ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಗಳ ಚಿಲಿಪಿಲಿ ಇಲ್ಲ; ಯಂತ್ರಗಳ ಆರ್ಭಟವೇ ಎಲ್ಲ

Last Updated 20 ಜನವರಿ 2011, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ದಕ್ಷಿಣ ಭಾಗದ ಜನತೆಯನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕಾಮಗಾರಿಗಳ ಸಾಲಿಗೆ ‘ಮೆಟ್ರೊ’ ರೈಲು ಕಾಮಗಾರಿ ಕೂಡ ಸೇರಿದೆ. ಸಾಕಷ್ಟು ಹಸಿರು ಪ್ರದೇಶದಲ್ಲೇ ನಿರ್ಮಾಣವಾಗುತ್ತಿರುವ ಈ ಕಾಮಗಾರಿಯಿಂದ ವಾಹನ ಚಾಲಕರು ಮತ್ತು ಸ್ಥಳೀಯರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಇತ್ತೀಚೆಗೆ ವಾಹನ ಸಂಚಾರವೂ ಕಡಿಮೆಯಾಗಿದೆ.

ಕೆ.ಆರ್.ರಸ್ತೆಯಿಂದ ಆರ್.ವಿ.ರಸ್ತೆ ಮಾರ್ಗವಾಗಿ ಜಯನಗರ 8ನೇ ಬ್ಲಾಕ್ ಬಳಿಯ ಸಂಗಮ್ ವೃತ್ತದವರೆಗೆ ‘ಮೆಟ್ರೊ’ ರೈಲು ಹಾದು ಹೋಗಿರುವ ಮಾರ್ಗದಲ್ಲಿನ ಸಂಚಾರ ನಿಜಕ್ಕೂ ತ್ರಾಸದಾಯಕ. ಈ ಮಾರ್ಗದ ರಸ್ತೆಗಳಲ್ಲಿ ‘ಟೇಕ್ ಡೈವರ್ಷನ್’ (ತಿರುವು ಪಡೆಯಿರಿ) ಎಂಬ ದಪ್ಪ ಇಂಗ್ಲಿಷ್ ಅಕ್ಷರದ ಸೂಚನಾ ಫಲಕಗಳದ್ದೇ ಕಾರುಬಾರು.

ಜಯನಗರ 6 ಮತ್ತು 8ನೇ ಬ್ಲಾಕ್ ನಡುವಿನ 4ನೇ ಮುಖ್ಯರಸ್ತೆಯಲ್ಲಿ ಅಂದರೆ ಸೌತ್‌ಎಂಡ್ ವೃತ್ತದಿಂದ ರಾಜಲಕ್ಷ್ಮಿ ಕಲ್ಯಾಣ ಮಂಟಪದವರೆಗಿನ ರಸ್ತೆಯಲ್ಲಿ ಮೆಟ್ರೊ ರೈಲು ಹಾದು ಹೋಗುತ್ತದೆ. ಇದು ಮುಂದೆ ಕನಕಪುರ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ಎರಡು ನಿಲ್ದಾಣಗಳು ತಲೆಯೆತ್ತಲಿವೆ.

ಎರಡೂ ಬದಿಯಲ್ಲಿನ ಲಕ್ಷ್ಮಣ ರಾವ್ ಉದ್ಯಾನದ ನಡುವಿನ ರಸ್ತೆಯಲ್ಲಿ ಈ ಹಿಂದೆ ವಾಹನ ಸಂಚಾರ ಹಾಯೆನಿಸುವ ಅನುಭವ ನೀಡುತ್ತಿತ್ತು. ದೊಡ್ಡ ಮರ- ಗಿಡಗಳ ನಡುವೆ ತೂರಿಬರುತ್ತಿದ್ದ ಸೂರ್ಯ ರಶ್ಮಿಯ ಹಾದಿಯಲ್ಲಿನ ಸಂಚಾರ ಮುದ ನೀಡುತ್ತಿತ್ತು. ಆದರೆ ಮೆಟ್ರೊ ಕಾಮಗಾರಿ ಆರಂಭವಾಗಿದ್ದೇ ತಡ ಈ ಸೊಬಗಿಗೆ ಚ್ಯುತಿ ಬರಲಾರಂಭಿಸಿತು.

ಹಕ್ಕಿಗಳ ಚಿಲಿಪಿಲಿ ಕೂಗು ಮರೆಯಾಗಿ ಜೆಸಿಬಿ ಯಂತ್ರಗಳ ಆರ್ಭಟ ಜೋರಾಗಿದೆ. ಅಲಂಕಾರಿಕ ಹೂಗಳು, ಮಕ್ಕಳ ಆಟೋಟಕ್ಕೆ ಅಗತ್ಯವಾದ ಉಪಕರಣಗಳಿರಬೇಕಾದ ಸ್ಥಳದಲ್ಲಿ ಭಾರಿ ಗಾತ್ರದ ಕ್ರೇನ್ ಯಂತ್ರಗಳು, ಭೂಮಿ ಕೊರೆಯುವ ಟ್ರಾಕ್ಟರ್‌ಗಳು, ಟಿಪ್ಪರ್ ಲಾರಿಗಳು ಬೀಡುಬಿಟ್ಟಿವೆ. ಹಸಿರು ಉಡುಗೆ ತೊಟ್ಟಂತೆ ಕಾಣುತ್ತಿದ್ದ ಗಿಡ- ಮರದ ಎಲೆಗಳು ದೂಳು ಹಿಡಿದು ಕೆಂಪು ಬಣ್ಣಕ್ಕೆ ತಿರುಗಿವೆ.

ರಾಜಲಕ್ಷ್ಮಿ ಕಲ್ಯಾಣ ಮಂಟಪದ ಕಡೆಯಿಂದ 4ನೇ ಮುಖ್ಯರಸ್ತೆ ಪ್ರವೇಶಿಸಿದರೆ ಎಡ ಭಾಗದಲ್ಲಿರುವ ಉದ್ಯಾನದ ಒಂದು ಭಾಗದಲ್ಲಿ ರೈಲು ಹಳಿ ಹಾದು ಹೋಗುತ್ತದೆ. ಆ ಭಾಗದಲ್ಲಿ ಉಕ್ಕಿನ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಅದರ ಮಗ್ಗುಲಲ್ಲೇ ಮಕ್ಕಳ ಆಟಕ್ಕೆ ಅಳವಡಿಸಲಾಗಿರುವ ಉಪಕರಣಗಳು ಬಳಕೆಯಿಂದ ದೂರ ಉಳಿದಿವೆ. ಸ್ವಲ್ಪ ದೂರ ಮಾತ್ರ 4ನೇ ಮುಖ್ಯರಸ್ತೆ ಸಂಚರಿಸಲು ಅವಕಾಶವಿದ್ದು, ಬಳಿಕ 3ನೇ ಮುಖ್ಯರಸ್ತೆಯಲ್ಲಿ ಚಲಿಸಬೇಕಾಗುತ್ತದೆ.

ಎರಡೂ ಬದಿಯಲ್ಲೂ ಉದ್ಯಾನದ ಪ್ರದೇಶವನ್ನು ಸಾಕಷ್ಟು ಬಳಸಿಕೊಳ್ಳಲಾಗಿದೆ. ತಗಡಿನ ಶೀಟುಗಳ ತಡೆಗೋಡೆ ನಿರ್ಮಿಸಿ, ಉಪಕರಣಗಳನ್ನು ಪೇರಿಸಿಡಲಾಗಿದೆ. ಸೌತ್‌ಎಂಡ್ ವೃತ್ತದಿಂದ ರಾಜಲಕ್ಷ್ಮಿ ಕಲ್ಯಾಣ ಮಂಟಪದ ಕಡೆಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಆದರೆ ಏಕಕಾಲಕ್ಕೆ ಒಂದು ಬಸ್ಸು ಮಾತ್ರ ಸಂಚರಿಸಬಹುದಾಗಿದೆ. ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಎಷ್ಟೇ ನಿಧಾನವಾಗಿ ಚಲಿಸಿದರೂ ದೂಳು ಏಳುತ್ತದೆ. ಅಲ್ಲಲ್ಲಿ ಕಾಂಕ್ರಿಟ್, ಮಣ್ಣುಗುಡ್ಡೆ ಹಾಕಲಾಗಿದ್ದು, ವಾಹನ ಸವಾರರು ತೊಂದರೆ ಪಡುವಂತಾಗಿದೆ. ಸದ್ಯ ಬಿಎಂಟಿಸಿ ಬಸ್ಸುಗಳು ಇದೇ ಮಾರ್ಗದಲ್ಲಿ ಚಲಿಸುತ್ತಿವೆ. ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ಇತ್ತೀಚೆಗೆ ಕಡಿಮೆಯಾಗಿದೆ.

ಸೌತ್‌ಎಂಡ್ ವೃತ್ತದಿಂದ ಲಾಲ್‌ಬಾಗ್ ಪಶ್ಚಿಮ ದ್ವಾರದವರೆಗಿನ ರಸ್ತೆಯಲ್ಲಿಯೂ ‘ಮೆಟ್ರೊ’ ಕಾಮಗಾರಿ ಭರದಿಂದ ಸಾಗಿದ್ದು, ರಸ್ತೆ ಹದಗೆಟ್ಟಿದೆ. ಜೆಸಿಬಿ ಯಂತ್ರಗಳು ರಸ್ತೆಯನ್ನು ಕೊರೆದಿರುವುದು ಹಾಗೆಯೇ ಉಳಿದಿದ್ದು, ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಅಲ್ಲಲ್ಲಿ ಪರ್ಯಾಯ ರಸ್ತೆಗಳಲ್ಲಿ ಚಲಿಸಬೇಕಾಗುತ್ತದೆ.

ಈ ಭಾಗದಲ್ಲಿ ಪ್ರತಿಷ್ಠಿತ ಶಾಲಾ- ಕಾಲೇಜುಗಳಿವೆ. ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜು, ವಿಜಯಾ ಕಾಲೇಜು, ಬಿ.ಎಚ್.ಎಸ್. ಪ್ರೌಢಶಾಲೆ, ಆರ್.ವಿ. ಶಿಕ್ಷಕರ ಕಾಲೇಜು, ಸುರಾನ ಕಾಲೇಜು, ನ್ಯಾಷನಲ್ ಕಾಲೇಜು (ಜಯನಗರ) ಸೇರಿದಂತೆ ಸಾಕಷ್ಟು ಶಿಕ್ಷಣ ಸಂಸ್ಥೆಗಳಿವೆ. ಮೆಟ್ರೊ ಕಾಮಗಾರಿ ಆರಂಭವಾದಾಗಿನಿಂದ ವಿದ್ಯಾರ್ಥಿಗಳು ತೊಂದರೆ ಪಡುವಂತಾಗಿದೆ.

ಲಾಲ್‌ಬಾಗ್ ಪಶ್ಚಿಮ ದ್ವಾರದಿಂದ ಕೆ.ಆರ್.ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿಯೂ ಮೆಟ್ರೊ ಕಾಮಗಾರಿ ನಡೆದಿದೆ. ಈ ರಸ್ತೆಯ ಒಂದು ಬದಿಯಲ್ಲಿ ಇತ್ತೀಚೆಗೆ ಡಾಂಬರು ಹಾಕಿರುವುದು ವಾಹನ ಸವಾರರಿಗೆ ತುಸು ನೆಮ್ಮದಿ ತಂದಿದೆ. ಆದರೆ ಇನ್ನೊಂದು ಬದಿಯ (ವಾಸವಿ ಕಾಲೇಜು ಮುಂಭಾಗ) ರಸ್ತೆ ಅಧ್ವಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT