ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಗಳ ಗೋಳು

Last Updated 8 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ಹಾಸನ: ನಗರದ ಬಿ.ಎಂ. ರಸ್ತೆ, ರಿಂಗ್ ರಸ್ತೆಯಿಂದ ಹಿಡಿದು ಎಲ್ಲ ಬಡಾವಣೆಗಳ ರಸ್ತೆಗಳೂ ಗಬ್ಬೆದ್ದು ಹೋಗಿವೆ. ಕಳಪೆ ಕಾಮಗಾರಿಯಿಂದ ಅಥವಾ ವಾಹನಗಳ ದಟ್ಟಣೆ ಹೆಚ್ಚಾದ ಕಾರಣದಿಂದ ಕ್ರಮೇಣ ರಸ್ತೆಗಳಲ್ಲಿ ಗುಂಡಿ ಬೀಳುವುದು, ಅವುಗಳಿಗೆ ತೇಪೆ ಹಚ್ಚುವುದು, ಮತ್ತೆ ಗುಂಡಿ ಬೀಳುವುದು ಇವೆಲ್ಲವೂ ಜಿಲ್ಲೆಯ ಜನರಿಗೆ ಸಾಮಾನ್ಯ ವಿಚಾರಗಳಾಗಿಬಿಟ್ಟಿವೆ.

ಸಹಜವಾಗಿ ಬೀಳುವ ಗುಂಡಿಗಳ ಸಮಸ್ಯೆ ಒಂದಾದರೆ ನಗರದ ಎಲ್ಲ ರಸ್ತೆಗಳನ್ನು ಕಾಡುವ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ರಸ್ತೆಗಳ ಅಗೆತ. ಈ ಸಮಸ್ಯೆ ನಗರದ ಯಾವ ರಸ್ತೆಯನ್ನೂ ಬಿಟ್ಟಿಲ್ಲ.

ರಸ್ತೆಯ ಒಂದ ಭಾಗದಿಂದ ಇನ್ನೊಂದು ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡಲು ಅಥವಾ ಒಂದು ಬದಿಯ ಪೈಪ್‌ಗಳಿಂದ ಇನ್ನೊಂದು ಬದಿಯಲ್ಲಿರುವ ಮನೆಗೆ ನೀರಿನ ಪೈಪ್ ಅಳವಡಿಸಲು ರಸ್ತೆ ಅಗೆಯುವುದು ಅನಿವಾರ್ಯವಾಗುತ್ತದೆ. ಆದರೆ ಹೀಗೆ ಅಗೆದ ರಸ್ತೆಗಳು ಶಾಶ್ವತ ಹುಣ್ಣುಗಳಂತೆ ಪ್ರಯಾಣಿಕರನ್ನು ಕಾಡುತ್ತಲೇ ಇವೆ. ಕೆಲವು ಸಂದರ್ಭಗಳಲ್ಲಿ ಜನರು ನಗರಸಭೆಯ ಗಮನಕ್ಕೆ ತಾರದೆಯೇ ರಸ್ತೆಗಳನ್ನು ಅಗೆದಿರುವುದೂ ಇದೆ.

ಯಾವ ಉದ್ದೇಶಕ್ಕೇ ಆಗಲಿ ರಸ್ತೆಯನ್ನು ಅಗೆಯಬೇಕಾದರೆ ಸ್ಥಳೀಯ ಸಂಸ್ಥೆಯ ಪರವಾನಿಗೆ ಪಡೆಯುವುದು ಕಡ್ಡಾಯ. ವಿದ್ಯುತ್ ಅಥವಾ ನೀರಿನ ಸಂಪರ್ಕಕ್ಕಾಗಿ ರಸ್ತೆ ಅಗೆಯಬೇಕಾದರೆ ನಗರಸಭೆಯವರು ಮನೆಯ ಅಥವಾ ಕಟ್ಟಡದ ಮಾಲೀಕರಿಗೆ ನಿಗದಿತ ಶುಲ್ಕವನ್ನೂ ವಿಧಿಸುತ್ತಾರೆ. ಶುಲ್ಕ ಪಡೆದವರು ಗುಂಡಿಯನ್ನು ಸರಿಯಾಗಿ ಮುಚ್ಚುವ ಕಾರ್ಯವನ್ನೇಕೆ ಮಾಡುತ್ತಿಲ್ಲ ? ಎಂಬುದು ಪ್ರಶ್ನೆ.

ಯಾವುದೇ ರಸ್ತೆಯಲ್ಲಿ ಇಂಥ ಗುಂಡಿ ತೋಡಿದಾಗಲೂ ಮುಂದಿನ ಕೆಲವು ದಿನಗಳ ಕಾಲ ಒಂದೇ ರೀತಿಯ ಸಮಸ್ಯೆಗಳೆದುರಾಗುತ್ತವೆ. ಜನರು ತಮ್ಮ ಕೆಲಸವಾದ ಬಳಿಕ ಗುಂಡಿಯಲ್ಲಿ ಹೆಚ್ಚು ಮಣ್ಣು ತುಂಬುವುದರಿಂದ ಕೆಲವು ದಿನಗಳ ಕಾಲ ಅಲ್ಲಿ ಒಂದು ರಸ್ತೆ ಉಬ್ಬು ನಿರ್ಮಾಣವಾಗಿರುತ್ತದೆ. ಅದರ ಮೇಲೆ ಕೆಲವು ದಿನ ವಾಹನಗಳು ಓಡಾಡಿದಾಗ ಒಂದು ಹದವಾದ ಸ್ಥಿತಿಗೆ ಬರುತ್ತವೆ. ಇನ್ನೂ ಸ್ವಲ್ಪ ದಿನ ವಾಹನ ಓಡಿದರೆ ಗುಂಡಿ ಬೀಳುತ್ತದೆ.
ಒಂದೇ ಒಂದು ಮಳೆ ಬಿದ್ದರೆ ಸಾಕು ಆ ಜಾಗದಲ್ಲಿ ವಾಹನ ಓಡಿಸುವುದೇ ದುಸ್ತರವಾಗುತ್ತದೆ.

ಡಾಂಬರು ಹಾಕಿ ತಿಂಗಳು ಕಳೆಯುವುದರೊಳಗೇ ರಸ್ತೆಯನ್ನು ಅಗೆದರೆ ಎಂಥವರಿಗೂ ಇನ್ನಿಲ್ಲದ ಸಿಟ್ಟು ಬರುವುದು ಸಹಜ. ಉದಾಹರಣೆ ಬೇಕೆಂದಿದ್ದರೆ ಒಮ್ಮೆ ಸಾಲಗಾಮೆ ರಸ್ತೆಯಲ್ಲಿ ಓಡಾಡಿ ಬರಬಹುದು. ವರ್ಷಗಳ ಕಾಲ ಕೆಟ್ಟ ಸ್ಥಿತಿಯಲ್ಲಿದ್ದ ಈ ರಸ್ತೆ ವರ್ಷದ ಹಿಂದೆ ಡಾಂಬರು ಕಂಡಿತ್ತು. ಈ ಭಾಗದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟರು. ಆದರೆ ಅರಳೀಕಟ್ಟೆ ಸರ್ಕಲ್ ಬಳಿ ಈಗಾಗಲೇ ಒಂದು ಇಂಥ ಗುಂಡಿ ನಿರ್ಮಿಸಿಯಾಗಿದೆ. ಇನ್ನೂ ಸ್ವಲ್ಪ ಮುಂದೆ ರಸ್ತೆ ಮೇಲೆ ಗುಂಡಿ ಬಿದ್ದಿದೆ.

ಕೆ.ಆರ್.ಪುರಂ ಬಡಾವಣೆಯ ಎಲ್ಲ ರಸ್ತೆಗಳಲ್ಲೂ ಇಂಥ ರಸ್ತೆ ಅಗೆತದ ಹಳೆಯ ಗಾಯಗಳು ಮಾಸದೆ ಉಳಿದಿವೆ. ಸಂಪಿಗೆ ರಸ್ತೆಯಲ್ಲಿ ಐದಾರು ಮೀಟರ್ ಅಂತರದಲ್ಲಿ ಒಂದೊಂದು ಗುಂಡಿ ಇದೆ. ಈಚೆಗೆ ಸರ್ಕಾರಿ ಆಸ್ಪತ್ರೆಯಿಂದ ಬಿ.ಎಂ. ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇಂಥ ದೊಡ್ಡ ಗುಂಡಿ ನಿರ್ಮಿಸಲಾಗಿದೆ. ಅಪರೂಪಕ್ಕೆಂಬಂತೆ ಕೆಲವು ಭಾಗಗಳಲ್ಲಿ (ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ) ರಸ್ತೆಯನ್ನು ಅಗೆದವರೇ ಕಾಂಕ್ರೀಟ್ ಹಾಕಿ ರಸ್ತೆಯನ್ನು ಮುಚ್ಚಿರುವ ಉದಾಹರಣೆಯೂ ಇದೆ. ಅಂಥವರ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸುವುದೊಂದೇ ನಗರದ ಜನರಿಗಿರುವ ಪರ್ಯಾಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT