ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಮಾಡುವ ದಂಧೆ: ಎಚ್‌ಡಿಕೆ ಟೀಕೆ

Last Updated 28 ಜನವರಿ 2012, 5:50 IST
ಅಕ್ಷರ ಗಾತ್ರ

ಕುಣಿಗಲ್: ರೈತರ ಹೆಸರಲ್ಲಿ ಅಧಿಕಾರಿಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ. ಪ್ರತಿ ದಿನ ಬದಲಾಗುತ್ತಿರುವ ಸರ್ಕಾರದ ವಿದ್ಯಮಾನಗಳಿಂದ ಕಂಗೆಟ್ಟಿರುವ ಸಚಿವರು, ಶಾಸಕರೆಲ್ಲರೂ ಹಣ ಮಾಡುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಸದಸ್ಯೆ ವಸಂತಮ್ಮ ಜಯರಾಮಯ್ಯ ಅವರ ಕಚೇರಿ ಉದ್ಘಾಟಿಸಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪರೈತರ ಆರ್ಥಿಕ ಪ್ರಗತಿಗಾಗಿ 1,700 ಕೋಟಿ ರೂಪಾಯಿಯ ಕೃಷಿ ಬಜೆಟ್ ಮಂಡಿಸಿ ಸುವರ್ಣಭೂಮಿ ಯೋಜನೆಯಡಿ 10ಲಕ್ಷ ರೈತರಿಗೆ ತಲಾ 10ಸಾವಿರ ರೂಪಾಯಿಯಂತೆ ಒಂದು ಸಾವಿರ ಕೋಟಿ ಮೀಸಲಿಟ್ಟಿರುವುದಾಗಿ ಪ್ರಕಟಿಸಿದ್ದರು.

ಆದರೆ, ಈಚೆಗೆ ಅಧಿಕಾರಿಗಳು ನೀಡಿರುವ ಅಂಕಿ ಅಂಶದ ಪ್ರಕಾರ ಸುವರ್ಣಭೂಮಿ ಯೋಜನೆಗೆ ಹಣ ಮೀಸಲಿಡದೆ. ಸಾವಯವ ಕೃಷಿ ಮತ್ತು ಜೈವಿಕ ತಂತ್ರಜ್ಞಾನಕ್ಕಾಗಿ ಮೀಸಲಿಟ್ಟ 300 ಕೋಟಿ ಹಣದಲ್ಲಿ 149ಕೋಟಿ ರೂಪಾಯಿಯನ್ನು ಸುವರ್ಣಭೂಮಿ ಯೋಜನೆ ಫಲಾನುಭವಿಗಳಿಗೆ ನೀಡಲಾಗಿದೆ ಎಂದರು.

ಅಭಿವೃದ್ಧಿ ಹೆಸರಿನಲ್ಲಿ ಕೈಗಾರಿಕೆ ಸ್ಥಾಪಿಸುವ ಉದ್ದೇಶದಿಂದ ಸಮೃದ್ಧ, ಕೃಷಿಗೆ ಯೋಗ್ಯವಾದ ಭೂಮಿ ಕಸಿದುಕೊಳ್ಳುತ್ತಿರುವ ಸರ್ಕಾರ ಇಂದು ರೈತರಿಗೆ ಕೈತುಂಬಾ ಹಣ ನೀಡಿ ಮುಂದಿನ ದಿನಗಳಲ್ಲಿ ಬೀದಿಪಾಲು ಮಾಡುವ ಜೊತೆ ಕೃಷಿಯನ್ನೇ ನಿರ್ನಾಮ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಲು ಸಾವಿರ ಕೋಟಿ ರೂಪಾಯಿ ಮೀಸಲಿರಿಸಿರುವುದಾಗಿ ಪ್ರಕಟಿಸಿರುವ ಸರ್ಕಾರ, ಇದುವರೆವಿಗೂ ಒಂದು ರೂಪಾಯಿ ಕೊಟ್ಟಿಲ್ಲ ಎಂದರು.

ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಲು ಅವರ ಪಕ್ಷದಲ್ಲಿಯೆ ಅಡಚಣೆ ಇದ್ದ ಕಾರಣ, ಮಂಗಳೂರು ಕಡೆಯವರಾದ ನಮ್ಮವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಬೆಂಬಲಿಸಿದ್ದೇವೆ. ಅವರಿಂದಲೂ ಅಭಿವೃದ್ಧಿಯ ಯಾವ ಲಕ್ಷಣ ಕಂಡು ಬರುತ್ತಿಲ್ಲ. ಇನ್ನು ಸ್ವಲ್ಪದಿನ ನೋಡಿ ನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ರೈತರ, ಬಡವರ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್‌ನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡ, ಮುಖಂಡರಾದ ಅನಸೂಯಮ್ಮ ವೈ.ಕೆ.ರಾಮಯ್ಯ, ಜಯರಾಮಯ್ಯ, ಶಿವಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

ಜೆಡಿಎಸ್‌ನಿಂದ ಸಮಸ್ಯೆಗೆ ಪರಿಹಾರ
ರಾಜ್ಯದ ನೆಲ, ಜಲದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಶಕ್ತಿ ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಇಲ್ಲ. ಅದೇನಿದ್ದರೂ ತೃತೀಯ ಪ್ರಾದೇಶಿಕ ಶಕ್ತಿಯಿಂದ ಮಾತ್ರ ಸಾಧ್ಯ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಹೈದರಾಬಾದ್-ಕರ್ನಾಟಕ ಅಭಿವೃದ್ಧಿಗೆ ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ಆಗಬೇಕೆಂದು ಈಗ ಬಿಜೆಪಿ ಪಕ್ಷದವರೆ ಪ್ರತಿಭಟನೆ ಹಾಗೂ ಬಂದ್ ನಡೆಸುತ್ತಿದ್ದಾರೆ. ಆದರೆ, ವಾಜಪೇಯಿ ಪ್ರಧಾನಮಂತ್ರಿಯಾಗಿದ್ದಾಗ 19ಮಂದಿ ಲೋಕಸಭಾ ಸದಸ್ಯರಿದ್ದರೂ ಈ ಬಗ್ಗೆ ಯಾವುದೇ ಚಕಾರವೆತ್ತದೆ ಸುಮ್ಮನಿದ್ದು, ಈಗ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ನಡೆಯಲಿರುವ ಹಿಂದೂ ಶಕ್ತಿ ಸಮಾವೇಶಕ್ಕಾಗಿ ಖರ್ಚು ಮಾಡುವ ಕೋಟ್ಯಂತರ ರೂಪಾಯಿ ಹಣದ ಮೂಲ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ ಅವರು, ಒಮ್ಮೆಲೆ ಪ್ರಚಾರ ಗಿಟ್ಟಿಸಿಕೊಳ್ಳುವ ದುರುದ್ದೇಶದಿಂದ ಸಿಂಧಗಿಯಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ ಹಿಂದೂ ಜಾಗರಣ ವೇದಿಕೆಯವರು ಸಮಾಜಕ್ಕೆ ಯಾವ ಮಟ್ಟದ ಒಗ್ಗಟಿನ ಸಂದೇಶ ನೀಡುತ್ತಾರೆ ಎಂಬುದನ್ನು ಈಗಾಗಲೆ ರಾಜ್ಯದ ಜನತೆ ಮನವರಿಕೆ ಮಾಡಿಕೊಂಡಿದ್ದಾರೆ.

ಇನ್ನೂ ಉಡುಪಿಯ ಪರ್ಯಾಯ ಪೀಠಾರೋಹಣ ಕಾರ್ಯಕ್ರಮದಲ್ಲಿ ಒಮ್ಮತದ ಅಭಿಪ್ರಾಯ ಮೂಡಿಸಲು ವಿಫಲರಾದ ಸ್ವಾಮೀಜಿಗಳಿಂದ ಹಿಂದೂ ಸಮಾಜದ ಒಗ್ಗಟ್ಟು ಯಾವ ರೀತಿ ಸ್ಥಿರವಾಗಿರುತ್ತದೆ ಎಂಬುದನ್ನು ಜನರೇ ನಿರ್ಧರಿಸುತ್ತಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT