ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೆಗೇಕೆ ಬಿಲ್ಲು?

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹಬ್ಬದ ಹರಟೆಕಟ್ಟೆ ಸಭೆ ಸೇರಿತ್ತು. ಎಲ್ಲರೂ ದೀಪಾವಳಿ ಸಡಗರದಲ್ಲಿದ್ದರು. `ಇನ್ನೇನಪ್ಪ, ದೀಪಾವಳಿ ಬಂತಲ್ಲ, ಹೇಳಿ ಕೇಳಿ ಬೆಳಕಿನ ಹಬ್ಬ. ಆದ್ರೆ ಇದೇ ಟೈಮಿಗೆ ಕರೆಂಟ್ ಇಲ್ದೆ ಕರ್ನಾಟಕದ ತುಂಬ ಕತ್ತಲು. ಹೆಂಗೆ ಹಬ್ಬ ಮಾಡೋದು?~ ಎನ್ನುತ್ತ ದುಬ್ಬೀರ ಹರಟೆಗೆ ಚಾಲನೆ ನೀಡಿದ.

`ಹೆಂಗೆ ಅಂದ್ರೆ? ಶೋಭಕ್ಕನ ಮನೆಗೆ ಹೋಗಿ ಹಬ್ಬ ಮಾಡೋದಪ್ಪ. ಹೆಂಗೂ ಕರೆಂಟ್ ಮಂತ್ರಿ ಮನೇಲಿ ಕರೆಂಟ್ ಇದ್ದೇ ಇರುತ್ತಲ್ಲ....~ ಗುಡ್ಡೆ ನಕ್ಕ.

`ಅದೂ ನಿಜ ಅನ್ನು. ಹಬ್ಬಕ್ಕೆ ಬರ‌್ತೀವಿ ಅಂದ್ರೆ ಪಾಪ ಶೋಭಕ್ಕ ಬೇಡ ಅಂತಾರಾ? ಆದ್ರೆ ಬರುವಾಗ ಒಂದೊಂದ್ ಚೀಲ ಕಲ್ಲಿದ್ದಲು ಹಿಡ್ಕಂಡ್ ಬನ್ನಿ ಅಂತಾರೆ ಅಷ್ಟೆ....~ ತೆಪರೇಸಿ ನಗುತ್ತ ದನಿಗೂಡಿಸಿದ.

`ಅಲ್ಲಲೇ, ಅಲ್ಲಿ ತೆಲಂಗಾಣ ಹತ್ತಿ ಉರುದ್ರೆ ಇಲ್ಲಿ ಕರ್ನಾಟಕದಲ್ಲಿ ಕತ್ತಲು. ಇಲ್ಲಿ ಕಾವೇರಿಯಲ್ಲಿ ನೀರಿಲ್ಲ ಅಂದ್ರೆ ಅಲ್ಲಿ ತಮಿಳುನಾಡಿನಲ್ಲಿ ಗದ್ದಲ. ಇದೊಳ್ಳೆ ಕತೆಯಾಯ್ತಪ್ಪ.....~ ಪರಮೇಶಿ ಬೇಸರ ವ್ಯಕ್ತಪಡಿಸಿದ.

`ಅಲೆ ಇವ್ನ, ಕೆಳಗೆ ನಾಲಿಗೆ ಕಚ್ಕಂಡ್ರೆ ಮೇಲೆ ಕಣ್ಣಲ್ಲಿ ನೀರು ಬರಲ್ವಾ? ಅಂಗೇ ಇದೂನು.
 
ಅಲ್ಲಿ ಅಡ್ವಾಣಿ ರಥಯಾತ್ರೆ ಶುರುಮಾಡಿದ್ರೆ ಇಲ್ಲಿ ಗುಜರಾತಲ್ಲಿ ಮೋದಿಗೆ ಭೇದಿ ಕಿತ್ಕಳಲ್ವಾ? ಆ ತರ ಒಂದಕ್ಕೊಂದು ಲಿಂಕ್ ಇರುತ್ತೆ ಶಿವಾ~ ಗುಡ್ಡೆ ಸಮಜಾಯಿಷಿ ನೀಡಿದ.
`ಅದ್ಸರೀ ಅದೇನು ಜನಚೇತನ ಯಾತ್ರೆ ಅಂದ್ರೆ? ಜನಕ್ಕೆ ಚೇತನ ಕೊಡೋ ಯಾತ್ರೆ ಅಂತಾನಾ?~ ಮಿಸ್ಸಮ್ಮ ಪ್ರಶ್ನಿಸಿದಳು.

`ನನಗಂತೂ ರಾತ್ರಿ `ಗುಂಡಿ~ಗೆ  ಮೈತುಂಬ ಚೇತನ ಕಿತ್ಕಂಡ್ ಬರುತ್ತಪ್ಪ. ಕಣ್ತುಂಬ ನಕ್ಷತ್ರಗಳು ಕಾಣ್ಸೋಕೆ ಶುರು ಆಗ್ತಾವೆ. ನಿಜವಾದ ಚೇತನ ಅಂದ್ರೆ ಅದು. ಈ ರಥಯಾತ್ರೆ ಪಾದಯಾತ್ರೆ ಎಲ್ಲ ಯಾರು ಕೇಳ್ತಾರೆ ಮಿಸ್ಸಮ್ಮ~ ಗುಡ್ಡೆ ಕಿಚಾಯಿಸಿದ.

`ಥೂ ನಿನ್ನ, ಹಾಳಾಗಿ ಹೋಗಿದೀಯ, ಭ್ರಷ್ಟಾಚಾರದ ವಿರುದ್ಧ ಜನರನ್ನ ಜಾಗೃತಿ ಮಾಡ್ತೀನಿ ಅಂತ ಅವರು ರಥಯಾತ್ರೆ ಮಾಡ್ತಿದ್ರೆ ಇವನಿಗೆ ತಮಾಸೆ.....~ ಮಿಸ್ಸಮ್ಮ ರೇಗಿದಳು.

`ಹಂಗಿದ್ರೆ ಅವರು ಮೊದ್ಲು ಕರ್ನಾಟಕದಿಂದ ಯಾತ್ರೆ ಶುರು ಮಾಡ್ಬೇಕಿತ್ತು. ಭ್ರಷ್ಟಾಚಾರದಲ್ಲಿ ನಾವು ನಂಬರ್ ಒನ್ ಅಲ್ವಾ? ಇಲ್ಲಿ ಎಷ್ಟೊಂದು  ಜನ ಜೈಲು ಸೇರಿದಾರೆ, ಇನ್ನೂ ಎಷ್ಟು ಜನ ಸೇರೋರಿದಾರೆ.... ಇದೆಲ್ಲ ಅವರಿಗೆ ಗೊತ್ತಿಲ್ವಾ?~ ಗುಡ್ಡೆ ಪಟ್ಟು ಬಿಡಲಿಲ್ಲ.

`ಈಗ ಅದ್ನ ಬಿಟ್ಟಾಕಿ. ನಮ್ಮ ಹೀರೋ ದರ್ಶನ್‌ಗೆ ಅಂತೂ ಬೇಲ್ ಸಿಕ್ತಲ್ಲಪ್ಪ. ಅವರಂತೂ ಆವತ್ತೇ ಪಟಾಕಿ ಹೊಡೆದು ದೀಪಾವಳಿ ಆಚರಿಸಿಬಿಟ್ರು. ಪಾಪ ನಮ್ ಗಣಿ ಧಣಿದೇ ಸಮಸ್ಯೆ. ಜೈಲಲ್ಲಿ ದೀಪಾವಳೀನ ಹೆಂಗೆ ಆಚರಿಸ್ತಾರೋ ಏನೋ....~ ಪರಮೇಶಿ ಕನಿಕರ ವ್ಯಕ್ತಪಡಿಸಿದ.

`ಅವರೀಗ ಹನುಮಾನ್ ಜಪ ಶುರು ಮಾಡಿದಾರಂತೆ. ಅವರ ಭಕ್ತಿಗೆ ಮೆಚ್ಚಿ ರಾತ್ರಿ ಕನಸಲ್ಲಿ ಹನುಮಾನ್ ಪ್ರತ್ಯಕ್ಷ ಆಗಿ `ಭಕ್ತಾ ಏನು ನಿನ್ನ ಬೇಡಿಕೆ?~ ಅಂತ ಕೇಳಿದನಂತೆ.

ಅದಕ್ಕೆ ಧಣಿಗಳು `ಹೇ ಹನುಮಾನ್ ಎಲ್ರೂ ನನಗೆ ಬೇಲ್ ಸಿಗೋದು ಅನುಮಾನ ಅಂತಿದಾರೆ, ನೀನಾದ್ರು ಬೇಲ್ ಸಿಗೋ ಹಾಗೆ ಮಾಡು ತಂದೆ, ನಿನಗೆ ತುಪ್ಪದ ದೀಪ ಹಚ್ತೀನಿ~ ಅಂದ್ರಂತೆ~

ಅದಕ್ಕೆ ಸಿಟ್ಟಿಗೆದ್ದ ಹನುಮಾನ್ `ಏನು? ತಿರುಪತಿ ತಿಮ್ಮಪ್ಪನಿಗಾದ್ರೆ ಕೋಟಿ ಕೋಟಿ ಬೆಲೆ ಬಾಳೋ ವಜ್ರದ ಕಿರೀಟ ಮಾಡಿಸಿ ಕೊಡ್ತೀರಿ. ನನಗೆ ಮಾತ್ರ ಮೂಗಿಗೆ ತುಪ್ಪ ಹಚ್ತೀರಾ? ನೋ, ಐ ಕಾಂಟ್ ಹೆಲ್ಪ್ ಯು~ ಅಂತ ತನ್ನ ಊದು ಮುಖವನ್ನು ಮತ್ತಷ್ಟು ಊದಿಸಿಕೊಂಡನಂತೆ. ಆಗ ಗಣಿ ಧಣಿಗಳು `ಆಯ್ತು ಆಯ್ತು, ನಿನಗೂ ಒಂದು ವಜ್ರದ ಕಿರೀಟ ಮಾಡಿಸಿಕೊಡ್ತೀನಿ. ಆದ್ರೆ ಒಂದು ಕಂಡೀಶನ್....~ ಎಂದರಂತೆ.

`ಏನದು?~ ಹನುಮಾನ್ ಪ್ರಶ್ನೆ. `ಏನಿಲ್ಲ , ಅಕಸ್ಮಾತ್ ಸಿಬಿಐನೋರು ನಿಮಗೆ ಈ ವಜ್ರದ ಕಿರೀಟ ಯಾರು ಕೊಟ್ರು ಅಂತ ಕೇಳಿದ್ರೆ ನನ್ನ ಹೆಸರು ಮಾತ್ರ ಹೇಳಬಾರದು, ಒಪ್ಪಿಗೇನಾ?~

`ಸಿಬಿಐ ಹೆಸರು ಹೇಳ್ತಿದ್ದಂಗೆ ಹನುಮಾನ್ ಹೇಳದೆ ಕೇಳದೆ ಮಾಯ ಆದನಂತೆ...!~ ಗುಡ್ಡೆ ನಗುತ್ತ ಕತೆ ಮುಗಿಸಿದಾಗ ಅವನೊಟ್ಟಿಗೆ ಎಲ್ಲರೂ ನಕ್ಕರು.

ಆಗ ತೆಪರೇಸಿ `ನಾನೂ ಗುಡ್ಡೆ ತರ ಒಂದು ಚುಟುಕ ಹೇಳಲಾ?~ ಎಂದ. `ಓ ಚುಟುಕ ಹೊಸಿಯೋದು ನಿಂಗೂ ಬರುತ್ತೇನೋ ತೆಪರಾ? ಸರಿ ಅದೇನು ಹೇಳು ಕೇಳೇಬಿಡೋಣ~ ಎಂದಳು ಮಿಸ್ಸಮ್ಮ.
ಗಣಿಧಣಿಗೆ ಜಾಮೀನು
ಸಿಗುತ್ತೊ ಇಲ್ವೊ ಅನುಮಾನ
ರಾಮನ ಪಕ್ಷದ ಜನಾರ್ದನನ
ಕಾಪಾಡುವನೆ ಹನುಮಾನ?

`ಚೆನ್ನಾಗೈತಾ?...~ ತೆಪರೇಸಿ ಎಲ್ಲರ ಮುಖ ನೋಡಿದ. `ಫಸ್ಟ್‌ಕ್ಲಾಸ್! ನಿನಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಕೊಡಿಸ್ಲೇಬೇಕು....~ ದುಬ್ಬೀರ ಶಭಾಶ್‌ಗಿರಿ ಕೊಟ್ಟ.

`ಪ್ರಶಸ್ತಿನಾ? ಕೊಡ್ಸೋದು ಕೊಡಿಸ್ತೀರ, ಒಳ್ಳೆ ಜನರತ್ರ ಕೊಡಿಸ್ರಪ್ಪ. ಆಮೇಲೆ ಜನ ನಂಗೆ ಉಗೀಬಾರ್ದು ನೋಡ್ರಿ~ ತೆಪರೇಸಿ ಒಗಟಿನ ಮಾತಾಡಿದ.

`ಏನು ಹಾಗಂದ್ರೆ?~ ಗುಡ್ಡೆ ಪ್ರಶ್ನಿಸಿದ
`ಹೋದ್ಸಲ ರಾಜ್ಯೋತ್ಸವ ಪ್ರಶಸ್ತಿ ತಗಂಡಿದ್ರಲ್ಲ ನಮ್ಮ ಪ್ರೊಫೆಸರ್ ರಂಗಣ್ಣ, ಅದರ ಫೋಟೋನ ದೊಡ್ಡದು ಮಾಡಿಸಿ ಎಲ್ರಿಗೂ ಕಾಣಂಗೆ ತಮ್ಮ ಮನೆ ಹಾಲ್‌ನಲ್ಲಿ ನೇತಾಕಿದ್ರಂತೆ. ಮೊನ್ನೆ ಪಕ್ಕದ ಮನೆ ಪುಟ್ಟಿ ಬಂದು `ತಾತಾ, ಈ ಜೈಲಿಗೆ ಹೋಗಿರೋರ ಜೊತೆ ನೀವೂ ಫೋಟೋದಲ್ಲಿದೀರಲ್ಲ, ನೀವೇನು ತಪ್ಪು ಮಾಡಿದ್ರಿ?~ ಅಂತ ಕೇಳಿದ್ಲಂತೆ.

ಪ್ರೊಫೆಸರ್‌ಗೆ ಶಾಕ್! ಫೋಟೋ ನೋಡ್ತಾರೆ, ತಮಗೆ ಪ್ರಶಸ್ತಿ ನೀಡ್ತಾ ಇರೋರ ಪೈಕಿ ಒಬ್ರು ಮಾಜಿ ಮಂತ್ರಿಗಳಾಗಿ ಈಗ ಜೈಲಲ್ಲಿದ್ದಾರೆ. ಇನ್ನಿಬ್ರು ಮಾಜಿ ಮುಖ್ಯಮಂತ್ರಿಗಳು ಜಾಮೀನು - ಕೋರ್ಟು ಅಂತ ಓಡಾಡ್ತಾ ಇದಾರೆ! ಪ್ರೊಫೆಸರು ಪಿಟಿಕ್ಕೆನ್ನದೆ ಆ ಫೋಟೋನ್ನ ತೆಗೆದು ಯಾರಿಗೂ ಕಾಣಿಸದ ಹಾಗೆ ಅಟ್ಟಕ್ಕೆ ಸೇರಿಸಿದ್ರಂತೆ!~ ತೆಪರೇಸಿ ಹೇಳುತ್ತಿದ್ದಂತೆ ಹರಟೆಕಟ್ಟೆಯಲ್ಲಿ ನಗೆಯ ಬುಗ್ಗೆ ಚಿಮ್ಮಿತು.

ದುಬ್ಬೀರ ನಗುತ್ತ `ಕರೆಕ್ಟ್ ಕಣಲೆ ತೆಪರ, ಇನ್ಮುಂದೆ ಪ್ರಶಸ್ತಿ ತಗೊಳ್ಳೋರ‌್ನ ಹೇಗೆ ಆಯ್ಕೆ ಮಾಡ್ತಾರೋ ಹಾಗೆ ಪ್ರಶಸ್ತಿ ಕೊಡೋರ ಆಯ್ಕೆಗೂ ಒಂದು ಸಮಿತಿ ಮಾಡೋದು ಒಳ್ಳೇದು ಅನ್ಸುತ್ತೆ. ಏನಂತೀಯ?~ ಎಂದ.

`ದೇವ್ರಾಣೆ ಮಾಡಬೇಕು ಶಿವಾ, ಅಣ್ಣಾ ಹಜಾರೆ ಅವರ‌್ನೇ ಆ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ರೆ ಇನ್ನೂ ಒಳ್ಳೇದು~ ಎಂದ ತೆಪರೇಸಿ.

ಅದುವರೆಗೆ ಹರಟೆಕಟ್ಟೇಲಿ ಒಂದು ಮಾತನ್ನೂ ಆಡದೆ ಸುಮ್ಮನೆ ಕುಳಿತಿದ್ದ ಯಬಡೇಶಿಯನ್ನು ಕಂಡು ಎಲ್ಲರಿಗೂ ಆಶ್ಚರ‌್ಯವಾಯಿತು. `ಯಾಕೋ ಯಬಡಾ? ಏನೂ ಮಾತಾಡ್ತಿಲ್ವಲ್ಲ, ಏನಾಯ್ತೋ ನಿನಗೆ?~ ಪರಮೇಶಿ ಕೇಳಿದ.

ಯಬಡೇಶಿ ಬಾಯಿ ಬಿಟ್ಟ~ ಏನಿಲ್ಲ, ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮಾಡಿದ್ರು. ಹನ್ನೆರಡು ದಿನ ಏನೂ ತಿನ್ನಲಿಲ್ಲ. ಆದ್ರೂ `ಬಿಲ್ಲು~ ಯಾಕೆ ಕೇಳ್ತಾರೆ...?~ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT