ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೆಗೆ ಸುಪ್ರೀಂನೋಟಿಸ್

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಐಎಎನ್‌ಎಸ್): ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ತಮ್ಮ ಹಿಂದ್ ಸ್ವರಾಜ್ ಟ್ರಸ್ಟ್‌ಗೆ ನೀಡಿದ ಅನುದಾನವನ್ನು ಅನ್ಯ ಉದ್ದೇಶಕ್ಕಾಗಿ ಬಳಸಿದ್ದಾರೆ ಎಂಬ ಆರೋಪ ಕುರಿತಂತೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು  ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆಗೆ ಅಂಗಿಕರಿಸಿದೆ. ಈ ಬಗ್ಗೆ ಅಣ್ಣಾ, ಮಹಾರಾಷ್ಟ್ರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ವಕೀಲ ಮನೋಹರಲಾಲ್ ಶರ್ಮಾ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೇಲೆ ನ್ಯಾಯಮೂರ್ತಿ ಅಫ್ತಾಬ್ ಆಲಂ ಮತ್ತು ರಂಜನಾ ದೇಸಾಯಿ ನೇತೃತ್ವದ ಪೀಠ ಈ ನೋಟಿಸ್ ಜಾರಿಗೊಳಿಸಿದೆ.

 ಟ್ರಸ್ಟ್‌ಗೆ ನೀಡಿದ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದು ಸ್ಪಷ್ಟವಾಗಿದೆ. ಸಾವಂತ್ ಆಯೋಗ ಕೂಡಾ ಇದನ್ನು 2005ರಲ್ಲೇ ಹೇಳಿದೆ. ಆದರೆ ಇಲ್ಲಿಯವರೆಗೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕಪಾರ್ಟ್‌ನಿಂದ ಟ್ರಸ್ಟ್ ಅಕ್ರಮವಾಗಿ ಕೋಟಿಗಟ್ಟಲೆ ಹಣ ಪಡೆದುಕೊಂಡಿದೆ. `ಕಪಾರ್ಟ್‌ನಿಂದ ಅಣ್ಣಾ 1995ರಲ್ಲಿ 75 ಲಕ್ಷ ಹಣ ಪಡೆದಿದ್ದರು. 2001ರಲ್ಲಿ ಕಪಾರ್ಟ್ ಗ್ರಾಮೀಣ ಆರೋಗ್ಯದ ಹೆಸರಿನಲ್ಲಿ ಅಣ್ಣಾ ಅವರಿಗೆ 5 ಕೋಟಿ ರೂ ಬಿಡುಗಡೆ ಮಾಡಿತ್ತು. ಸೂಕ್ತ ತನಿಖೆ ನಡೆಸಿದಲ್ಲಿ ಮಾತ್ರ ಎಷ್ಟು ಹಣವನ್ನು ಪಡೆಯಲಾಗಿದೆ ಎಂಬ ಬಗ್ಗೆ ಗೊತ್ತಾಗುವುದು~ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಣ್ಣಾ ನಿಷ್ಕಳಂಕಿತ: ಮೇಧಾ
ಅಣ್ಣಾ ಹಜಾರೆ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ತಳ್ಳಿ ಹಾಕಿರುವ ನರ್ಮದಾ ಬಚಾವೊ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್, ಅಣ್ಣಾ ಅವರು ನಿಷ್ಕಳಂಕ ವ್ಯಕ್ತಿ ಮತ್ತು ಯಾವುದೇ ತನಿಖೆಗೆ ಸಿದ್ಧವಿದ್ದಾರೆ ಎಂದಿದ್ದಾರೆ.

ಅವರ ವಿರುದ್ಧ ವಿನಾಕಾರಣ ಹಲವಾರು ಆರೋಪಗಳು ಕೇಳಿ ಬಂದಿವೆ. ಆದರೆ ಅವುಗಳು ಸಾಬೀತಾಗಿಲ್ಲ. ಅಣ್ಣಾ ಭ್ರಷ್ಟರಲ್ಲ ಎಂಬುದು ಎಲ್ಲರಿಗೂ ಗೊತ್ತು ಎಂದು ಮೇಧಾ ಹೇಳಿದರು.

ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ವಿಚಾರಣೆ ನಡೆಸಿದ್ದು, ಆಗ ಯಾವುದೂ ಬೆಳಕಿಗೆ ಬಂದಿಲ್ಲ ಎಂದು  ಹೇಳಿದ್ದಾರೆ.
ಅಣ್ಣಾ ವಿರುದ್ಧ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೋಟಿಸ್ ನೀಡಿದ ಬಳಿಕ ಮೇಧಾ ಅವರ ಈ ಹೇಳಿಕೆ ಹೊರ ಬಿದ್ದಿದೆ. `ನರ್ಮದಾ ಬಚಾವೋ ಆಂದೋಲನದ ವೇಳೆ ನಮಗೂ ಇಂಥ ಅನುಭವವಾಗಿದೆ. ಈ ರೀತಿಯ ರಾಜಕೀಯ ಆರೋಪಗಳನ್ನು ನಾವೂ ನೋಡಿದ್ದೇವೆ~  ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT