ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ 3 ವರ್ಷದಲ್ಲೇ ಕನಿಷ್ಠ

ಮೇ3ಕ್ಕೆ ಆರ್‌ಬಿಐ ಹಣಕಾಸು ನೀತಿ; ಬಡ್ಡಿದರ ಕಡಿತ ನಿರೀಕ್ಷೆ
Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ತರಕಾರಿ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ `ಸಗಟು ಬೆಲೆ ಸೂಚ್ಯಂಕ' (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಮಾರ್ಚ್ ತಿಂಗಳಲ್ಲಿ ಮೂರು ವರ್ಷಗಳ ಹಿಂದಿನ ಮಟ್ಟವಾದ ಶೇ 5.96ಕ್ಕೆ ಕುಸಿತ ಕಂಡಿದೆ.

ಇದಕ್ಕಿಂತಲೂ ಕಡಿಮೆ ಅಂದರೆ ಶೇ 4.95ರಷ್ಟು ಸಗಟು ಹಣದುಬ್ಬರ 2009ರ ಡಿಸೆಂಬರ್‌ನಲ್ಲಿ ದಾಖಲಾಗಿತ್ತು.ಹಣದುಬ್ಬರ ಇಳಿದಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮೇ 3ರಂದು ಪ್ರಕಟಿಸಲಿರುವ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿದರ ತಗ್ಗಿಸುವ ಸಾಧ್ಯತೆ ಹೆಚ್ಚಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

`ಹಣದುಬ್ಬರ ಈಗ ಸರ್ಕಾರದ ನಿಯಂತ್ರಣಕ್ಕೆ ಬಂದಿದೆ. ಬೆಲೆ ಏರಿಕೆ ಬಿಸಿಯಿಂದ ಜನಸಾಮಾನ್ಯರಿಗೆ ಸ್ವಲ್ಪ ಸಮಾಧಾನ ಲಭಿಸಿದೆ. ಮುಂಬರುವ ದಿನಗಳಲ್ಲಿ ಬೇಳೆಕಾಳು, ತರಕಾರಿ, ಧಾನ್ಯಗಳ ಬೆಲೆಗಳು ಇನ್ನಷ್ಟು ಇಳಿಯಲಿವೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅಭಿಪ್ರಾಯಪಟ್ಟಿದ್ದಾರೆ.

2012ನೇ ಸಾಲಿನ ಮಾರ್ಚ್‌ನಲ್ಲಿ ಸಗಟು ಹಣದುಬ್ಬರ ದರ ಶೇ 7.69ರಷ್ಟಿತ್ತು. ಈ ಬಾರಿ ಇದು ಶೇ 6.8ಕ್ಕೆ ಕುಸಿಯಬಹುದು ಎಂದು `ಆರ್‌ಬಿಐ' ಅಂದಾಜು ಮಾಡಿತ್ತು. ಆದರೆ, ಇದಕ್ಕಿಂತಲೂ ಹಿತಕರ ಮಟ್ಟಕ್ಕೆ ಕುಸಿತ ಕಂಡಿದೆ. ಜತೆಗೆ ಕೈಗಾರಿಕಾ ಪ್ರಗತಿ ಸೂಚ್ಯಂಕವೂ(ಐಐಪಿ) ಫೆಬ್ರುವರಿಯಲ್ಲಿ ಶೇ 0.6ಕ್ಕೆ ಕುಸಿತ ಕಂಡಿದೆ. ಈ ಎಲ್ಲ ಕಾರಣಗಳಿಂದ ಸಹಜವಾಗಿಯೇ `ಆರ್‌ಬಿಐ'  ಬಡ್ಡಿ ದರ ಕಡಿತ ಮಾಡಬಹುದು ಎಂಬ ನಿರೀಕ್ಷೆ ಹೆಚ್ಚಿದೆ. `ಆರ್‌ಬಿಐ' ರೆಪೊ ದರವನ್ನು ಶೇ 0.25ರಷ್ಟು ತಗ್ಗಿಸಬಹುದು ಎಂದು ಬ್ಯಾಂಕ್ ಆಫ್ ಬರೋಡಾದ ಹಿರಿಯ ಆರ್ಥಿಕ ತಜ್ಞೆ ರೂಪಾ ರೇಗ್ ನಿಶ್ಚರ್ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್‌ನಲ್ಲಿ ತಯಾರಿಕಾ ವಲಯದ ಹಣದುಬ್ಬರ ದರ ಶೇ 4.51ರಿಂದ ಶೇ 4.07ಕ್ಕೆ ಇಳಿಕೆ ಕಂಡಿದೆ. ಒಟ್ಟಾರೆ`ಡಬ್ಲ್ಯುಪಿಐ'ಗೆ ಶೇ 14.34ಕ್ಕೆ ಕೊಡುಗೆ ನೀಡುವ ಆಹಾರ ಪದಾರ್ಥಗಳ ದರ ಶೇ 8.73ಕ್ಕೆ ಇಳಿದಿದೆ. ಫೆಬ್ರುವರಿಯಲ್ಲಿ ಆಹಾರ ಹಣದುಬ್ಬರ     ಶೇ 11.38ರಷ್ಟಿತ್ತು. ಶೇ 12.11ರಷ್ಟಿದ್ದ ತರಕಾರಿ ಬೆಲೆಗಳು ಮಾರ್ಚ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ ಶೇ 0.95ಕ್ಕೆ ಕುಸಿತ ಕಂಡಿವೆ. ಅಕ್ಕಿ ಧಾರಣೆಯೂ   ಶೇ 18.84ರಿಂದ   ಶೇ 17.90ಕ್ಕೆ ಅಲ್ಪ ಇಳಿಕೆ ಕಂಡಿದೆ. ಮೊಟ್ಟೆ, ಮಾಂಸ, ಮೀನು, ಹಣ್ಣಿನ ದರಗಳು ತುಸು ಅಗ್ಗವಾಗಿವೆ.  ತೈಲ ಮತ್ತು ಇಂಧನ ಹಣದುಬ್ಬರ ದರ ಮಾರ್ಚ್‌ನಲ್ಲಿ ಶೇ 10.18ಕ್ಕೆ ಏರಿಕೆ ಕಂಡಿದೆ.

ತರಕಾರಿ ಮತ್ತು ಹಣ್ಣುಗಳ ಬೆಲೆ ಇಳಿದಿರುವುದರಿಂದ ಸಗಟು ಹಣದುಬ್ಬರ ಇಳಿದಿದೆ. ಆದರೆ, ಒಟ್ಟಾರೆ ಆಹಾರ ಪದಾರ್ಧಗಳ ಬೆಲೆಗಳು  ಹಿತಕರ ಮಟ್ಟಕ್ಕೆ ಇಳಿಯದಿದ್ದರೆ ಗ್ರಾಹಕ ಬೆಲೆ ಸೂಚ್ಯಂಕ ಆಧರಿಸಿದ ಚಿಲ್ಲರೆ ಹಣದುಬ್ಬರ ಎರಡಂಕಿ ಮಟ್ಟದಲ್ಲೇ ಮುಂದುವರೆಯಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT