ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬಿಡಿಸುವ ಸೂಕ್ತ ವಿಧಾನ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ, ವಿಶೇಷವಾಗಿ ಹಾವೇರಿ, ಗದಗ, ಧಾರವಾಡ, ಬೆಳಗಾವಿ ಮತ್ತು ಬಳ್ಳಾರಿಯ ಕೆಲ ಭಾಗಗಳಲ್ಲಿ ಈಗ ಹತ್ತಿ ಬಿಡಿಸುವ ಕಾರ್ಯ ಬಿರುಸಿನಿಂದ ನಡೆದಿದೆ. ಈ ಸಮಯದಲ್ಲಿ ಸೂಕ್ತ ಮುಂಜಾಗ್ರತೆ ವಹಿಸಿದರೆ ಮಾತ್ರ ಗುಣಮಟ್ಟ ಚೆನ್ನಾಗಿರುತ್ತದೆ, ಒಳ್ಳೆ ಬೆಲೆ ಸಿಗುತ್ತದೆ.

ಹತ್ತಿ ಬಿಡಿಸುವಾಗ ಗಮನಿಸಿ
ಭಾರತವು ಹತ್ತಿ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆ ಸಾಧಿಸಿದೆ. ಅಷ್ಟೇ ಅಲ್ಲದೆ ವಿದೇಶಗಳಿಗೂ ಹತ್ತಿ ರಫ್ತು ಮಾಡುವ ಸಾಮರ್ಥ್ಯ ಪಡೆದಿದೆ. ದೇಶದ 1 ಕೋಟಿ ಹೆಕ್ಟೇರ್ ಭೂಮಿಯಲ್ಲಿ ಹತ್ತಿ ಬೆಳೆಯಲಾಗುತ್ತಿದ್ದು ಸುಮಾರು 1800 ಕೋಟಿ ಮೌಲ್ಯದ ಹತ್ತಿಯನ್ನು ಇತ್ತೀಚಿನ ವರ್ಷಗಳಲ್ಲಿ ರಫ್ತು ಮಾಡಲಾಗಿದೆ.

 ಬೇಸಾಯಗಾರರು ಹತ್ತಿ ಗುಣಮಟ್ಟ ಕಾಯ್ದುಕೊಳ್ಳಲು ಹತ್ತಿ ಬಿಡಿಸುವಾಗ, ಬಿಡಿಸಿದ ನಂತರ ಚೀಲದಲ್ಲಿ ತುಂಬುವಾಗ, ಸಾಗಿಸುವಾಗ ಹಾಗೂ ಮಾರುಕಟ್ಟೆಯಲ್ಲಿ ವಿವಿಧ ಜಾತಿಯ ಹತ್ತಿಯನ್ನು ವರ್ಗೀಕರಿಸುವಾಗ ಅತ್ಯಂತ ಕಾಳಜಿಯಿಂದ ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಹತ್ತಿಗೆ ಉತ್ತಮ ಬೆಲೆ ಸಿಗಬೇಕಾದರೆ ಅರಳೆ ತೂಕ, ಎಳೆಗಳ ಉದ್ದಳತೆ, ಅದರಲ್ಲಿನ ತೇವಾಂಶ, ಶಕ್ತಿ, ಮೃದುತ್ವ ಹಾಗೂ ಕಸ ಪರಿಗಣಿನೆಗೆ ಬರುತ್ತದೆ. ಸಹಕಾರಿ ಸಂಘದ ಮೂಲಕ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ರೈತರಿಗೆ ದೊರೆಯಲು ಸಾಧ್ಯವಾಗುವುದು. ಗುಣಮಟ್ಟಕ್ಕೆ ತಕ್ಕಂತೆ ಯೋಗ್ಯ ಬೆಲೆ ಲಭಿಸುವುದು ನಿಶ್ಚಿತ.

ಏನು ಮಾಡಬೇಕು?
* ಬೆಳಗಿನ ತಂಪುಹವೆಯಲ್ಲಿ (6ರಿಂದ 11 ಗಂಟೆ ವರೆಗೆ) ಹತ್ತಿಯನ್ನು ಬಿಡಿಸಬೇಕು. ಮಧ್ಯಾಹ್ನದ ಬಿಸಿಲಲ್ಲಿ ಬಿಡಿಸಿದರೆ ಒಣಗಿದ ಹತ್ತಿ ಎಲೆಗಳು ಹತ್ತಿಯಲ್ಲಿ ಸೇರಿ ತದ ನಂತರ ನೂಲು ತೆಗೆಯುವ ಸಮಯದಲ್ಲಿ ಎಳೆಯನ್ನು ಬ್ಲೇಡಿನಂತೆ ಕತ್ತರಿಸುವ ಸಾಧ್ಯತೆ ಹೆಚ್ಚು.

* ಹತ್ತಿ ಬಿಡಿಸುವ ಸಮಯದಲ್ಲಿ ಇರುಕು ಹತ್ತಿ, ಗಟ್ಟಿಯಾದ ಹತ್ತಿ, ಬೀಜ ಒಡೆದ ಹತ್ತಿಯನ್ನು ಬೇರೆ ಬೇರೆ ವಿಂಗಡಿಸಬೇಕು. ಈ ತರಹದ ವರ್ಗೀಕರಣ ಜಮೀನು ಮಟ್ಟದಲ್ಲಿಯೇ ನಡೆದರೆ ಹತ್ತಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗುತ್ತದೆ.

* ಹತ್ತಿಯನ್ನು ಬಿಡಿಸಿ ನೇರವಾಗಿ ನೆಲದ ಮೇಲೆ ಹಾಕದೇ ಗಿಡದ ನೆರಳಿನಲ್ಲಿ ಸಂಗ್ರಹಿಸಬೇಕು. ಗೋಣಿ ಚೀಲದಲ್ಲಿ ತುಂಬುವಾಗ ತೂಕ ಬರುವ ಸಲುವಾಗಿ ಒತ್ತೊತ್ತಾಗಿ ತುರುಕಬಾರದು. ಹೀಗೆ ತುಂಬಿದರೆ ಹತ್ತಿ ನೂಲನ್ನೂ ಕೊಡದೇ ಪಿಸಿಯಾಗಿ ಕತ್ತರಿಸುವುದು. ಸಾಧಾರಣ ಮಟ್ಟದಲ್ಲಿ ಚೀಲವೊಂದರಲ್ಲಿ 180 -200 ಕಿಲೊ ಹತ್ತಿ ಸರಿಯಾಗಿ ತುಂಬುವುದು ಸೂಕ್ತ.

* ಹೀಗೆ ತುಂಬಿದ ಹತ್ತಿಯ ಚೀಲಗಳನ್ನು ನೆಲದ ಮೇಲೆ ಉರುಳಿಸುತ್ತಾ ಸಾಗಿಸಬಾರದು. ಮಣ್ಣಿನ ಧೂಳು ಕಣಗಳು ವಾಹನಗಳಲ್ಲಿ ಒಯ್ಯುವ ಹತ್ತಿಗೆ ತಗುಲಬಾರದೆಂದು ಮೇಲೆ ಗುಡಾರ ಅಥವಾ ತಾಡಪತ್ರಿ ಹೊದಿಕೆ ಮಾಡಿ ಸಾಗಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT