ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಚ್ಚ ಹಸಿರು ಎಲೆ; ಇದು ಪಿಳಿಪಿಸರೆ!

Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮಳೆ ತನ್ನ ಆರ್ಭಟ ತೋರಿಸುತ್ತಿದೆ. ರಾಯಚೂರು ಜಿಲ್ಲೆಯಲ್ಲಿಯೂ ಈ ಸಲ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಹಂಗಾಮಿಗೆ ರೈತ ಸಜ್ಜುಗೊಳ್ಳುತ್ತಿದ್ದಾನೆ. ಜೊತೆಗೆ ಜಿಲ್ಲೆಯ ಸಿಂಧನೂರು ತಾಲೂಕಿನ ಕೃಷಿ ಜಮೀನಿನಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ರೈತರು ರಸಗೊಬ್ಬರದ ಜೊತೆಗೆ ಪಿಳಿಪಿಸರೆ ಹಸಿರೆಲೇ ಗೊಬ್ಬರ ಬೀಜಕ್ಕೆ ತಡಕಾಡುತ್ತಿದ್ದಾರೆ.

ರಾಯಚೂರು ಜಿಲ್ಲೆಗೆ ನೀರಾವರಿ ಸೌಕರ್ಯ ಬಂದ ಮೇಲೆ ದೇಸಿ ತಳಿ ಭತ್ತದ ಜಾಗದಲ್ಲಿ ರಸಗೊಬ್ಬರ, ಕೀಟನಾಶಕ ಬೇಡುವ ಸುಧಾರಿತ ತಳಿಗಳು ಬಂದವು. ವರ್ಷದ ಆರೆಂಟು ತಿಂಗಳು ಗದ್ದೆಯಲ್ಲಿ ನೀರು ನಿಂತಿರುತ್ತದೆ. ಸುಧಾರಿತ ತಳಿಗೆ ಬಳಸಿದ ರಾಸಾಯನಿಕ ಗೊಬ್ಬರ, ಅತಿಯಾದ ಕೀಟನಾಶಕ ನಿಂತ ನೀರಿಗೆ ಸೇರುತ್ತದೆ.

ಹೀಗೆ ನಿಂತ ನೀರಿನಿಂದ ಭೂಮಿ ಕ್ಷಾರ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ಇಂತಹ ಜಮೀನುಗಳಲ್ಲಿ ಕೃಷಿ ಲಾಭದಾಯಕವಾಗುತ್ತಿಲ್ಲ. ಈ ಸಮಸ್ಯಾತ್ಮಕ ಮಣ್ಣನ್ನು ಫಲತ್ತಾಗಿಸಲು ರೈತರು ಹಲವಾರು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗ ಸಿಂಧನೂರು ತಾಲ್ಲೂಕಿನ ರೈತರು, ಮಣ್ಣಿನಲ್ಲಿನ ಕ್ಷಾರವನ್ನು ಕಡಿಮೆ ಮಾಡಲು ಮತ್ತು ಮಣ್ಣನ್ನು ಫಲವತ್ತಾಗಿಸಲು ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹೊಂಗೆ ಸೊಪ್ಪನ್ನು ಗದ್ದೆಗೆ ಮಿಶ್ರ ಮಾಡುತ್ತಿದ್ದಾರೆ. ಅವುಗಳಲ್ಲಿ ಪಿಳಿಪಿಸರೆ ಹಸಿರೆಲೆ ಗೊಬ್ಬರಕ್ಕೆ ಪ್ರಾಶಸ್ತ್ಯ.

ಏನಿದು ಪಿಳಿಪಿಸರೆ
ಪಿಳಿಪಿಸರೆ ಒಂದು ಸಸ್ಯ. ಈ ಸಸ್ಯ ನೋಡಲು ಹೆಸರು ಕಾಳಿನ ಬಳ್ಳಿಯಂತಿರುತ್ತದೆ. ಒಣಗಿದ ಮೇಲೂ ಹೆಸರು ಅಥವಾ ಅಲಸಂದೆ ಕಾಳಿನ ಗೊನೆ ಹಾಗೆ ತೆನೆ ಕಟ್ಟಿರುತ್ತದೆ. ಭತ್ತದ ಗದ್ದೆಯಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತದೆ.

ಇಳುವರಿಯೂ ಹೆಚ್ಚು. ಮಣ್ಣಿಗೆ ಪೋಷಕಾಂಶ ಒದಗಿಸುವ ಈ ಸಸ್ಯ ಭತ್ತದ ಗದ್ದೆಯಲ್ಲಿ ಕಳೆ ನಿಯಂತ್ರಿಸುತ್ತದೆ. ಎರೆಗೊಬ್ಬರ, ಅಜೋಲಾ ಜೊತೆಗೆ ಮಿಶ್ರಿತ ಗೊಬ್ಬರವಾಗಿಯೂ ಬಳಸುತ್ತಾರೆ. ಹೀಗೆ ಬಳಸುವುದರಿಂದ ಬೆಳೆಗಳಲ್ಲಿ ಇಳುವರಿ ಹೆಚ್ಚಾಗುವದರ ಜೊತೆಗೆ ಭೂಮಿಯ ಫಲವತ್ತತೆಯೂ ಹೆಚ್ಚಾಗುತ್ತದೆ ಎನ್ನುತ್ತಾರೆ ಕೃಷಿಕ ಹೊಸಳ್ಳಿ ಕ್ಯಾಂಪ್ ರೈತ ಚಿದಾನಂದಪ್ಪ ಅಂಗಡಿ.

ಭತ್ತದ ಗದ್ದೆಗಳಲ್ಲಿ ಸಸಿ ನಾಟಿ ಮಾಡಿದ ಮೇಲೆ ಪಿಳಿಪಿಸರೆ ಬೀಜ ಹರಡುವುದು ಸಾಮಾನ್ಯ. ಆದರೆ ಭತ್ತ ನಾಟಿಗಿಂತ ಹತ್ತು ದಿನ ಮೊದಲೇ ಗದ್ದೆಗಳಲ್ಲಿ ಪಿಳಿಪಿಸರೆ ಬೀಜ ಹರಡಿದರೆ ಸಸಿ ಬೆಳೆಯಲು ಅನುಕೂಲವಾಗುತ್ತದೆ. ಸಸಿ ಬೆಳೆದು ಗದ್ದೆ ತುಂಬಾ ಚಾದರದಂತೆ ಹರಡಿಕೊಳ್ಳುತ್ತದೆ. ಹೀಗೆ ಹರಡಿಕೊಳ್ಳುವುದರಿಂದ ಸೂರ್ಯನ ಬೆಳಕು ಮಣ್ಣಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ. ಕಳೆ ಬೀಜಗಳು ಮೊಳೆಯುವುದಿಲ್ಲ. ಮೊಳೆತ ಬೀಜಗಳು ಸುಟುರಿಕೊಂಡು ಹಣ್ಣಾಗಿ ಸಾಯುತ್ತವೆ. ಹೀಗಾಗಿ ಭತ್ತದ ಗದ್ದೆಯಲ್ಲಿ ಕಳೆ ನಿಯಂತ್ರಣಕ್ಕೆ ಬರುತ್ತದೆ.  

ಪಿಳಿಪಿಸರೆ ಬೀಜ
ಇಲ್ಲಿಯ ಕೆಲವು ರೈತರಿಗೆ ಎರಡನೇ ಸಲ ಭತ್ತ ನಾಟಿ ಮಾಡಲು ಅವಶ್ಯಕ ನೀರು ಸಿಗಲಿಲ್ಲ. ಆದರೂ ಹಟ ಬಿಡದ ರೈತರು ಭತ್ತ ನಾಟಿ ಕೈಗೊಂಡರು. ಜೊತೆಗೆ ಗದ್ದೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಳಿಪಿಸರೆ ಹಸಿರೆಲೆ ಗೊಬ್ಬರ ಬೆಳೆಸಿದ್ದಾರೆ. ಪಿಳಿಪಿಸರೆ ಹಸಿರೆಲೆ ಅತೀ ಕಡಿಮೆ ನೀರಿನಲ್ಲಿಯೂ ಬೆಳೆಯುತ್ತದೆ. ಭತ್ತ ಬೆಳೆಯದಿದ್ದರೂ ಪಿಳಿಪಿಸರೆ ಹಸಿರೆಲೆ ಬೆಳೆದರೆ ಲಾಭದಾಯಕ ಮತ್ತು ಭೂಮಿಯೂ ಒಣಗುವುದಿಲ್ಲ.

ಒಂದು ಎಕರೆಯಲ್ಲಿ ಪಿಳಿಪಿಸರೆ ಬೆಳೆಯಲು 12 ರಿಂದ 15 ಕೆಜಿ ಬೀಜ ಬೇಕು. ಅವಶ್ಯಕ ಪ್ರಮಾಣದಲ್ಲಿ ನೀರು ಇದ್ದರೆ ಎಕರೆಗೆ 4 ರಿಂದ 5 ಕ್ವಿಂಟಾಲ್ ಇಳುವರಿ ಬರುತ್ತದೆ. ಕಡಿಮೆ ನೀರು ದೊರೆತರೆ 3 ರಿಂದ 4 ಕ್ವಿಂಟಾಲ್ ಬೆಳೆಯುತ್ತದೆ. ಜಿಲ್ಲೆಯಲ್ಲಿ ಉತ್ತಮ ಮಳೆ ಬೀಳುತ್ತಿದೆ. ಕ್ಷಾರ ಮಣ್ಣಿಗೆ ಬೇಕಾದ ಪಿಳಿಪಿಸರೆ ಹಸಿರೆಲೆಯ ಬೀಜವನ್ನು ಅರಸಿಕೊಂಡು ರೈತರು ಹೋಗುತ್ತಿದ್ದಾರೆ.

ಪಿಳಿಪಿಸರೆ ಬೆಳೆದ ರೈತರು ಒಂದು ಕ್ವಿಂಟಾಲ್‌ಗೆ 4800 ರಿಂದ 5000 ರೂಪಾಯಿ ದರ ನಿಗದಿ ಮಾಡಿದ್ದಾರೆ. ಭತ್ತದಲ್ಲಿ ಕಳೆದುಕೊಂಡ ಆದಾಯವನ್ನು ಹಸಿರೆಲೆ ಮೂಲಕ ಗಳಿಸುತ್ತಿದ್ದಾರೆ. ಮಣ್ಣು ನಿರ್ವಹಣೆ, ಹಸಿರೆಲೆ ಗೊಬ್ಬರಕ್ಕೆ ನೆಲದ ಮಕ್ಕಳು ಹೋರಾಟ ನಡೆಸಿದ್ದರೆ, ಸರಕಾರ ಒಂದು ರೂಪಾಯಿಗೆ ಕೆಜಿ ಅಕ್ಕಿ ವಿತರಿಸಲು ಹೊರಟಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT