ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಹೆದ್ದಾರಿ ಕಾಮಗಾರಿ : ಕಾಗೋಡು ಅತೃಪ್ತಿ

Last Updated 15 ಜುಲೈ 2013, 10:23 IST
ಅಕ್ಷರ ಗಾತ್ರ

ಹೊಸನಗರ:  ರಾಜ್ಯ ಹೆದ್ದಾರಿ ಹಾಗೂ ಪಟ್ಟಣದ ಮುಖ್ಯ ರಸ್ತೆಗಳು ಹದಗೆಟ್ಟಿದ್ದು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಲೋಕೋಪಯೋಗಿ ಇಲಾಖೆ  ಸಹಾಯಕ ಕಾರ್ಯನಿರ್ವಾಹಕ  ಎಂಜಿನಿಯರ್ ಅವರಿಗೆ ಆದೇಶಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ತಾಲೂಕಿನಲ್ಲಿರುವ ರಾಜ್ಯ ಹೆದ್ದಾರಿಗಳ ಕಾಮಗಾರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಅವರು ಹೇರಳವಾಗಿ ಹಣ ಖರ್ಚು ಮಾಡಿದ್ದರೂ ಅನೇಕ ಕಡೆ ರಸ್ತೆ ಪಕ್ಕದಲ್ಲಿ ಮಳೆ ನೀರಿನಿಂದ ಕೊರಕಲು ನಿರ್ಮಾಣವಾಗಿದೆ. ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರು ಅದನ್ನು ಸರಿಪಡಿಸಬೇಕು ಎಂದು ಸೂಚಿಸಿದರು.
  
ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾರುತಿಪುರ ಆಸ್ಪತ್ರೆಗೆ ವೈದ್ಯರು ಇಲ್ಲ ಎಂಬುದನ್ನು ಜಿ.ಪಂ ಸದಸ್ಯೆ ಜ್ಯೋತಿ ಚಂದ್ರಮೌಳಿ ಗಮನಕ್ಕೆ ತಂದಾಗ ಜಿಲ್ಲಾ ಆರೋಗ್ಯಾಧಿಕಾರಿಯನ್ನು ಫೋನ್ ಮೂಲಕ ಸಂಪರ್ಕಿಸಿ ಮಾರುತಿಪುರ ಆಸ್ಪತ್ರೆಗೆ ಕೂಡಲೇ ವೈದ್ಯರನ್ನು ನಿಯೋಜನೆ ಮಾಡುವಂತೆ ಆದೇಶಿಸಿದರು. 

ಕುಡಿಯುವ ನೀರು ಪೂರೈಕೆ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು ತಾಲೂಕಿನಲ್ಲಿರುವ ಎಲ್ಲಾ ಗ್ರಾಮ ಪಂಚಾಯ್ತಿಗಳಿಗೂ ಸಮಗ್ರವಾದ ಯೋಜನೆ ರೂಪಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ತಾಕೀತು ಮಾಡಿದರು.

ಮಳೆಗಾಲದಲ್ಲಿ ವಿದ್ಯುತ್ ಟಿಸಿಗಳು ಹಾಳಾಗುವ ಸಂಭವ ಹೆಚ್ಚಿದ್ದು, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಮೆಸ್ಕಾಂ ಎಇಇಗೆ ಸೂಚಿಸಿದರು. ತಾಲೂಕಿನಲ್ಲಿ ರಾಜೀವಗಾಂಧಿ ವಿದ್ಯುದೀಕರಣ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆಯದೆ ಉಳಿದಿರುವ ಮನೆಗಳನ್ನು ಪಟ್ಟಿ ಮಾಡುವಂತೆ ತಿಳಿಸಿದರು.

ಸಾಗರ-ಹೊಸನಗರ 33 ಕೆವಿಎ ವಿದ್ಯುತ್ ಮಾರ್ಗದ ತಂತಿ ಬದಲಾವಣೆ ಕೂಡಲೇ ಮಾಡುವಂತೆ ತಿಳಿಸಿದ ಅವರು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ  ಹೊಸನಗರಕ್ಕೆ ಪ್ರಸ್ತಾಪದಲ್ಲಿರುವ 110 ಕೆವಿಎ ವಿದ್ಯುತ್ ಮಾರ್ಗ ಮತ್ತು ರಿಪ್ಪನ್‌ಪೇಟೆ ಸಬ್‌ಸ್ಟೇಷನ್ ಕೂಡಲೇ ಮಂಜೂರು ಮಾಡಿ  ಎಂದರು.

ಮುಖ್ಯಾಧಿಕಾರಿಗೆ ತರಾಟೆ: ಪಟ್ಟಣದ ಪ್ರಗತಿ ಬಗ್ಗೆ ವರದಿ ನೀಡಲು ಮುಖ್ಯಾಧಿಕಾರಿ ಗೈರು ಹಾಜ ರಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು ಮುಖ್ಯಾಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರು ಬರುತ್ತಲೇ ಇದೆ. ಅವರಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಮನೆಗೆ ಹೋಗಲಿ ಎಂದು ಕಿಡಿಕಾರಿದರು.

ಪಟ್ಟಣ ಪಂಚಾಯ್ತಿ ಕಟ್ಟಡ ನಿರ್ಮಾಣ ಪ್ರಸ್ತಾವ ಯಾವ ಹಂತದಲ್ಲಿದೆ ಎಂದು ಕಿರಿಯ ಎಂಜಿನಿಯರ್ ಅವರಿಂದ ಮಾಹಿತಿ ಪಡೆದ ಅವರು ಕೂಡಲೇ ಅಗತ್ಯ ಹಣ ಮಂಜೂರು ಮಾಡಿಸುವುದಾಗಿ ತಿಳಿಸಿದರು.

ಜಿಪಂ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ತಾಪಂ ಉಪಾಧ್ಯಕ್ಷೆ ಗೀತಾ ನಿಂಗಪ್ಪ, ಸದಸ್ಯ ಕುನ್ನೂರು ಮಂಜಪ್ಪ, ಪ.ಪಂ. ಸದಸ್ಯ ಹಾಲಗದ್ದೆ ಉಮೇಶ್, ಪಿಡಬ್ಲ್ಯುಡಿ ಎಇಇ ಚಂದ್ರಪ್ಪ, ಜಿಪಂ ಎಇಇ ಮಂಜುನಾಥ ದೇಸಾಯಿ, ಮೆಸ್ಕಾಂ ಎಇಇ ಚಂದ್ರಶೇಖರ್, ತಾಪಂ ಇಒ ಡಾ.ರವಿಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT