ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ಲಕ್ಷ ಟನ್ ತ್ಯಾಜ್ಯ ವಿಲೇವಾರಿ: ತಾಂತ್ರಿಕ ಸಮಿತಿ ರಚನೆ

Last Updated 10 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಲಕ್ಷದಿಂದ ಹತ್ತು ಲಕ್ಷ ಟನ್ ಸಂಸ್ಕರಿಸದ ಘನ ತ್ಯಾಜ್ಯವನ್ನು ಸೂಕ್ತ ತಂತ್ರಜ್ಞಾನದ ನೆರವಿನಿಂದ ವಿಲೇವಾರಿ ಮಾಡುವ ಸಂಬಂಧ ಆಸಕ್ತ ವ್ಯಕ್ತಿ/ಸಂಸ್ಥೆಗಳು ನೀಡಿರುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಸೂಕ್ತ ಶಿಫಾರಸು ಮಾಡಲು ಅಧಿಕಾರಿಗಳು ಹಾಗೂ ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಬಿಬಿಎಂಪಿ ಮುಖ್ಯ ಎಂಜಿನಿಯರ್ ಎಂ.ಆರ್.ವೆಂಕಟೇಶ್ ಸಮಿತಿಗೆ ಅಧ್ಯಕ್ಷರಾಗಿರುವರು. ಕಾರ್ಯನಿರ್ವಾಹಕ ಎಂಜಿನಿಯರ್ (ಘನತ್ಯಾಜ್ಯ ನಿರ್ವಹಣೆ) ಸಂಚಾಲಕರಾಗಿರುವರು. ಪೌರಾಡಳಿತ ನಿರ್ದೇಶನಾಲಯದ ಕಾರ್ಯನಿರ್ವಾಹಕ ಎಂಜಿನಿಯರ್ (ಘನತ್ಯಾಜ್ಯ ನಿರ್ವಹಣೆ), ಕರ್ನಾಟಕ ಮೂಲಸೌಕರ್ಯಗಳ ಅಭಿವೃದ್ಧಿ ಹಣಕಾಸು ನಿಗಮದ ಪ್ರಧಾನ ವ್ಯವಸ್ಥಾಪಕ ಅಶೋಕ್ ಜೈನ್, ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ, ಹುಡ್ಕೊ ಡಿಜಿಎಂ ಸದಸ್ಯರಾಗಿರುವರು.

ಸಮಿತಿಯ ಕಾರ್ಯಗಳು:
ಘನತ್ಯಾಜ್ಯ ನಿರ್ವಹಣೆಗೆ ತಂತ್ರಜ್ಞಾನವನ್ನು ಅಳವಡಿಸಲು ಆಸಕ್ತರಿಂದ ಸಲ್ಲಿಕೆಯಾದ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ಸಲಹೆ ಹಾಗೂ ಶಿಫಾರಸುಗಳನ್ನು ಬಿಬಿಎಂಪಿ ಆಯುಕ್ತರಿಗೆ ನೀಡಬೇಕು. ನಗರ ಘನತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ ಹೊಸ ತಾಂತ್ರಿಕತೆಯ ಬಗ್ಗೆ ಪರಿಶೀಲನೆ ನಡೆಸಿ, ಅದನ್ನು ಅಳವಡಿಸುವ ಬಗ್ಗೆ ಆಯುಕ್ತರಿಗೆ ಶಿಫಾರಸು ಮಾಡಬೇಕು.

ಘನತ್ಯಾಜ್ಯ ನಿರ್ವಹಣೆಯ ಹೊಸ ಪರಿಕಲ್ಪನೆಯ ಕುರಿತು ಆಯುಕ್ತರಿಗೆ ಶಿಫಾರಸು ಮಾಡಬೇಕು. ಈಗಿರುವ ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನದ ಬಗ್ಗೆ ಆಯುಕ್ತರಿಗೆ ಕಾಲ ಕಾಲಕ್ಕೆ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಒದಗಿಸಬೇಕು. ಆಯುಕ್ತರು ಯೋಜನೆಗಳ ತಾಂತ್ರಿಕ ಕಾರ್ಯಸಾಧ್ಯತೆ ಬಗ್ಗೆ ಅನುಮೋದನೆ ನೀಡಿದ ಬಳಿಕ ಕಾಮಗಾರಿ ಆರಂಭಿಸಲು ಈಗಿನ ನಿಯಮಗಳ ಅನ್ವಯ ಇತರ ಪ್ರಕ್ರಿಯೆಗಳನ್ನು ಜರುಗಿಸಬೇಕು. ಘನತ್ಯಾಜ್ಯ ನಿರ್ವಹಣೆಯ ಸಂಸ್ಕರಣಾ ಘಟಕ/ಕೇಂದ್ರಗಳ ಬಗ್ಗೆ ಸ್ವೀಕರಿಸಲಾಗುವ ಇತರ ಎಲ್ಲ ಪ್ರಸ್ತಾವನೆಗಳ ತಾಂತ್ರಿಕ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಬೇಕು.

ಸಮಿತಿ ಏಕೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಹಾಗೂ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ತಾಂತ್ರಿಕ ಸಮಿತಿ ರಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರಿಗೆ ನಗರಾಭಿವೃದ್ಧಿ ಇಲಾಖೆ ಸೂಚಿಸಿತ್ತು. ಈ ನಡುವೆ ತಂತ್ರಜ್ಞಾನದ ನೆರವಿನಿಂದ ಘನತ್ಯಾಜ್ಯ ವಿಲೇವಾರಿ ಮಾಡಲಾಗುವುದು ಎಂದು 37 ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಘನತ್ಯಾಜ್ಯ ನಿರ್ವಹಣಾ ತಾಂತ್ರಿಕ ಸಮಿತಿಯನ್ನು ರಚಿಸಬೇಕು ಎಂದು ಬಿಬಿಎಂಪಿ ಆಯುಕ್ತರು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT