ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಹೊರಟೂರು ರಸ್ತೆ: ಕಣ್ತೆರೆಯದ ಅಧಿಕಾರಿಗಳು

Last Updated 24 ಜೂನ್ 2011, 9:55 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಕೇಂದ್ರದಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ಶಹಾಪುರ ತಾಲ್ಲೂಕಿನ ಹೊರಟೂರು ಗ್ರಾಮ ಈಗಲೂ ಬಸ್ ಸೇವೆಯಿಂದ ವಂಚಿತವಾಗಿದೆ. ಗ್ರಾಮಕ್ಕೆ ಬಸ್‌ಗಳೇ ಸಂಚಾರ ಮಾಡದಿರುವುದರಿಂದ ಅನಿವಾರ್ಯವಾಗಿ ಗ್ರಾಮಸ್ಥರು ಟಂಟಂಗಳ ಮೂಲಕ ಸಂಚಾರ ಮಾಡುವಂತಾಗಿದೆ.

ಶಹಾಪುರ ತಾಲ್ಲೂಕಿನ ಹಾಲಗೇರಾ ಕ್ರಾಸ್‌ನಿಂದ ಹೊರಟೂರು ಗ್ರಾಮವನ್ನು ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು, ಕೇವಲ 2 ಕಿ.ಮೀ. ಅಂತರವಿದ್ದರೂ ಸಂಚಾರ ಮಾಡುವುದೇ ದುಸ್ತರವಾಗುತ್ತಿದೆ. ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯೇ ಇಲ್ಲದಿರುವುದು ಒಂದೆಡೆಯಾದರೆ, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಟಂಟಂಗಳಲ್ಲಿ ಸಂಚರಿಸುವ ದುಸ್ಥಿತಿ ಗ್ರಾಮಸ್ಥರದ್ದು.

ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬರಬೇಕಾದರೂ ಗ್ರಾಮಸ್ಥರು ಪರದಾಡುವ ಸ್ಥಿತಿ ಇದೆ. ಇಷ್ಟೆಲ್ಲ ಆದರೂ ಗ್ರಾಮದ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾತ್ರ ಇದುವರೆಗೆ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೇ ಮಾರ್ಚ್ ಅಂತ್ಯದೊಳಗೆ ಎಲ್ಲ ರಸ್ತೆಗಳ ಗುಂಡಿ ಮುಚ್ಚಿ ಸಂಚರಿಸಲು ಯೋಗ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಜೂನ್ ಮುಗಿಯುತ್ತ ಬಂದಿದ್ದರೂ ಹೊರಟೂರಿನ ಈ ರಸ್ತೆಗೆ ಮಾತ್ರ ಮುಕ್ತಿ ದೊರಕಿಲ್ಲ.

ಸಚಿವರ ನಿರ್ದೇಶನಕ್ಕೂ ಅಧಿಕಾರಿಗಳು ಬೆಲೆ ನೀಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಏನೂ ಹೇಳಿದರೂ ಕಿವಿಗೆ ಹಾಕಿಕೊಳ್ಳದ ಅಧಿಕಾರಿಗಳ ವರ್ತನೆಯಿಂದ ಜನರು ಬೇಸತ್ತಿದ್ದು, ಸಂಚಾರಕ್ಕೆ ಯೋಗ್ಯವಾದ ರಸ್ತೆ ಸಿಗುವುದಾದರೂ ಎಂದು ಎಂಬ ಚಿಂತೆ ಕಾಡುತ್ತಿದೆ.

ರಸ್ತೆಗಳ ಗುಂಡಿ ಮುಚ್ಚದೇ ಇರುವ ವಿಷಯ ಇತ್ತೀಚೆಗಷ್ಟೇ ಬಾಡಿಯಾಲ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಬಂದಿದೆ. ಕೂಡಲೇ ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟನೆ ನೀಡುವಂತೆ ನಿರ್ದೇಶನವನ್ನೂ ಕೊಟ್ಟಿದ್ದಾರೆ. ಇದು ಕೇವಲ ಒಂದೆರಡು ಗ್ರಾಮಗಳ ದುಸ್ಥಿತಿಯಲ್ಲ. ಬಹುತೇಕ ಗ್ರಾಮಗಳಿಗೂ ರಸ್ತೆ ಸಂಪರ್ಕ ಸುಧಾರಣೆ ಆಗಿಲ್ಲ. ಈ ಬಗ್ಗೆ ಕೂಡಲೇ ಗಮನ ಹರಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT