ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಗಾಗಿ ಹೋರಾಡಲು ಸಲಹೆ

Last Updated 11 ಅಕ್ಟೋಬರ್ 2011, 6:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 26 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಸತಿ ಮತ್ತು ನಿವೇಶನ ಸೌಲಭ್ಯಗಳಿಂದ ವಂಚಿತರಾಗಿದ್ದು, ಜಿಲ್ಲೆಯ   ಆರು ತಾಲ್ಲೂಕುಗಳಲ್ಲೂ ಸಾಕಷ್ಟು ಜನರು  ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಸತಿ ಮತ್ತು ನಿವೇಶನ ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಇದಕ್ಕಾಗಿ ಹೋರಾಟ ನಡೆಸಬೇಕಿದೆ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಸಿ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.

ತಾಲ್ಲೂಕಿನ ಕಮ್ಮಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ವಸತಿ ಮತ್ತು ನಿವೇಶನಕ್ಕಾಗಿ ಗ್ರಾಮಸ್ಥರು ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, `ದೇಶಕ್ಕೆ ಸ್ವಾತಂತ್ರ್ಯ ಬಂದರೂ ಲಕ್ಷಾಂತರ ಮಂದಿಗೆ ಇನ್ನೂ ಸಮರ್ಪಕವಾದ ಮೂಲಸೌಕರ್ಯಗಳು ದೊರೆತಿಲ್ಲ. ಸಂಕಷ್ಟದಲ್ಲೇ ಜೀವನ ನಡೆಸುತ್ತಿದ್ದಾರೆ~ ಎಂದರು.
 

`ವಸತಿ, ನಿವೇಶನ ಮತ್ತು ಮೂಲಸೌಕರ್ಯಗಳನ್ನು ಪೂರೈಸಬೇಕಿದ್ದ ಸರ್ಕಾರ ತನ್ನ ಕರ್ತವ್ಯಗಳಿಂದ ವಿಮುಖವಾಗುತ್ತಿದೆ. ಶ್ರೀಮಂತರಿಗೆ, ಉದ್ಯಮಿಗಳಿಗೆ ಮತ್ತು ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆಗಟ್ಟಲೇ ಜಮೀನು ನೀಡುವ ಸರ್ಕಾರ ಪುಟ್ಟದಾದ ಮನೆಯನ್ನು ಕಟ್ಟಿಕೊಳ್ಳುವಷ್ಟು ನಿವೇಶನವನ್ನು ಬಡವರಿಗೆ ನೀಡುವುದಿಲ್ಲ. ಮನೆಗಳನ್ನೂ ಕಟ್ಟಿಸಿಕೊಡುವುದಿಲ್ಲ~ ಎಂದು ಆರೋಪಿಸಿದರು.

`ಬಡವರಿಗೆ ಮತ್ತು ಅರ್ಹರಿಗೆ ವಸತಿ, ನಿವೇಶನ ಸೌಕರ್ಯಗಳನ್ನು ಕಲ್ಪಸುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಅವರು ಬೇರೆಯದ್ದೇ ಉತ್ತರ ನೀಡುತ್ತಾರೆ. ಇಡೀ ಜಿಲ್ಲೆಯಲ್ಲಿ 300 ಮಂದಿಗೆ ಮಾತ್ರವೇ ನಿವೇಶನವಿಲ್ಲ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ. ಜಿಲ್ಲೆಯಲ್ಲಿ ಲಕ್ಷಾಂತರ ಜನರು ವಾಸಿಸುತ್ತಿದ್ದರೂ ಅವರಿಗೆ ಬಡವರು, ಅಸಹಾಯಕರು ಕಾಣಿಸುವುದಿಲ್ಲವೇ~ ಎಂದು ಅವರು ಪ್ರಶ್ನಿಸಿದರು.
 

`ತಪ್ಪು ಮಾಹಿತಿ ನೀಡುತ್ತಿರುವ ಸರ್ಕಾರಕ್ಕೆ ಎಚ್ಚರಿಕೆ ನೀಡಲೆಂದೇ ಗ್ರಾಮಸ್ಥರಿಂದ ಅರ್ಜಿ ಸಲ್ಲಿಸುವ ಹೋರಾಟಕ್ಕೆ ಚಾಲನೆ ನೀಡಿದ್ದೇವೆ. ಬಾಗೇಪಲ್ಲಿ ತಾಲ್ಲೂಕಿನ 24 ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ ಏಳು ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸುವ ಕಾರ್ಯ ಪೂರ್ಣಗೊಂಡಿದೆ.

ಈವರೆಗೆ 22 ಸಾವಿರಕ್ಕೂ ಹೆಚ್ಚಿನ ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲೂ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲಾಗುವುದು~ ಎಂದು ತಿಳಿಸಿದರು.
 

`ಬಹುತೇಕ ಮಂದಿ ಗುಡಿಸಲು ಮತ್ತು ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಸಮೀಕ್ಷೆಗೆಂದು ಮನೆಗಳಿಗೆ ಭೇಟಿ ನೀಡುವ ಅಧಿಕಾರಿಗಳು ಅವುಗಳನ್ನೇ ಮನೆಗಳೆಂದು ಪರಿಗಣಿಸುತ್ತಾರೆ. ಅತ್ಯಂತ ಕಿರಿದಾದ ಮನೆಗಳಲ್ಲಿ ಏಳರಿಂದ ಎಂಟು ಜನರು ಹೇಗೆ ಇರಲು ಸಾಧ್ಯ ಎಂಬುದನ್ನು ಯೋಚಿಸುವುದಿಲ್ಲ. ಒಂದೇ ಮನೆಯಲ್ಲಿ ಎರಡರಿಂದ ಮೂರು ಕುಟುಂಬಗಳು ಹೇಗೆ ವಾಸಿಸಲು ಸಾಧ್ಯ ಎಂಬುದರ ಬಗ್ಗೆ ಕಲ್ಪನೆ ಕೂಡ ಮಾಡುವುದಿಲ್ಲ. ಶೌಚಾಲಯಗಳನ್ನು ಕಟ್ಟಿಕೊಳ್ಳುವಂತೆ ಸೂಚಿಸುತ್ತಾರೆ. ಆದರೆ ಸ್ಥಳಾವಕಾಶ ಮತ್ತು ಅನುದಾನ ನೀಡುವುದಿಲ್ಲ~ ಎಂದು ಟೀಕಿಸಿದರು.

`ಸರ್ಕಾರ 12 ಮತ್ತು 22 ಅಡಿಗಳಷ್ಟು ನಿವೇಶನ ನೀಡುವುದರ ಬದಲು 30 ರಿಂದ 40 ಅಡಿಗಳಷ್ಟು ನಿವೇಶನಗಳನ್ನು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ಒಂದೂವರೆ ಲಕ್ಷ ರೂಪಾಯಿ ಮತ್ತು ನಗರ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ಮೂರು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಬೇಕು~ ಎಂದು ಶ್ರೀರಾಮರೆಡ್ಡಿ ಒತ್ತಾಯಿಸಿದರು.

ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಗೋಪಿನಾಥ್, ಸಿಐಟಿಯು ಸಂಘಟನೆಯ ಮುಖಂಡ ಸಿದ್ದಗಂಗಪ್ಪ, ಕರ್ನಾಟಕ ಪ್ರಾಂತ ಕೃಷಿಕೂಲಿಕಾರರ ಸಂಘದ ನಾಗರಾಜ, ಕೇಶವಾರ ಶ್ರೀನಿವಾಸ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT