ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ 9 ತಿಂಗಳಲ್ಲೇ ಗರಿಷ್ಠ

ಕೈಗಾರಿಕೆ ಕ್ಷೇತ್ರ ಹಿನ್ನಡೆ; ರೂ ಮೌಲ್ಯ 58 ಪೈಸೆ ಕುಸಿತ
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಒಂದೆಡೆ ಚಿಲ್ಲರೆ ವಹಿವಾಟು ಹಣದುಬ್ಬರ ಒಂಬತ್ತು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದ್ದರೆ, ಇನ್ನೊಂದೆಡೆ ಕೈಗಾರಿಕಾ ವಲಯ ನಕಾರಾತ್ಮಕ ಸಾಧನೆ ತೋರಿ ಮೂರು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ 58 ಪೈಸೆಗಳಷ್ಟು ಅಪಮೌಲ್ಯಗೊಂಡಿದೆ. ಒಂದು ಡಾಲರ್‌ಗೆ ರೂ61.83ರಂತೆ ವಿನಿಮಯಗೊಂಡಿದೆ.

ಈ ಎಲ್ಲ ಅಂಶಗಳೂ ಕೇಂದ್ರ ಸರ್ಕಾರದ ಚಿಂತೆ ಹೆಚ್ಚುವಂತೆ ಮಾಡಿವೆ. ಹಣದುಬ್ಬರ ನಿಯಂತ್ರಣ ಕಾರಣ ಮುಂದೊಡ್ಡಿ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮುಂದಿನ ವಾರ ಮತ್ತೆ ಬಡ್ಡಿದರ ಏರಿಸುವ ಸಾಧ್ಯತೆ ಕಂಡುಬಂದಿದೆ.

ಚಿಲ್ಲರೆ ವಹಿವಾಟು ಆಧರಿಸಿದ ನವೆಂಬರ್‌ನಲ್ಲಿನ ಹಣದುಬ್ಬರ ಶೇ  11.24ರ ಮಟ್ಟಕ್ಕೇರಿದೆ. ಅಕ್ಟೋಬರ್‌ನಲ್ಲಿನ ಕೈಗಾರಿಕಾ ಕ್ಷೇತ್ರದ ಸಾಧನೆ ಶೇ 1.8ಕ್ಕೆ ಕುಸಿದಿದೆ.

ಹಣ್ಣುಗಳು ಮತ್ತು ಈರುಳ್ಳಿ, ಆಲೂಗಡ್ಡೆ, ಟೊಮೆಟೊ ಸೇರಿದಂತೆ ತರಕಾರಿಗಳ ಧಾರಣೆಯಲ್ಲಿ ಭಾರಿ ಏರಿಕೆ ಆಗಿದ್ದರಿಂದ ಹಣದುಬ್ಬರದಲ್ಲಿ ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಗುರುವಾರ ಬಿಡುಗಡೆಯಾದ ಅಂಕಿ ಅಂಶಗಳು ವಿವರಿಸಿವೆ.

ತಯಾರಿಕಾ ವಲಯದ ಉದ್ಯಮಗಳಿಂದ ಕಳಪೆ ಸಾಧನೆ ಕಂಡುಬಂದಿರುವುದು ಅಕ್ಟೋಬರ್‌ನಲ್ಲಿ ಒಟ್ಟಾರೆ ಕೈಗಾರಿಕಾ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿದೆ.

‘ಮಾರುಕಟ್ಟೆಯಲ್ಲಿನ ಬೇಡಿಕೆ ಮತ್ತು ಪೂರೈಕೆ ನಡುವಿನ ಸಮತೋಲನ ಕಾಪಾಡಿಕೊಳ್ಳಲು ಹಣಕಾಸು ನೀತಿಯೂ ಮುಖ್ಯ ಪಾತ್ರ ವಹಿಸಬೇಕಿದೆ. ದೇಶದ ಆರ್ಥಿಕ ಸ್ಥಿತಿ ದುರ್ಬಲವಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಹಣದುಬ್ಬರ ಹೆಚ್ಚಳದಿಂದ ಉಂಟಾಗಿರುವ ಒತ್ತಡವನ್ನೂ ಪರಿಗಣಿಸಲೇಬೇಕಿದೆ’ ಎಂದು ‘ಆರ್‌ಬಿಐ’ ಗವರ್ನರ್‌ ರಘುರಾಂ ರಾಜನ್‌ ಪ್ರತಿಕ್ರಿಯಿಸಿದ್ದಾರೆ.

‘ಆರ್‌ಬಿಐ’ ಡಿ. 18ರಂದು ಹಣಕಾಸು ನೀತಿ ಪರಾಮರ್ಶೆ ನಡೆಸಲಿದೆ. ಈ ಹಿಂದಿನ ಎರಡು ಬಾರಿಯ ಪರಾಮರ್ಶೆ ಸಂದರ್ಭದಲ್ಲೂ ಬಡ್ಡಿದರದಲ್ಲಿ ಶೇ 0.25ರಷ್ಟು ಏರಿಕೆ ಮಾಡಿತ್ತು.

ಸೂಚ್ಯಂಕ 246 ಅಂಶ ಕುಸಿತ
ಹಣದುಬ್ಬರ ಹೆಚ್ಚಳ ಮತ್ತು ಕೈಗಾರಿಕಾ ಕ್ಷೇತ್ರದ ನಕಾರಾತ್ಮಕ ಪ್ರಗತಿಯ ಸುದ್ದಿ ಗುರುವಾರ ಪ್ರಕಟಗೊಂಡ ಬೆನ್ನಲ್ಲೇ ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕ 246 ಅಂಶಗಳ ಕುಸಿತ ಕಂಡಿದೆ. 21 ಸಾವಿರ ಅಂಶಗಳಿಂದ ಕೆಳಕ್ಕಿಳಿದು ದಿನದ ವಹಿವಾಟು ಕೊನೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT