ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ ಹಸ್ತಾಂತರ

Last Updated 7 ಫೆಬ್ರುವರಿ 2011, 10:35 IST
ಅಕ್ಷರ ಗಾತ್ರ

ಸವಣೂರ: ಪ್ರತಿಭಟನೆಯ ಮೂಲಕ ರಾಜ್ಯದ ಗಮನವನ್ನು ಸೆಳೆದಿದ್ದ ಸವಣೂರಿನ ಭಂಗಿ ಕುಟುಂಬಗಳ ಪುನರ್ವಸತಿಗಾಗಿ ಜಿಲ್ಲಾಡಳಿತ ನಿರ್ಮಿಸಿರುವ 9 ಮನೆಗಳನ್ನು ಸಚಿವ ಬಸವರಾಜ ಬೊಮ್ಮಾಯಿ ಫಲಾನುಭವಿ ಕುಟುಂಬಗಳಿಗೆ ಹಸ್ತಾಂತರಿಸಿದರು.ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ವಸತಿ ಸಮುಚ್ಛಯವನ್ನು ಉದ್ಘಾಟಿಸಿದ ಸಚಿವರು, ತಾಲ್ಲೂಕಿಗೆ ಅಂಟಿಕೊಂಡಿದ್ದ ಕಳಂಕವನ್ನು ತೊಡೆದುಹಾಕುವಲ್ಲಿ ಸರಕಾರ ತನ್ನ ಬದ್ಧತೆಯನ್ನು ತೋರಿದೆ ಎಂದರು.

ಭಂಗಿ ಕುಟುಂಬದ ನೊಂದ ಕುಟುಂಬದವರಿಗೆ ಸಾಂತ್ವನದೊಂದಿಗೆ, ಬದುಕಿನ ಆಸರೆ ನೀಡಲಾಗಿದೆ. ಇಂದು ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ತೋರಲಾಗಿರುವ ಎಲ್ಲ ಪ್ರಯತ್ನಗಳಿಗೆ ಜಯ ಲಭಿಸಿದೆ. ಮಾನವೀಯ ದೃಷ್ಟಿಕೋನದೊಂದಿಗೆ ಅತ್ಯಂತ ವೇಗದಲ್ಲಿ ಜಿಲ್ಲಾಡಳಿತ ಮನೆಗಳನ್ನು ನಿರ್ಮಿಸಿದ್ದು, ವಾಜಪೇಯಿ ಆಶ್ರಯ ಯೋಜನೆಯ ಅಡಿ ತಲಾ 1.60 ಲಕ್ಷ ರೂಪಾಯಿ ವೆಚ್ಚದಲ್ಲಿ 9 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ವಿದ್ಯುತ್, ನೀರು ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಈ ಮನೆಗಳಿಗೆ ನೀಡಲಾಗುತ್ತದೆ ಎಂದರು.

ಭಂಗಿ ಕುಟುಂಬಗಳ ಸ್ವಾಭಿಮಾನದ ಬದುಕಿಗಾಗಿ ಆರೋಗ್ಯಕರ ವಾತಾವರಣ ರೂಪಿಸಲಾಗಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಭವಿಷ್ಯದ ಅಡಿಪಾಯ ಹಾಕಲಾಗಿದೆ.ಅವರ ಮೂಲ ವಾಸಸ್ಥಳದ ಹಕ್ಕು ಪತ್ರವನ್ನೂ ನೀಡಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ಹುದ್ದೆಗಳನ್ನೂ ಕಾಯಂಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.ಇದರೊಂದಿಗೆ ನಗರದ ಎಲ್ಲ ಸಮುದಾಯ ಗಳಲ್ಲಿರುವ ಬಡ ಕುಟುಂಬಗಳಿಗೂ ಸ್ವಂತ ನೆಲೆಯನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ನಗರದ ಸಂಪರ್ಕ ರಸ್ತೆ, ಶಿಕ್ಷಣ, ಸಂಸ್ಕೃತಿ, ಆರೋಗ್ಯ, ಮೂಲಸೌಲಭ್ಯ, ಕುಡಿಯುವ ನೀರು ಮೊದಲಾದ ಕ್ಷೇತ್ರಗಳಲ್ಲಿ ಮಾಡಲಾಗಿರುವ ಸಾಧನೆ ಹಾಗೂ ಗುರಿಗಳನ್ನು ವಿವರಿಸಿದ ಸಚಿವ ಬಸವರಾಜ ಬೊಮ್ಮಾಯಿ, ಜನತೆ ಸಂಪೂರ್ಣ ಸಹಕಾರ ನೀಡಿದಲ್ಲಿ ನಗರದ ಚಿತ್ರಣವನ್ನೇ ಬದಲಾಯಿಸಲು ಸಾಧ್ಯ ಎಂದರು.ಕಾರ್ಯಕ್ರಮದ ಅಡಿ ಭಂಗಿ ಕುಟುಂಬದ ಫಲಾನುಭವಿಗಳಿಗೆ ಮನೆಗಳ ಹಂಚಿಕೆ, ಆಟೋ ರಿಕ್ಷಾ ವಿತರಣೆ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ನಿಶ್ಚಿತ ಠೇವಣಿಯ ಪ್ರಮಾಣಪತ್ರವನ್ನು ಸಚಿವರು ವಿತರಿಸಿದರು. ಉಪವಿಭಾಗಾಧಿಕಾರಿ ಕೆ.ಪಿ ಮೋಹನರಾಜ್, ಪುರಸಭೆಯ ಅಧ್ಯಕ್ಷ ಶಂಕರ ದೊಡ್ಮನಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT