ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತಾಶ ವಾತಾವರಣದಲ್ಲಿ ಗೆದ್ದ ಭರವಸೆ

Last Updated 16 ಮೇ 2014, 19:37 IST
ಅಕ್ಷರ ಗಾತ್ರ

ಕೊನೆಗೂ ಮಹಾ ಫಲಿತಾಂಶ  ಹೊರ­­ಬಿದ್ದಿದೆ. ಭಾರತದ ಚುಕ್ಕಾಣಿಯನ್ನು ಮುಂದಿನ ಐದು ವರ್ಷ­ಗಳಿಗೆ ಯಾರು ಹಿಡಿಯ­ಬೇಕು ಎಂಬ ಪ್ರಶ್ನೆಗೆ ಮತದಾರ ನಿಖರವಾಗಿಯೇ ಉತ್ತರಿ­ಸಿದ್ದಾನೆ. ಭಾರತದಿಂದ ಏಳು­ಸಾವಿರ ಮೈಲು­ಗ­ಳಾಚೆ ಸಿನ್ಸಿನಾಟಿಯಲ್ಲಿ ಕೂತು, ಅಪ­ರಾತ್ರಿ­ಯಲ್ಲಿ ಫಲಿತಾಂಶದ ಅಂಕಿ ಸಂಖ್ಯೆಗಳತ್ತ ಕಣ್ಣರಳಿಸಿ ನೋಡುತ್ತಾ ಯಾರೆಲ್ಲಾ ಗೆದ್ದವರು, ಸೋತ­ವರು ಯಾರು ಎಂದು ಲೆಕ್ಕ­ಹಾಕುತ್ತಿರುವ ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳು ಪುಟಿ­ಯುತ್ತಿವೆ. ಇದು ಭಾಜ­ಪದ ಗೆಲುವೋ ಮೋದಿಯದೋ? ಎಷ್ಟೆಲ್ಲಾ ಮೂದ­ಲಿಕೆ, ಆರೋಪಗಳ ಕೂರಂಬು­ಗಳನ್ನು ಸಹಿ­ಸಿಯೂ ಮೋದಿ ಈ ಭರ್ಜರಿ ಯಶಸ್ಸನ್ನು ಗಳಿಸಿದ್ದು ಹೇಗೆ? ಮೋದಿ ಗೆಲುವಿನೊಂದಿಗೆ ವಿಶ್ವಾ­ಸಾರ್ಹತೆ ಕಳೆದು­ಕೊಂಡದ್ದು ಯಾರು? ಅಷ್ಟಕ್ಕೂ ಮತ­ದಾರನಿಗೆ ಈ ಚುನಾವಣೆ­ಯಲ್ಲಿ ಮುಖ್ಯ­ವೆನಿ­ಸಿದ್ದು ಏನು ಎಂಬ ಪ್ರಶ್ನೆಗಳು ಎದುರು ಬಂದು ನಿಲ್ಲುತ್ತಿವೆ.

ಕಳೆದ ತಿಂಗಳೊಪ್ಪತ್ತಿನ ಈ ಚುನಾ­ವಣಾ ಪ್ರಕ್ರಿಯೆಯನ್ನು ನೋಡುವಾಗ 2012ರ ಅಮೆರಿಕದ ಅಧ್ಯಕ್ಷೀಯ ಚುನಾ­­ವಣೆಯ ನೆನಪುಗಳು ಮರುಕಳಿಸು­ತ್ತಿದ್ದವು. ಕಾರಣ, ಭಾರತದ ಸಂಸ­ದೀಯ ಮಾದರಿಯ ಚುನಾವಣೆ ಅಧ್ಯ­ಕ್ಷೀಯ ಮಾದರಿಯ ಚುನಾವಣೆಯಂತೆ ಭಾಸ­ವಾ­ಗಿದ್ದು. ಮೊದಲಿಗೆ ’ಮೋದಿ ವರ್ಸಸ್ ರಾಹುಲ್’ ಎಂಬಂತೆ ಬಿಂಬಿತ­ವಾದ ಚುನಾವಣೆ ಬರಬರುತ್ತಾ ‘ಮೋದಿ ವರ್ಸಸ್ ಅದರ್ಸ್’ ಎಂಬ ರೂಪ ತಾಳಿತು. ಅದಕ್ಕೆ ರಾಹುಲ್ ಗಾಂಧಿ, ಮೋದಿ ವಿರುದ್ಧ ಏಕಾಂಗಿ­­­­ಯಾಗಿ ಪೈಪೋಟಿಗೆ ನಿಲ್ಲಲು ಅಶ­ಕ್ತ­ರಂತೆ ಕಂಡದ್ದು ಕಾರಣ. ದೇಶದ ಪ್ರಜಾ­ಪ್ರಭುತ್ವ ಎಷ್ಟು ಮಾಗಿದೆ ಎಂಬು­ದಕ್ಕೆ ಚುನಾ­ವಣೆ ಮಾನದಂಡ­ವಾ­ಗು­ತ್ತದೆ. ಜಾತಿ, ಹಣಬಲ ಮುಖ್ಯ­ವಾ­ಗುವ ಭಾರ­ತದ ಚುನಾವಣೆಗೂ ಸಾಮರ್ಥ್ಯ, ನಿಲುವುಗಳ ತುಲನೆ­ಯಲ್ಲಿ ನಡೆ­ಯುವ ಅಮೆರಿಕದ ಚುನಾ­ವ­ಣೆಗೂ ಅಜ­ಗಜಾಂತರ. ಆದರೂ ಸಾಮ್ಯ ಎನಿ­ಸಿದ್ದು ವ್ಯಕ್ತಿ ಕೇಂದ್ರಿತವಾಗಿ, ವಾಕ್ಚಾ­ತುರ್ಯ ನಿರ್ಣಾಯಕ ಎನಿಸಿದ್ದ­ರಿಂದ ಮಾತ್ರ.

ಬಹುಶಃ ಮನಮೋಹನ್ ಸಿಂಗ್‌ರ ಹತ್ತುವರ್ಷಗಳ ಗಾಢಮೌನ ಮಾತಿನ ಮಹತ್ವ ಹೆಚ್ಚಿಸಿತ್ತು. ಹಾಗಾಗಿಯೇ ಚುನಾ­­ವಣೆಯುದ್ದಕ್ಕೂ ಮೌನದ ಮೇಲೆ ಮಾತು ಸವಾರಿ ಮಾಡಿತು. ಮೋದಿ ಮಾತುಗಾರಿಕೆಯ ಓಘ ಅಡ್ವಾಣಿಯ­ವರನ್ನು ಮಂಕು ಮಾಡಿತು. ಹಜಾರೆ ಮೌನ­ವನ್ನು ಒತ್ತರಿಸಿಕೊಂಡು ಕೇಜ್ರಿ­ವಾ­ಲರ ಮಾತು ಮುನ್ನೆಲೆಗೆ ಬಂತು. ಮನ­ಮೋಹನ್ ಸಿಂಗರ ಮೌನ, ರಾಹುಲ್ ಸಂವಹನ ಕೊರತೆಯಿಂದ ಸೊರಗಿದ್ದ ಕಾಂಗ್ರೆಸ್ಸಿಗೆ ಕೊಂಚವಾದರೂ ಜೀವ­ತುಂಬಲು ಪ್ರಿಯಾಂಕ ಗಾಂಧಿ ಭಾಷಣಕ್ಕೆ ನಿಲ್ಲಬೇಕಾಯಿತು. ‘Politi­cal language is designed to make lies sound truthful and murder respectful’ ಎಂಬ ಜಾರ್ಜ್ ಆರ್ವೆಲ್ ಮಾತಿನಂತೆ ಪ್ರಚಾರ ಸಭೆಯ ವೇದಿಕೆ­ಯಿಂದ ಸುಳ್ಳು­ಗಳು ಸತ್ಯದ ಮುಖವಾಡ­ದಲ್ಲಿ ಜನರೆ­ದುರು ಧುಮುಕಿದವು. ವಿಪರೀತ ಮಾತು ಎಲ್ಲೆ ಮೀರಿದ್ದೂ ಹೌದು. ವೇದಿಕೆ­ಯಲ್ಲಿ ಆರ್ಭಟಿಸಿ­ದ­ವರು ಅರಿವಿ­ಲ್ಲ­ದೆ ಪ್ರಜಾ­­­ಪ್ರಭು­ತ್ವದ ಘನತೆ­ಯನ್ನು ಜಗ್ಗು­ತ್ತಿದ್ದರು.

ಈ ಚುನಾವಣೆಯ ಬಗ್ಗೆ ಎಲ್ಲಿಲ್ಲದ ನಿರೀಕ್ಷೆಗಳು ಬೆಳೆದದ್ದು ಏಕೆ? ಮೊದಲನೆ­ಯದು ಹತ್ತುವರ್ಷಗಳಿಂದ ದೇಶವ­ನ್ನಾಳಿದ ಯುಪಿಎ ಸರ್ಕಾರದ ಆಡಳಿತ ವೈಫಲ್ಯ ಮತ್ತು ಬಹಿರಂಗವಾದ ಹಗರಣ­ಗಳು. ಎರಡನೆಯದು, ಅಣ್ಣಾ ಹಜಾರೆ ನೇತೃತ್ವದಲ್ಲಿ ಜನಲೋಕಪಾಲ್ ಕಾಯಿದೆಗಾಗಿ ಆರಂಭವಾದ ಸತ್ಯಾಗ್ರಹ ಮತ್ತು ಅದರಿಂದ ಟಿಸಿಲೊಡೆದ ಭ್ರಷ್ಟಾ­ಚಾರ ವಿರುದ್ಧದ ಜನಾಕ್ರೋಶ. ಆದರೆ ಚುನಾವಣೆಯ ದಿನಾಂಕ ಘೋಷಣೆ­ಯಾಗುವ ಮೊದಲೇ ಗಾಂಧಿ ಮೌಲ್ಯ­ಗಳ ಪ್ರತಿನಿಧಿಯಂತಿದ್ದ ಹಜಾರೆ ಮೂಲೆ­ಗುಂಪಾಗಿ, ಆ ಆಂದೋಲನವೇ ಅಪ್ರ­ಸ್ತುತ­­­ವಾದದ್ದು ಭಾರತದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಸಂಕೇತ. ಅದರಿಂದಲೇ ಕುಡಿಯೊಡೆದು ಮೊದಲಿಗೆ ‘ಭರವಸೆ’ ಎನಿಸಿದ್ದ ಕೇಜ್ರೀ­ವಾಲರ ಹೊಸಪಕ್ಷ ತನ್ನ ಅಪಕ್ವ ನಡ­ವಳಿಕೆಗಳಿಂದಲೇ ‘ಭ್ರಮೆ’ ಎಂಬು­ದನ್ನು ಮನವರಿಕೆ ಮಾಡಿದ್ದು ವಿಪರ್ಯಾಸ.

ಈ ಫಲಿತಾಂಶವನ್ನು ನೋಡುವಾಗ ಮೋದಿ ಮಾತ್ರ ಎದ್ದು ಕಾಣುತ್ತಿದ್ದಾರೆ. ಭಾಜಪದ ಬಳಿಯಿದ್ದ ಮೋದಿ ಎಂಬ ಏಕೈಕ ಬ್ರಹ್ಮಾಸ್ತ್ರ ಗುರಿತಲುಪಿದೆ. ಬಹು­ತೇಕ ಭಾಜಪದ ಅಭ್ಯರ್ಥಿಗಳು ಮೋದಿ ಮುಖವಾಡದಿಂದಲೇ ಗೆದ್ದಿದ್ದಾರೆ. ಮೋದಿ ಈ ಪರಿ ದೇಶದೆಲ್ಲೆಡೆ ಜನರ ಮನ­ಗೆದ್ದದ್ದು ಹೇಗೆ? ಮೋದಿ ಮೆಟ್ಟಿ­ನಿಂತ ಸವಾಲುಗಳೇನು ಸಾಮಾ­ನ್ಯದ್ದಲ್ಲ : ಗೋಧ್ರಾ ಗಲಭೆಯ ಭೂತ­ವಂತೂ ಬೆಂಬಿಡದೆ ಕಾಡಿತು. ಮಾಧ್ಯ­ಮಗಳೂ ಮೋದಿ ಬೆನ್ನುಬಿದ್ದವು. ಹತ್ತು­ವರ್ಷ­ಗಳಲ್ಲಿ ಯುಪಿಎ ಸರ್ಕಾರ ತನ್ನೆಲ್ಲಾ ತನಿಖಾ ಸಂಸ್ಥೆಗಳಿಂದ ವಿಚಾ­ರಣೆ ನಡೆಸಿ­ದರೂ, ಸುಪ್ರಿಂಕೋರ್ಟ್ ಖುದ್ದು ಪರಿ­ಶೀಲಿ­ಸಿದರೂ ಮೋದಿ ಪಾತ್ರ ಗೋಧ್ರಾ ಘಟನೆಯಲ್ಲಿ ಸಾಬೀತಾ­ಗಲಿಲ್ಲ. ಆದರೆ ಆರೋಪಗಳು ಸಾಯ­ಲಿಲ್ಲ.
ಮೋದಿ ಮಾತ್ರ ದೃಷ್ಟಿ ಕದಲಿಸದೆ ಅಭಿವೃದ್ಧಿ ಎಂಬ ಇಂಬು ಹಿಡಿದು ಗುಜರಾತಿನಿಂದ ದೆಹಲಿ ಗದ್ದುಗೆಯತ್ತ ಏರುತ್ತಲೇ ಹೋದರು, ಪ್ರತಿಪಕ್ಷಗಳು ಗುಜರಾತ್ ಅಭಿ­ವೃದ್ಧಿಯನ್ನು ನಿರಾಕ­ರಿಸಲಿಲ್ಲ, ‘ಗೋಧ್ರಾ ಘಟನೆ’ ಎಂಬ ಮೊಂಡಾದ ಆಯುಧವನ್ನೇ ಪದೇ ಪದೇ ಬಳಸುತ್ತಾ ಮೋದಿಗೆ ಉಪಕಾರವನ್ನೇ ಮಾಡಿದವು. ಮತದಾರನಿಗೆ ಆಧಾರ ರಹಿತ ‘ಭೂತ’­ಕ್ಕಿಂತ, ಮೋದಿ ಪುನರು­ಚ್ಚ­ರಿಸುತ್ತಾ ಬಂದ ಪ್ರಗತಿ, ಸುರಾಜ್ಯ, ‘ಗುಜ­ರಾತ್ ಮಾದರಿ’ ಎಂಬ ಭವಿಷ್ಯದ ಭರ­ವಸೆ­ಯಷ್ಟೇ ಮುಖ್ಯವಾಗಿರುವುದು ಫಲಿ­ತಾಂಶ­­­ದಲ್ಲಿ ಗೋಚರಿಸುತ್ತಿದೆ.

ಜೊತೆಗೆ ಮತ­­ದಾರನ ತೀರ್ಪಿನಿಂದ ಇದು­ವರೆಗೂ ಮೋದಿಯವರನ್ನು ದೂಷಿ­ಸು­ತ್ತಲೇ ಬಂದ ಮಾಧ್ಯಮಗಳು ಮತ್ತು ಬುದ್ಧಿ­­ಜೀವಿ­­­­­ವರ್ಗ ತಮ್ಮ ವಿಶ್ವಾಸಾರ್ಹತೆ­ ಕಳೆದು­­­ಕೊಂಡಿವೆ. ಮೋದಿ ಮೋಡಿ­ಯನ್ನು ಇನ್ನಾದರೂ ಒಪ್ಪಿಬಿಡಿ ಎಂಬ ಸಂದೇಶ ಫಲಿತಾಂಶದಿಂದ ರವಾನೆ­ಯಾಗಿದೆ. ಇನ್ನು ಫಲಿತಾಂಶದ ಹೊರ­ತಾಗಿ ಈ ಸಮಯದಲ್ಲಿ ಸೋಜಿಗ ಎನಿ­ಸುವ ಮತ್ತೊಂ­ದು ಸಂಗತಿಯೆಂದರೆ ಷೇರು ಮಾರು­ಕಟ್ಟೆಯ ವರ್ತನೆ. ವಿತ್ತ ಸಚಿವ­­ರಾಗಿ ಭಾರತದ ಆರ್ಥಿಕ ಸದೃ­ಢತೆಗೆ ಭಾಷ್ಯ ಬರೆದ ಮನಮೋಹನ್ ಸಿಂಗ್ ಪ್ರಧಾನಿ­ಯಾಗಿದ್ದ ಅವಧಿಯಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದ್ದ ಷೇರು ವಹಿವಾಟು ಅವರು ಪ್ರಧಾನಿ ಕಾರ್ಯಾಲಯದಿಂದ ಹೊರನಡೆಯು­ತ್ತಿರುವ ಈ ಹೊತ್ತಿನಲ್ಲಿ ಅವರನ್ನು ಅಣುಕಿಸಲೋ ಎಂಬಂತೆ ಜಿಗಿಯುತ್ತಿದೆ! ಪ್ರತಿಷ್ಠಿತ ಪದವಿಗಳನ್ನು ಹೊಂದಿದ ಪ್ರಧಾನಿಯ ಕಾಲದಲ್ಲಿ ಕಳೆ­ಗುಂದಿದ್ದ ಮಾರುಕಟ್ಟೆ ಗುಜರಾತಿನ ಕುಶ­ಲ­­­ಮತಿ ‘ಚಾಯ್ ವಾಲ’ ಗದ್ದುಗೆಗೆ ಬರುವ ಸೂಚನೆ ಸಿಕ್ಕಿದ್ದೇ ಲವಲವಿಕೆ ಪಡೆ­ದುಕೊಂಡಿದೆ. ಮತದಾರನ ಮನ­ದಿಂ­ಗಿತ ಇವಿಎಂಗಳಲ್ಲಿ ಮಾತ್ರವಲ್ಲ ಮಾರು­­­­ಕಟ್ಟೆಯ ವರ್ತನೆಯಲ್ಲೂ ಪ್ರತಿಫಲಿಸಿದೆ.

ಒಟ್ಟಿನಲ್ಲಿ ಫಲಿತಾಂಶ ಸ್ಥಿರ ಸರ್ಕಾರದ ರಚನೆಗೆ ಪೂರಕವಾಗಿರುವುದು ಆಡಳಿ­ತದ ದೃಷ್ಟಿಯಿಂದ ಒಳ್ಳೆಯದೇ. ಆದರೆ ಈ ಕ್ಷಣದ ಪ್ರಶ್ನೆಯೆಂದರೆ ಹತಾಶ ವಾತಾ­ವರಣದಲ್ಲಿ ಭರವಸೆ, ಕನಸು­ಗಳನ್ನು ಬಿತ್ತಿ ಮತದಾರರ ಮನಗೆದ್ದ ಮೋದಿ, ನಿರೀಕ್ಷೆಯ ಬೆಟ್ಟವನ್ನು ಹೊರ­ಬಲ್ಲರೇ ಎಂಬುದು. ರಿಸರ್ವ್ ಬ್ಯಾಂಕ್ ಗೌರ್ನರ್ ಈಗಾಗಲೇ ಮಂದಗತಿಯ ಪ್ರಗತಿ, ವಿತ್ತೀಯ ಕೊರತೆ, ಹಣ­ದುಬ್ಬ­ರದ ಸವಾಲು ಮುಂದಿನ ಸರ್ಕಾರ­ಕ್ಕಿದೆ ಎಂದು ಎಚ್ಚರಿಸಿದ್ದಾರೆ. ಆರ್ಥಿಕ ಹಿಂಜ­ರಿತ­ವನ್ನು ನಿಭಾಯಿಸುವ ಜೊತೆಗೆ ಮೋದಿ ‘ಗುಜರಾತ್ ಅಭಿವೃದ್ಧಿ’ಯ ಛಾಪನ್ನು ಇಡೀ ದೇಶಕ್ಕೆ ಹೇಗೆ ವಿಸ್ತರಿ­ಸು­ತ್ತಾರೆ?  ಭದ್ರತೆ, ಬಡತನ, ನಿರು­ದ್ಯೋಗ ಸಮಸ್ಯೆಗೆ ಯಾವ ಉತ್ತರ ಹುಡು­­ಕು­ತ್ತಾರೆ? ಗಗನಕ್ಕೇರಿರುವ ಅಗತ್ಯ ವಸ್ತು­­ಗಳನ್ನು ಭೂಸ್ಪರ್ಶ ಮಾಡಿಸಲು ಏನೆಲ್ಲಾ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಪ್ರಧಾನಿಯಾದ ಬಳಿಕ ‘ನಾನು ಮೋದಿ’ ಎಂಬುದನ್ನು ಮೋದಿ ಮತ್ತೊಮ್ಮೆ ನಿರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT