ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡೆದವರಿಗೆ ಬೇಡವಾಗಿ ಪಡೆದವರಿಗೆ ಬೇಕಾದವು

Last Updated 10 ಜೂನ್ 2011, 6:15 IST
ಅಕ್ಷರ ಗಾತ್ರ

ವಿಜಾಪುರ: ಹೆತ್ತವರಿಗೆ ಬೇಡವಾಗಿ ತಿಪ್ಪೆಗುಂಡಿಯಲ್ಲಿ ಎಸೆಯಲಾಗಿದ್ದ ಈ ನವಜಾತ ಶಿಶುಗಳ ಭವಿಷ್ಯ ಗಟ್ಟಿ ಇತ್ತು. ಹಡೆದವ್ವ ಹೊರತಳ್ಳಿದ್ದ ಈ ಶಿಶುಗಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರದವರು ಈಗ ಅಪ್ಪಿಕೊಂಡಿದ್ದಾರೆ.

ಮುದ್ದೇಬಿಹಾಳ ಹಾಗೂ ಚಡಚಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಈ ಎರಡು ನವಜಾತ ಗಂಡು ಶಿಶುಗಳು ದೊರೆತಿದ್ದವು.

ಆಗತಾನೆ ಹುಟ್ಟಿದ್ದ ತಮ್ಮ ಕರುಳ ಕುಡಿಗಳನ್ನು ಆ ಮಹಾತಾಯಂದಿರು ದೂರ ಮಾಡಿದ್ದರು. ತಾಯಿಯ ಮಡಿಲಲ್ಲಿ ಕಣ್ಣರಳಿಸಿ, ಬೆಚ್ಚನೆಯ ಹಾಸಿಗೆಯಲ್ಲಿ ಮಲಗಿ ನಲಿಯಬೇಕಿದ್ದ ಈ ಕಂದಮ್ಮಗಳು ಹುಟ್ಟುತ್ತಲೇ ತಿಪ್ಪೆಗುಂಡಿ ಸೇರಿಬಿಟ್ಟಿದ್ದವು. ಯಾವ ತಪ್ಪು ಮಾಡದಿದ್ದರೂ ಹೊರ ಜಗತ್ತಿಗೆ ಬರುತ್ತಿದ್ದಂತೆಯೇ ಈ ಕಠೋರ ಶಿಕ್ಷೆಗೆ ಗುರಿಯಾಗಿದ್ದವು.

ಪೋಷಕರು ದೂರ ಮಾಡಿದ ರೇನಂತೆ? ಆ ದೇವರು ಕೈ ಬಿಟ್ಟಿರಲಿಲ್ಲ. ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಈ ಮಕ್ಕಳು ಹಂದಿ-ನಾಯಿಗಳಿಗೆ ಆಹಾರವಾಗುವ ಅಪಾಯವೂ ಇತ್ತು. ಆಗಷ್ಟೇ ಕಣ್ಣು ಬಿಟ್ಟು, ಎಚ್ಚರಗೊಂಡು ಅಳುತ್ತಿದ್ದ ಈ ಹಸುಗೂಸುಗಳನ್ನು ಕಂಡ ದಾರಿ ಹೋಕರು ಮಮ್ಮಲ ಮರುಗಿದ್ದರು. ಮಾನವೀಯತೆ ಮೆರೆದ ಪೊಲೀಸರು ಈ ಕಂದಮ್ಮಗಳನ್ನು ಆಸ್ಪತ್ರೆ ಸೇರಿಸಿ, ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ವಹಿಸಿದ್ದರು.

ಪಾಲಕರ ಪತ್ತೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಪುನರ್ವಸತಿಗಾಗಿ ತಮ್ಮಲ್ಲಿ ದಾಖಲಿಸಲ್ಪಟ್ಟಿದ್ದ ಈ ನವಜಾತ ಶಿಶುಗಳನ್ನು ಮಕ್ಕಳ ಕಲ್ಯಾಣ ಸಮಿತಿಯವರು ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಜಿಲ್ಲಾ ಆಸ್ಪತ್ರೆಯ ವೈದ್ಯರು, ದಾದಿಯರು ತಮ್ಮ ಮಕ್ಕಳಿಗಿಂತ ಮುದ್ದಾಗಿ ಈ ಅನಾಥ ನವಜಾತ ಗಂಡು ಶಿಶುಗಳನ್ನು ಸುಮಾರು ಎರಡು ತಿಂಗಳವರೆಗೆ ಪಾಲನೆ ಮಾಡಿದರು.

ಮಕ್ಕಳ ಕಲ್ಯಾಣ ಸಮಿತಿಯ ಆದೇಶ ದಂತೆ ಈ ಮಕ್ಕಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.

ವಿಜಾಪುರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಾಸುದೇವ ತೋಳಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಿ.ಪಿ. ವಸಂತ ಪ್ರೇಮಾ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎಚ್.ಎಸ್. ದಶರಥ ಅವರು ಈ ಮಕ್ಕಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರದವರಿಗೆ ಹಸ್ತಾಂತರಿಸಿದರು.
ಬಾಗಲಕೋಟೆ ಕೇಂದ್ರದ ನಿರ್ದೇಶಕ ವೆಂಕಟೇಶ ಕುಲಕರ್ಣಿ ಸಿಬ್ಬಂದಿ ಯೊಂದಿಗೆ ವಿಜಾಪುರ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಈ ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಲಲಿತಾ ಶೆಟ್ಟರ, ಕಾರ್ಯದರ್ಶಿ ಜಿ.ಆರ್. ಕೋಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT