ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಗಳಿಂದ ಜನರಿಗೆ ಕಿರಿಕಿರಿ

Last Updated 1 ಜೂನ್ 2011, 9:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದಲ್ಲಿ ಬಿಸಿಲಿನ ಪ್ರಕೋಪದ ಜೊತೆಗೆ ಮಳೆಯ ಆರ್ಭಟವು ಶುರುವಾಗಿದೆ. ಹಗಲಿನಲ್ಲಿ ಕಾಡುವ ಅತಿಯಾದ ತಾಪಮಾನ ಜನರನ್ನು ಕೆಂಗಡಿಸಿದರೆ, ರಾತ್ರಿ ವೇಳೆ ಸುರಿಯುವ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯು ಜನರನ್ನು ತೊಂದರೆ ಉಂಟು ಮಾಡುತ್ತಿದೆ. ಡಾಂಬರೀಕಣ ಕಾಣಬೇಕಿದ್ದ ರಸ್ತೆಗಳು ಇನ್ನಷ್ಟು ಹದಗೆಡುತ್ತಿವೆ.

ಇದರ ನಡುವೆ ನಗರಸಭೆಯ ಒಳಚರಂಡಿ ಕಾಮಗಾರಿ ಮುಂದುವರೆದಿದ್ದು, ಅಲ್ಲಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಮಣ್ಣಿನ ಗುಡ್ಡೆಗಳನ್ನುಹಾಕಲಾಗಿದೆ. ರಸ್ತೆ ಅಗೆದ ಸ್ಥಳಗಳಲ್ಲಿ ವಾಹನಗಳು ಸಿಲುಕುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಹೆಚ್ಚು ಜನಸಂಚಾರ ಮತ್ತು ವಾಹನಗಳ ಸಂಚಾರವಿರದ ರಸ್ತೆಗಳು  ಹದಗೆಟ್ಟಿದ್ದರೆ, ಅಂಥ ತೊಂದರೆಯಾಗುತ್ತಿರಲಿಲ್ಲ. ಆದರೆ ನಗರದ ಪ್ರಮುಖ ಸ್ಥಳಗಳಾಗಿರುವ ಹಳೆಯ ಬಸ್ ನಿಲ್ದಾಣ ಮತ್ತು ಶಿಡ್ಲಘಟ್ಟ ವೃತ್ತದ ಸುತ್ತಮುತ್ತಲೂ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ಹಳೆಯ ಬಸ್ ನಿಲ್ದಾಣದಿಂದ ಹೊರಡುವ ಬಸ್ ಬಿ.ಬಿ.ರಸ್ತೆಯ ಬಳಿ ಬಲ ತಿರುವು ತೆಗೆದುಕೊಳ್ಳುವ ವೇಳೆ ಎಚ್ಚರಿಕೆ ವಹಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ತಿರುವಿನಲ್ಲಿರುವ ತೆಗ್ಗಿನಲ್ಲಿ ಸಿಲುಕುವುದು ನಿಶ್ಚಿತ. ಈ ಸಮಸ್ಯೆ ನಿತ್ಯ ಎದುರಿಸುತ್ತಿದ್ದೇವೆ ಎಂದು ಸ್ವತಃ ಬಸ್ ಚಾಲಕರೇ ಹೇಳುತ್ತಾರೆ.

ಇದಕ್ಕೆ ಅತ್ಯುತ್ತಮ ಉದಾಹರಣೆ ಎಂಬಂತೆ ಸೋಮವಾರ ರಾತ್ರಿ ಮಳೆಯಲ್ಲಿ ಶಿಡ್ಲಘಟ್ಟ ವೃತ್ತದ ಬಳಿ ಖಾಸಗಿ ಸಂಸ್ಥೆಯ ಬಸ್‌ವೊಂದು ತಗ್ಗಿನಲ್ಲಿ ಸಿಲುಕಿಕೊಂಡು ಮೂರು ಗಂಟೆಗಳಾದರೂ ತೆಗ್ಗಿನಿಂದ ಹೊರ ಬರಲಾಗಲಿಲ್ಲ.

 ಸಂಚಾರ ಪೊಲೀಸರು, ಸಾರ್ವಜನಿಕರು ಎಷ್ಟೇ ಪ್ರಯಾಸಪಟ್ಟರೂ ಪ್ರಯೋಜನವಾಗಲಿಲ್ಲ.
ಶಿಡ್ಲಘಟ್ಟಕ್ಕೆ ಹೋಗಲು ಸಿಗ್ನಲ್ ದೀಪಗಳತ್ತ ತಿರುವು ತೆಗೆದುಕೊಳ್ಳುವ ಸ್ಥಳದಲ್ಲೂ ಹೊಂಡವೊಂದು ನಿರ್ಮಾಣವಾಗಿದೆ. ಹೊಂಡದಲ್ಲಿ ಸದಾ ಕಾಲ ನೀರು ಇರುವುದರಿಂದ ಸಂಚಾರ ಪೊಲೀಸರಿಗೆ ವಾಹನಗಳ ಸಂಚಾರ ನಿರ್ವಹಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಸಿಗ್ನಲ್ ದೀಪಗಳು ಕೆಟ್ಟು ಒಂದೂವರೆ ತಿಂಗಳಾದರೂ ದುರಸ್ತಿಯಾಗದ ಕಾರಣ ಪೊಲೀಸರು ರಸ್ತೆ ಮಧ್ಯೆದಲ್ಲಿ ನಿಂತು ವಾಹನಗಳ ಸಂಚಾರವನ್ನು ನಿರ್ವಹಿಸುತ್ತಿದ್ದಾರೆ.

ಹದಗೆಟ್ಟ ರಸ್ತೆಗಳಲ್ಲಿ ವಾಹನವನ್ನು ಚಾಲನೆ ಮಾಡಲು ಒಂದು ರೀತಿಯ ಕಷ್ಟ ಎದುರಿಸಿದರೆ, ಪಾದಚಾರಿಗಳು ನಡೆದಾಡಲು ಇನ್ನೊಂದು ರೀತಿಯ ಸಂಕಷ್ಟ ಎದುರಿಸುತ್ತಿದ್ದಾರೆ. ವಾಹನಗಳು ವೇಗವಾಗಿ ಸಂಚರಿಸುವ ಕಾರಣ ಅಪಘಾತಕ್ಕೀಡಾಗುವ ಆತಂಕದಲ್ಲೇ ರಸ್ತೆ ದಾಟುತ್ತಾರೆ. ಸುತ್ತಮುತ್ತ ಪರಿಸರ ಶುಚಿಯಿರದ ಕಾರಣ ಕೆಸರಿನಲ್ಲೇ ಹೆಜ್ಜೆಯಿಟ್ಟುಕೊಂಡು ಮುನ್ನಡೆಯುತ್ತಾರೆ.

`ಒಳಚರಂಡಿ ಕಾಮಗಾರಿ ಬೇಗನೇ ಪೂರ್ಣಗೊಳ್ಳಲಿದೆ ಎಂದು  ಭಾವಿಸಿದ್ದೆವು. ಆದರೆ ಆರು ತಿಂಗಳು ಕಳೆದರೂ ಕಾಮಗಾರಿ ಬೇಗನೇ ಮುಗಿಯುವಂತೆ ಕಾಣುತ್ತಿಲ್ಲ. ಕಾಮಗಾರಿ ಪೂರ್ಣಗೊಳ್ಳುವವರೆಗೆ ರಸ್ತೆಗಳು ಡಾಂಬರೀಕರಣಗೊಳ್ಳುವುದಿಲ್ಲ.

ಮಳೆಗಾಲ ಶುರುವಾಗಿದ್ದು, ರಸ್ತೆಗಳು ಇನ್ನಷ್ಟು ಹದಗೆಡಲಿವೆ. ಒಳಚರಂಡಿ ಕಾಮಗಾರಿಗೆ ಸಂಬಂಧಪಟ್ಟವರು ಅಗೆಯಲಾಗಿರುವ ತೆಗ್ಗುಗಳನ್ನು ಸರಿಯಾಗಿ ಮುಚ್ಚದಿದ್ದಲ್ಲಿ, ಇನ್ನಷ್ಟು ಅಪಾಯ ತಲೆದೋರಲಿದೆ. ತೆಗ್ಗುಗಳಲ್ಲಿ ನೀರು ನಿಂತುಕೊಳ್ಳುತ್ತಿದ್ದು, ಅಲ್ಲಿ ಆಯ ತಪ್ಪಿ ಕೆಳಗಡೆ ಬಿದ್ದರೆ ಏನೂ ಗತಿ? ಶಾಲೆಗಳು ಶುರುವಾಗಿದ್ದು, ಮಕ್ಕಳು ಈ ರಸ್ತೆಗಳಲ್ಲಿ ನಡೆದಾಡವುದಾದರೂ ಹೇಗೆ~ ಎಂದು ಖಾಸಗಿ ಸಂಸ್ಥೆಯ ಗೋವಿಂಶಾಸ್ತ್ರಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT