ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣವಿದ್ದರೆ ನೀರೂ ಬರುತ್ತಾ?

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪ್ರತಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಉದ್ಭವವಾಗುವುದು ಸರ್ವೇಸಾಮಾನ್ಯ. ಇದು ಬರಿ ಬೆಂಗಳೂರು ಅಥವಾ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ವಿಚಿತ್ರವೆಂದರೆ ನೀರು ಎಷ್ಟೇ ಸಮಸ್ಯೆಯಾಗಿದ್ದರೂ ನೀರಿನ ಬಗ್ಗೆ ನಾವು ಹೆಚ್ಚು ಮಹತ್ವ ಕೊಡದೆ ಇರುವುದು. ಬಹುಶಃ ನೀರಿನ ಬಗ್ಗೆ ಚರ್ಚೆ ಮಾಡುವವರೇ ಬೇರೆ ಮತ್ತು ನೀರಿಲ್ಲದೆ ಕಷ್ಟ ಪಡುವವರೇ ಬೇರೆಯಾಗಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅದೇನೆ ಇದ್ದರೂ ನೀರಿನ ಸಮಸ್ಯೆಯನ್ನು ನಿಭಾಯಿಸುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆಂದು ನಿಖರವಾಗಿ ಹೇಳಬಹುದು.

ನೀರಿನ ಕೊರತೆಯಾಗಲು ಅಥವಾ ಅದು ಸಮಸ್ಯೆಯಾಗಿ ಪರಿಣಮಿಸಲು ಹಲವಾರು ಕಾರಣಗಳಿವೆ. ಕಳೆದ ದಶಕದಲ್ಲಿ ನಮ್ಮ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು, ಹಲವಾರು ರೀತಿಯ ಉದ್ದಿಮೆಗಳು, ನಗರೀಕರಣದ ಭರಾಟೆ, ಪಟ್ಟಣ ನಗರಗಳ ಆಧುನೀಕರಣದ ಹಾವಳಿ, ಕೃಷಿಯಲ್ಲಿ ವ್ಯಾಪಾರಿ ಬೆಳೆಗಳ ಹೆಚ್ಚಳ, ಹೀಗೆ ಈ ಬೆಳವಣಿಗೆಗಳು ನೀರಿನ ಬೇಡಿಕೆ ಏರಿಸಿ ನಮ್ಮ ಜಲ ಮೂಲಗಳ ಮೆಲೆ ಭಾರಿ ಒತ್ತಡ ಹೇರಲು ಕಾರಣಗಳಾಗಿವೆ.  

ಇತ್ತೀಚೆಗೆ ಪತ್ರಿಕೆಯಲ್ಲಿ ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ಭಾರತ ಸರ್ಕಾರದ ನಿಲುವಿನ ಬಗ್ಗೆ ಒಂದು ಲೇಖನವಿತ್ತು. ಆ ಲೇಖನದಲ್ಲಿ ಅಧಿಕಾರಿಯೊಬ್ಬರು ಕಬ್ಬಿನ ಬೆಳೆಗೆ ನೀರನ್ನು ಬಳಸುವ ಬದಲು ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆಯನ್ನು ಪೂರೈಸಿ ಎಂದು ಹೇಳಿದ ಬಗ್ಗೆ ಆಕ್ರೋಶವಿತ್ತು.

ಒಬ್ಬ ಅಧಿಕಾರಿ ನೀರನ್ನು ಯಾವ ರೀತಿ ಬಳಸಬೇಕೆಂದು  ಹೇಳುವ ಅಧಿಕಾರ ಪಡೆದಿರಲಿಕ್ಕಿಲ್ಲ. ಆದರೆ ಅವರು ಹೇಳಿದ್ದು ಅಲ್ಲಗಳೆಯಲು ಸಾಧ್ಯವಿಲ್ಲ. ಇಲ್ಲಿ ಪ್ರಶ್ನೆ ಬರುವುದು ಯಾವುದಕ್ಕೆ ನಾವು ಪ್ರಾಶಸ್ತ್ಯ ಒದಗಿಸಬೇಕೆನ್ನುವುದು. ಕುಡಿಯಲು ನೀರನ್ನು ಒದಗಿಸುವುದು ಮುಖ್ಯವೋ ಅಥವಾ ಕಬ್ಬು ಬೆಳೆಸಲೋ? ನಮಗೆ ಕಬ್ಬು ಬೇಕು, ಬತ್ತ ಬೇಕು, ಜೋಳವೂ ಬೇಕು. ಆದರೆ ಕುಡಿಯಲು ಮೊದಲು ನೀರು ಬೇಕು. ಆಮೇಲೆ ಉಳಿದಿದ್ದನ್ನು ಯಾವ ಯಾವುದು ಎಷ್ಟೆಷ್ಟು ಬೇಕು ಎನ್ನುವುದನ್ನು ನಿರ್ಧಾರ ಮಾಡಿ, ಆ ರೀತಿಯಲ್ಲಿ ನೀರಿನ ಹಂಚಿಕೆಯಾದರೆ ಅಂಥ ಯೋಜನೆ ಮತ್ತು ನಿರ್ಧಾರ ಸಮರ್ಪಕವಾಗಿರುತ್ತದೆ. ನೀರಿನ ಸಮಸ್ಯೆ ಪರಿಹಾರ ಮಾಡಬೇಕೆಂದರೆ ಸರ್ಕಾರ ಈ ದಿಸೆಯಲ್ಲಿ ಯೋಚಿಸುವುದು ಅವಶ್ಯಕವಾಗಿದೆ.

ಕೆಲವು ಸಮೀಕ್ಷೆಗಳು ಸಾರುವ ಪ್ರಕಾರ ಒಂದು ಟನ್ ಕಬ್ಬು ಬೆಳೆಯಲು ಒಂದು ಸಾವಿರ ಟನ್ ನೀರು  ಒದಗಿಸಬೇಕು. ಇದೇ ರೀತಿ ಬತ್ತ ಬೆಳೆಯಲು ಕೂಡ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ.  ಆದ್ದರಿಂದ ಕಾವೇರಿ ನದಿ ನೀರನ್ನು ಉಪಯೋಗಿಸಿ ವರ್ಷಕ್ಕೆ ಮೂರು ಫಸಲು ಬತ್ತವನ್ನು ತೆಗೆಯುವ ತಮಿಳು ನಾಡಿನ ರೈತರ ಕ್ರಮವನ್ನು ಕೂಡ ಖಂಡಿಸಬೇಕಾಗುತ್ತದೆ.

ಕೃಷಿಗೆ ಸಂಬಂಧಪಟ್ಟಂತೆ ನೀರಿನ ವಿಷಯದಲ್ಲಿ ಸರ್ಕಾರವಾಗಲಿ, ಕೃಷಿ ಖಾತೆಯಾಗಲಿ ಹೆಚ್ಚು ಗಮನ ಕೊಡುತ್ತಿಲ್ಲ. ಯಾಕೆಂದರೆ ಒಟ್ಟು ನೀರಿನ ಬಳಕೆಯಲ್ಲಿ ಸುಮಾರು ಶೇ 70 ಶುದ್ಧ ನೀರು  ಕೃಷಿಯಲ್ಲಿಯೇ ಬಳಸಲಾಗುತ್ತದೆ. ಇದೇ ಕಾರಣದಿಂದಾಗಿ ನೀರಿನ ಹಲವಾರು ಅವಶ್ಯಕ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಸಕ್ಕರೆ ಕಾರ್ಖಾನೆಗಳ ಪಾತ್ರ ಮತ್ತು ಲಾಬಿ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಿಸಬೇಕು. ಇದೇ ರೀತಿ ನಮ್ಮಲ್ಲಿ ಹಲವಾರು ಉದ್ದಿಮೆಗಳು ನೀರನ್ನಾಧರಿಸಿದ ಘಟಕಗಳಾಗಿವೆ.  ಕಬ್ಬಿಣ, ಸಿಮೆಂಟ್, ಪೇಪರ್, ಪ್ಲಾಸ್ಟಿಕ್, ಜವಳಿ, ರಬ್ಬರ್, ವಿದ್ಯುತ್‌ಸ್ಥಾವರ ಇವೆಲ್ಲವೂ ಹೇರಳ ಪ್ರಮಾಣದಲ್ಲಿ ನೀರನ್ನು ಉಪಯೋಗಿಸುತ್ತವೆ.

ನಮ್ಮ ದಿನ ನಿತ್ಯದ ಜೀವನದಲ್ಲಿ ಯಾವ ವಸ್ತುಗಳನ್ನು ನಾವು ಹೆಚ್ಚು ಬಳಸುತ್ತೇವೋ, ಯಾವುದು ನಮಗೆ ಅವಶ್ಯವಾಗಿದೆಯೋ, ಎನ್ನುವುದನ್ನು ಪರಿಗಣಿಸಿ ಅಂತಹ ವಸ್ತುಗಳ ಉತ್ಪಾದನೆಗೆ ಪ್ರಾಶಸ್ತ್ಯ ಕೊಡುವುದು ಸರ್ಕಾರಗಳ ಧೋರಣೆಗಳಾಗಬೇಕು.  ಇಲ್ಲವಾದಲ್ಲಿ ನೀರಿನ ಸಮಸ್ಯೆ ಬರುವ ವರ್ಷಗಳಲ್ಲಿ ತೀವ್ರವಾಗುವುದರಲ್ಲಿ ಸಂದೇಹವಿಲ್ಲ.

ಕೇರಳದ ಪ್ಲಾಚೆಮಾಡಾ ಯಂಬ ಪ್ರದೇಶದಲ್ಲಿ ಕೋಕೋಕೋಲಾ ಸಂಸ್ಥೆಯವರು ನೂರಾರು ಬೋರ್‌ವೆಲ್‌ಗಳನ್ನು ಕೊರೆದು ಅಲ್ಲಿ ಅಂತರ್ಜಲದ ಮೂಲಗಳಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಕಬಳಿಸಿ ಕೋಕೋಕೋಲಾ ಪಾನೀಯವನ್ನು ತಯಾರಿಸುತ್ತಿದ್ದರು. ಕ್ರಮೇಣ, ಆ ಪ್ರದೇಶದಲ್ಲಿನ ಕೃಷಿಗೆ ಮತ್ತು ತೋಟಗಳಿಗೆ ನೀರಿಲ್ಲದಾಯಿತು. ಇದನ್ನು ಸಹಿಸದ ಅಲ್ಲಿಯ ಜನ ಗ್ರಾಮಪಂಚಾಯ್ತಿ ಸಭೆಗಳ ಜೊತೆ ಸೇರಿ ಒಂದು ದೊಡ್ಡ ಆಂದೋಲನವನ್ನೇ ಮಾಡಬೇಕಾಯಿತು.  ಇದರ ಪರಿಣಾಮವಾಗಿ ಕೋಕೋ ಕೋಲಾ ಸಂಸ್ಥೆಯವರು ಅಲ್ಲಿಂದ ನಿರ್ಗಮಿಸಬೇಕಾಯಿತು. ಕೇರಳದಲ್ಲಿನ ಜನಪರ ಅಂದೋಲನಗಳ ಸಂಕೇತವಿದು. ಮುಖ್ಯವಾಗಿ ಪ್ಲಾಚೆಮಾಡಾದಲ್ಲಿ ಮೂಡಿ ಬಂದ ಪ್ರಶ್ನೆ ಏನೆಂದರೆ, ಬದುಕಲು ನಮಗೆ ಅನ್ನ ಮುಖ್ಯವೋ ಅಥವಾ ಕೋಕೋ ಕೋಲಾ ನೊ ಎನ್ನುವುದು!

ಈ ಸಂದರ್ಭದಲ್ಲಿ ನನಗೆ ಒಂದು ಸನ್ನಿವೇಶ ನೆನಪಾಗುತ್ತಿದೆ. ಅನೇಕ ವರ್ಷಗಳ ಹಿಂದೆ ಬಿಡದಿ ಊರಿನ ಪಕ್ಕದಲ್ಲಿ ಎರಡು ಬೃಹತ್ ಪ್ರಮಾಣದ ಉದ್ಯಮದ ಘಟಕಗಳು ತಲೆ ಎತ್ತುತ್ತಾ ಇದ್ದವು.  ಒಂದು ಟೊಯೋಟೋ ಕಾರ್ಖಾನೆ ಹಾಗೂ ಇನ್ನೊಂದು ಕೋಕೋ ಕೋಲಾ. ಒಂದು ಸಾವಿರ ಎಕರೆ ಭೂಮಿ ಸರ್ಕಾರ ಈ ಘಟಕಗಳಿಗೆ ಮಂಜೂರು ಮಾಡಿದ್ದರು.  ಆದರೆ,  ಈ ಸಾವಿರ ಎಕರೆ ಭೂಮಿ ಬಿಡದಿ ಪಕ್ಕದಲ್ಲಿರುವ ಬೈರಮಂಗಲ ಕೆರೆಯ ಜಲಾನಯನ ಪ್ರದೇಶವಾಗಿತ್ತು.

ಅಲ್ಲಿ ಹಲವಾರು ಜಾತಿಯ ಗಿಡ ಮರಗಳು, ಹುಲ್ಲುಗಾವಲು, ಕುರುಚಲು ಕಾಡು ಹೀಗೆಲ್ಲಾ ಇತ್ತು.  ಬೈರಮಂಗಲ ಕೆರೆ ಬೆಂಗಳೂರಿನ ಸುತ್ತಲಿರುವ ಕೆರೆಗಳಲ್ಲೆಲ್ಲಾ ಅತಿ ದೊಡ್ಡ ಕೆರೆ.  ಹತ್ತಾರು ಹಳ್ಳಿಗಳು ಆ ಕೆರೆಯನ್ನು ಅವಲಂಬಿಸಿದ್ದವು.  ತರಕಾರಿ, ಬತ್ತ, ರಾಗಿ, ತೆಂಗು, ಬಾಳೆ ಇವೆಲ್ಲಾ ಬೆಳೆಯುತ್ತಿದ್ದರು.  ಈ ಬೃಹತ್ ಉದ್ದಿಮೆ ಘಟಕಗಳು ಅಲ್ಲಿ ಬಂದರೆ ಸುತ್ತಮುತ್ತಲಿನ ಜಲಾನಯನ ಪ್ರದೇಶ ನಾಶವಾಗಿ ಕೆರೆ ಬತ್ತಿಹೋಗುತ್ತದೆ.  ಹಾಗೂ ಈ ಉದ್ದಿಮೆಗಳು ಅಂತರ್ಜಲ ಅವಲಂಬಿಸಬೇಕಾಗುತ್ತದೆ.

ಪರಿಣಾಮವಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಜನ ತಮ್ಮ ಜಮೀನನ್ನು ಬಿಟ್ಟು ಕೆಲಸವನ್ನಾರಿಸಿ ಬೆಂಗಳೂರು ನಗರವನ್ನು ಸೇರಬೇಕಾಗುತ್ತದೆ. ಈ ಕಾರಣಗಳಿಂದಾಗಿ ಈ ಘಟಕಗಳಿಗೆ ಪರ್ಯಾಯವಾದ ಸ್ಥಳಗಳನ್ನು ಮಂಜೂರು ಮಾಡಬಹುದು ಎಂದು ಆಗಿನ ಸರ್ಕಾರದ ಭಾರಿ ಉದ್ದಿಮೆಯ ಖಾತೆಯನ್ನು ಹೊಂದಿದ್ದ ಮಂತ್ರಿಗಳಿಗೆ ನಾನು ವಿನಂತಿಸಿದೆ. ಆ ಮಂತ್ರಿಗಳು ಹೇಳಿದ್ದೇನೆಂದರೆ `ನೀವು ಯಾವಾಗಲೂ ಈ ಪರಿಸರ, ಗಿಡಗಂಟೆ, ಹುಲ್ಲುಗಾವಲು, ಕೆರೆ ಕುಂಟೆಗಳ ಬಗ್ಗೇನೆ ಗಮನವಿಡುತ್ತೀರಿ, ಅದರಿಂದ ಏನು ಬರುತ್ತೇ?  ಆದರೆ ಅಲ್ಲಿ ಈ ಎರಡು ಉದ್ಯಮದ ಘಟಕಗಳು ಸ್ಥಾಪನೆಯಾದರೆ ನಮ್ಮ ಸರ್ಕಾರಕ್ಕೆ ಕೋಟಿಗಟ್ಟಲೆ ಹಣ ಕಮರ್ಷಿಯಲ್ ಟ್ಯಾಕ್ಸ್ ಮೂಲಕ ಬರುತ್ತದೆ.  ಅದರಿಂದ ನಾವು ನಮ್ಮ ವಿಧಾನ ಸೌಧದಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಬಹುದು' ಎಂದು ಉದ್ಗರಿಸಿದರು.

ಈ ರೀತಿಯ ಸರ್ಕಾರದ ಧೋರಣೆಗಳಿದ್ದಾಗ ನಮ್ಮ ಕೆರೆಗಳು, ಅಂತರ್ಜಲ, ನದಿ, ಕಾಲುವೆಗಳು ಉಳಿಯಲು ಸಾಧ್ಯವೇ ಎಂದು ದಿಗಿಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಸಮರ್ಪಕ ಹಂಚಿಕೆ, ವಿಲೇವಾರಿ, ಬಳಕೆ ಹೇಗೆ ಸಾಧ್ಯ? ನೀರಿನ ಸಮಸ್ಯೆಗೆ ಇನ್ನೊಂದು ಕಾರಣ ಎಂದರೆ ಬೆಂಗಳೂರಿನ ಅಸಾಧಾರಣ ಬೆಳವಣಿಗೆ.  ಬೆಂಗಳೂರು ತನ್ನ ಪಾಡಿಗೆ ನೆಮ್ಮದಿಯಾಗಿತ್ತು. ಆದರೆ, ಇದು ಐ.ಟಿ. ಕೇಂದ್ರವಾದ ಮೇಲೆ ಇದನ್ನು ಮತ್ತೂ ಹೆಚ್ಚಿನ ಅಂತಸ್ತಿಗೆ ಏರಿಸಬೇಕೆನ್ನುವ ಉತ್ಸಾಹ, ಕೆಲವು ಉನ್ನತ ಅಧಿಕಾರಿಗಳು ಮತ್ತು ಸ್ವಯಂಘೋಷಿತ ನಗರ ತಜ್ಞರಲ್ಲಿ ಉಕ್ಕಿ ಬಂದು ಬೆಂಗಳೂರಿನ ಸುಮಾರು 111 ಗ್ರಾಮಗಳನ್ನು ಪರಿವರ್ತಿಸಿ ಅವುಗಳನ್ನು ಮಹಾನಗರದ ಆಡಳಿತಕ್ಕೆ ಸೇರಿಸಿಬಿಟ್ಟರು. ಜಗತ್ತಿನ ಭೂಪಟದಲ್ಲಿ ಈ ಮಹಾನಗರವನ್ನು ಬಿಂಬಿಸುವ ಒಣ ಪ್ರತಿಷ್ಠೆಯ ಬಯಕೆ  ಇವರದು.

ಈ 111 ಗ್ರಾಮಗಳಲ್ಲಿ ಬಾವಿ, ಹೊಂಡ, ತೋಟಗಳಿದ್ದವು.  ಹಣ್ಣಿನ ಗಿಡಗಳಿದ್ದವು. ಹೂ ತೋಟಗಳಿದ್ದವು, ಬಿದ್ದ ಮಳೆ ನೀರು ಈ ಗ್ರಾಮಗಳ ಭೂಮಿಯಲ್ಲಿ ಇಂಗಿ ಅಂತರ್ಜಲದ ಮಟ್ಟವನ್ನು ಕಾಪಾಡುತ್ತಿದ್ದವು. ಇವು ಬೆಂಗಳೂರಿನ ಜಲಾನಯನ ಪ್ರದೇಶಗಳೂ ಆಗಿದ್ದವು.  ಹಾಗೆಯೇ ಇವು ಮಹಾನಗರದಲ್ಲಿಯ ವಾಹನಗಳ ಇಂಗಾಲವನ್ನು ಹೀರುವ ಮಡಿಲುಗಳು ಕೂಡ (ಕಾರ್ಬನ್ ಸಿಂಕ್). ಈ ಗ್ರಾಮಗಳಲ್ಲಿಯ ಜನ ಕಾವೇರಿ ನದಿ ಅವಲಂಬಿಸಿರಲಿಲ್ಲ. ಹಾಗೂ ಈ ಗ್ರಾಮಗಳಲ್ಲಿ ಉತ್ಪಾದನೆಗೊಂಡ ಕಸ ಅಲ್ಲಿಯ ತೋಟಗಳಿಗೇ ಉಪಯುಕ್ತವಾಗಿತ್ತು. ಆದರೆ, ಈಗ ಆ ಗ್ರಾಮಗಳೆಲ್ಲಾ ಪರಿವರ್ತನೆಗೊಂದು ಕಾಂಕ್ರೀಟ್ ಸಮೂಹಗಳಾಗಿವೆ.

ಉರಿಬಿಸಿಲು ದಿನೇ ದಿನೇ ಏರುತ್ತಲಿದೆ.  ಬಾವಿ ಹೊಂಡಗಳೆಲ್ಲಾ ಮಾಯವಾಗಿವೆ. ಈಗ ವಾರಕೊಮ್ಮೆ ಟ್ಯಾಂಕರ್ ಮೂಲಕ ಅಲ್ಲಿಯ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ, ತಿಪ್ಪಗೊಂಡಹಳ್ಳಿ ನೀರಿನ ಜಲಾಶಯದಲ್ಲಿ ನೀರು ಕನಿಷ್ಠ ಮಟ್ಟಕ್ಕಿಳಿದಿದೆ,  ಹೆಸರುಘಟ್ಟ ಕೆರೆ ಬರಿದಾಗಿದೆ. ಬೆಂಗಳೂರಿನ ಬಹುತೇಕ ಕೆರೆಗಳು ಕಲುಷಿತಗೊಂಡಿವೆ. ಅಂತರ್ಜಲದ ಮೂಲಗಳು ಬತ್ತಿ ಹೋಗಿವೆ. ಇಷ್ಟೆಲ್ಲಾ ಆದರೂ ಬೆಂಗಳೂರಿನ ಬೆಳವಣಿಗೆ ಕುಂದುತ್ತಿಲ್ಲ.

ಒಂದರಮೇಲೊಂದು ಅಪಾರ್ಟ್‌ಮೆಂಟ್‌ಗಳು ಬರುತ್ತಲೇ ಇವೆ. ಸರ್ಕಾರ ಇನ್ನೂ 50,000 ಮನೆಗಳನ್ನು ಬೆಂಗಳೂರಿನ ಸುತ್ತಮುತ್ತ ಪ್ರದೇಶದಲ್ಲಿ ಕಟ್ಟುವ ಯೋಜನೆ ಸಿದ್ಧಪಡಿಸುತ್ತಿದೆ. ಕಮರ್ಷಿಯಲ್ ಟ್ಯಾಕ್ಸ್‌ನಿಂದ ಸಂದ ಹಣ  ನೀರನ್ನು ಉತ್ಪಾದಿಸಬಹುದೇ ಎಂದು ಕಾದು ನೋಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT