ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಗವಿತೆಗಳ ವ್ಯಾಪ್ತಿ ವಿಸ್ತಾರ: ಶಿವಶಂಕರ್

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  `ಹನಿಗವಿತೆಗಳಿಗೆ ನಿರ್ದಿಷ್ಟತೆ ಎಂಬುದಿಲ್ಲ. ಅದರ ವ್ಯಾಪ್ತಿ ವಿಸ್ತಾರವಾಗಿದೆ~ ಎಂದು ಕವಿ ಜರಗನಹಳ್ಳಿ ಶಿವಶಂಕರ್ ಹೇಳಿದರು.

ಕನ್ನಡ ಯುವ ಜನ ಸಂಘವು ನಗರದಲ್ಲಿ ಗುರುವಾರ ಏರ್ಪಡಿಸಿದ್ದ `ಹನಿಗವಿತೆಗಳು ಮತ್ತು ಪರಿಸರ ಪ್ರಜ್ಞೆ~ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಹನಿಗವಿತೆಯು ಬದುಕು, ಪರಿಸರ, ಭೂಮಿ, ವಿಶ್ವ ಹೀಗೆ ಇಂತಹುದೇ ಎಂಬ ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿರುವುದಿಲ್ಲ.

ಅದರ ಹರವು ದೊಡ್ಡದಾಗಿರುತ್ತದೆ. ನಾವು ಅದನ್ನು ನಮ್ಮ ಜೀವನದಲ್ಲಿ ಗುರುತಿಸಬೇಕು. ಆಗಲೇ ಕವಿತೆ ಅಥವಾ ಹನಿಗವಿತೆಗಳು ಹುಟ್ಟಲು ಸಾಧ್ಯವಾಗುತ್ತದೆ~ ಎಂದರು.

`ಒಬ್ಬ ಕವಿ ಅಥವಾ ಹನಿಗವಿತೆಯನ್ನು ಬರೆಯುವವನಿಗೆ ಸಮಕಾಲೀನರಿಗಿಂತ ವಿಭಿನ್ನವಾಗಿ ಬರೆಯುವುದು ಒಂದು ಸವಾಲಾಗಿರುತ್ತದೆ. ಅದನ್ನು ಸಮರ್ಥವಾಗಿ ನಿಭಾಯಿಸಬೇಕು~ ಎಂದು ಹೇಳಿದರು.`ಪರಿಸರದಲ್ಲಿ ಜೀವನ ಮಾರ್ಗವನ್ನು ಕಾಣುವುದು ಒಂದು ಧ್ಯೇಯವಾಗಿದೆ. ಪರಿಸರ ತತ್ವ ಮುಖ್ಯವಾಗಿರುತ್ತದೆ.

ಅದನ್ನು ಅರ್ಥ ಮಾಡಿಕೊಂಡರೆ ಜೀವನವು ಸುಂದರವಾಗಿರುತ್ತದೆ. ಆದರೆ, ಇಂದಿನ ಕಸ ತುಂಬಿದ ಬೆಂಗಳೂರನ್ನು ನೋಡಿದರೆ, ನಾವು ಎಷ್ಟರಮಟ್ಟಿಗೆ ಪರಿಸರವನ್ನು ಅರ್ಥ ಮಾಡಿಕೊಂಡಿದ್ದೇವೆ ಎಂಬುದು ಅರ್ಥವಾಗುತ್ತದೆ~ ಎಂದರು.

`ಪರಿಸರವೆಂದರೆ, ಒಂದು ಮನೆ ಅಥವಾ ನಮ್ಮ ದೇಹದ ಪರಿಸರವೂ ಆಗುತ್ತದೆ. ಆದರೆ, ಇಂದಿನ ಕಾಲದಲ್ಲಿ ನಮ್ಮ ಮನೆಯ ಪರಿಸ್ಥಿತಿ ಹೇಗಾಗಿದೆ ಎಂದರೆ, ಸಾವಿರಾರು ಇರುವೆಗಳು ಒಂದೇ ಗೂಡಿನಲ್ಲಿ ಇರುವುದಾದರೆ, ನಾಲ್ವರು ಮನುಷ್ಯರು ಒಂದೇ ಮನೆಯಲ್ಲಿ ಬದುಕುವುದು ಕಷ್ಟವಾಗುತ್ತಿದೆ.

ಇನ್ನು ದೇಹದ ಬಗ್ಗೆ ಹೇಳುವುದಾದರೆ, ದೇಹಕ್ಕೆ ಒಗ್ಗದ ಪಿಜ್ಜಾ, ಬರ್ಗರ್ ಮುಂತಾದ ವಿದೇಶಿ ಪದಾರ್ಥಗಳನ್ನು ತಿಂದು  ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆ~ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಯುವಜನ ಸಂಘದ ಅಧ್ಯಕ್ಷ ಜಗದೀಶ ರೆಡ್ಡಿ, ವಕೀಲ ಬಿ. ಭದ್ರೇಗೌಡ, ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಎಂ.ಸಿ. ನರೇಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT