ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಬೀಜಕ್ಕಾಗಿ ರೈತರಿಂದ ರಸ್ತೆ ತಡೆ

Last Updated 8 ಜೂನ್ 2011, 8:10 IST
ಅಕ್ಷರ ಗಾತ್ರ

ಮುಂಡಗೋಡ: ರೈತರ ಬೇಡಿಕೆಗೆ ತಕ್ಕಂತೆ ಹತ್ತಿ ಬೀಜವನ್ನು ವಿತರಿಸದ ಹಿನ್ನೆಲೆಯಲ್ಲಿ ನೂರಾರು ರೈತರು ತಹಸೀಲ್ದಾರ ಕಚೇರಿ ಎದುರಿಗೆ ದಿಢೀರನೆ ರಸ್ತೆ ತಡೆ ನಡೆಸಿ ಕೃಷಿ ಅಧಿಕಾರಿಗಳಿಗೆ ಧಿಕ್ಕಾರದ ಘೋಷಣೆ ಕೂಗಿದ ಘಟನೆ ಮಂಗಳವಾರ ನಡೆಯಿತು.

ಇಲ್ಲಿಯ ಟಿ.ಎ.ಪಿ.ಸಿ.ಎಂ.ಎಸ್ ಆವರಣದಲ್ಲಿ ಹತ್ತಿ ಬೀಜವನ್ನು ವಿತರಿಸಲಾಗುತ್ತಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಸರದಿ ಸಾಲಿನಲ್ಲಿ ನಿಂತಿದ್ದ ರೈತರಿಗೆ ಹತ್ತಿ ಬೀಜವು ದೊರೆಯದಿದ್ದಾಗ ಆಕ್ರೋಶಗೊಂಡ ನೂರಾರು ರೈತರು ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ  ಪ್ರತಿಭಟನೆ ನಡೆಸಿದರು.

ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆಕ್ರೋಶಗೊಂಡ ರೈತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಬಿತ್ತನೆಗಾಗಿ ಹತ್ತಿ ಬೀಜ ಪೂರೈಸುವಂತೆ ಆಗ್ರಹಿಸಿದರು. ನಂತರ ರೈತರನ್ನು ಸಮಾಧಾನಪಡಿಸಿ ಕೃಷಿ ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿದ ಪೊಲೀಸರು ತಹಸೀಲ್ದಾರ ಕಚೇರಿಯ ಆವರಣದಲ್ಲಿ ಚರ್ಚೆಗೆ ಬರಲು ಮನವಿ ಮಾಡಿಕೊಂಡರು. ಇದರಿಂದ ರಸ್ತೆ ತಡೆ ತೆರವುಗೊಂಡಿತು.

ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ರೈತರು ಮಳೆಗಾಲ ಪ್ರಾರಂಭವಾದರೂ ರೈತರ ಬೇಡಿಕೆಯಂತೆ ಹತ್ತಿ ಬೀಜ ಪೊರೈಸಲಾಗುತ್ತಿಲ್ಲ. ರೈತರಿಗೆ ಬೇಕಾದ ಹತ್ತಿ ಬೀಜದ ಪ್ಯಾಕೆಟ್‌ಗಳು ಸೊಸೈಟಿಯಲ್ಲಿ ಸಿಗದೆ ಖಾಸಗಿ ಅಂಗಡಿಯಲ್ಲಿ ಧಾರಾಳವಾಗಿ ಸಿಗುತ್ತಿವೆ. ನಿಗದಿಪಡಿಸಿದ ದರಕ್ಕಿಂತ ಹೆಚ್ಚಿಗೆಯಾಗಿ ಖಾಸಗಿ ಅಂಗಡಿಯವರು ಮಾರುತ್ತಿದ್ದಾರೆ.

ದರ ಹೆಚ್ಚಿಗೆ ಬಗ್ಗೆ ಕೇಳಿದರೆ ಬೇಕಾದರೆ ತೆಗೆದುಕೊಳ್ಳಿ ಇಲ್ಲವಾದರೆ ಬಿಡಿ ಎಂದು ಖಾಸಗಿ ಅಂಗಡಿಯವರು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆಯವರು ಮೌನ ವಹಿಸಿರುವದೇಕೆ ಎಂದು ರೈತರು ಪ್ರಶ್ನಿಸಿದರು.

ಹತ್ತಿ ಬೀಜಕ್ಕಾಗಿ ದಿನವೂ  ಹಣ ಖರ್ಚು ಮಾಡಿ ಅಲೆದಾಡುವ ಪರಿಸ್ಥಿತಿ ಬಂದಿದೆ. ಸೋಮವಾರ ಪ್ರತಿಭಟನೆ ನಡೆಸಿದಾಗ ರೈತರಿಗೆ ಹತ್ತಿ ಬೀಜ ವಿತರಿಸಲಾಗುವುದು ಎಂದ ನೀಡಿದ ಭರವಸೆ ಏನಾಯಿತು ಎಂದು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ನಂತರ ತಹಸೀಲ್ದಾರ ಕಚೇರಿಯಲ್ಲಿ ರೈತ ಮುಖಂಡರು, ಖಾಸಗಿ ಅಂಗಡಿಗಳ ವ್ಯಾಪಾರಸ್ಥರೊಂದಿಗೆ ತಹಸೀಲ್ದಾರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ರೈತರಿಗೆ ಬೇಕಾದ ಅಂಗೂರ, ಚಾಮುಂಡಿ, ಸ್ಟೆಪ್ಲಾನ್ ತಳಿಯ ಬೀಜ ವಿತರಿಸಬೇಕೆಂದು ರೈತರು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತಿಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಬುಧವಾರ ಸಂಜೆಯೊಳಗಾಗಿ ಸಮರ್ಪಕ ಹತ್ತಿ ಬೀಜ ಪೂರೈಸದಿದ್ದರೆ ತಹಸೀಲ್ದಾರ ಕಚೇರಿಯ ಎದುರು ಧರಣಿ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ಖಾಸಗಿ ಅಂಗಡಿಯವರು ದಾಸ್ತಾನು ಇದ್ದ ಬಗ್ಗೆ ಹಾಗೂ ಯಾವ ರೈತರಿಗೆ ಎಷ್ಟೆಷ್ಟು ಬೀಜವನ್ನು ವಿತರಿಸಲಾಗಿದೆ ಎಂಬುದರ ಬಗ್ಗೆ ಎರಡು ದಿನಗಳಲ್ಲಿ ಉತ್ತರಿಸುವಂತೆ ಕೃಷಿ ಅಧಿಕಾರಿಗಳು ನೋಟಿಸ್ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT