ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ, ಮದ್ಯದ ಹರಿವು ತಡೆಗೆ ಕಣ್ಗಾವಲು

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಣದ ಹೊಳೆ ಹರಿಯುವುದನ್ನು ತಪ್ಪಿಸಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗ, ಯಾವುದೇ ಅಭ್ಯರ್ಥಿ ಅಥವಾ ಅವರ ಬೆಂಬಲಿಗರು ರೂ. 50 ಸಾವಿರಕ್ಕಿಂತ ಹೆಚ್ಚು ನಗದು, ರೂ. 10 ಸಾವಿರ ಮೌಲ್ಯಕ್ಕಿಂತ ಅಧಿಕ ಉಡುಗೊರೆ ಅಥವಾ ಮದ್ಯ ಸರಬರಾಜು ಮಾಡದಂತೆ ಎಚ್ಚರ ವಹಿಸುವಂತೆ ಚುನಾವಣೆ ನೀತಿ- ಸಂಹಿತೆ ಪಾಲನೆಗೆ ನೇಮಕವಾಗಿರುವ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಹಣದ ಹೊಳೆ ಹರಿಸಬಹುದೆಂಬ ವರದಿ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಸೂಚನೆ ನೀಡಿದೆ. ರಾಜ್ಯದಲ್ಲಿ ಕೆಲವು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಯಲ್ಲಿ ಹಣ ಚೆಲ್ಲಿದಂತೆ ಈ ಚುನಾವಣೆಯಲ್ಲೂ ನಡೆಯಬಹುದೆನ್ನುವ ಎಚ್ಚರಿಕೆ ಹಿನ್ನೆಲೆಯಲ್ಲಿ ಜಾಗೃತವಾಗಿರುವಂತೆ ಆಯೋಗ ಹೇಳಿದೆ.

ಚುನಾವಣಾ ಆಯೋಗದ ಮುಖ್ಯ ಆಯುಕ್ತ ವಿ.ಎಸ್.ಸಂಪತ್ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಪ್ರಭಾವ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಈಚೆಗೆ ತಿಳಿಸಿದ್ದರು. ಅದರಂತೆ ಚುನಾವಣಾ ಅಕ್ರಮಗಳು ಹೆಚ್ಚಾಗಿ ನಡೆಯಬಹುದಾದ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ತಲಾ ಮೂರು ಸಂಚಾರಿ, ವೀಡಿಯೊ ಚಿತ್ರೀಕರಣ ತಂಡ ರಚಿಸಲಾಗಿದೆ.

ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದ ಅಂದರೆ ಹಣ, ಮದ್ಯ, ಆಹಾರ ಹಂಚಿಕೆ, ಸಮಾಜಘಾತುಕ ಶಕ್ತಿಗಳ ಚಲನವಲನ, ಮದ್ದು-ಗುಂಡುಗಳ ಪೂರೈಕೆ ಮುಂತಾದ ದೂರುಗಳ ಮೇಲೆ ತಂಡಗಳು ನಿಗಾ ವಹಿಸಲಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ನಡೆಸುವ ರ‌್ಯಾಲಿಗಳು, ಸಭೆ- ಸಮಾರಂಭಗಳ ವೆಚ್ಚದ ಮೇಲೂ ತಂಡ ಗಮನ ಹರಿಸಲಿದೆ.
ಇದಲ್ಲದೆ ಪೊಲೀಸರು ಹಾಗೂ ಮ್ಯಾಜಿಸ್ಟ್ರೇಟ್ ಅವರನ್ನೊಳಗೊಂಡ ತಂಡ ರಚಿಸಲಾಗುತ್ತದೆ. ಈ ತಂಡ ಚೆಕ್ ಪೋಸ್ಟ್‌ಗಳು, ಅಂತರ್ ಜಿಲ್ಲೆ ಗಡಿ ಮೇಲೆ ಕಣ್ಣಿಡಲಿದೆ. ಚುನಾವಣೆ ಅಕ್ರಮಗಳ ತಡೆಗೆ ರಚಿಸಲಾಗಿರುವ ತಂಡಗಳು ತಪಾಸಣೆ ನಡೆಸುವ ವೇಳೆ ಅಭ್ಯರ್ಥಿಗಳು, ಅವರ ಬೆಂಬಲಿಗರು, ಏಜೆಂಟರು ರೂ. 50 ಸಾವಿರಕ್ಕಿಂತ ಹೆಚ್ಚು ಹಣವನ್ನು ವಾಹನದಲ್ಲಿ ಸಾಗಿಸುತ್ತಿದ್ದರೆ, ಅದನ್ನು ವಶಪಡಿಸಿಕೊಳ್ಳುವಂತೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ರೂ.10 ಸಾವಿರ ಮೌಲ್ಯಕ್ಕಿಂತ ಹೆಚ್ಚು ಮೊತ್ತದ ಮದ್ಯ, ಉಡುಗೋರೆ, ಭಿತ್ತಿ ಪತ್ರಗಳು, ಪ್ರಚಾರ ಸಾಮಗ್ರಿಗಳು ಪತ್ತೆಯಾದಲ್ಲಿ ಅದನ್ನು ವಶಪಡಿಸಿಕೊಳ್ಳಲು ಸೂಚಿಸಲಾಗಿದೆ. ಹೀಗೆ ಅಕ್ರಮವಾಗಿ ವಶಪಡಿಸಿಕೊಂಡ ಅಕ್ರಮ ವಸ್ತುಗಳನ್ನು ಸಾರ್ವಜನಿಕರು ಮತ್ತು ಹಿರಿಯ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ರಾಜಕೀಯ ಪಕ್ಷಗಳ ಮಹಿಳಾ ಕಾರ್ಯಕರ್ತರ ಪರ್ಸ್‌ಗಳನ್ನು ಮಹಿಳಾ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆಗೊಳಪಡಿಸಬಹುದಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು, ಚುನಾವಣೆ ಸಂಬಂಧಿತ ಅಧಿಕಾರಿಗಳು ಚುನಾವಣಾ ಆಯೋಗದ ವೀಕ್ಷಕರು ಅಥವಾ ಆಯೋಗದ ವೆಚ್ಚ ನಿಗಾ ವೀಕ್ಷಕರ ಉಸ್ತುವಾರಿಯಲ್ಲಿ ಸಂಚಾರಿ ತಂಡ, ವೀಡಿಯೊ  ಚಿತ್ರೀಕರಣ ತಂಡ ಕೆಲಸ ಮಾಡಲಿವೆ. ಈಗಾಗಲೇ ತಂಡಗಳನ್ನು ರಚಿಸಲಾಗಿದ್ದರೂ, ಮತದಾನಕ್ಕೆ 72 ಗಂಟೆ ಉಳಿದಿರುವಾಗ ಈ ತಂಡಗಳ ಕಾರ್ಯವೈಖರಿ ಚುರುಕುಗೊಳ್ಳಲಿದೆ ಎಂದು ಆಯೋಗದ ಸುತ್ತೋಲೆ ಹೇಳಿದೆ.

ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ವಾಹನಗಳಿಂದ ವಶಪಡಿಸಿಕೊಳ್ಳಲಾದ ಹಣ ಮತ್ತಿತರ ವಸ್ತುಗಳನ್ನು ದಿನನಿತ್ಯ ಆಯೋಗದ ಗಮನಕ್ಕೆ ತರಬೇಕು ಎಂದು ಸುತ್ತೋಲೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT