಿಗಾಗಿ ರೂ 5 ಕೋಟಿ ಕೊಡುವ ಭರವಸೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಹೇಳುತ್ತಾರೆ.

ಸಂಪೂರ್ಣ ತೆರವು ಸದ್ಯಕ್ಕಿಲ್ಲ
ಹೊಸಪೇಟೆ: ಹಂಪಿಯ ರಥಬೀದಿ ತೆರವು ಕಾರ್ಯಾಚರಣೆ ಮಾತ್ರ ಇಲಾಖೆಯ ಮುಂದಿದ್ದು ಹಂಪಿಯ ಸಂಪೂರ್ಣ ತೆರವು ಪ್ರಸ್ತಾವ ಸದ್ಯಕ್ಕಿಲ್ಲ ಎಂದು ಕೇಂದ್ರ ಪುರಾತತ್ವ ಇಲಾಖೆಯ ಬೆಂಗಳೂರು ವೃತ್ತ ಸೂಪರಿಂಟೆಂಡೆಂಟ್ ಜೆ.ಎಸ್.ನರಸಿಂಹನ್ ತಿಳಿಸಿದರು. 

ಬುಧವಾರ ತಮ್ಮ  ತಂಡದೊಂದಿಗೆ ಹಂಪಿ ರಥಬೀದಿ ತೆರವು ಕಾರ್ಯಾಚರಣೆಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ರಥಬೀದಿಯ ಗತಕಾಲದ ವೈಭವ ಮತ್ತೆ ಕಾಣುವಂತೆ ಮಾಡುವ ಉದ್ದೇಶದಿಂದ ಅಕ್ರಮವನ್ನು ತೆರವು ಮಾಡಲಾಗಿದೆ. ಮೊದಲು ಇವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ನಂತರ ಸಂಪೂರ್ಣ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ತಿಳಿಸಿದರು.

ವಿರೂಪಾಕ್ಷ ದೇಗುಲ ಸೇರಿ ಸುತ್ತಲ 15.9 ಎಕರೆ ಪ್ರದೇಶವನ್ನು 2003ರಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ನೀಡಿತ್ತಾದರೂ ಅಧಿಕೃತವಾಗಿ ಹಸ್ತಾಂತರವಾಗಿರಲಿಲ್ಲ. ಈಗ ಈ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರಥಬೀದಿಯ ನಿರ್ವಹಣೆಗೆ ಇಲಾಖೆ ಮುಂದಾಗಲಿದೆ ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT