ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಾಜ್ಯದ ಆಡಳಿತ: ರೇವಣ್ಣ

Last Updated 1 ಫೆಬ್ರುವರಿ 2011, 9:35 IST
ಅಕ್ಷರ ಗಾತ್ರ

ಹಾಸನ:‘ಈ ರಾಜ್ಯದ ಮುಖ್ಯಮಂತ್ರಿ  ಇಲ್ಲಿ ನನಗೆ ಭದ್ರತೆ ಇಲ್ಲ ಎನ್ನುವ ಮೂಲಕ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಮುಖ್ಯ ಮಂತ್ರಿಯೊಬ್ಬರು ಇಂಥ ಹೇಳಿಕೆ ನೀಡಿರುವ ಉದಾಹರಣೆ ಇಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ನುಡಿದಿದ್ದಾರೆ.

ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸಿದ ರೇವಣ್ಣ, ‘ಮುಖ್ಯ ಮಂತ್ರಿಯೇ ಇಂಥ ಹೇಳಿಕೆ ನೀಡಿದರೆ ಜನಸಾಮಾನ್ಯರ ಗತಿಯೇನು?’ ಎಂದು ಪ್ರಶ್ನಿಸಿದರು.

‘2007ರಲ್ಲಿ ಏಳು ದಿನಗಳಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿಯುವಾಗ ಯಡಿಯೂರಪ್ಪ ಅವರು ‘ನನ್ನ ಪ್ರಾಣಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ದೇವೇಗೌಡರೇ ಹೊಣೆಯಾಗುತ್ತಾರೆ’ ಎಂದಿದ್ದರು. ಇಂದು ಅವರು ಸುತ್ತೂರು ಮಠದಲ್ಲಿ ‘ನನ್ನ ಪ್ರಾಣಕ್ಕೆ ಅಪಾಯವಿದೆ’ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿದಂತಾಗಿದೆ. ಭ್ರಷ್ಟಾ ಚಾರ, ದುರಾಡಳಿತ, ಸ್ವಜನಪಕ್ಷಪಾತ, ಸುಳ್ಳುಹೇಳುವುದು ಎಲ್ಲದರಲ್ಲೂ ಯಡಿಯೂರಪ್ಪ ಮೊದಲ ಸ್ಥಾನ ದಲ್ಲಿದ್ದಾರೆ. ಸಾಲದೆಂಬಂತೆ ಈಚೆಗೆ ದಾಖಲಾಗಿರುವ ದೂರು ಗಳಲ್ಲೂ ಅವರು ಮೊದಲ ಆರೋಪಿ (ಎ1) ಯಾಗಿದ್ದಾರೆ. ಈ ಹಿಂದಿನ ಯಾವ ಮುಖ್ಯಮಂತ್ರಿಯೂ ಇಂಥ ದಾಖಲೆ ಮಾಡಿರಲಿಲ್ಲ ಎಂದು ರೇವಣ್ಣ ಲೇವಡಿ ಮಾಡಿದರು.

ಬಿಜೆಪಿ ವರಿಷ್ಠರು ಸಹ ಈಗ ಯಡಿ ಯೂರಪ್ಪ ವಿರುದ್ಧ ಮಾತ ನಾಡುತ್ತಿದ್ದು, ನೈತಿಕವಾಗಿ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದು ವರಿಯುವ ಅಧಿಕಾರವಿಲ್ಲ. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಈಚೆಗೆ ನೈತಿಕ ಹೊಣೆ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.  ಅದೇ ಪಕ್ಷದ ಶತ್ರುಘ್ನ ಸಿನ್ಹಾ ‘ಕಳ್ಳತನ ಯಾರೇ ಮಾಡಿದ್ದರೂ ಕಳ್ಳರೇ’ ಎಂಬ ಹೇಳಿಕೆ ನೀಡಿ ಯಡಿಯೂರಪ್ಪ ತಪ್ಪು ಮಾಡಿದ್ದಾರೆ ಎಂದು ಒಪ್ಪಿ ಕೊಂಡಿದ್ದಾರೆ.

ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೆಲ್ಲ ಸ್ಥಗಿತಗೊಂಡಿವೆ. ಅಭಿವೃದ್ಧಿಯೇ ಮಂತ್ರ ಎಂದು ಹೇಳಿಕೊಂಡವರು ರಾಜ್ಯದ ಅಭಿವೃದ್ಧಿಗೆ ತಾತ್ಕಾಲಿಕ ತಡೆಯಾಜ್ಞೆ ತಂದು ತಮ್ಮ ಕುಟುಂಬದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಶೇ 55ಕ್ಕೂಹೆಚ್ಚು ಕಡತಗಳು ವಿಲೇವಾರಿಯಾಗದೆ ಉಳಿದಿವೆ. ಹಣ ಕೊಟ್ಟರೆ ಮಾತ್ರ ಕಡತ ವಿಲೇವಾರಿ ಯಾಗುವಂಥ ವ್ಯವಸ್ಥೆ ಈಗ ಜಾರಿಯಲ್ಲಿದೆ ಎಂದು ರೇವಣ್ಣ ಆರೋಪಿಸಿದರು.

ಸೋಮಶೇಖರ ಆಯೋಗದ ವರದಿಯನ್ನೂ ಟೀಕಿಸಿದ ರೇವಣ್ಣ, ‘ಅದೊಂದು ಆಯೋಗವೇ ಅಲ್ಲ. ಯಡಿಯೂರಪ್ಪ ಅವರು ನೀಡಿದ ಸೌಲಭ್ಯಗಳಿಂದ ದಾಕ್ಷಿಣ್ಯಕ್ಕೆ ಒಳಗಾಗಿ ಅವರು ಹೇಳಿದಂತೆ ಆಯೋಗ ವರದಿ ನೀಡಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿದ್ದ ರಾಜ್ಯ ಸಭೆಯ ಮಾಜಿ ಸದಸ್ಯ ಹಾಗೂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ಜವರೇಗೌಡ, ‘ರಾಜ್ಯ ಪಾಲರ ವಿರುದ್ದ ಹೈಕೋರ್ಟ್ ಮೊರೆ ಹೋಗುತ್ತೇವೆ ಎಂದು ಗುಡುಗಿದ್ದ ಯಡಿಯೂರಪ್ಪ, ಕೋರ್ಟ್ ಮೊರೆ ಹೋದರೆ ತನಗೆ ಅವಮಾನ ವಾಗುತ್ತದೆ ಎಂಬುದನ್ನು ಅರಿತು, ಅದರಿಂದ ಹಿಂದೆ ಸರಿದಿದ್ದಾರೆ’ ಎಂದರು.


‘ಮುಖ್ಯಮಂತ್ರಿ ವಿರುದ್ಧ ದೂರು ದಖಲಿಸಲು ರಾಜ್ಯಪಾಲರು ಅನುಮತಿ ನೀಡಿದರೆಂದರೆ ಅವರು ಸದನದ ಮುಖ್ಯಸ್ಥರಾಗಿ ಮುಂದುವರಿಯಲು ಅನರ್ಹರು ಎಂದೇ ಅರ್ಥ. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಈ ಹಿಂದೆಯೇ ಸ್ಪಷ್ಟ ಆದೇಶ ನೀಡಿದೆ. ಕೋರ್ಟ್‌ಗೆ ಹೋದರೆ ತಾನು ಕೂಡಲೇ ಸ್ಥಾನದಿಂದ ಇಳಿಯ ಬೇಕಾಗುತ್ತದೆ ಎಂಬ ಭಯದಿಂದ ಯಡಿಯೂರಪ್ಪ ಸುಮ್ಮನಿದ್ದಾರೆ’ ಎಂದು ಆರೋಪಿ ಸಿದರು.ಶಾಸಕ ಎಚ್.ಎಸ್. ಪ್ರಕಾಶ್, ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ ಪತ್ರಿಕಾ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT