ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೆ ಹೋರಾಟ ಕಾರ್ಪೊರೇಟ್ ಕಪಿಮುಷ್ಠಿಯಲ್ಲಿ

Last Updated 26 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಅಣ್ಣಾ ಹಜಾರೆ ನಿಲುವುಗಳು ಸಾತ್ವಿಕವಾಗಿದ್ದರೂ ಅವರ ಹೋರಾಟ ಕಾರ್ಪೊರೇಟ್ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿದೆ~ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಸಂಕ್ರಮಣ ಪ್ರಕಾಶನ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ಜೂನ್ 75 ಮಾರ್ಚ್ 77~ ಹಾಗೂ `26 ದಿನ 25 ರಾತ್ರಿ~ ತುರ್ತು ಪರಿಸ್ಥಿತಿಯ ದಿನಗಳನ್ನು ಮೆಲುಕು ಹಾಕುವ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ನಡೆಸುತ್ತಿರುವ ಹೋರಾಟ ಅನೇಕ ಕಾರಣಗಳಿಂದ ಪ್ರಮುಖವಾದುದು. ಆದರೆ ಕಾರ್ಪೊರೇಟ್ ಹಿತಾಸಕ್ತಿಗಳು ಹೋರಾಟಕ್ಕೆ ಧನ ಸಹಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ಪ್ರಶ್ನೆಗಳು ಹುಟ್ಟುತ್ತವೆ~ ಎಂದರು.

`ಪ್ರಧಾನ ಮಂತ್ರಿ, ನ್ಯಾಯಾಧೀಶರು ಸೇರಿದಂತೆ ಅನೇಕರನ್ನು ಲೋಕಪಾಲ್ ಮಸೂದೆ ವ್ಯಾಪ್ತಿಗೆ ಒಳಪಡಿಸುವ ಪ್ರಸ್ತಾವನೆ ಇದೆ. ಆದರೆ ಇದರಿಂದ ಸ್ವತಂತ್ರ್ಯವಾಗಿ ಕಾರ್ಯ ನಿರ್ವಹಣೆ ಸಾಧ್ಯವಾಗುವುದಿಲ್ಲ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಮೂಲೆಗುಂಪಾಗುವ ಸಾಧ್ಯತೆ ಇದೆ~ ಎಂದು ಹೇಳಿದರು.

ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಮಾತನಾಡುತ್ತಾ, `ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಜಯಪ್ರಕಾಶ್ ನಾರಾಯಣ ಅವರು ಇನ್ನೂ ಒಂದು ದಶಕ ಬದುಕಬೇಕಿತ್ತು. ಆಗ ದೇಶದ ಚಿತ್ರಣವೇ ಬದಲಾಗುತ್ತಿತ್ತು. ಸಾಮಾಜಿಕ, ರಾಜಕೀಯ ಸಮಸ್ಯೆಗಳಿಗೆ ಪರಿಹಾರ ದೊರೆತು ಯುವಕರಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತಿತ್ತು~ ಎಂದು ಹೇಳಿದರು.

`ತುರ್ತು ಪರಿಸ್ಥಿತಿಯ ದಿನಗಳು ಕರಾಳವಾಗಿದ್ದವು. ಆದರೆ ಅದನ್ನು ನಾನು ಖುಷಿಯಿಂದಲೇ ಅನುಭವಿಸಿದೆ. ನಾಡಿನ ಅನೇಕ ಮುಖಂಡರು ಅಪಾಯದ ಸನ್ನಿವೇಶಗಳನ್ನು ಎದುರಿಸಿದರು. ಅದೆಲ್ಲವನ್ನೂ ನನ್ನ ಆತ್ಮಕಥೆಯಲ್ಲಿ ದಾಖಲಿಸುವೆ~ ಎಂದರು.

`ತುರ್ತು ಪರಿಸ್ಥಿತಿ ನಂತರ ಇಂದಿರಾ ಗಾಂಧಿ ಅವರು ಚುನಾವಣೆಯನ್ನು ಘೋಷಿಸಿದರು. ವಿರೋಧದ ಅಲೆ ಇದ್ದರೂ ಅವರು ಚುನಾವಣೆ ಘೋಷಿಸಿದ್ದು ಏಕೆ ಎಂಬ ಪ್ರಶ್ನೆ ಕಾಡುತ್ತದೆ. ಕೊನೆಗೆ ಚುನಾವಣೆಯಲ್ಲಿ ಅವರು ಸೋಲನುಭವಿಸಬೇಕಾಯಿತು~ ಎಂದು ಮೆಲುಕು ಹಾಕಿದರು.

ಕಾರ್ಯಕ್ರಮಕ್ಕೆ ಮುನ್ನ ಇತ್ತೀಚಿಗೆ ನಿಧನ ಹೊಂದಿದ ಸಮಾಜವಾದಿ ಚಿಂತಕ ನೀಲಗಂಗಯ್ಯ ಪೂಜಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರೊ.ಚಂದ್ರಶೇಖರ ಪಾಟೀಲ, ಶೂದ್ರ ಶ್ರೀನಿವಾಸ್, ಮಹಾಬಲೇಶ್ವರ ಕಾಟಹಳ್ಳಿ, ಎಸ್.ಶಿವಾನಂದ, ಬಿ.ರಾಜಣ್ಣ ತುರ್ತು ಪರಿಸ್ಥಿತಿಯ ಪ್ರಾತಿನಿಧಿಕ ಕವನಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT