ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದ ಕಾವ್ಯದ ಆಚೆಗೆ...

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ಮೂವತ್ತು ವರ್ಷಗಳಿಂದಲೂ ಕನ್ನಡ ಕಾವ್ಯಪರಂಪರೆಯೊಟ್ಟಿಗೆ ಬೆಳೆದ ಕವಿ ಎಸ್.ಜಿ. ಸಿದ್ಧರಾಮಯ್ಯನವರು ತಮ್ಮ ದೇಸಿಗುಣ ಹಾಗೂ ವಿಶಿಷ್ಟ ಭಾಷಾರುಚಿಯ ಕಾವ್ಯದ ಮೂಲಕ ಕಾವ್ಯಪರಂಪರೆಯನ್ನು ಬೆಳೆಸಿದವರು. ಅವರ ನೂರೊಂದು ಆಧುನಿಕ ವಚನಗಳ ಪುಸ್ತಕ  `ಅರಿವು ನಾಚಿತ್ತು~.

ಇಲ್ಲಿನ ಆಧುನಿಕ ವಚನಗಳನ್ನು `ಅರಿವು ನಾಚಿದ ಸಂದರ್ಭದ ಪ್ರತಿಕ್ರಿಯಾತ್ಮಕ ಪದರೂಪಿಗಳು~ ಎಂದು ಅವರು ಕರೆದುಕೊಂಡಿದ್ದಾರೆ. ಈ  `ಅರಿವು ನಾಚಿದ ಸಂದರ್ಭ~ವನ್ನು ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯೊಳಗಿನ ರಾಜಕಾರಣವನ್ನು ಬಹುತ್ವದ ಸಮಾಜದಲ್ಲಿ ಬದುಕುವಾಗ ನರಿಬುದ್ಧಿಯಲ್ಲಿ ವರ್ತಿಸುವ ಸಾಂಸ್ಕೃತಿಕ ರಾಜಕಾರಣ ಎಂದವರು ಕರೆಯುತ್ತಾರೆ.
 
ಈ ಆಧುನಿಕ ವಚನಗಳು ರೂಪುಗೊಂಡಿದ್ದು ಅವರು ಕಾಲುನೋವಿನ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ. ಇದನ್ನು, `ನಾನು ವಚನಗಳನ್ನು ಬರೆಯಬೇಕೆಂದು ಹೊರಟವನಲ್ಲ. ವಚನ ರಚನೆ ನನ್ನೊಳಗೆ ಆಯಾಚಿತವಾಗಿ ಹೀಗೆ ಸಾಂದರ್ಭಿಕ ಒತ್ತಡದಲ್ಲಿ ಒಡಮೂಡಿದ್ದು ದೇಹದ ಬಾವು, ಜೊತೆಗೆ ಒಳಗಿನ ನೋವು ಹೇಳಿಕೊಳ್ಳಲು ಆರ್ತಭಾವದ ಸ್ವರಜಾಲವಾಗಿ ಹುಟ್ಟಿದ್ದು~ ಎಂದವರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ.

`ವಚನ~ ಎಂಬ ಪದಕ್ಕೆ ಮೊದಲ ಅರ್ಥ `ಮಾತು~. ಹಾಗೆಯೇ `ಗದ್ಯಸಾಹಿತ್ಯದಲ್ಲಿ ಒಂದು ಪ್ರಕಾರ~ ಎಂಬ ಅರ್ಥವೂ ಇದೆ. ತಮ್ಮ ವಚನಗಳ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ವಿಶಿಷ್ಟವಾಗಿ ಹೊಳಪುಗೊಳಿಸಿದ, ವಚನ ರಚನೆಯನ್ನು ತಮ್ಮ ಅಂತರಂಗ ಮತ್ತು ಬಹಿರಂಗದ ಚಿಂತನೆ, ಆಸ್ವಾದನೆಗೆ, ಸಮಾಜದ ವಿಮರ್ಶೆಗೆ ರೂಪಿಸಿಕೊಂಡವರು ವಚನಕಾರರು.
 
ಹಲವಾರು ವಚನಕಾರರ ವಚನಗಳು ಗದ್ಯ-ಪದ್ಯಗಳ ಚೌಕಟ್ಟನ್ನೂ ಮೀರಿ ಕಾವ್ಯವಾದ, ಅಲೌಕಿಕ ಅನುಭವವಾದ ಉದಾಹರಣೆಗಳಿವೆ- `ಎನ್ನ ಕಾಯ ಮಣ್ಣು, ಜೀವ ಬಯಲು~ ಎಂದ ಅಕ್ಕಮಹಾದೇವಿಯ ಸಾಲಿನಂತೆ; ಸಾಮಾಜಿಕ ವಿಮರ್ಶೆಯೂ, ಅಂತರಂಗದ ವಿಮರ್ಶೆಯೂ ಆದ ಉದಾಹರಣೆಗಳಿವೆ- `ಕನ್ನಡಿಯ ನೋಡುವ ಅಣ್ಣಗಳಾ ಜಂಗಮವ ನೋಡಿರೆ~ ಎಂದ ಬಸವಣ್ಣನ ಸಾಲಿನಂತೆ.

ಹಾಗಾದರೆ ವಚನ ಎಂಬುದನ್ನು ಕಾವ್ಯ ಪ್ರಕಾರವೆಂದು ಗುರುತಿಸಬೇಕೆ, ಗದ್ಯದ ಚೌಕಟ್ಟಿನಲ್ಲಿ ವಿಶ್ಲೇಷಿಸಬೇಕೆ ಎಂಬ ಚರ್ಚೆಗಳೆಲ್ಲ ಹೀಗಾಗಲೇ ನಡೆದುಹೋಗಿವೆ. ಇಂತಹ ಯಾವ ವಿಶ್ಲೇಷಣೆ-ವಿಚಾರಗಳೂ ಇಲ್ಲದ ಇಂದಿನ ಅನೇಕ ಸಾಹಿತಿಗಳು ತಮ್ಮ ಆಲೋಚನೆಗಳೆಲ್ಲವನ್ನೂ `ಆಧುನಿಕ ವಚನಗಳು~ ಹೆಸರಿನಲ್ಲಿ ನೂರಾರು ಪುಸ್ತಕಗಳಾಗಿ ಪ್ರಕಟಿಸುತ್ತಿದ್ದಾರೆ.

ಆಧುನಿಕ ಕನ್ನಡ ಸಾಹಿತ್ಯದಲ್ಲಿ `ಮುಕ್ತಕ~ಗಳು, `ಚುಟುಕು~ಗಳು, `ಹನಿಗವಿತೆ~ಗಳೆಂಬ ಪ್ರಕಾರಗಳೆಲ್ಲ ಹೀಗೆಯೇ `ಸ್ವ-ಚಿಂತನೆ~ಯ ಸ್ವಚ್ಛಂದ ಲಹರಿಯಲ್ಲಿ, ಹೆಚ್ಚಿನ ಸಲ ತೀರಾ ಉಡಾಫೆಯ ನೆಲೆಗಳಲ್ಲಿ ರಾಶಿರಾಶಿಯಾಗಿ ಹೊರಬರುತ್ತಿವೆ. ಇಂತಹ ಸಂದರ್ಭದಲ್ಲಿಯೇ ಸಿದ್ಧರಾಮಯ್ಯನವರು ತಮ್ಮ ತಕ್ಷಣದ ಆಲೋಚನೆಗಳಿಗೆಲ್ಲ ಅಕ್ಷರರೂಪ ಕೊಡಲು `ಆಧುನಿಕ ವಚನ~ ಪ್ರಕಾರವನ್ನು ಆರಿಸಿಕೊಂಡಿದ್ದಾರೆ.

ಸಿದ್ಧರಾಮಯ್ಯನವರ ವಚನಗಳನ್ನು ನೋಡುತ್ತಾ ಹೋದತೆ ಮೂಲತಃ ಕವಿಯಾಗಿರುವ ಅವರ ಈ ರಚನೆಗಳನ್ನು ಕೇವಲ ವಾಚ್ಯಾರ್ಥದಲ್ಲಿ `ವಚನ~ಗಳ ಹಾಗೆಯೇ ನೋಡಬೇಕೆ ಅಥವಾ ಇಲ್ಲಿಯೂ ಕಾವ್ಯ ಸಂವೇದನೆಯನ್ನು ಹುಡುಕಬೇಕೆ ಎಂಬ ಪ್ರಶ್ನೆ ಏಳದಿರದು.

ಹನ್ನೆರಡನೆಯ ಶತಮಾನದ ವಚನಕಾರರ ವಚನಗಳಲ್ಲಿ ಸಾಮಾಜಿಕ-ಆಂತರಂಗಿಕ ಪರಿಕಲ್ಪನೆಗಳೊಟ್ಟಿಗೇ ರೂಪುತಳೆದಿದ್ದ ಕಾವ್ಯಾತ್ಮಕ ರೂಪಗಳ ಕುರಿತು ನಮ್ಮ ಗಮನ ಹೆಚ್ಚು ಕೇಂದ್ರೀಕೃತಗೊಳ್ಳುವುದರಿಂದ ಆ ನೆಲೆಯಲ್ಲಿಯೇ ಸಿದ್ಧರಾಮಯ್ಯನವರ ಈ ವಚನಗಳನ್ನೂ ನೋಡಬೇಕೆನ್ನಿಸುತ್ತದೆ. ಹಾಗೆ ನೋಡಹೋದರೆ ಇಲ್ಲಿನ ಹೆಚ್ಚಿನ ವಚನಗಳು ನಮ್ಮಲ್ಲಿ ನಿರಾಶೆಯನ್ನಷ್ಟೇ ಮೂಡಿಸುತ್ತವೆ.

ಯಾಕೆಂದರೆ ಒಂದಿಲ್ಲೊಂದು ಬಗೆಯಲ್ಲಿ ಸಾಮಾಜಿಕ - ಆಂತರಂಗಿಕ - ಕಾವ್ಯಾತ್ಮಕ ನೆಲೆಗಳಲ್ಲಿ ಮುಪ್ಪುರಿಗೊಂಡಿದ್ದ ವಚನಕಾರರ ಸಾಲುಗಳ ಕುಶಲತೆ, ನೈಜತೆ ಮತ್ತು ಹದ ಸಿದ್ಧರಾಮಯ್ಯನವರ ಸಾಲುಗಳಲ್ಲಿ ಸಿಗಲಾರವು.

ಆದರೂ ಈ ಕೃತಿಗೆ ಹಿನ್ನುಡಿ ಬರೆದಿರುವ ಹುಲಿಕುಂಟೆ ಮೂರ್ತಿಯವರು `ಹನ್ನೆರಡನೆಯ ಶತಮಾನದ ವಚನಗಳಲ್ಲಿಯೂ ನಾವು ಈ ಮಟ್ಟದ ಓದುವ ಎದೆಯೊಳಗೂ ಹರಿಯಬಹುದಾದ ಹಾಗೂ ಅಲ್ಲಿಯೂ ಬೆಳೆದು ಕ್ರಿಯೆಯನ್ನು ನಿರೀಕ್ಷಿಸುವ ರಚನೆಗಳನ್ನು ಕಾಣಲಾರೆವೇನೋ~ ಎಂದು ಓದುಗರು ಬೆಚ್ಚುವಂತಹ ಹೇಳಿಕೆ ನೀಡುತ್ತಾರೆ!

ಸಿದ್ಧರಾಮಯ್ಯನವರ ಆಧುನಿಕ ವಚನಗಳ ಕೆಲವು ಸಾಲುಗಳನ್ನು ಗಮನಿಸಬಹುದು:

ಅವರಿವರ ಮನೆಯ ದೋಸೆಯಾ ಜರಿದು
ಹೀಯಾಳಿಸುವುದು ಬೇಡವಯ್ಯಾ
ನಿನ್ನ ಮನೆಯ ಕಾವಲಿಯ ತೂತನು ಮರೆದು
ಮೆರೆಯುವುದು ಬೇಡವಯ್ಯಾ...

ಎಂದಿನಿಂದಲೂ ಕನ್ನಡದ ಪುಸ್ತಕೋದ್ಯಮ
ಬಿಕ್ಕಟ್ಟುಗಳನೆದುರಿಸುತ್ತಿದೆಯಯ್ಯಾ
ಅಂದು ವ್ಯವಹಾರ ಶುದ್ಧ ಪ್ರಕಾಶಕರಿದ್ದರು
ಆದರೆ ಜಾತಿಶ್ರೇಷ್ಠತೆಯ ಮತಿಸೂತಕದಲ್ಲಿ
ಸರಸ್ವತಿಗೆ ಜಾತಿಕಸದ ಕೋಟೆ ಕಟ್ಟಿದ್ದರಯ್ಯ
ಇಂದು ವ್ಯವಹಾರವೆಂಬುದು ದಂಧೆಯಾಗಿದೆ...

ಪ್ರಶಸ್ತಿಗಾಗಿ ಆಯ್ಕೆ ಸೂತ್ರದ ಹಾದಿ
ಹಿಡಿದು ಬರೆಯುವ ಸಾಹಿತಿ
ಸಂದೇಶ ಸೂತ್ರದ ಬರಿಮಳೆಗರೆದು
ಚಿತ್ರ ಮಾಡುವ ನಿರ್ದೇಶಕ
ಕಲಾಕ್ಷೇತ್ರದ ದೃಷ್ಟಿಬೊಟ್ಟುಗಳಯ್ಯಾ...

ರಾಜ್ಯಪಾಲನಾಗಲಿ ಸಭಾಧ್ಯಕ್ಷನಾಗಲಿ
ಪಕ್ಷಗಳ ಕೈಗೊಂಬೆಗಳಾಗಬಾರದಯ್ಯಾ
ನೀತಿಸಂಹಿತೆಯ ಸಂವಿಧಾನ
ಸಂರಕ್ಷಕ ಪ್ರಭುಗಳಾಗಬೇಕಯ್ಯಾ

-ಹೀಗೆ ಸಿದ್ಧರಾಮಯ್ಯನವರು ಸಮಾಜ, ಕಾವ್ಯ, ರಾಜಕಾರಣ, ವ್ಯಕ್ತಿತ್ವ ಎಲ್ಲದರ ಕುರಿತು ತಮಗಿರುವ ಅನಿಸಿಕೆ-ನಿಲುವುಗಳನ್ನು `ಆಧುನಿಕ ವಚನ~ಗಳನ್ನಾಗಿಸಿದ್ದಾರೆ. ಇವೆಲ್ಲವೂ ಅನಿಸಿಕೆಗಳ ಮಟ್ಟದಲ್ಲೇ ಇರುವುದರಿಂದ `ವಚನ~ ಎಂಬ ಶಬ್ದಕ್ಕೆ ಇರುವ ಮೊಟ್ಟಮೊದಲನೆಯ ಅರ್ಥವಾದ `ಮಾತು~ಗಳ ಹಂತದಲ್ಲೇ ನಿಂತುಬಿಡುತ್ತವೆ. ಇಂತಹ ಕ್ಲೀಷೆಗಳ ನಡುವೆಯೂ-

ಊರು ಕರೆಯುತ್ತಿದೆ ಊರದಾರಿ ಕರೆಯುತ್ತಿದೆ
ಕೊಟ್ಟ ಕಾಲುಗಳ ಕಸಗೊಂಡವನು ನೀನು
ಊರಭೂಮಿಯಲ್ಲಿ ಬೇರು ಬಿಟ್ಟವನು ನಾನು
ಬೇರಿನಾಳದ ಪಸೆಯ ಆಳದಾಳದ ರಸ್ತೆಗೆ 
ಇಳಿಸಿದವನು...
ನುಡಿಯೊಳಗೆ ನಿರ್ಮಲದ ಬೆಡಗು
ನಡೆಯೊಳಗೆ ನಂಬಿಕೆಯ ಬೆರಗು

ಹಗುರಾಗುವುದೆಂದರೆ
ಉರಿವ ಬತ್ತಿಗೆ
ತೈಲವಾಗುವುದು

-ಎಂಬ ಒಂದೆರಡು ಸಾಲುಗಳಲ್ಲಿ ಸಿದ್ಧರಾಮಯ್ಯನವರ ಎಂದಿನ ಕಾವ್ಯಗುಣ ಮಿಡಿದಿರುವುದನ್ನು ಗಮನಿಸಬಹುದು.
 
ಈ ಆಧುನಿಕ ವಚನಗಳಿಗೆ `ಮುನ್ನುಡಿಯಲ್ಲದ ಮುನ್ನುಡಿ~ ಬರೆದಿರುವ ಚಂದ್ರಶೇಖರ ಪಾಟೀಲರು ಇಲ್ಲಿನ ಮಿತಿಗಳನ್ನು ಹೇಳುವಾಗ ಸಾಹಿತ್ಯ ಎಂಬುದು ಉಳಿಯಬೇಕಾದ್ದು ತನ್ನ ಮೂಲದ್ರವ್ಯದ ಮೂಲಕವೇ, ಇದೇ ಅವರ ಅಂತಿಮ ಮಾದರಿಗಳಾಗಬಾರದು~ ಎನ್ನುತ್ತಾರಾದರೂ ಇಲ್ಲಿನ ವಚನಗಳನ್ನು ವಸ್ತುನಿಷ್ಠವಾಗಿ ನೋಡುವ, ಚರ್ಚಿಸುವ ಗೊಡವೆಗೆ ಹೋಗಿಲ್ಲ; ಕೇವಲ ಅಭಿಮಾನಕ್ಕೆ ಮಾತ್ರ ಬೆನ್ನುಡಿ ಬರೆದಿರುವ ಹಿರಿಯರಾದ ಪ್ರೊ. ಕೆ. ಮರುಳಸಿದ್ಧಪ್ಪನವರಿಗೂ ಈ ಮಾತು ಅನ್ವಯಿಸುತ್ತದೆ.

ನಿಜಾನುಭವ ಸತ್ವಸಾಲುಗಳಾಗದ ಸಂಕಟವನ್ನುಸುರುವ `ಅಲ್ಲೊ ಮಾತೊರಗಿತ್ತು ಮೌನದ ಸೆರಗಿನಲಿ, ಅಂತಃಕರಣದ ಬೆರಗಿನಲಿ~ ಎಂಬ ಬೇಂದ್ರೆಯವರ ಸಾಲುಗಳಂತೆ ವಚನದಲ್ಲಿಯೇ ಆಗಲೀ, ಕಾವ್ಯದಲ್ಲಿಯೇ ಆಗಲಿ ಅನುಭವವನ್ನು ಸತ್ವ ಸಾಲುಗಳಾಗಿಸುವ ತಾಕಲಾಟ, ಹುಡುಕಾಟಗಳು ಇರಬೇಕು. ಇಲ್ಲದಿದ್ದರೆ ಅದು ಕೇವಲ ಮಾತಾಗುತ್ತದೆಯಷ್ಟೇ.

`ಮರುಜೇವಣಿಗೆ~ಯಂತಹ ಸಂಕಲನಗಳಲ್ಲಿ ಹದಕಾವ್ಯದ ನುಡಿಗಟ್ಟುಗಳನ್ನು ರೂಪಿಸಿಕೊಟ್ಟ ಸಿದ್ಧರಾಮಯ್ಯನವರು ದಲಿತ ಕವಿ ಸಿದ್ಧಲಿಂಗಯ್ಯನವರು ಭ್ರಷ್ಟಗೊಂಡಿದ್ದನ್ನು, ಭೈರಪ್ಪನವರ ಸಾಹಿತ್ಯದ ಮೂಲಭೂತವಾದಿತನವನ್ನು, ಬಿಜೆಪಿ ಸರ್ಕಾರದ ಭ್ರಷ್ಟತೆಯನ್ನು ಟೀಕಿಸುವುದಕ್ಕೆ `ಆಧುನಿಕ ವಚನ~ಗಳನ್ನೇ ಬಳಸಬೇಕೆಂದೇನೂ ಇಲ್ಲ; ಕೇವಲ ಮಾತುಗಳಲ್ಲಿ ದಾಖಲಿಸಿದರೆ ಸಾಕು. ಹಾಗಾಗಿಯೇ ಅವರ  `ಅರಿವು ನಾಚಿತ್ತು~ ಕೃತಿ ಅವರದೇ ವಚನಗಳ ಸಾಲಿನಂತೆ `ಕೂಳೆ ಕಲ್ಲಿನ ಪದಾಘಾತಕೆ ಪಯಣ ತಪ್ಪಿದೆ~.

ಅರಿವು ನಾಚಿತ್ತು
ಲೇ: ಎಸ್.ಜಿ. ಸಿದ್ಧರಾಮಯ್ಯ
ಪು: 88. ಬೆ: ರೂ. 60
ಪ್ರ: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT