ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟವಾದಿಗೆ ಪ್ರಶಸ್ತಿ ನಿರೀಕ್ಷೆ

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

‘ಈ ಸಿನಿಮಾ ಗೆದ್ದೇ ಗೆಲ್ಲುತ್ತದೆ. ನಿರ್ದೇಶನ, ಕಥೆ ಅಥವಾ ನಟನೆ ಒಂದು ವಿಭಾಗದಲ್ಲಾದರೂ ನನಗೆ ಪ್ರಶಸ್ತಿ ಬರುತ್ತದೆ’- ಆತ್ಮವಿಶ್ವಾಸ, ಉದ್ವೇಗ ಭರಿತ ದನಿಯಲ್ಲಿ ನುಡಿದರು ವೆಂಕಟ್.

ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಹೀಗೆ ಸಕಲ ಜವಾಬ್ದಾರಿ ಹೊತ್ತು ನಟನೆಯನ್ನೂ ಮಾಡುತ್ತಿರುವ ವೆಂಕಟ್ ತಮ್ಮದೇ ಹೆಸರುಳ್ಳ ಚಿತ್ರ ‘ಹುಚ್ಚ ವೆಂಕಟ್’ನ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿ ಸುದ್ದಿಮಿತ್ರರ ಮುಂದೆ ಹಾಜರಾದರು. ನಾಯಕಿಯನ್ನು ಪರಿಚಯಿಸುವ ಹಾಡನ್ನು ಪುಟ್ಟದಾದ ಸಭಾಂಗಣ ವೊಂದರಲ್ಲಿ ಚಿತ್ರೀಕರಿಸುತ್ತಿದ್ದರು ವೆಂಕಟ್. ‘ನನ್ನ ಸಿನಿಮಾ ಸಮಾಜವನ್ನು ಬದಲಿಸುವುದು ಸಾಧ್ಯವಿಲ್ಲದೆ ಇರಬಹುದು. ಆದರೆ ಸಿನಿಮಾ ನೋಡಿದ ಕೆಲವರಾದರೂ ಒಳ್ಳೆಯ ರೀತಿಯಲ್ಲಿ ಸಮಾಜವನ್ನು ಬದಲಾಯಿಸುವ ಪ್ರಯತ್ನಕ್ಕೆ ಕೈಹಾಕುತ್ತಾರೆ’ ಎಂಬ ಭರವಸೆ ಅವರಲ್ಲಿದೆ.

ಹುಂಬ ವ್ಯಕ್ತಿತ್ವದ ಯುವಕನೊಬ್ಬ ಸಮಾಜದ ತಪ್ಪುಗಳನ್ನು ತಿದ್ದುವ ಎಳೆಯನ್ನಿಟ್ಟುಕೊಂಡು ಅವರು ಕಥೆ ಹೆಣೆದಿದ್ದಾರೆ. ‘ಚಿತ್ರದ ಓಪನಿಂಗ್ ಮತ್ತು ಕ್ಲೈಮ್ಯಾಕ್ಸ್ ಆರೋಗ್ಯಕ್ಕೆ ಹಾನಿಕರ’ ಎಂಬ ಎಚ್ಚರಿಕೆಯನ್ನು ಚಿತ್ರದ ಪೋಸ್ಟರ್‌ಗಳಲ್ಲಿ ಮುದ್ರಿಸಿದ್ದಾರೆ ಅವರು. ಯಾವ ರೀತಿ ಹಾನಿಕರ ಎಂದು ಪ್ರಶ್ನಿಸಿದರೆ ಸಿನಿಮಾ ನೋಡಿ ಗೊತ್ತಾಗುತ್ತದೆ ಎಂದು ಜಾರಿ ಕೊಂಡರು.

ನಾಯಕಿ ಕವಿತಾರನ್ನು ಅವರು ಪರಿಚಯಿಸಿದ್ದು ಟೇಕ್ ಒನ್ ನಟಿ ಎಂದು! ಮೊದಲ ಚಿತ್ರವಾದರೂ ಪಳಗಿದ ನಟಿಯಂತೆ ಕವಿತಾ ಒಂದೇ ಟೇಕ್‌ನಲ್ಲಿ ಲೀಲಾಜಾಲವಾಗಿ ಅಭಿನಯಿಸುತ್ತಿದ್ದಾರಂತೆ.  ಚಿತ್ರರಂಗದ ಹಿರಿಯರನ್ನು ನೋಡಿಯೇ ಅಭಿನಯ ಕಲಿಯುವ ಇರಾದೆ ಕವಿತಾ ಅವರದು. ಸೆಲೆಬ್ರಿಟಿಯಾಗಿ ಮಿಂಚುವ ಆಸೆ ಇಲ್ಲ. ಬದಲಾಗಿ ಚಿತ್ರರಂಗದಲ್ಲಿ ದುಡಿದು ಅನಾಥಾಶ್ರಮದ ಮಕ್ಕಳಿಗೆ ನೆರವಾಗುವ ಉದ್ದೇಶ ಅವರದು.

ಕಾಲೇಜು ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿ ಕೊಳ್ಳುತ್ತಿರುವ ರಮೇಶ್ ಭಟ್, ನಟ ವೆಂಕಟ್ ಅವರನ್ನು ‘ಹಟವಾದಿ’ ಎಂದು ಬಣ್ಣಿಸಿದರು. ತಪ್ಪು ಹಾದಿ ಹಿಡಿದವರನ್ನು ಸರಿದಾರಿಗೆ ತರುವಂಥ ಸಂದೇಶ, ಭಾವನಾತ್ಮಕ ಸನ್ನಿವೇಶಗಳು ಚಿತ್ರದಲ್ಲಿವೆ ಎಂದರು ಅವರು. ಛಾಯಾಗ್ರಾಹಕ ಆರ್. ಚವಾಣ್, ಈಶ್ವರರಾವ್ ಪವಾರ್ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT