ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ನೋಡಿ ಖುಷಿಪಟ್ಟಿದ್ದ ಒಡೆಯರ್

Last Updated 12 ಡಿಸೆಂಬರ್ 2013, 8:33 IST
ಅಕ್ಷರ ಗಾತ್ರ

ಹೊಸಪೇಟೆ: ಮೈಸೂರಿನ ಶ್ರೀಕಂಠದತ್ತ ಒಡೆಯರ್‌ ಅವರ ಹಂಪಿ ಭೇಟಿ ಅವಿಸ್ಮರಣೀಯ. 2011ರ ಮಾರ್ಚ್‌ 8ರಂದು ಮೊದಲ ಬಾರಿಗೆ ಭೇಟಿ ನೀಡಿದ್ದ ಅವರು ನಂತರ 2011ರ ನವೆಂಬರ್‌ 19ರಂದು ಮತ್ತೆ ಬಂದಿದ್ದರು. ಅವರೊಂದಿಗೆ ಪತ್ನಿ ಪ್ರಮೋದಾದೇವಿ ಅವರೂ ಇದ್ದರು.

ಎರಡು ದಿನಗಳ ಕಾಲ ಹಂಪಿಯ ಸ್ಮಾರಕಗಳನ್ನು ಕಣ್ತುಂಬ ನೋಡಿದ ಶ್ರೀಕಂಠದತ್ತ ಒಡೆಯರ್‌ ಹೆಚ್ಚು ಖುಷಿಪಟ್ಟಿದ್ದರು. ಅಂದು ಮಧ್ಯಾಹ್ನ 3 ಗಂಟೆಗೆ ಆಗಮಿಸಿದ ಶ್ರೀಕಂಠದತ್ತ ಒಡೆಯರ್‌ ಅವರು, ಕಮಲ ಮಹಲ್‌, ರಾಣಿಯರ ಸ್ನಾನಗೃಹ, ಮಹಾನವಮಿ ದಿಬ್ಬ ಮತ್ತಿತರ ಸ್ಮಾರಕಗಳನ್ನು ಸಂಜೆ 6 ಗಂಟೆಯವರೆಗೂ ವೀಕ್ಷಿಸಿ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಿದ್ದರು.

ಮರುದಿನ ಬೆಳಿಗ್ಗೆ 9.30 ಗಂಟೆಗೆ ಹಂಪಿಯ ವಿರೂಪಾಕ್ಷೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದರು. ದೇವಸ್ಥಾನದ ಆವರಣದಲ್ಲಿದ್ದ ಆನೆ ಪಾದ ಒಡೆದಿದ್ದನ್ನು ಗಮನಿಸಿದ ಒಡೆಯರ್‌ ಅವರು ಮಾವುತನಿಗೆ ಔಷಧಿ ಹಚ್ಚಲು ಹೇಳಿದ್ದರು. ಜತೆಗೆ ಸಹಾಯಕನಿಂದ 5 ಕೆ.ಜಿ. ಬೆಲ್ಲ ತರಿಸಿ ಆನೆಗೆ ತಿನಿಸಿ ಪ್ರಾಣಿ ಪ್ರೀತಿ ಮೆರೆದಿದ್ದರು.

ನಂತರ ಅಲ್ಲಿಂದ ಕೃಷ್ಣ ದೇವಸ್ಥಾನ, ಕಡಲೆ ಕಾಳು ಹಾಗೂ ಸಾಸುವೆಕಾಳು ಗಣಪ ಸ್ಮಾರಕಗಳನ್ನು ನೋಡಿಕೊಂಡು ವಿಜಯ ವಿಠಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಊಟ ಮುಗಿಸಿ ದರೋಜಿ ಕರಡಿ ಧಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರೊಂದಿಗೆ ಕೆಲವು ಕ್ಷಣ ಕಳೆದ ಉಪನ್ಯಾಸಕ ಸಮದ್‌ ಕೊಟ್ಟೂರ, ‘ಶ್ರೀಕಂಠದತ್ತ ಒಡೆಯರ್ ರಾಜಮನೆತನದವರಾಗಿದ್ದರೂ ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಸಮೀಪ­ದಿಂದ ಕರಡಿಗಳನ್ನು ನೋಡಿದ ಅವರು ಕೆಲವು ಕ್ಷಣ ನಲಿದಾಡಿದ್ದರು. ಅವರದ್ದು ಮಗುವಿನಂಥ ಮನಸ್ಸು’ ಎಂದು ನೆನಪಿಸಿಕೊಂಡಿದ್ದಾರೆ.

ಹಂಪಿ ಭೇಟಿಯ ವೇಳೆ ಅವರೊಂದಿಗೆ ಇದ್ದ ರಾಜ್ಯ ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಟಿ.ಗಂಗಾಧರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಶ್ರೀಕಂಠದತ್ತ ಒಡೆಯರ್‌ ಎರಡನೇ ಬಾರಿ ಹಂಪಿಗೆ ಭೇಟಿ ನೀಡಿದಾಗ ಎರಡು ದಿನ ಅವರೊಟ್ಟಿಗೆ ಇದ್ದೆ. ಈ ಸಂದರ್ಭದಲ್ಲಿ ಹಂಪಿಯ ವಿವಿಧ ಸ್ಮಾರಕಗಳನ್ನು ನೋಡಿ ಅವರು ಹೆಚ್ಚು ಖುಷಿ ಪಟ್ಟಿದ್ದರು. ವಿರೂಪಾಕ್ಷೇಶ್ವರ ದೇವಸ್ಥಾನದ ಆನೆ ಸ್ಥಿತಿ ನೋಡಿ ಮರುಕ ಪಟ್ಟಿದ್ದರು. ಈ ಘಟನೆ ಇನ್ನೂ ನನ್ನ ಕಟ್ಟಿದಂತಿದೆ’ ಎಂದು ನೆನಪಿಸಿಕೊಂಡರು.

ಸಂತಾಪ: ಒಡೆಯರ್‌ ಅವರ ನಿಧನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ವಿಕಾಸ ಯುವಕ ಸಂಘದ ಅಧ್ಯಕ್ಷ ಎಂ.ಶಂಕರ್‌ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT