ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕ್ಕಾಗಿ ಸ್ನೇಹಿತನ ಅಪಹರಿಸಿ ಕೊಲೆ

Last Updated 21 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಣಕ್ಕಾಗಿ ಸ್ನೇಹಿತನನ್ನೇ ಅಪಹರಿಸಿದ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ ಕುತೂಹಲಕಾರಿ ಪ್ರಕರಣವೊಂದನ್ನು ಭೇದಿಸಿರುವ ಈಶಾನ್ಯ ವಿಭಾಗದ ಪೊಲೀಸರು ಇಬ್ಬರು ಯುವತಿಯರು ಸೇರಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಹೆಸರುಘಟ್ಟದಲ್ಲಿರುವ ಶ್ರೀಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ಗೆ ಪ್ರವೇಶ ಪಡೆದು ಕಾಲೇಜು ಬಿಟ್ಟಿದ್ದ ತುಷಾರ್ (21) ಕೊಲೆಯಾದವನು. ಆತನ ಸ್ನೇಹಿತನೇ ಆದ ವಾರೀಷ್ (21), ವಾರೀಷ್‌ನ ಪತ್ನಿ ಶಿವಾನಿ (20), ನಾದಿನಿ ಪ್ರೀತಿ (19) ಮತ್ತು ರೋಹಿತ್ ಕುಮಾರ್ (22) ಬಂಧಿತ ಆರೋಪಿಗಳು.

ತುಷಾರ್ ತಲೆಯ ಮೇಲೆ ಬಾಟಲಿ ಹೊಡೆದು ಆ ನಂತರ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ಶವವನ್ನು ಮೂಟೆಯಲ್ಲಿ ತುಂಬಿ ಯಲಹಂಕ ಉಪನಗರದಲ್ಲಿರುವ ನೀಲಗಿರಿ ತೋಪಿನಲ್ಲಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕ್ಕಾಗಿ ಅಪಹರಿಸಿ ಕೊಲೆ: ಬಿಹಾರದ ಪಾಟ್ನಾದಲ್ಲಿ ಗುತ್ತಿಗೆದಾರರಾಗಿರುವ ಪ್ರಮೋದ್ ಕುಮಾರ್ ಮೆಹ್ತಾ ಎಂಬುವರ ಮಗ ತುಷಾರ್ ಒಂದು ವರ್ಷದ ಹಿಂದೆ ನಗರಕ್ಕೆ ಬಂದಿದ್ದ. ಶ್ರೀಕೃಷ್ಣ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಆತ ಎಂಜಿನಿಯರಿಂಗ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದ. ದುಶ್ಚಟಗಳಿಗೆ ಬಲಿಯಾಗಿದ್ದ ಆತ ಕಾಲೇಜು ಬಿಟ್ಟಿದ್ದ.

ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ರೋಹಿತ್ ಕುಮಾರ್ ವಾಸ ಇರುವ ಮನೆಯ ಪಕ್ಕದ ಮನೆಯಲ್ಲಿ ವಾರೀಷ್, ಶಿವಾನಿ ಮತ್ತು ಪ್ರೀತಿ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ವಾರೀಷ್ ಸಹ ಬಿಹಾರದವನು. ಆತ ಸಂಭ್ರಮ್ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದ್ದ. ಆದರೆ ಆತನೂ ಕಾಲೇಜು ಬಿಟ್ಟಿದ್ದ. ಸಿಇಟಿಗೆ ತರಬೇತಿ ಪಡೆಯಲು ರಾಜಸ್ತಾನಕ್ಕೆ ಹೋಗಿದ್ದ ವೇಳೆ ಆತ ತುಷಾರ್‌ನನ್ನು ಭೇಟಿ ಮಾಡಿದ್ದ. ಆ ನಂತರ ಇಬ್ಬರೂ ಬೆಂಗಳೂರಿಗೆ ಬಂದಿದ್ದರು. ಆದರೆ ಈ ವಿಷಯ ಪರಸ್ಪರರಿಗೆ ಗೊತ್ತಿರಲಿಲ್ಲ.

ಕೆಲ ದಿನಗಳ ಹಿಂದೆ ದೆಹಲಿಗೆ ಹೋಗಿದ್ದ ವಾರೀಷ್‌ಗೆ ತುಷಾರ್‌ನ ಸಹೋದರ ಭೇಟಿಯಾಗಿದ್ದ. ತುಷಾರ್ ಬೆಂಗಳೂರಿನಲ್ಲಿ ಓದುತ್ತಿರುವ ವಿಷಯವನ್ನು ಆತ ಹೇಳಿದ್ದ ಮತ್ತು ಮೊಬೈಲ್ ಫೋನ್ ಸಂಖ್ಯೆಯನ್ನೂ ನೀಡಿದ್ದ. ಕೆಲ ದಿನಗಳ ಹಿಂದೆ ಅವರು ಪರಸ್ಪರ ಭೇಟಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೋಜಿನ ಜೀವನ ನಡೆಸುಸತ್ತಿದ್ದ ಆರೋಪಿಗಳು ಹಣ ಗಳಿಸಲು ತುಷಾರ್‌ನ ಅಪಹರಣಕ್ಕೆ ಸಂಚು ರೂಪಿಸಿದರು. ಆತನ ಮೊಬೈಲ್ ಫೋನ್‌ಗೆ ಕರೆ ಮಾಡಿ ಮನೆಗೆ ಬರುವಂತೆ ವಾರೀಷ್ ಹಲವು ಬಾರಿ ಕರೆದಿದ್ದ, ಆದರೆ ಆತ ಬಂದಿರಲಿಲ್ಲ. ಬಳಿಕ ಪತ್ನಿ ಮತ್ತು ನಾದಿನಿ ಮೂಲಕ ದೂರವಾಣಿ ಕರೆ ಮಾಡಿಸಿದ ವಾರೀಷ್, ಹೆಬ್ಬಾಳ ಸಮೀಪದ ಎಸ್ಟೀಮ್ ಮಾಲ್‌ಗೆ ಜ.14ರಂದು ಆತನನ್ನು ಕರೆಸಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿ, ಶಿವಾನಿ ಸೇರಿ ತುಷಾರ್‌ನನ್ನು ಮನೆಗೆ ಕರೆದುಕೊಂಡು ಹೋದ ನಂತರ ಉಳಿದ ಆರೋಪಿಗಳು ಅಲ್ಲಿಗೆ ಹೋಗಿದ್ದರು. ತುಷಾರ್‌ಗೆ ಚೆನ್ನಾಗಿ ಮದ್ಯಪಾನ ಮಾಡಿಸಿ ಆತನ ತಲೆಗೆ ಬಾಟಲಿಯಿಂದ ಹೊಡೆದು, ಕುತ್ತಿಗೆ ಹಿಸುಕಿ ಕೊಲೆಗೈದಿದ್ದರು. ನಂತರ ತುಷಾರ್‌ನ ತಂದೆ ಪ್ರಮೋದ್ ಕುಮಾರ್ ಅವರಿಗೆ ಕರೆ ಮಾಡಿ ‘ನಿಮ್ಮ ಮಗನನ್ನು ಅಪಹರಿಸಲಾಗಿದ್ದು, ಒಂಬತ್ತು ಲಕ್ಷ ನೀಡಿದರೆ ಆತನನ್ನು ಬಿಡುತ್ತೇವೆ. ಇಲ್ಲದಿದ್ದರೆ ಕೊಲ್ಲುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಇದೇ ವೇಳೆ ಅವರು ಶವವನ್ನು ನೀಲಗಿರಿ ತೋಪಿನಲ್ಲಿ ಎಸೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದರಿಂದ ಆತಂಕಗೊಂಡ ಪ್ರಮೋದ್ ಅವರು 17ರಂದು ನಗರಕ್ಕೆ ಬಂದು ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ಹಣ ತೆಗೆದುಕೊಂಡು ನಗರ ರೈಲು ನಿಲ್ದಾಣಕ್ಕೆ ಬರುವಂತೆ ಪ್ರಮೋದ್ ಅವರನ್ನು ವಾರೀಷ್ ಕರೆದಿದ್ದ. ಅಲ್ಲಿ ಆತನನ್ನು ಬಂಧಿಸಿ ನಂತರ ಉಳಿದ ಆರೋಪಿಗಳನ್ನು ಬಂಧಿಸಲಾಯಿತು ಪೊಲೀಸರು ಹೇಳಿದ್ದಾರೆ.

‘ಅಪರಹರಿಸಿದ ಬಳಿಕ ಹಣ ಪಡೆದರೂ ಆನಂತರವೂ ಸಿಕ್ಕಿಬೀಳಬಹುದು ಎಂಬ ಭಯದಿಂದ ಆರೋಪಿಗಳು ಕೊಲೆ ಮಾಡಿ ನಂತರ ಹಣಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್ ರವಿಕಾಂತೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿ ವಾರೀಷ್‌ನ ಪತ್ನಿ ಶಿವಾನಿ ದೆಹಲಿ ಮೂಲದವಳು. ಬಾರ್‌ಗರ್ಲ್ಸ್ ಆಗಿದ್ದ ಆಕೆ ಆತನನ್ನು ವಿವಾಹವಾಗಿದ್ದಳು. ಹಣಕ್ಕಾಗಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ’ ಎಂದು ಅವರು ಹೇಳಿದರು.

ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ರಾಮಚಂದ್ರಪ್ಪ, ಅಮೃತಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಅಶೋಕ್ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT