ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರಾವರಿ: ರೂ 70.36 ಲಕ್ಷ ಅವ್ಯವಹಾರ

Last Updated 19 ಮಾರ್ಚ್ 2011, 8:40 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕು ಪಂಚಾಯಿತಿಯಲ್ಲಿ ಸೂಕ್ಷ್ಮ ಹನಿ ನೀರಾವರಿ ಯೋಜನೆಯಡಿ 70.36 ಲಕ್ಷ ರೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ನಗರದ ತಾ.ಪಂ. ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ವ್ಯಾಪ್ತಿ ನಡೆದಿರುವ ಅವ್ಯವಹಾರದ ವಿರುದ್ಧ ಸದಸ್ಯರಿಂದ ಆಕ್ರೋಶ ಮೊಳಗಿತು. ಹನಿ ನೀರಾವರಿ ಅವ್ಯವಹಾರದ ತನಿಖೆಗೆ ಸದಸ್ಯರ ನೇತೃತ್ವದಡಿ ಸಮಿತಿ ರಚಿಸಬೇಕೆಂಬ ಒತ್ತಾಯ ಕೇಳಿಬಂದಿತು.

ಕೊನೆಗೆ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಗೆ ಮೊದಲು ನೋಟಿಸ್ ಜಾರಿಗೊಳಿ ಸಲಾಗುವುದು. ಅವರಿಂದ ಉತ್ತರ ಬಂದ ನಂತರ ಮುಂದಿನ ಸಭೆಯಲ್ಲಿ ತನಿಖೆಗೆ ಸಮಿತಿ ರಚಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಸದಸ್ಯ ಆರ್. ಮಹದೇವ್, ‘ಹನಿ ನೀರಾವರಿ ಸೌಲಭ್ಯ ಕಲ್ಪಿಸಲು 2009-10ನೇ ಸಾಲಿನಡಿ 35.36 ಲಕ್ಷ ರೂ ಹಾಗೂ 2010-11ನೇ ಸಾಲಿನಲ್ಲಿ 35 ಲಕ್ಷ ರೂ ಬಿಡುಗಡೆಯಾಗಿದೆ. ಆದರೆ, ಅರ್ಹರಿಗೆ ಸೌಲಭ್ಯ ತಲುಪಿಲ್ಲ. ಮೇಲುಮಾಳ ಗ್ರಾಮದಲ್ಲಿ ಸೌಲಭ್ಯ ಕಲ್ಪಿಸಿರುವ ಬಗ್ಗೆ ಅಧಿಕಾರಿಗಳು ಹೇಳಿಕೆ ನೀಡುತ್ತಾರೆ. ಅಲ್ಲಿ ಸತ್ತವರ ಹೆಸರಿನಲ್ಲಿಯೂ ಹಣ ಡ್ರಾ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿದರು.

ವಾಸ್ತವವಾಗಿ ಅಲ್ಲಿನ 33 ರೈತರಿಗೆ ಸೌಲಭ್ಯವೇ ತಲುಪಿಲ್ಲ. ಅಧಿಕಾರಿಗಳು ಸುಳ್ಳು ಹೆಸರು ಸೃಷ್ಟಿಸಿ ಹಣ ಗುಳುಂ ಮಾಡಿದ್ದಾರೆ. ಇದರಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಕೂಡಲೇ, ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.ಸದಸ್ಯ ಬಸವಣ್ಣ ಮಾತನಾಡಿ, ‘ಹೊಂಡರಬಾಳು ಗ್ರಾಮದಲ್ಲಿ 8 ರೈತರಿಗೆ ಬಾಳೆ ಬೆಳೆಯಲು ತಲಾ 22 ಸಾವಿರ ರೂ ಸಹಾಯಧನ ನೀಡಲಾಗಿದೆ. ಒಬ್ಬರೂ ಕೂಡ ಬಾಳೆ ಬೆಳೆದಿಲ್ಲ. ಈ ಬಗ್ಗೆ ಅಧಿಕಾರಿಗಳು ಸರಿಯಾದ ಉತ್ತರ ನೀಡುವುದಿಲ್ಲ. ಕೃಷಿ, ತೋಟಗಾರಿಕೆ ಇಲಾಖೆಯಿಂದ ಸಹಾಯಧನದ ಸೌಲಭ್ಯ ಪಡೆದಿರುವುದು ದಾಖಲೆಯಲ್ಲಿ ಮಾತ್ರ ಇದೆ. ಆದರೆ, ಜಮೀನಿನಲ್ಲಿ ಬೆಳೆ ಬೆಳೆದಿಲ್ಲ’ ಎಂದು ದೂರಿದರು.

‘150 ಗಿರಿಜನರಿಗೆ ಗೊಬ್ಬರ, ಸಸಿ ಇತ್ಯಾದಿ ವಿತರಿಸಿರುವುದಾಗಿ ಕೃಷಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಒಬ್ಬರಿಗೂ ಸೌಲಭ್ಯ ಸಿಕ್ಕಿಲ್ಲ. ತೋಟ ಗಾರಿಕೆ ಇಲಾಖೆಯಿಂದ ಸಮರ್ಪಕ ಮಾಹಿತಿ ನೀಡುತ್ತಿಲ್ಲ’ ಎಂದು ಸಭೆಯ ಗಮನ ಸೆಳೆದರು. ತಾ.ಪಂ. ಇಓ ಡಾ.ಕೃಷ್ಣರಾಜು ಮಾತನಾಡಿ, ‘ಸದಸ್ಯರು ಕೇಳುವ ಮಾಹಿತಿ ನೀಡುವುದು ಅಧಿಕಾರಿಗಳ ಜವಾವ್ದಾರಿ. ನಿರ್ಲಕ್ಷ್ಯ ಮಾಡಬಾರದು. ಕೃಷಿ, ತೋಟಗಾರಿಕೆ ಇಲಾಖೆಯಲ್ಲಿ ನಡೆ ದಿರುವ ಅವ್ಯವಹಾರದ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT