ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ: ಗ್ರಾಮಸ್ಥರಿಗಿಲ್ಲ ಮುಕ್ತಿ

ಸಂಗನಕಲ್ಲು ಜನರ ಬವಣೆ...
Last Updated 9 ಜನವರಿ 2014, 7:53 IST
ಅಕ್ಷರ ಗಾತ್ರ

ಬಳ್ಳಾರಿ: ಈ ಊರಿನ ಮಧ್ಯಭಾಗದಲ್ಲಿ ಸಾವಕಾಶವಾಗಿ ಸಾಗುವ ವಾಹನಗಳ ದಂಡು ಜೋರಾಗಿಯೇ ಧೂಳನ್ನು ಹೊರ ಹೊಮ್ಮಿಸುತ್ತದೆ. ಸಂಪೂರ್ಣ ಹದಗಟ್ಟ ರಸ್ತೆಯಿಂದಾಗಿ, ಊರವರ ನೆಮ್ಮದಿಯೂ ಹದಗೆಟ್ಟು ಹೋಗಿದೆ.

ಇದು ತಾಲ್ಲೂಕಿನ ಸಂಗನಕಲ್ಲು ಗ್ರಾಮದ ಸ್ಥಿತಿ. ಬಳ್ಳಾರಿ, ಮೋಕಾ, ಹಾಲರವಿ, ಆಲೂರು, ಆದೋನಿ, ಮಂತ್ರಾಲಯ, ಕರ್ನೂಲಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ–132ರ ಗುಂಟ ನಿತ್ಯವೂ ಸಾವಿರಾರು ವಾಹನ­ಗಳು ಅಬ್ಬರದಿಂದಲೇ ಚಲಿಸುತ್ತವೆ.

ಅಂತೆಯೇ ಈ ಊರಿಗೆ ಅಂಟಿಕೊಂಡಂತೆಯೇ ಸುಸಜ್ಜಿತವಾದ ಚತುಷ್ಪಥ ರಸ್ತೆ ಇದೆ. ಈ ಊರಿನ್ನು ಬಳಸಿಕೊಂಡು ಸಾಗುವ ಆ ರಸ್ತೆಯ ನಡುವೆ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಹೊಸ ರಸ್ತೆ ಸಂಚಾರಕ್ಕೆ ಮುಕ್ತವಾಗದೆ ಉಳಿದಿದೆ.

ಇದರಿಂದಾಗಿ ಈ ಊರೊಳಗಿನಿಂದಲೇ ಸಂಚಾರಕ್ಕೆ ಅವಕಾಶ ನೀಡಿರುವುದು ಜನರ ಸಮಸ್ಯೆಯ ಮೂಲವಾಗಿದೆ.

ಊರೊಳಗಿನ ರಸ್ತೆ ಕೆಟ್ಟು ಹೋಗಿ ಅನೇಕ ವರ್ಷಗಳು ಕಳೆದರೂ ಸಂಬಂಧಿ­ಸಿದವರು ದುರಸ್ತಿಗೆ ಕ್ರಮ ಕೈಗೊಳ್ಳ­ದ್ದ­ರಿಂದ ಬೇಸತ್ತು ಹೋಗಿರುವ ಗ್ರಾಮ­ಸ್ಥರು, ಚತುಷ್ಫಥ ರಸ್ತೆ ನಿರ್ಮಾಣ ಆಗಿ­ದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಅಲ್ಲದೆ, ಹೊಸ ರಸ್ತೆ ಆರಂಭವಾದರೆ ಊರ ಮೂಲಕ ಕೇವಲ ಒಂದೆರಡು ಸಾರಿಗೆ ಸಂಸ್ಥೆ ಬಸ್‌ಗಳು, ಗ್ರಾಮಸ್ಥರ ದ್ವಿಚಕ್ರ ವಾಹನಗಳು, ಸಣ್ಣಪುಟ್ಟ ಕಾರ್‌, ಜೀಪ್‌ಗಳು ಮಾತ್ರ ಓಡಾಡುತ್ತವೆ ಎಂದು ಭಾವಿಸಿದ್ದ ಜನತೆಗೆ ದಿಗ್ಭ್ರಾಂತಿ ಆಗಿದೆ.

ಚತುಷ್ಫಥ ರಸ್ತೆಯಲ್ಲಿನ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯ ಆಗದ್ದರಿಂದ ಎಲ್ಲ ವಾಹನಗಳೂ ಗ್ರಾಮದ ಮೂಲಕವೇ ಸಾಗುತ್ತಿದ್ದು, ನಿತ್ಯವೂ ದೂಳಿನ ಮಜ್ಜನವಾಗುತ್ತಿದೆ.

ಭೂಸ್ವಾಧೀನ ಪ್ರಕ್ರಿಯೆಯ ಸಮಸ್ಯೆ ಹಾಗೂ ಸಂಪರ್ಕ ರಸ್ತೆಗೆ ಸೂಕ್ತ ಜಾಗೆಯ ಕೊರತೆಯಿಂದಾಗಿ ಸೇತುವೆ ಕಾಮಗಾರಿ ಪೂರ್ಣಗೊಂಡಿಲ್ಲ. ಮೋಕಾ ಚತುಷ್ಫಥ ರಸ್ತೆಗೆ ಇರುವ ಎಲ್ಲ ಅಡಚಣೆಗಳೂ ದೂರವಾಗಿ ಆದಷ್ಟು ಬೇಗ ರಸ್ತೆ ಸಂಚಾರಕ್ಕೆ ಸಂಪೂರ್ಣ ಮುಕ್ತವಾಗಲಿದೆ ಎಂದು ಹೊಸ ರಸ್ತೆಯ ಜವಾಬ್ದಾರಿ ವಹಿಸಿಕೊಂಡಿರುವ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಿಳಿಸುತ್ತಾರೆ.

ಆದರೆ, ಪೂರ್ಣ ಕೆಟ್ಟು ಹೋಗಿರುವ ಸಂಗನಕಲ್ಲು ಗ್ರಾಮದೊಳಗಿನ ರಸ್ತೆಯ ನಿರ್ಮಾಣ ಜವಾಬ್ದಾರಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರುತ್ತದೆ ಎಂದು ಅವರು ಹೇಳುತ್ತಾರೆ.

ಇಷ್ಟು ದಿನಗಳ ಕಾಲ ಅಗತ್ಯ ಅನುದಾನ ಬಿಡುಗಡೆ ಆಗಿರಲಿಲ್ಲ. ಇದೀಗ ಸಂಗನಕಲ್ಲು ಗ್ರಾಮ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಂದಿದೆ. ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಕಾಮಗಾರಿಯನ್ನು ಹಂತಹಂತ­ವಾಗಿ ಆರಂಭಿಸಬೇಕಿದೆ. ಅಷ್ಟರೊಳಗೆ ಲೋಕಸಭೆ ಚುನಾವಣೆ ಘೋಷಣೆ­ಯಾದರೆ ಮತ್ತೆ ಮೂರು ತಿಂಗಳು ಕಾಮಗಾರಿ ವಿಳಂಬವಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯ­ನಿರ್ವಾಹಕ ಎಂಜಿನಿಯರ್‌ ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆದಷ್ಟು ಬೇಗ ಈ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡು, ಧೂಳು ಮತ್ತು ವಾಹನ ದಟ್ಟಣೆಯಿಂದ ಎದುರಾ­ಗುತ್ತಿರುವ ಸಮಸ್ಯೆಯಿಂದ ಮುಕ್ತಿ ದೊರಕಿಸಬೇಕು ಎಂದು ಗ್ರಾಮಸ್ಥರಾದ ರಾಮದಾಸ್‌, ನಾಗೇಂದ್ರ, ಚಂದ್ರಮೋಹನ್‌, ಗಿರಿಯಪ್ಪ ಮತ್ತಿತರರು ಮನವಿ ಮಾಡಿದ್ದಾರೆ.
ಈ ಗ್ರಾಮದ ಬಳಿ ಇರುವ ಮೂರು ಕಿ.ಮೀ. ರಸ್ತೆ ಕೆಟ್ಟುಹೋಗಿ, ದೊಡ್ಡದೊಡ್ಡ ಕುಣಿಗಳು ಉತ್ಪತ್ತಿ ಆಗಿರುವದರಿಂದ ವಾಹನ ಚಾಲನೆಯೂ ಕಷ್ಟದಾಯಕವಾಗಿದೆ ಎಂದು ವಾಹನ ಚಾಲಕರೂ ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT