ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಚ್ಯುತಿ ವಿರುದ್ಧ ನ್ಯಾಯಾಂಗ ಮೊರೆ

ಸರ್ಕಾರಿ ಜಮೀನು ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರ ಗುಟುರು
Last Updated 5 ಆಗಸ್ಟ್ 2013, 15:29 IST
ಅಕ್ಷರ ಗಾತ್ರ

ಬೆಂಗಳೂರು: ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಹಕ್ಕುಚ್ಯುತಿ ಅಸ್ತ್ರವನ್ನು ತಮ್ಮ ವಿರುದ್ಧ ದುರ್ಬಳಕೆ ಮಾಡುವ ಯತ್ನ ನಡೆದರೆ ನ್ಯಾಯಾಂಗದ ಮೊರೆ ಹೋಗುವುದಾಗಿ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆ  ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಅವರು ತಿಳಿಸಿದ್ದಾರೆ.

ಸರ್ಕಾರಿ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದ ಬಾಲಸುಬ್ರಮಣಿಯನ್ ವಿರುದ್ಧ ಶಾಸಕರಾದ ಕೆ.ಆರ್.ರಮೇಶ್‌ಕುಮಾರ್ ಮತ್ತು ಇತರರು ಜುಲೈ 23ರಂದು ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಪ್ರಸ್ತಾವ ಮಂಡಿಸಿದ್ದರು. ಬಳಿಕ ವಿಧಾನ ಪರಿಷತ್‌ನಲ್ಲೂ ಪ್ರಸ್ತಾವ ಮಂಡನೆಯಾಗಿತ್ತು. ಉಭಯ ಸದನಗಳಲ್ಲೂ ಈ ಪ್ರಸ್ತಾವವನ್ನು ಹಕ್ಕುಚ್ಯುತಿ ಸಮಿತಿಗಳಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಭಾನುವಾರ ಲಿಖಿತ ಹೇಳಿಕೆ ನೀಡಿರುವ ಅವರು, `ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಅವಕಾಶ ಆಗುವಂತೆ ಯಾರೂ ನಡೆದುಕೊಳ್ಳಬಾರದು' ಎಂದಿದ್ದಾರೆ.

`ಸಂವಿಧಾನವು ಅವಕಾಶ ಕಲ್ಪಿಸಿರುವ ಸಂಸದೀಯ ಹಕ್ಕುಚ್ಯುತಿ ಅಧಿಕಾರವನ್ನು ನಾನು ಗೌರವಿಸುತ್ತೇನೆ. ಇದೇ ವೇಳೆ ಹಕ್ಕುಚ್ಯುತಿ ಅಧಿಕಾರದ ದುರ್ಬಳಕೆ ಕುರಿತು ಪರಿಶೀಲಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ ಎಂಬುದನ್ನೂ ಒಪ್ಪುತ್ತೇನೆ.

ನಾನು ಪತ್ರಿಕೆಗೆ ನೀಡಿರುವ ಸಂದರ್ಶನವನ್ನು ಆಧರಿಸಿ ವಿಚಾರಣೆಗೆ ಹಾಜರಾಗುವಂತೆ ನನಗೆ ಆದೇಶ ನೀಡುವುದು ಕಾನೂನುಬಾಹಿರ ನಡೆಯಾಗುತ್ತದೆ ಎಂದು ಕಾನೂನುತಜ್ಞರು ನನಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಅಂತಹ ಸಂದರ್ಭ ಎದುರಾದರೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸುವುದಕ್ಕೂ ಅವಕಾಶವಿದೆ. ಆದರೆ, ಅಂತಹ ಬೆಳವಣಿಗೆಗಳಿಗೆ ಯಾರೂ ಅವಕಾಶ ನೀಡಲಾರರು ಎಂಬ ವಿಶ್ವಾಸವಿದೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

`ಶಾಸಕಾಂಗದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ವರದಿಯಲ್ಲಿನ ಶಿಫಾರಸುಗಳಲ್ಲೂ ಅದು ಸ್ಪಷ್ಟವಾಗಿ ವ್ಯಕ್ತವಾಗಿದೆ. ಸರ್ಕಾರಿ ಜಮೀನುಗಳ ಕಬಳಿಕೆ ತಡೆಯಲು ಮತ್ತು ಒತ್ತುವರಿ ತೆರವು ಮಾಡುವುದಕ್ಕಾಗಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅರ್ಜಿಗಳ ಸಮಿತಿಯ ಮಾದರಿಯಲ್ಲಿ ಶಾಶ್ವತವಾದ ಸದನ ಸಮಿತಿ ಅಸ್ತಿತ್ವದಲ್ಲಿ ಇರಬೇಕು ಎಂಬ ಶಿಫಾರಸನ್ನು ಮಾಡಿದ್ದೆ. ಶಾಸಕಾಂಗದ ಗೌರವ ಮತ್ತು ಘನತೆ ಎತ್ತಿ ಹಿಡಿಯಲು ನಾನು ಕಾರ್ಯಪ್ರವೃತ್ತನಾಗಿದ್ದೆ ಎಂಬುದಕ್ಕೆ ಇದು ಸಾಕ್ಷ್ಯ ಒದಗಿಸುತ್ತದೆ' ಎಂದು ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟಾಚಾರ- ಸಮಾಜಕ್ಕೆ ಮಾರಕವಾದ ಪಿಡುಗು: `ಭ್ರಷ್ಟಾಚಾರ ನಮ್ಮ ಸಮಾಜಕ್ಕೆ ಮಾರಕವಾಗಿರುವ ಒಂದು ಪಿಡುಗು. ಯಾವುದೇ ವ್ಯಕ್ತಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದಕ್ಕೆ ದೇಶದ ಕಾನೂನು ಹಾಗೂ ಜಗತ್ತಿನ ವಿವಿಧ ರಾಷ್ಟ್ರಗಳ ಕಾನೂನುಗಳು ಅವಕಾಶ ಕಲ್ಪಿಸುತ್ತವೆ.

ಭ್ರಷ್ಟಾಚಾರದ ವಿಷಯದಲ್ಲಿ ಯಾರೊಬ್ಬರೂ ಅಸ್ಪಷ್ಟವಾಗಿ, ಆಧಾರರಹಿತವಾಗಿ ಮಾತನಾಡಲು ಸಾಧ್ಯವಿಲ್ಲ. ಭವಿಷ್ಯದ ಪೀಳಿಗೆಯನ್ನು ಬಲವಾಗಿ ಕಾಡಬಲ್ಲ ಭೂಕಬಳಿಕೆಯ ಕುರಿತು ನಾನು ಮಾತನಾಡಿದ್ದೇನೆ. ರಾಜ್ಯದ ಸಾರ್ವಜನಿಕ ಜಮೀನು ಮತ್ತು ಸಾಮಾನ್ಯ ಜನರಿಗೆ ಸಂಬಂಧಿಸಿದ ವಿಷಯ ಮಾತನಾಡಿದ್ದೇನೆ. ನಾನು ಜೀವವಿಜ್ಞಾನ ಅಥವಾ ರಸಾಯನ ವಿಜ್ಞಾನದ ಕುರಿತು ಉಪನ್ಯಾಸ ನೀಡಿಲ್ಲ' ಎಂದು ಕಟುವಾಗಿ ತಿರುಗೇಟು ನೀಡಿದ್ದಾರೆ.

ಅರ್ಥವಾಗದ ವರ್ತನೆ: ತಾವು ಹಿಂದೆ ಸಲ್ಲಿಸಿದ್ದ ವರದಿಗಳಲ್ಲಿ ಇದ್ದ ಅಂಶಗಳನ್ನೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲೂ ಪ್ರಸ್ತಾಪಿಸಲಾಗಿತ್ತು. ಎರಡು ವರ್ಷಗಳ ಹಿಂದೆಯೇ ವರದಿ ಪ್ರಕಟಿಸಿದ್ದು, ಸಾರ್ವಜನಿಕ ಚರ್ಚೆಯಲ್ಲಿ ಇರುವ ವರದಿಯಲ್ಲಿನ ಅಂಶಗಳನ್ನು ಮತ್ತೆ ಪ್ರಸ್ತಾಪಿಸುವುದು ಶಾಸಕಾಂಗದ ನಿರ್ದಿಷ್ಟ ಸದಸ್ಯರ ಘನತೆಯನ್ನು ಕುಂದಿಸುವಂತಹುದಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ.

ಅಲ್ಲದೇ ತಾವು ನೀಡಿರುವ ಸಂದರ್ಶನ ನೇರಪ್ರಸಾರ ಅಥವಾ ಪತ್ರಿಕಾಗೋಷ್ಠಿ ಆಗಿರಲಿಲ್ಲ. ಒಬ್ಬ ಪತ್ರಕರ್ತರಿಗೆ ತಮ್ಮ ಮನೆಯಲ್ಲೇ ನೀಡಿದ್ದ ಸಂದರ್ಶನ ಅದು. ಪ್ರಕಟಣೆಗೂ ಒಂದು ತಿಂಗಳ ಮುಂಚಿತವಾಗಿ ಈ ಸಂದರ್ಶನ ನೀಡಲಾಗಿತ್ತು ಎಂದು ಬಾಲಸುಬ್ರಮಣಿಯನ್ ಹೇಳಿದ್ದಾರೆ.

ಭೂ ಕಬಳಿಕೆ ರಾಜ್ಯದ ಪಾಲಿಗೆ ದೊಡ್ಡ ಸವಾಲಾಗಿರುವ ವಿಷಯ. ರಾಜ್ಯದಲ್ಲಿ ರೂ.1.95 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 11 ಲಕ್ಷ ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲೇ 96,000 ಎಕರೆ ಸರ್ಕಾರಿ ಜಮೀನು ಕಬಳಿಕೆಯಾಗಿದೆ. ಇದರ ಮೌಲ್ಯ ರೂ.1 ಲಕ್ಷ ಕೋಟಿಗೂ ಹೆಚ್ಚಿದೆ. ಸರ್ಕಾರದ ಅಧಿಕಾರಿಗಳು, ಪ್ರಭಾವಿ ನಾಯಕರು, ಭೂ ಮಾಫಿಯಾ ಮತ್ತು ಭೂ ಮಾಲೀಕರು ಕೈಜೋಡಿಸದೇ ಇಷ್ಟೊಂದು ದೊಡ್ಡ ಪ್ರಮಾಣದ ಭೂಕಬಳಿಕೆ ನಡೆಯಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯದಲ್ಲಿ ಭೂ ಕಬಳಿಕೆ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನು ಕಬಳಿಕೆ ಕುರಿತು ತನಿಖೆ ನಡೆಸಲು 2006ರಲ್ಲಿ ಆಗಿನ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚಿಸಲಾಗಿತ್ತು. ತಮ್ಮನ್ನು ಸಮಿತಿಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಸಮಿತಿಯು ಎರಡು ವರದಿಗಳನ್ನು ಸಲ್ಲಿಸಿತ್ತು. ರಾಜ್ಯವ್ಯಾಪಿ ನಡೆದಿರುವ ಭೂ ಕಬಳಿಕೆ ಪತ್ತೆಗೆ 2009ರಲ್ಲಿ ಕಾರ್ಯಪಡೆ ರಚಿಸಲಾಯಿತು.

ಅದಕ್ಕೆ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. 2011ರ ಜೂನ್‌ನಲ್ಲಿ ಕಾರ್ಯಪಡೆಯನ್ನು ವಿಸರ್ಜಿಸಲಾಯಿತು. ಜಂಟಿ ಸದನ ಸಮಿತಿ ಮತ್ತು ಕಾರ್ಯಪಡೆಯ ವರದಿಗಳಲ್ಲಿ, ಪ್ರಭಾವಿ ವ್ಯಕ್ತಿಗಳು ಮಾಡಿರುವ ಭೂ ಕಬಳಿಕೆಯನ್ನು ಅಧಿಕಾರಿಗಳು ಹೇಗೆ ರಕ್ಷಿಸುತ್ತಿದ್ದಾರೆ ಎಂಬುದಕ್ಕೆ ಖಚಿತವಾದ ಆಧಾರಗಳನ್ನೂ ಒದಗಿಸಲಾಗಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT