ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತಾಶ ಜನರ ಆಶಾಕಿರಣ ಅರವಿಂದ ಕೇಜ್ರಿವಾಲ್‌

ವ್ಯಕ್ತಿ
Last Updated 21 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕೇಂದ್ರ ಮತ್ತು ರಾಜ್ಯದಲ್ಲಿ ಸಾಲು ಸಾಲು ಹಗರಣಗಳು, ಬೆಲೆ ಏರಿಕೆಯ ಬಿಸಿಯಿಂದ ಹತಾಶರಾಗಿದ್ದ ದೆಹಲಿಯ ಮತದಾರರಿಗೆ ಹೊಸ ಪರ್ಯಾಯವಾಗಿ ಗೋಚರಿಸಿದ್ದು ಆಮ್‌ ಆದ್ಮಿ ಪಕ್ಷ. ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದ ಅನಿರೀಕ್ಷಿತ ಯಶಸ್ಸು ಉಳಿದವರಿಗೆ ಪಾಠ ಕಲಿಸಿದೆ. ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಅವರತ್ತಲೇ ಈಗ ದೇಶದ ಗಮನ. 45 ವರ್ಷದ ಕೇಜ್ರಿವಾಲ್‌ ಅವರ ಪ್ರತಿಯೊಂದು ನಡೆಯನ್ನೂ ಕುತೂಹಲದಿಂದ ನೋಡಲಾಗುತ್ತಿದೆ. ನಿರ್ಣಾಯಕ ಸಂದರ್ಭದಲ್ಲಿ ಎಚ್ಚರಿಕೆಯ ಹೆಜ್ಜೆ ಅವರಿಗೂ ಅನಿವಾರ್ಯ.

ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಬೆಳಕಿಗೆ ಬಂದು, ಜನಲೋಕಪಾಲ್‌ ಚಳವಳಿ ವೇಳೆ ಜನಪ್ರಿಯತೆ ಪಡೆದ ಕೇಜ್ರಿವಾಲ್‌ ನಂತರವೂ ಸುಮ್ಮನಾಗಲಿಲ್ಲ.  ಹರಿಯಾಣ ಮೂಲದ ಕೇಜ್ರಿವಾಲ್‌ ದೆಹಲಿಯಲ್ಲೇ ಉಳಿದು. ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡರು. ಹಳೆಯದನ್ನು ಗುಡಿಸಿ ಸ್ವಚ್ಛ ಆಡಳಿತ ನೀಡುವುದಾಗಿ ‘ಪೊರಕೆ’ಯನ್ನು ಚಿಹ್ನೆಯಾಗಿಟ್ಟು ಪಕ್ಷ ಕಟ್ಟಿದರು. ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿದರು. ಸತತ ಮೂರು ಬಾರಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷವನ್ನು, ಮೂರನೇ ಸ್ಥಾನಕ್ಕಿಳಿಸಿದ್ದು ನಂತರದ ಇತಿಹಾಸ. ಅತಂತ್ರ ದೆಹಲಿ ವಿಧಾನಸಭೆಯಲ್ಲಿ ಅವರ ಪಕ್ಷವೇ ಈಗ ನಿರ್ಣಾಯಕ.

ದೆಹಲಿಯಲ್ಲಿ ಅವರ ಪಕ್ಷದ ಯಶಸ್ಸಿಗೆ ಪ್ರೇರಕವಾಗುವ ಕಾರಣಗಳೂ ಇದ್ದವು. 2ಜಿ ತರಂಗಾಂತರ ಹಗರಣ, ಮಹಾರಾಷ್ಟ್ರದ ಆದರ್ಶ್‌ ಸೊಸೈಟಿ ಹಗರಣ, ರಾಜಧಾನಿಯಲ್ಲೇ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟ ಹಗರಣಗಳ ಜತೆಗೆ ಈರುಳ್ಳಿ, ಟೊಮೆಟೊ ಬೆಲೆ ಏರಿಕೆ, ವಿದ್ಯುತ್‌, ನೀರಿನ ಶುಲ್ಕ ವಿಪರೀತ ಹೆಚ್ಚಳ ಜನರನ್ನು ನೇರವಾಗಿ ತಟ್ಟಿತ್ತು. ಕಾಂಗ್ರೆಸ್ ನ್ನು ತಿರಸ್ಕರಿಸಲು ಈ ಕಾರಣಗಳು ಸಾಕಿತ್ತು. ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಜನರ ಜತೆ ನಿಂತರು. ಜನರೇ ಆಯ್ಕೆ ಮಾಡಿದ ವಿವಿಧ ಸ್ತರಗಳ ಉತ್ಸಾಹಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಟ್ವಿಟ್ಟರ್‌, ಫೇಸ್‌ಬುಕ್‌ಗಳಂಥ ಸಾಮಾಜಿಕ ಜಾಲತಾಣಗಳನ್ನು ಯಶಸ್ವಿಯಾಗಿ ಬಳಸಿದ್ದು... ಎಲ್ಲವೂ ನೆರವಿಗೆ ಬಂದಿತ್ತು. ಹೊಸಪಕ್ಷದಿಂದ, ಹಳೆಯ ಪಕ್ಷಗಳು ಇಷ್ಟೊಂದು ಹೋರಾಟ ನಿರೀಕ್ಷಿಸಿರಲಿಲ್ಲ.

ಯುವಮುಖ: ಅರವಿಂದ ಕೇಜ್ರಿವಾಲ್‌ ಮೊದಲ ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಖರವಾಗಿ ಗುರುತಿಸಿಕೊಂಡಿದ್ದು 2011ರಲ್ಲಿ. ಆ ವರ್ಷದ ಆರಂಭದಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಂಡ ಜನ ಲೋಕಪಾಲ್‌ಗಾಗಿ ನಿರಶನ ನಡೆಸುತ್ತಿದ್ದ ಸಂದರ್ಭ. ದೇಶದೆಲ್ಲೆಡೆ ಆ ಆಂದೋಲನ ಸಂಚಲನ ಮೂಡಿಸಿತ್ತು. ಆ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಪ್ರಖರ ಮಾತುಗಳಿಂದ ಕಿರಣ್‌ ಬೇಡಿ, ಪ್ರಶಾಂತ್‌ ಭೂಷಣ್‌ ಅವರಿಗಿಂತ ಜನರಿಗೆ ಹೆಚ್ಚು ಆಪ್ತರಾದವರು ಯುವಕ ಕೇಜ್ರಿವಾಲ್‌. ಆಗಿನ ಪ್ರತಿಕ್ರಿಯೆ ಅವರ ರಾಜಕೀಯ ಕನಸುಗಳಿಗೆ ದಾರಿ ಮಾಡಿಕೊಟ್ಟಿರಬಹುದು.

ಹಿನ್ನೆಲೆ: ಹರಿಯಾಣದ ಹಿಸ್ಸಾರ್‌ನಲ್ಲಿ 1968ಲ್ಲಿ ಜನಿಸಿದ ಅರವಿಂದ ಕೇಜ್ರಿವಾಲ್‌ ಅವರದ್ದು ಸುಶಿಕ್ಷಿತ ಮತ್ತು ಅನುಕೂಲಸ್ಥ ಬನಿಯಾ ಕುಟುಂಬ. ಖರಗ್‌ಪುರದ ಐಐಟಿಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವಿ ಪಡೆದ ಅವರು, 1989ರಲ್ಲಿ ಟಾಟಾ ಸ್ಟೀಲ್‌ ಸಂಸ್ಥೆಗೆ ಸೇರಿದ್ದರು. ಮೂರೇ ವರ್ಷಗಳಲ್ಲಿ ನೌಕರಿಗೆ ರಾಜೀನಾಮೆ. 1995ರಲ್ಲಿ ಭಾರತೀಯ ಕಂದಾಯ ಸೇವೆ (ಐಆರ್‌ಎಸ್‌) ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಅವರ ಪತ್ನಿ ಸುನೀತಾ ಕೂಡ ಕಂದಾಯ ಸೇವೆಯಲ್ಲಿದ್ದಾರೆ. ಅರವಿಂದ ಕೇಜ್ರಿವಾಲ್‌ ತೆರಿಗೆ ಇಲಾಖೆ ಅಧಿಕಾರಿಯಾಗಿದ್ದಾಗ ಉನ್ನತ ವಿದ್ಯಾಭ್ಯಾಸಕ್ಕೆಂದು ಎರಡು ವರ್ಷಗಳ ವೇತನಸಹಿತ ರಜೆ ಪಡೆದರು. ಮರಳಿ ಕರ್ತವ್ಯಕ್ಕೆ ಹಾಜರಾದ ಮೇಲೆ ಮೂರು ವರ್ಷ ರಾಜೀನಾಮೆ ನೀಡುವುದಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. 2003ರಲ್ಲಿ ಆದಾಯ ತೆರಿಗೆ ಜಂಟಿ ಆಯುಕ್ತರಾಗಿ ಮರಳಿ ಕೆಲಸಕ್ಕೆ ಹಾಜರಾದ ಅವರು 18 ತಿಂಗಳು ಸೇವೆ ಸಲ್ಲಿಸಿ, ಉಳಿದ 18 ತಿಂಗಳು ವೇತನರಹಿತ ರಜೆ ಪಡೆದರು. 2006ರಲ್ಲಿ ಅವರು ರಾಜೀನಾಮೆ ನೀಡಿದ್ದರೂ ಅದು ವಿವಾದಕ್ಕೆ ಕಾರಣವಾಗಿತ್ತು.

ಸೇವೆಯಲ್ಲಿರುವಾಗಲೇ ಅವರು ‘ಪರಿವರ್ತನ್‌’ ಎಂಬ ಆಂದೋಲನ ಹುಟ್ಟುಹಾಕಿದರು. ತೆರಿಗೆ ಪಾವತಿ ವೇಳೆ ಜನರಿಗೆ ನೆರವಾಗುವುದು ಇದರ ಉದ್ದೇಶವಾಗಿತ್ತು. ನಂತರ ಮಾಹಿತಿ ಹಕ್ಕು ಕಾಯಿದೆಯ (ಆರ್‌ಟಿಐ) ಪರಿಣಾಮಕಾರಿ ಬಳಕೆಯಿಂದ ಸರ್ಕಾರದ ಅವ್ಯವಹಾರಗಳನ್ನು ಬೆಳಕಿಗೆ ತಂದರು.
ಆರ್‌ಟಿಐ ಬಳಕೆಯ ಮೂಲಕ ತಳಮಟ್ಟದ ಜನಸಮುದಾಯವನ್ನು ಸಶಕ್ತಗೊಳಿಸಿದ ಕಾರಣಕ್ಕೆ ಕೇಜ್ರಿವಾಲ್‌ ಅವರಿಗೆ 2006ರಲ್ಲಿ ಫಿಲಿಪ್ಪೀನ್ಸ್‌ ಸರ್ಕಾರದ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿತ್ತು. ಬಹುಮಾನದ ಹಣವನ್ನು ಅವರು ‘ಸಾರ್ವಜನಿಕ ಸಮಸ್ಯೆಗಳ ಅಧ್ಯಯನ ಕೇಂದ್ರ’ ಎಂಬ ಸರ್ಕಾರೇತರ ಸಂಸ್ಥೆಗೆ ನೀಡಿದ್ದರು.

ಆದರೆ ಕೇಜ್ರಿವಾಲ್‌ ಅವರ ಹೋರಾಟಕ್ಕೆ ಆಯಾಮ ನೀಡಿದ್ದು ‘ಭ್ರಷ್ಟಾಚಾರ ವಿರುದ್ಧ ಆಂದೋಲನ’. ಅದರ ಮೂಲಕವೇ ಅಣ್ಣಾ ಹಜಾರೆ ಅವರನ್ನು ಸತ್ಯಾಗ್ರಹಕ್ಕೆ ಕುಳಿತುಕೊಳ್ಳುವಂತೆ ಪ್ರೇರೇಪಿಸಿದ್ದರು. ಈ ಆಂದೋಲನ ಕೇಜ್ರಿವಾಲ್‌ ಅವರನ್ನೂ ದೇಶದ ಜನರೆದುರು ತಂದಿತು.

ಪ್ರಯೋಗ: ಆಮ್‌ ಆದ್ಮಿ ಪಕ್ಷಕ್ಕಿಂತ ಮೊದಲು ಪ್ರಾದೇಶಿಕ ಮಟ್ಟದಲ್ಲಿ ಪಕ್ಷಗಳು ಹುಟ್ಟಿಕೊಂಡ ಸಾಕಷ್ಟು ಉದಾಹರಣೆಗಳಿವೆ. ಅಸ್ಸಾಂನಲ್ಲಿ ಪ್ರಫುಲ್ಲಕುಮಾರ್ ಮೊಹಂತ ನೇತೃತ್ವದ ಅಸ್ಸಾಂ ಗಣಸಂಗ್ರಾಮ ಪರಿಷತ್‌, ವಿದ್ಯಾರ್ಥಿ ಆಂದೋಲನದ ಮೂಲಕ 80ರ ದಶಕದಲ್ಲಿ ಅಧಿಕಾರಕ್ಕೆ ಬಂದಿತ್ತು. ತಮಿಳುನಾಡಿನಲ್ಲಿ ಡಿಎಂಕೆ, ಎಡಿಎಂಕೆ ಮೊದಲಾದ ದ್ರಾವಿಡ ಪಕ್ಷಗಳು, ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ, ಗೋವಾದಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ಮಹಾರಾಷ್ಟ್ರ­ದಲ್ಲಿ ಶಿವಸೇನೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌, ಪಂಜಾಬಿನಲ್ಲಿ ಅಕಾಲಿದಳ ಈ ನಿಟ್ಟಿನಲ್ಲಿ ನೆನಪಿಗೆ ಬರುತ್ತವೆ.
ಆದರೆ ಅರವಿಂದ ಕೇಜ್ರಿವಾಲ್‌ ಅವರಿಗೆ ತಮ್ಮ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಮಹತ್ವಾಕಾಂಕ್ಷೆ ಇದೆ. ‘ಜನ ಪ್ರಾಮಾಣಿಕ ರಾಜಕಾರಣವನ್ನು ಬಯಸುತ್ತಿದ್ದಾರೆ. ಇದು ದೆಹಲಿ ಚುನಾವಣೆಯಲ್ಲಿ ಸಾಬೀತಾಗಿದೆ.

ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ’ ಎಂದಿದ್ದಾರೆ. ಈಗಾಗಲೇ ಪಕ್ಷ 22 ರಾಜ್ಯಗಳಲ್ಲಿ ಅದು ಘಟಕಗಳನ್ನು ಹೊಂದಿದೆ. ಮಹಾರಾಷ್ಟ್ರ, ಹರಿಯಾಣ ಮೊದಲಾದ ಕಡೆ ಅದು ಸಕ್ರಿಯವಾಗತೊಡಗಿದೆ.

ಬೇರೂರಿರುವ ಅಧಿಕಾರಶಾಹಿಯನ್ನು ಎದುರುಹಾಕಿಕೊಂಡು ಹೋಗುವುದು ಅವರ ಎಳೆಯ ಪಕ್ಷಕ್ಕೆ ಸುಲಭದ ಕೆಲಸವೇನಲ್ಲ. ಅವರ ಪಕ್ಷ ದೆಹಲಿ ಜನತೆಗೆ ಭರವಸೆಗಳ ಗಾಳಿಗೋಪುರ ಕಟ್ಟಿಕೊಟ್ಟಿದೆ. ಮುಖ್ಯವಾಗಿ 700 ಲೀಟರ್‌ವರೆಗೆ ಉಚಿತ ನೀರು, ಕಡಿಮೆ ದರದಲ್ಲಿ ವಿದ್ಯುತ್‌ ನೀಡುವುದಾಗಿ ಆಶ್ವಾಸನೆ ನೀಡಿದ್ದು ಅದನ್ನು ಈಡೇರಿಸುವುದು ಸುಲಭದ ಕೆಲಸವಲ್ಲ. ಇತರ ಆಶ್ವಾಸನೆಗಳೂ ಅಷ್ಟೇ. ಕಾಂಗ್ರೆಸ್‌ ಬೆಂಬಲದ ಭರವಸೆ ನೀಡಿದರೂ ಅಧಿಕಾರ ಹಿಡಿಯುವುದರಿಂದ ಅವರು ನುಣುಚಿಕೊಳ್ಳುತ್ತಿದ್ದಾರೆ ಎಂಬ ಆಕ್ಷೇಪದ ಮಾತುಗಳೂ ಕೇಳಿಬಂದಿವೆ. ಅದಕ್ಕಿಂತ ಮುಖ್ಯವಾಗಿರುವ ಸವಾಲು ಎಂದರೆ ಬರುವ ಲೋಕಸಭೆ ಚುನಾವಣೆಯದ್ದು. ಕೆಲವೇ ತಿಂಗಳಲ್ಲಿ ನಡೆಯುವ ಮಹಾ ಚುನಾವಣೆಯಲ್ಲಿ ದೆಹಲಿಯ ಹೊರಗೆ ಈ ಪಕ್ಷ ಏನು ಸಾಧಿಸಬಹುದು ಎಂಬ ಕುತೂಹಲ ಜನರಲ್ಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT