ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ದುರಂತ: ಇಬ್ಬರು ಭಾರತೀಯರು ನಗರಕ್ಕೆ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಟಲಿಯ ಕರಾವಳಿಯಲ್ಲಿ ಶನಿವಾರ ಸಂಭವಿಸಿದ ಕೋಸ್ಟಾ ಕಾನ್‌ಕಾರ್ಡಿಯಾ ಹಡಗು ದುರಂತದಲ್ಲಿ ಬದುಕುಳಿದಿರುವ ಇಬ್ಬರು ಭಾರತೀಯರು ಗುರುವಾರ ಸಂಜೆ ಸುಮಾರು 5.30ಕ್ಕೆ ನಗರಕ್ಕೆ ಮರಳಿದ್ದಾರೆ.

ಬಷೀರ್ ಇಫ್ತಿಕಾರ್ ಅಹಮದ್ ಮತ್ತು ವಿನೋದ್ ಕುಮಾರ್ ಕೇಶವಮೂರ್ತಿ ಗುರುವಾರ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರ ಮುಖದಲ್ಲಿ ಸಾವನ್ನು ಗೆದ್ದ ನಗುವಿತ್ತು. ಅಪಾಯದಿಂದ ಪಾರಾಗಿ ಬಂದವರನ್ನು ಅವರ ಕುಟುಂಬ ಸದಸ್ಯರು ಸಂಭ್ರಮದಿಂದ ಬರಮಾಡಿಕೊಂಡರು.

`ನನ್ನ ಆಗಮನ ಮನೆಯವರನ್ನು ಆಶ್ಚರ್ಯ ಗೊಳಿಸಬೇಕೆಂಬ ಉದ್ದೇಶದಿಂದ ದುರಂತ ನಡೆದ ನಂತರ ನಾನು ಮನೆಯವರನ್ನು ಸಂಪರ್ಕಿಸಲೇ ಇಲ್ಲ. ದುರಂತದಿಂದ ಜೀವನದಲ್ಲಿ ಮೃತ್ಯುವನ್ನು ಹತ್ತಿರದಿಂದ ನೋಡಿದ ಅನುಭವವಾಯಿತು. ನಾನು ಬದುಕುಳಿದಿದ್ದು ನನ್ನ ಪುನರ್ಜನ್ಮ~ ಎಂದು ಹಡಗಿನ ವೇಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ, 27 ವರ್ಷದ ವಿನೋದ್ ಹಡಗು ದುರಂತದ ಅನುಭವವನ್ನು ಹೇಳಿಕೊಂಡರು.

`ದೊಡ್ಡ ಶಬ್ದ ಕೇಳಿಬಂದಾಗ ಎಲ್ಲರೂ ಗಾಬರಿಯಾದರು, ಆದರೆ ಕ್ಯಾಪ್ಟನ್ ಅದು ತಾಂತ್ರಿಕ ತೊಂದರೆಯಿಂದಾದ ಸದ್ದು ಎಂದು ಘೋಷಿಸಿದರು. ಆದರೆ ಎರಡನೆಯದಾಗಿ ಇನ್ನಷ್ಟು ದೊಡ್ಡ ಶಬ್ದ ಕೇಳಿಬಂದಾಗ ದೊಡ್ಡ ಅನಾಹುತ ಸಂಭವಿಸಿರುವುದು ಅರಿವಾಯಿತು. ಎಲ್ಲರನ್ನೂ ಮತ್ತೊಂದು ಹಡಗಿಗೆ ಸ್ಥಳಾಂತರಿಸುವ ಕಾರ್ಯ ಆರಂಭಿಸಲಾಯಿತು. ಆ ವೇಳೆಗೆ ಊಟ ಮಾಡುತ್ತಿದ್ದ ಅತಿಥಿಗಳ ತಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾದವು.

ಇದೆಲ್ಲಾ ಕೆಲವೇ ಸಮಯದಲ್ಲಿ ನಡೆದುಹೋಯಿತು. ಮೂರು ಸಾವಿರ ಅತಿಥಿಗಳು ಹಾಗೂ ಒಂದು ಸಾವಿರಕ್ಕೂ ಹೆಚ್ಚು ಜನ ಹಡಗಿನ ಸಿಬ್ಬಂದಿಗಳಿದ್ದೆವು. ತಕ್ಷಣಕ್ಕೆ ರಕ್ಷಣೆಯ ಕಾರ್ಯ ಆರಂಭಿಸಲಾಯಿತು. ಇದು ಎಲ್ಲರಿಗೂ ಭೀಕರ ಅನುಭವ~ ಎಂದು 7 ವರ್ಷಗಳಿಂದ ಹಡಗು ನೌಕರರಾಗಿ ಕೆಲಸ ಮಾಡುತ್ತಿರುವ, ಆರ್.ಟಿ ನಗರ ಮೂಲದ ಬಾಷಾ ಘಟನೆಯನ್ನು ನೆನೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT