ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಅಪಾಯಕ್ಕೆ ಸಿಲುಕಲಿದೆ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): `ಟೆಸ್ಟ್ ಕ್ರಿಕೆಟ್ ಇನ್ನು ಹತ್ತು ವರ್ಷಗಳಲ್ಲಿ ಅಪಾಯಕ್ಕೆ ಸಿಲುಕಲಿದೆ. ತುಂಬಾ ಸವಾಲನ್ನು ಎದುರಿಸಲಿದೆ. ಇದಕ್ಕೆ ಕಾರಣ ಇಂದಿನ ಮಕ್ಕಳು ಟ್ವೆಂಟಿ-20 ಕ್ರಿಕೆಟ್ ನೋಡಿ ಬೆಳೆಯುತ್ತಿದ್ದಾರೆ~ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.

`ಯುವ ಆಟಗಾರರಾದ ರೋಹಿತ್ ಶರ್ಮ, ಸುರೇಶ್ ರೈನಾ ಹಾಗೂ ಮನೋಜ್ ತಿವಾರಿ ಅವರಂಥವರು ಟೆಸ್ಟ್ ಕ್ರಿಕೆಟ್ ನೋಡುತ್ತಾ ಹಾಗೂ ಅದನ್ನು ಮಾದರಿಯಾಗಿಟ್ಟುಕೊಂಡು ಬೆಳೆದರು. ಆದರೆ ನನ್ನ ಮುಂದಿನ ಪೀಳಿಗೆ ಟ್ವೆಂಟಿ-20 ಹಾಗೂ ಐಪಿಎಲ್ ಕ್ರಿಕೆಟ್ ವೀಕ್ಷಿಸುತ್ತಾ ಬೆಳೆಯುತ್ತಿದೆ. ಅವರಿಗೆ ಏನು ಬೇಕು ಎಂಬುದು ಇನ್ನು ಹತ್ತು ವರ್ಷಗಳಲ್ಲಿ ಸವಾಲಿನ ವಿಷಯವಾಗಲಿದೆ~ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.

`ಸದ್ಯಕ್ಕೆ ಟೆಸ್ಟ್ ಕ್ರಿಕೆಟ್ ಅಪಾಯದಲ್ಲಿದೆ ಎಂದು ನನಗನಿಸುವುದಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಖಂಡಿತ ಅಪಾಯಕ್ಕೆ ಸಿಲುಕಲಿದೆ. ಅದು ಹತ್ತು ವರ್ಷಗಳಲ್ಲಿ ಎಂದಿಟ್ಟುಕೊಳ್ಳಿ. ಹಾಗಾಗಿ ಈಗಲೇ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯಬೇಕಾಗಿದೆ~ ಎಂದರು.

`ನಾನು ವಾಣಿಜ್ಯ ಪದವಿಗೆ ಸೇರಿದೆ. ಆದರೆ ಅದರಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ಆಗ ನಮ್ಮ ಮುಂದೆ ಇದ್ದ ಆದ್ಯತೆ ಯಶಸ್ವಿ ಟೆಸ್ಟ್ ಆಟಗಾರನಾಗಬೇಕು ಎಂಬುದು. ಆದರೆ ಈಗ ತುಂಬಾ ಆದ್ಯತೆಗಳಿವೆ. ಟೆಸ್ಟ್ ಆಡದೆಯೇ ಕ್ರಿಕೆಟ್‌ನ ಬೇರೆ ಪ್ರಕಾರಗಳಿಂದಲೂ ಹಣ ಮಾಡಬಹುದು. ಈ ಬಗ್ಗೆ ಮಕ್ಕಳಿಗೆ ಏನು ಹೇಳಬೇಕೆಂಬುದೇ ನನಗೆ ಹೊಳೆಯುತ್ತಿಲ್ಲ~ ಎಂದು ಅವರು ನುಡಿದರು.

`ಟೆಸ್ಟ್ ಆಡುವುದರಲ್ಲಿ ಇರುವ ಖುಷಿಯೇ ಬೇರೆ. ಇದರಲ್ಲಿ ಸಿಗುವಷ್ಟು ತೃಪ್ತಿಯನ್ನು ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ನಾನು ಮಕ್ಕಳಿಗೆ ಹೇಳಲು ಬಯಸುತ್ತೇನೆ. ಟೆಸ್ಟ್ ಕ್ರಿಕೆಟ್ ಆಡಲೂ ಪ್ರಯತ್ನಿಸಿ~ ಎಂದಷ್ಟೇ ಹೇಳಿದರು.

ಮುಂದಿನ ದಿನಗಳಲ್ಲಿ ಭಾರತ ತಂಡದ ಕೋಚ್ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾದ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, `ನೀವು ನನಗೆ ಆ ಹುದ್ದೆಯ ಪ್ರಸ್ತಾವ ಇಟ್ಟಿದ್ದೀರಾ? ನನಗೆ ಗೊತ್ತಿಲ್ಲ. ಇದುವರೆಗೆ ಯಾರೂ ನನ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿಲ್ಲ. ಮುಂದೆ ಏನು ಆಗುತ್ತೆ ಎಂಬುದು ಯಾರಿಗೆ ಗೊತ್ತು?~ ಎಂದರು.

`ಆದರೆ ಕ್ರೀಡೆಯೊಂದಿಗೆ ಮುಂದುವರಿಯಬೇಕು ಎಂಬುದು ನನ್ನ ಆಸೆ. ಈ ಕ್ರೀಡೆ ನನಗೆ ಸಾಕಷ್ಟು  ನೀಡಿದೆ. ಅದನ್ನು ಕ್ರೀಡೆಗೆ ಹಿಂತಿರುಗಿಸುವುದು ತುಂಬಾ ಕಷ್ಟ. ಏಕೆಂದರೆ ಈ ಕ್ರೀಡೆ ತುಂಬಾ ದೊಡ್ಡದು~ ಎಂದೂ ಯಶಸ್ವಿ ಟೆಸ್ಟ್ ಆಟಗಾರ ದ್ರಾವಿಡ್ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.

`16 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಮ್ಮೆ ತಾಳ್ಮೆ ಕಳೆದುಕೊಂಡಿದ್ದೂ ಇದೆ~ ಎಂದ ಅವರು ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಸಿಟ್ಟಿನಿಂದ ಕುರ್ಚಿ ಎಸೆದಿದ್ದ ಘಟನೆಯನ್ನೂ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT