ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಮುಂದೆ ಬದುಕಿನ ಮೌಲ್ಯ ಗೌಣ

Last Updated 13 ನವೆಂಬರ್ 2011, 8:15 IST
ಅಕ್ಷರ ಗಾತ್ರ

ಅ.ನ.ಕೃ. ವೇದಿಕೆ (ಅರಕಲಗೂಡು.): ಹಣದ ಸಂಸ್ಕೃತಿಯಿಂದಾಗಿ ಬದುಕಿನ ಮೌಲ್ಯಗಳು ನಾಶವಾಗುತ್ತಿವೆ ಇದು ಇದೇ ರೀತಿ ಮುಂದುವ ರೆದಲ್ಲಿ ಸಮಾಜದ ದುರ್ಬಲರು, ಮಹಿಳೆಯರು ಶೋಷಣೆಗೆ ಒಳಗಾಗಲಿದ್ದು ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ಪ್ರೊ. ಹಿ.ಶಿ. ರಾಮಚಂದ್ರೇ ಗೌಡ ತಿಳಿಸಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಪ್ರಥಮ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಎರಡನೆ ದಿನವಾದ ಶನಿವಾರ ನಡೆದ ವರ್ತಮಾನದ ಕರ್ನಾಟಕದ ಸವಾಲುಗಳು ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ಎಂಬುದು ನಮ್ಮಳಗೆ ಇದೆ. ವ್ಯಕ್ತಿ ಅಥವಾ ವ್ಯವಸ್ಥೆಯನ್ನು ದೂಷಿಸುವ ಅಗತ್ಯವಿಲ್ಲ. ವ್ಯಕ್ತಿ ಬದಲಾಗದ ಹೊರತು ವ್ಯವಸ್ಥೆ ಬದಲಾಗುವುದಿಲ್ಲ. ಅಣ್ಣಾ ಹಜಾರೆ ಪ್ರಾಮಾಣಿಕ ವ್ಯಕ್ತಿಯಾದರೂ ಅವರ ಚಳುವಳಿಯ ಹಿಂದೆ ಕಾರ್ಪೊರೇಟ್ ಶಕ್ತಿಗಳಿವೆ. ಇಂತಹ ಹೋರಾಟ ಗಳಿಂದ ಬದಲಾವಣೆ ಸಾಧ್ಯವಿಲ್ಲ ಎಂದರು.

ಭ್ರಷ್ಟಾಚಾರ ಮತ್ತು ರಾಜಕಾರಣ ಕುರಿತು ಸಾಹಿತಿ ಪ್ರೊ.ಶಿವರಾಮು ಕಾಡನಕುಪ್ಪೆ ಮಾತ ನಾಡಿ, ಆರ್ಥಿಕ ಬಲದ ಮೇಲೆ ವ್ಯಕ್ತಿಯ ಸ್ಥಾನ ನಿರ್ಧರಿಸುವ ಪರಿಸ್ಥಿತಿಯಿಂದಾಗಿ ಭ್ರಷ್ಟಾಚಾರ ನಿಯಂತ್ರಣ ಮೀರಿ ಬೆಳೆಯುತ್ತಿದೆ ಎಂದರು.

ಎಲ್ಲ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ದೊರಕಿಸಬೇಕು ಎಂಬ ರಾಜಕೀಯ ನೀತಿಗೆ ತಿಲಾಂಜಲಿ ನೀಡಿ ಉದ್ಯಮಿಗಳು ಹೇಳಿದಂತೆ ಆರ್ಥಿಕ ನೀತಿ ರೂಪಿಸಲಾಗುತ್ತಿದೆ ಎಂದರು. ನೈತಿಕ ಪ್ರಜ್ಞೆ ಕುಸಿದಿದ್ದು ಭ್ರಷ್ಟಾಚಾರವನ್ನು ಮೌಲ್ಯವಾಗಿ ಸ್ವೀಕರಿಸುವ ಸ್ಥಿತಿ ಉಂಟಾಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಹಣದ ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ಹೊಸಕಿ ಹಾಕುತ್ತಿದೆ ಎಂದರು. 

 ಧಾರ್ಮಿಕ ಹಿಂಸೆ ಮತ್ತ ಭಯೋತ್ಪಾದನೆ ಕುರಿತು ವಿಮರ್ಶಕ ಜಿ.ಪಿ. ಬಸವರಾಜ್ ಮಾತ ನಾಡಿ ಜಗತ್ತಿನ ಎಲ್ಲ ಧರ್ಮಗಳ ಇತಿಹಾಸದ ಪುಟಗಳು ರಕ್ತಮಯವಾಗಿದೆ ಎಂದರು.

ಧಾರ್ಮಿಕ ಕೇಂದ್ರಗಳು ಕಪ್ಪು ಹಣದ ಕೇಂದ್ರಗಳಾಗಿವೆ. ಸ್ವಿಸ್ ಬ್ಯಾಂಕ್‌ನಲ್ಲಿನ ಕಪ್ಪುಹಣ ಹೊರ ತರುವುದಕಿಂತ ಮೊದಲು ಧಾರ್ಮಿಕ ಕೇಂದ್ರಗಳಲ್ಲಿನ ಕಪ್ಪು ಹಣ ಹೊರ ತೆಗೆಯುವ ಕಾರ್ಯ ತುರ್ತಾಗಿ ಆಗಬೇಕಿದೆ ಎಂದರು. ಮೈಸೂರಿನ ಜನಪರ ಹೋರಾಟಗಾರ ತೇ.ಸಿ. ವಿಶ್ವೇಶ್ವರಯ್ಯ ಯುವ ಜನತೆಯ ದಿಕ್ಕುದೆಶೆ ಕುರಿತು ಮಾತನಾಡಿದರು.

ಸಮ್ಮೇಳನಾಧ್ಯಕ್ಷ ಆರ್.ಕೆ. ಪದ್ಮನಾಭ್ ಮಾತನಾಡಿದರು. ತಾ.ಪಂ. ಮಾಜಿ ಅಧ್ಯಕ್ಷ ಎಚ್.ಮಾದೇಶ್, ಕಸಾಪ ಹೋಬಳಿ ಸಂಚಾಲಕ ಕೆ.ವೈ. ರವಿ, ಕಸಾಪ ಕಾರ್ಯದರ್ಶಿ ಪರಮೇಶ ಉಪಸ್ಥಿತರಿದ್ದರು. ವಾಣಿ ಸ್ವಾಗತಿಸಿ ಗುರುಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT