ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ ಎಂಬ ಚಿನ್ನದ ಮೊಟ್ಟೆ

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಾಯಚೂರು ಜಿಲ್ಲೆಯ ಹಟ್ಟಿ ದೇಶದ ಏಕೈಕ ಚಿನ್ನದ ಗಣಿ. ನೂರಾರು ಅಡಿ ಆಳದಲ್ಲಿರುವ ಚಿನ್ನದ ಅದಿರು ಹೊರತೆಗೆದು ಸಂಸ್ಕರಿಸಿ ಅಪ್ಪಟ ಚಿನ್ನ ತೆಗೆಯುವ ಗಣಿಗಾರಿಕೆಗೆ ಶತಮಾನಗಳ ಇತಿಹಾಸವಿದೆ.

ಈಗ ವಿಶ್ವದಾದ್ಯಂತ ಚಿನ್ನದ ಬೆಲೆಯದ್ದೇ ಚರ್ಚೆ. ಹತ್ತು ಗ್ರಾಂ ಚಿನ್ನದ ಬೆಲೆ 20 ಸಾವಿರದತ್ತ ಏರುಮುಖವಾಗಿದೆ. ಈ ಹಿನ್ನೆಲೆಯಲ್ಲಿ ಹಟ್ಟಿ ಚಿನ್ನದ ಗಣಿಗೆ ಮಹತ್ವವಿದೆ. ಜಾಗತಿಕ ಮಟ್ಟದಲ್ಲಿ ಈಗ ಬಳಕೆಯಲ್ಲಿರುವ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಚಿನ್ನ ತೆಗೆಯುತ್ತಿರುವ ಹಟ್ಟಿ ಗಣಿ ಈಗ ಗಟ್ಟಿಯಾಗಿ  ಬೆಳೆಯುತ್ತಿದೆ.

ರಾಜ್ಯ ಸರ್ಕಾರಿ ಒಡೆತನದ ಹಟ್ಟಿ ಗಣಿ ಈಗಾಗಲೇ 2600 ಅಡಿ ಆಳಕ್ಕೆ ತಲುಪಿದೆ. ಪ್ರತಿ ದಿನ 1800 ಟನ್‌ಗೂ ಅಧಿಕ ಚಿನ್ನದ ಅದಿರು ಹೊರ ತೆಗೆಯಲಾಗುತ್ತಿದೆ. ಈ ಅದಿರು ಸಂಸ್ಕರಣೆಗೊಂಡು ನಿತ್ಯ ಎಂಟು ಕೆ.ಜಿಯಷ್ಟು ಚಿನ್ನ ಉತ್ಪಾದನೆ ಆಗುತ್ತಿದೆ!

ಹಟ್ಟಿ ಗಣಿ ಸಮೀಪ ಇರುವ ಮತ್ತು ಇದೇ ಗಣಿಯ ಅಂಗ ಸಂಸ್ಥೆ ‘ಊಟಿ’ಯಲ್ಲಿನ ತೆರೆದ ಗಣಿಯಿಂದ ಮತ್ತು ಹೀರಾಬುದ್ದಿನ್ನಿ ಗಣಿಯಿಂದ ನಿತ್ಯ 300 ಟನ್ ಅದಿರನ್ನು ಹೊರ ತೆಗೆದು ಸಂಸ್ಕರಿಸಲಾಗುತ್ತಿದೆ.

ಮೂರು ಗಣಿ: ಹಟ್ಟಿಯಲ್ಲಿ ಮೂರು ಗಣಿಗಳಿವೆ. ವಿಲೇಜ್ ಶಾಫ್ಟ್, ಸೆಂಟ್ರಲ್ ಶಾಫ್ಟ್ ಹಾಗೂ ಮಲ್ಲಪ್ಪ ಶಾಫ್ಟ್ ಎಂದು ಇವುಗಳನ್ನು (ಶಾಫ್ಟ್ ಎಂದರೆ ಗಣಿಗಾರಿಕೆ ನಡೆಯುವ ಸ್ಥಳ) ಕರೆಯಲಾಗುತ್ತದೆ. 

 ವಿಲೇಜ್ ಶಾಫ್ಟ್‌ಗೆ ಶತಮಾನಗಳ ಇತಿಹಾಸವಿದೆ. ಈಗ ಇಲ್ಲಿ ಗಣಿಗಾರಿಕೆ ಚಟುವಟಿಕೆ ಕಡಿಮೆ. ಮಲ್ಲಪ್ಪ ಹಾಗೂ ಸೆಂಟ್ರಲ್ ಶಾಫ್ಟ್‌ಗಳಲ್ಲಿ ಈಗ ಹೆಚ್ಚು ಚಿನ್ನ ಉತ್ಪಾದನೆಯಾಗುತ್ತಿದೆ.

ಕಾರ್ಮಿಕರ ಸ್ಥಿತಿ: ಹಟ್ಟಿ ಚಿನ್ನದ ಗಣಿಯಲ್ಲಿ 2000 ಅಧಿಕಾರಿ ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.  ಇವರ ಪೈಕಿ ಅನೇಕರಿಗೆ ವಸತಿ ಸೌಕರ್ಯ ಇಲ್ಲ ಎಂಬ ಅಸಮಾಧಾನ ಕಾರ್ಮಿಕರಲ್ಲಿದೆ. ಗಣಿ ಕಂಪನಿಯು ಕಾರ್ಮಿಕರಿಗಾಗಿ 500 ಮನೆಗಳ  ನಿರ್ಮಾಣಕ್ಕೆ ಚಿಂತನೆ ನಡೆಸಿದೆ.

ಗಣಿಯ ಹೃದಯ ಭಾಗ ಎಂದು ಕರೆಯಲ್ಪಡುವ ಅದಿರು ಸಂಸ್ಕರಿಸುವ ನೂತನ ಘಟಕ ( ಸ್ಯಾಗ್ ಮತ್ತು ಬಾಲ್ ಮಿಲ್)ವು 68.22 ಕೋಟಿ ರೂ ಮೊತ್ತದಲ್ಲಿ ನಿರ್ಮಾಣಗೊಂಡು ಈಚೆಗಷ್ಟೇ ಕಾರ್ಯ ಆರಂಭಿಸಿದೆ. ಮಲ್ಲಪ್ಪ ಶಾಫ್ಟ್ ಪಕ್ಕ ನಿರ್ಮಾಣಗೊಂಡಿರುವ ಈ ಘಟಕದಲ್ಲಿ ನಿತ್ಯ 2000 ಟನ್ ಅದಿರು ಸಂಸ್ಕರಣೆ ಮಾಡಲು ಅವಕಾಶವಿದೆ. ಸಾಮಾಜಿಕ ಅಭಿವೃದ್ಧಿಗೆ, ಕ್ರೀಡಾ ಚಟುವಟಿಕೆಗೆ ಹಟ್ಟಿ ಚಿನ್ನದ ಗಣಿ ಕಂಪನಿ ನೆರವು ನೀಡುತ್ತ ಬಂದಿದೆ. ರಾಜ್ಯದಲ್ಲಿ ಒಂದೂವರೆ ವರ್ಷದ ಹಿಂದೆ ಸಂಭವಿಸಿದ ಪ್ರವಾಹದಲ್ಲಿ  ನಿರಾಶ್ರಿತರಾದ ಸಂತ್ರಸ್ತರಿಗೆ 1000 ಮನೆಗಳನ್ನು ಜಿಲ್ಲೆಯಲ್ಲಿ ನಿರ್ಮಿಸುತ್ತಿದೆ.

ಹಟ್ಟಿ ಇತಿಹಾಸ: ತಜ್ಞರು ಹಟ್ಟಿ ಚಿನ್ನದ ಗಣಿ ಇತಿಹಾಸವನ್ನು ಮೂರು ಕಾಲಘಟ್ಟದಲ್ಲಿ ವಿಂಗಡಿಸಿದ್ದಾರೆ. ಚಕ್ರವರ್ತಿ ಅಶೋಕನ ಕಾಲದ್ದು ಮೊದಲನೆಯ ಘಟ್ಟ. ಎರಡನೆಯದ್ದು ಬ್ರಿಟಿಷರ ಕಾಲ (1882ರಿಂದ1920ರವರೆಗೆ), ಮೂರನೆಯ ಘಟ್ಟ 1947ರವರೆಗಿನ ಗಣಿಗಾರಿಕೆ ಆಧುನಿಕ ಕಾಲ ಎಂದು ಗುರುತಿಸಲಾಗಿದೆ. ಹೈದರಾಬಾದ್ ನಿಜಾಮರ ಆಡಳಿತ ಕಾಲದಲ್ಲಿ ಹಟ್ಟಿ ಸುತ್ತಮುತ್ತ ಚಿನ್ನದ ನಿಕ್ಷೇಪಗಳ ಶೋಧನೆಗಾಗಿ ಇಂಗ್ಲೆಂಡ್‌ನ ಮನ್ ಎಂಬ ಲೋಹ ತಜ್ಞರು ಸಮೀಕ್ಷೆ ನಡೆಸಿದ್ದರು. ಹಟ್ಟಿ ಸುತ್ತಮುತ್ತಲಿನ ಭೂಮಿಯಲ್ಲಿ ಚಿನ್ನಕ್ಕಾಗಿ ಶೋಧನೆ ನಡೆಸಿದ್ದವರು ನಮ್ಮ ದೇಸಿ ತಜ್ಞರೇ ಹೊರತು ವಿದೇಶಿಯರಲ್ಲ ಎಂಬುದನ್ನು ಮನ್ ಅವರೇ ಅಧ್ಯಯನದ ಮೂಲಕ ಬಹಿರಂಗಪಡಿಸಿದ್ದರು. ಅವರ ಅಭಿಪ್ರಾಯಕ್ಕೆ ಇಲ್ಲಿರುವ ಅನೇಕ ಬಾವಿಗಳೇ ಪುರಾವೆ ಎಂದು ಅವರು ಹೇಳಿದ್ದಾರೆ. 

ಎರಡು ಸಾವಿರ ವರ್ಷಗಳ ಹಿಂದೆ ಇಲ್ಲಿ ಗಣಿಗಾರಿಕೆ ಚಟುವಟಿಕೆಗಳು ನಡೆದಿದ್ದವು ಎಂಬುದಕ್ಕೆ ಹಟ್ಟಿ ಗಣಿ ಕಂಪನಿಯಲ್ಲಿ ದಾಖಲೆಗಳಿವೆ. ಆಗ ಗಣಿಗಾರಿಕೆಗೆ ಬಳಸಲಾಗುತ್ತಿದ್ದ ಮರದ ದಿಮ್ಮಿ, ಕಟ್ಟಿಗೆ ಮತ್ತಿತರ ಪರಿಕರಗಳು ಹಟ್ಟಿ ಗಣಿ ಕಂಪನಿಯ ಸಂಗ್ರಹಾಲಯದಲ್ಲಿವೆ.

ಗಣಿಗಾರಿಕೆಯಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಲಾಗಿದೆ. ಇದು ದೇಶದ ಏಕೈಕ ಚಿನ್ನದ ಗಣಿ ಆಗಿರುವುದರಿಂದ ವ್ಯವಸ್ಥಿತ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಹಟ್ಟಿ ಗಣಿ ನಿಗಮದ ಕಾರ್ಯನಿರ್ವಾಹಕ ಅಧಿಕಾರಿ ಡಿ.ವೈ. ವೆಂಕಟೇಶ್ ಹೇಳುತ್ತಾರೆ.

ಏಪ್ರಿಲ್ 2010ರಿಂದ ಡಿಸೆಂಬರ್‌ವರೆಗೆ 4,64,721 ಟನ್ ಅದಿರನ್ನು ಸಂಸ್ಕರಿಸಿ ಅದರಿಂದ 160.1 ಕೆ.ಜಿ ಚಿನ್ನವನ್ನು ಉತ್ಪಾದಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT