ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ: ಬದುಕು ದುರ್ಭರ!

`ಅಸೋಚಾಂ' ಸಮೀಕ್ಷೆ: ನಗರಗಳಲ್ಲಿ ಸಿದ್ಧ ಆಹಾರಕ್ಕೆ ಹೆಚ್ಚಿದ ಬೇಡಿಕೆ
Last Updated 7 ಜುಲೈ 2013, 13:09 IST
ಅಕ್ಷರ ಗಾತ್ರ

ಬೆಂಗಳೂರು: ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿರುವುದು ಮಧ್ಯಮ  (ಎಂಐಜಿ) ಮತ್ತು ಕಡಿಮೆ ವರಮಾನ ಹೊಂದಿರುವ ಜನರ (ಎಲ್‌ಐಜಿ) ಆಹಾರ ಶೈಲಿಯನ್ನೇ ಬದಲಿಸಿದೆ. ಹೌದು!. ಹಣದುಬ್ಬರದಿಂದ ತತ್ತರಿಸಿರುವ ಶೇ 55ರಷ್ಟು ಮಧ್ಯಮ ವರ್ಗದ ಜನತೆ ಅನಿವಾರ್ಯವಾಗಿ ತಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಇತ್ತೀಚೆಗೆ ಅಡುಗೆ ಮಾಡುವ ಬದಲು `ಸಿದ್ಧ ಆಹಾರ'ವನ್ನೇ ಬಳಸುತ್ತಿದ್ದಾರೆ ಎನ್ನುತ್ತದೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ  (ಅಸೋಚಾಂ) ನಡೆಸಿದ ಸಮೀಕ್ಷೆ.

ಪ್ರತಿಕೂಲ ಮುಂಗಾರಿನಿಂದ ತರಕಾರಿಗಳ ಬೆಲೆ ದಿಢೀರನೆ ಶೇ 300ರಷ್ಟು ತುಟ್ಟಿಯಾಗಿದೆ. ಹಣ್ಣು, ತರಕಾರಿ, ಧಾನ್ಯಗಳನ್ನು ಖರೀದಿಸಿ ಆಹಾರ ಸಿದ್ಧಪಡಿಸುವುದು ದಿನೇ ದಿನೇ `ದುಬಾರಿ' ಆಗುತ್ತಿರುವುದರಿಂದ  ಕಡಿಮೆ ವರಮಾನ ಹೊಂದಿರುವ ಅನೇಕರು ಸಂಸ್ಕರಿಸಿದ, `ಸಿದ್ಧ ಆಹಾರ' ಪೊಟ್ಟಣಗಳತ್ತ ಒಲವು ತೋರಿಸುತ್ತಿದ್ದಾರೆ ಎಂದು    `ಅಸೋಚಾಂ' ಇತ್ತೀಚೆಗೆ ಬಿಡುಗಡೆ ಮಾಡಿರುವ `ರೈತರ ಜಮೀನಿನಿಂದ ಊಟದ ತಟ್ಟೆಯವರೆಗೆ' ವರದಿಯಲ್ಲಿ ಹೇಳಿದೆ.

ಬೆಂಗಳೂರು, ದೆಹಲಿ, ಮುಂಬೈ, ಅಹಮದಾಬಾದ್, ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಸೇರಿದಂತೆ ಪ್ರಮುಖ ನಗರಗಳ 5 ಸಾವಿರ ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ಶೇ 88ರಷ್ಟು ಮಧ್ಯಮ ಮತ್ತು ಕಡಿಮೆ ವರಮಾನ ಹೊಂದಿರುವ ಜನತೆ `ಆಹಾರ ವೆಚ್ಚವನ್ನು ನಿರ್ವಹಿಸುವುದು ಇತ್ತೀಚೆಗೆ ತುಂಬಾ ಕಷ್ಟವಾಗುತ್ತಿದೆ' ಎಂದು ಹೇಳಿದ್ದಾರೆ. ಮುಂಗಾರು ಅಸ್ಥಿರತೆಯಿಂದ ಆಹಾರ ಧಾನ್ಯಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಇದರ ನೇರ ಪರಿಣಾಮ ಊಟದ ತಟ್ಟೆಯಲ್ಲೂ ಕಾಣಿಸಿಕೊಂಡಿದೆ. ಒಟ್ಟಾರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಮತ್ತು ಆಹಾರ ಶೈಲಿಯ ಮೇಲೂ ಹಣದುಬ್ಬರ ಪರಿಣಾಮ ಬೀರಿದೆ ಎನ್ನುತ್ತಾರೆ  `ಅಸೋಚಾಂ' ಪ್ರಧಾನ ಕಾರ್ಯದರ್ಶಿ   ಡಿ.ಎಸ್.ರಾವತ್.

ಕಳೆದ ಮೂರು ವರ್ಷಗಳಲ್ಲಿ ಜನಸಾಮಾನ್ಯರ ವೇತನದಲ್ಲಿ ಸರಾಸರಿ ಶೇ 10ರಿಂದ ಶೇ 15ರಷ್ಟು ಏರಿಕೆಯಾಗಿದೆ. ಆದರೆ, ಹಣ್ಣು ಮತ್ತು ತರಕಾರಿ ಬೆಲೆ ಶೇ 250ರಿಂದ ಶೇ 300ರಷ್ಟು ಏರಿಕೆಯಾಗಿದೆ. ಇದರಿಂದ  ಮೆಟ್ರೊ ನಗರಗಳಲ್ಲಿ ಶೇ 82ರಷ್ಟು ಮಧ್ಯಮವರ್ಗದ ಜನತೆ  ತರಕಾರಿ ಖರೀದಿಸುವುದನ್ನು ಅರ್ಧದಷ್ಟು ಕಡಿಮೆ ಮಾಡಿದ್ದಾರೆ ಎಂದು    `ಅಸೋಚಾಂ'ನ ಸಾಮಾಜಿಕ ಅಭಿವೃದ್ಧಿ ಪ್ರತಿಷ್ಠಾನ     (ಎಎಸ್‌ಡಿಎಫ್) ವಿಶ್ಲೇಷಿಸಿದೆ.

ಬೆಲೆ ಏರಿಕೆಯಿಂದ ತತ್ತರಿಸಿರುವ  ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದ್ದರೆ ಮುಂಬೈ ಮತ್ತು ಅಹಮದಾಬಾದ್ ನಂತರದ ಸ್ಥಾನಗಳಲ್ಲಿವೆ. ಶೇ 86ರಷ್ಟು ಜನತೆ  ಹಣದುಬ್ಬರ ತಮ್ಮ ಬದುಕನ್ನು ಇನ್ನಷ್ಟು    ವಿಷಮಗೊಳಿಸಿದೆ ಎಂದು ಹೇಳಿದ್ದಾರೆ.  ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 75ರಷ್ಟು ಗೃಹಿಣಿಯರು `ಕಳೆದ ಎರಡು ತಿಂಗಳಲ್ಲಿ ಹಣ್ಣು ಮತ್ತು ತರಕಾರಿ ಖರೀದಿಸುವುದು ಶೇ 70ರಷ್ಟು ಕಡಿಮೆ ಮಾಡಿದ್ದೇವೆ' ಎಂದು ಹೇಳಿದ್ದಾರೆ. ಹಾಲು ಮತ್ತು ಬೇಳೆಕಾಳುಗಳ ಬೆಲೆ ಏರಿಕೆಯೂ ಮಧ್ಯಮವರ್ಗದವರ ಮೇಲೆ ತೀವ್ರ ಪರಿಣಾಮ ಬೀರಿದೆ. 

`ಸಾಮಾನ್ಯವಾಗಿ ಸೀಸನ್‌ಗೆ ತಕ್ಕಂತೆ ಹಣ್ಣುಗಳನ್ನು ಖರೀದಿಸುತ್ತಿದ್ದೆವು. ಆದರೆ, ಈ ಬಾರಿ ಹಣ್ಣುಗಳ ಬೆಲೆ ಗಗನಕ್ಕೇರಿದೆ. ತರಕಾರಿ ಕೂಡ ತುಟ್ಟಿಯಾಗಿದೆ. ಆಲೂಗೆಡ್ಡೆ, ಟೊಮೆಟೊ, ಈರುಳ್ಳಿಯಂತಹ ಸಾಮಾನ್ಯ ತರಕಾರಿಗಳಿಗೆ ಮಧ್ಯಮವರ್ಗದ ಜನತೆ ತೃಪ್ತಿಪಟ್ಟುಕೊಳ್ಳಬೇಕಿದೆ' ಎಂದು ದೆಹಲಿ ಮೂಲದ ಗೃಹಿಣಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 52ರಷ್ಟು ಉದ್ಯೋಗಿಗಳು ತಾವು ಈಗ ಪ್ರತಿ ತಿಂಗಳು ಸರಾಸರಿ ರೂ4 ರಿಂದ ರೂ5 ಸಾವಿರವನ್ನು ತರಕಾರಿ ಮತ್ತು ಹಣ್ಣುಗಳ ಖರೀದಿಗೆ ವ್ಯಯಿಸಬೇಕಿದೆ ಎಂದು ಹೇಳಿದ್ದಾರೆ. 5 ವರ್ಷಗಳ ಹಿಂದೆ ಈ ಮೊತ್ತ ರೂ1  ಸಾವಿರದಿಂದ  ರೂ1,250ರಷ್ಟಿತ್ತು. ಸದ್ಯ ಪ್ರತಿ ಕೆ.ಜಿ ಟೊಮೆಟೊಗೆ ರೂ60, ಬೆಂಡೆಕಾಯಿಗೆ ರೂ 50, ಬದನೆಗೆ ರೂ40, ಮೆಣಸಿನಕಾಯಿಗೆ  ರೂ80 ಪಾವತಿಸಬೇಕಿದೆ ಎಂದು      ಅಸಮಾಧಾನ ಹೊರಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT