ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡ್ಸನ್ ಸ್ಮರಣೆಯಲ್ಲಿ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಾರ್ಪೊರೇಷನ್ ಬಳಿಯ ಹಡ್ಸನ್ ಸ್ಮಾರಕ ಚರ್ಚ್ ಪ್ರಾರಂಭವಾಗಿ ಇಂದಿಗೆ ಬರೋಬ್ಬರಿ 107 ವರ್ಷ. ಗಾಥಿಕ್ ಶೈಲಿಯಲ್ಲಿ ನಿರ್ಮಾಣವಾದ ಈ ಚರ್ಚ್‌ನ ನೆಲಕ್ಕೆ ಇಂಗ್ಲೆಂಡ್‌ನಿಂದ ತರಿಸಿದ ಟೈಲ್ಸ್‌ಗಳನ್ನು ಬಳಸಲಾಗಿತ್ತು. ಚರ್ಚ್ ಆರಂಭೋತ್ಸವದ ಚಿತ್ರಣ ಇಲ್ಲಿದೆ.


ಹಡ್ಸನ್ ವೃತ್ತದಲ್ಲಿನ (ಬಿಬಿಎಂಪಿ ಮುಖ್ಯ ಕಚೇರಿ ಬಳಿ) ಹಡ್ಸನ್ ಸ್ಮಾರಕ ಚರ್ಚ್‌ಗೆ 107 ವರ್ಷಗಳ ಸುದೀರ್ಘ ಇತಿಹಾಸವಿದೆ. ಇದು ತ್ರಿಕೋನಾಕಾರದ ನಿವೇಶನದಲ್ಲಿ ನಿರ್ಮಾಣವಾಗಿದ್ದು 28 ಅಡಿ ಅಗಲ, 88 ಅಡಿ ಉದ್ದವಿದೆ.

ಮೂರು ಮುಖ್ಯ ದ್ವಾರಗಳನ್ನು ಪ್ರವೇಶಿಸುತ್ತಿದ್ದಂತೆಯೇ ಬಲಗಡೆ ಮೂರು ಅಂತಸ್ತಿನ 50 ಅಡಿ ಗೋಪುರ ಆಕರ್ಷಿಸುತ್ತದೆ. ನೆಲಕ್ಕೆ ಅಳವಡಿಸಿದ ಟೈಲ್ಸ್ ಇಂಗ್ಲೆಂಡಿನಿಂದ ತರಿಸಿದ್ದು. ಗಾಥಿಕ್ ಶೈಲಿಯಲ್ಲಿ ಇದರ ಆಕರ್ಷಣೆ ಹೆಚ್ಚಿಸಿದೆ.

ಮೈಸೂರು ಸಂಸ್ಥಾನದ ವೆಸ್ಲಿಯನ್ ಮಿಷನ್ ಅಧ್ಯಕ್ಷರಾಗಿದ್ದ ಜೋಶಾಯ ಹಡ್ಸನ್ ಬಿ. ಎ. (1840-1896) ಅವರ ಹೆಸರು ಬೆಂಗಳೂರಿನಲ್ಲಿ ಚಿರಕಾಲ ಉಳಿಯುವಂತೆ ಮಾಡುವುದಕ್ಕಾಗಿ ಅವರ ಸ್ನೇಹಿತರು ಹಾಗೂ ಭಾರತೀಯ ವೆಸ್ಲಿಯನ್ ಕ್ರೈಸ್ತರು ಚರ್ಚ್ ನಿರ್ಮಿಸಲು ತೀರ್ಮಾನಿಸಿದರು.

ಕಟ್ಟಡದ ನಿರ್ಮಾಣ ಕಾರ್ಯವನ್ನು ವೆಸ್ಲಿಯನ್ ಮಿಷನ್ನಿನ ವೇನ್ಸ್ ದೊರೆ ಮತ್ತು ವಾಸ್ತು ಶಿಲ್ಪ ತಜ್ಞರಾಗಿದ್ದ ಮುನಿಸಿಪಲ್ ಇಂಜಿನಿಯರ್ ಜೆ. ಎಚ್. ಸ್ಟೀಫನ್ಸ್ ಅವರು 1902ರ ಮೇ ತಿಂಗಳಲ್ಲಿ ಪ್ರಾರಂಭಿಸಿದರು.

ಆದರೆ ವೇನ್ಸ್ ಅವರು ಚರ್ಚ್‌ನ  ನಿರ್ಮಾಣ ಮುಕ್ಕಾಲು ಭಾಗ ಮುಗಿಯುತ್ತಿದ್ದಂತೆಯೇ ವಿದೇಶಕ್ಕೆ ತೆರಳಿದರು. ತರುವಾಯ ವೆಸ್ಲಿಯನ್ ಮಿಷನರಿ ಡಿ. ಎ. ರೀಸ್ ಮುಂದುವರಿಸಿದರು.

ಈ ಚರ್ಚ್‌ನ ಪ್ರತಿಷ್ಠಾಪನೆ 1904 ಸೆಪ್ಟೆಂಬರ್ 23 ಶುಕ್ರವಾರ ಸಂಜೆ 4 ಗಂಟೆಗೆ ನಡೆಯಿತು. ಅಂದು ನಗರದಲ್ಲಿನ ವೆಸ್ಲಿಯನ್ ಕನ್ನಡ - ತಮಿಳು ಸಭೆಗಳವರು, ಪರಸ್ಥಳದ ಪಾದ್ರಿಗಳು, ಅನೇಕ ದೊರೆಗಳು, ದೊರೆಸಾನಿಗಳು ಸೇರಿದಂತೆ ಸುಮಾರು 700 ಜನ ಮಧ್ಯಾಹ್ನದ ಹೊತ್ತಿಗೆ ಚರ್ಚ್‌ನ ಹೊರ ಪ್ರಾಕಾರದಲ್ಲಿ ಸೇರಿದ್ದರು.
 
4 ಗಂಟೆಗೆ ರೀಸ್ ದೊರೆಯವರು ಯುರೋಪಿಯನ್ ದೊರೆಗಳ ಜತೆ ನಿಂತು ಸಂಗೀತ ಹಾಡಿದರು. ಜೆ.ಡಬ್ಲ್ಯೂ ಸಾಡೆ ಪ್ರಾರ್ಥನೆ ಮಾಡಿದರು.

ತರುವಾಯ ಹಡ್ಸನ್ ಅವರ ಪುತ್ರಿಯಾದ ಮೈಸೂರಿನ ಡಬ್ಲ್ಯೂ. ಎಚ್. ಥಾರ್ಪ್ ದೊರೆಸಾನಮ್ಮನವರು ಅಲಂಕೃತ ಬೆಳ್ಳಿ ಬೀಗದ ಕೈಗಳಿಂದ ಮೂರು ಬಾಗಿಲುಗಳನ್ನೂ ತೆರೆದು `ದೇವಾಲಯವು ದೇವಾರಾಧನೆಗೆ ಸಿದ್ಧವಾಗಿದೆ, ಎಲ್ಲರೂ ಸಂತೋಷದಿಂದ ಒಳಕ್ಕೆ ದಯ ಮಾಡಿಸಬಹುದು~ ಎಂದು ತಿಳಿಸಿದರು. ನಂತರ ದೇವಾರಾಧನೆ ನಡೆಯಿತು.

ಇ. ಪಿ. ರೈಸ್ ಸಭಿಕರಿಗೆ ದಿವ್ಯಬೋಧನೆ ನೀಡಿದರು. ನಂತರ ಸಭಿಕರು ಒಬೊಬ್ಬಬ್ಬರೇ ಪೀಠದ ಹತ್ತಿರಕ್ಕೆ ಹೋಗಿ ಅಲ್ಲಿದ್ದ ತಟ್ಟೆಯಲ್ಲಿ ಕಾಣಿಕೆ ಅರ್ಪಿಸಿದರು. ಆ ಕಾಣಿಕೆಯ ಮೊತ್ತ ಅಂದಿನ ಕಾಲಕ್ಕೇ 440 ರೂಪಾಯಿ ಆಗಿತ್ತು.

ಮೈಸೂರು ಸಂಸ್ಥಾನದಲ್ಲಿನ ಕನ್ನಡ ಕ್ರೈಸ್ತ ಸಭೆಗಳವರು ತಮ್ಮ ಪ್ರತಿನಿಧಿಗಳ ಮೂಲಕ ಧಾರಾಳವಾಗಿ ಕಾಣಿಕೆಯನ್ನಿತ್ತು ಕಳುಹಿಸಿದ್ದರು.

ಲೂಕಯ್ಯನವರು ಅಲಂಕಾರಯುಕ್ತವಾದ ಪೀಠದ ಮೇಜನ್ನೂ, ಮೈಸೂರಿನ ಅರಮನೆ ನರ್ಸ್ ಎಸ್ತರ್ ಕೇಲಬ್ ಅವರು ಪೀಠದ ಕುರ್ಚಿಯನ್ನೂ, ಥಾರ್ಪ್ ದೊರೆಸಾನಮ್ಮ ಮತ್ತು ಬೆಂಗಳೂರು ಬೋರ್ಡಿಂಗ್ ಸ್ಕೂಲ್ ಹೆಣ್ಣು ಮಕ್ಕಳು ವಿವಿಧ ವಸ್ತುಗಳನ್ನು ಚರ್ಚ್‌ಗೆ ದಾನವಾಗಿ ನೀಡಿದರು.

ಸಂಜೆ ರೀಸ್ ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಹಡ್ಸನ್ ಅವರನ್ನು ಸ್ಮರಿಸಿಕೊಳ್ಳಲಾಯಿತು. ಸಾಡೆ ದೊರೆಯವರು ಮತ್ತು ಲೂಕಯ್ಯ ಅವರು ಕನ್ನಡದಲ್ಲಿ ಪ್ರವಚನ ನೀಡಿದರು.

ಚರ್ಚ್ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಿದ ಮೇಸ್ತ್ರಿ ಮತ್ತು ಕಂಟ್ರಾಕ್ಟರ್ ಅವರನ್ನು ಸನ್ಮಾನಿಸಲಾಯಿತು. ಫಾದರ್ ಗುಡ್‌ವಿಲ್ ಅವರ ಪ್ರಾರ್ಥನೆಯೊಂದಿಗೆ ಸಭೆ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT